ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಔರಾದ್ | ನೀರಿಗಾಗಿ ವನ್ಯಪ್ರಾಣಿಗಳ  ಪರದಾಟ

ಮನ್ಮಥಪ್ಪ ಸ್ವಾಮಿ
Published 25 ಏಪ್ರಿಲ್ 2024, 5:32 IST
Last Updated 25 ಏಪ್ರಿಲ್ 2024, 5:32 IST
ಅಕ್ಷರ ಗಾತ್ರ

ಔರಾದ್: ಮಳೆ ಕೊರತೆ ಹಾಗೂ ಈ ಬೇಸಿಗೆಯಲ್ಲಿ ಹೆಚ್ಚುತ್ತಿರುವ ತಾಪಮಾನದಿಂದ ತಾಲ್ಲೂಕಿನ ಗಡಿ ಭಾಗದ ಜನ, ಜಾನುವಾರು ಜತೆಗೆ ವನ್ಯಪ್ರಾಣಿಗಳು ಕುಡಿಯುವ ನೀರಿಗಾಗಿ ಪರದಾಡಬೇಕಿದೆ.

ತಾಲ್ಲೂಕಿನ ತೆಲಂಗಾಣ ಗಡಿಗೆ ಹೊಂದಿಕೊಂಡಿರುವ ಗಡಿ ಕುಶನೂರ, ಖಾನಾಪುರ, ಆಲೂರ್ (ಕೆ), ಚಿಂತಾಕಿ ಹಾಗೂ ಚಟ್ನಾಳ, ಬಾಲೂರ್ ಸೇರಿದಂತೆ ವಿವಿಧೆಡೆ 1200 ಹೆಕ್ಟೇರ್‌ಗೂ ಅಧಿಕ ಅರಣ್ಯ ಪ್ರದೇಶವಿದೆ. ಇಲ್ಲಿ ಕೃಷ್ಣಮೃಗ, ನವಿಲು, ನರಿ, ಮೊಲ, ತೋಳ, ಕಾಡು ಹಂದಿ, ಮುಳ್ಳು ಹಂದಿ ಸೇರಿದಂತೆ 10 ರಿಂದ 12 ಪ್ರಭೇದದ ವನ್ಯವೀವಿಗಳಿವೆ. ಆದರೆ ಈ ಬಾರಿ ಸರಿಯಾಗಿ ಮಳೆಯಾಗದೆ ಕೆರೆ-ಕಟ್ಟೆ ಬಾವಿಗಳು ಬತ್ತಿ ಹೋದ ಪರಿಣಾಮ ವನ್ಯಪ್ರಾಣಿಗಳಿಗೆ ಆಹಾರ ಹಾಗೂ ನೀರಿನ ಕೊರತೆಯಾಗಿದೆ. ಹೀಗಾಗಿ ಅವು ಅರಣ್ಯ ಪಕ್ಕದ ಹೊಲಗಳಿಗೆ ಲಗ್ಗೆ ಇಡುತ್ತಿವೆ.
‘ಮಳೆ ಕೊರತೆಯಿಂದ ಮೊದಲೇ ಸಂಕಷ್ಟದಲ್ಲಿರುವ ರೈತ ಇರುವ ಅಲ್ಪ ಸ್ವಲ್ಪ ನೀರಿನಲ್ಲಿ ಬೆಳೆಸಿದ ಬೆಳೆ ವನ್ಯಪ್ರಾಣಿಗಳ ಪಾಲಾಗುತ್ತಿದೆ’ ಎಂದು ರೈತ ಸಂತೋಷ ಮಸ್ಕಲೆ ಕಳವಳ ವ್ಯಕ್ತಪಡಿಸಿದ್ದಾರೆ.

‘ವನ್ಯ ಪ್ರಾಣಿಗಳಿಗೆ ಬೇಸಿಗೆಯಲ್ಲಿ ನೀರಿನ ಕೊರತೆ ಆಗುವುದು ಸಹಜ. ಆದರೆ ಈ ಬಾರಿ ಸಮಸ್ಯೆ ಹೆಚ್ಚಿದೆ. ವನ್ಯಪ್ರಾಣಿಗಳಿರುವ ತಾಲ್ಲೂಕಿನ ಏಳು ಕಡೆ ಅರಣ್ಯ ಪ್ರದೇಶದಲ್ಲಿ ಕುಡಿಯಲು ನೀರಿಗಾಗಿ ಹೊಂಡದ ವ್ಯವಸ್ಥೆ ಮಾಡಿದ್ದೇವೆ. ಆದರೆ ತುಂಬಿದ 2-3 ದಿನದಲ್ಲೇ ಹೊಂಡಗಳು ಖಾಲಿಯಾಗುತ್ತಿವೆ ಎನ್ನುತ್ತಾರೆ’ ಉಪ ವಲಯ ಅರಣ್ಯಾಧಿಕಾರಿ ಅಂಕುಶ ಮಚಕುರಿ.

‘ಈ ಬಾರಿ ಮಳೆ ಕೊರತೆ ಆದ ಕಾರಣ ವನ್ಯಪ್ರಾಣಿಗಳಿಗೆ ತಿನ್ನಲು ಸರಿಯಾಗಿ ಆಹಾರವೂ ಸಿಗುತ್ತಿಲ್ಲ. ತಾಪಮಾನವೂ ಜಾಸ್ತಿ ಆಗುತ್ತಿರುವುದರಿಂದ ಆಗಾಗ ಅವು ಹೊರಗೆ ಬರುತ್ತಿವೆ. ಅವುಗಳಿಂದ ಕೆಲವೆಡೆ ರೈತರಿಗೆ ಸಮಸ್ಯೆಯಾಗುತ್ತಿದೆ. ಅಂತಹ ರೈತರಿಗೆ ಇಲಾಖೆಯಲ್ಲಿ ಪರಿಹಾರ ಕೊಡಲು ಅವಕಾಶವಿದೆʼ ಎಂದು ಅವರು ತಿಳಿಸಿದ್ದಾರೆ.

‘ನಮ್ಮ ತಾಲ್ಲೂಕಿನಲ್ಲಿ ನವಿಲು, ಕೃಷ್ಣ ಮೃಗ ಸೇರಿದಂತೆ ವನ್ಯಪ್ರಾಣಿ ಸಂತತಿ ಜಾಸ್ತಿ ಇದೆ. ಸೂಕ್ತ ಸಂರಕ್ಷಣೆ ವ್ಯವಸ್ಥೆ ಇಲ್ಲ. ಸರ್ಕಾರ ಇಲ್ಲಿ ವನ್ಯ ಜೀವಿಗಳ ಧಾಮ ಪ್ರದೇಶವೆಂದು ಘೋಷಣೆ ಮಾಡಬೇಕುʼ ಎಂದು ಸಾಮಾಜಿಕ ಕಾರ್ಯಕರ್ತ ಅನೀಲ ಜಿರೋಬೆ ಆಗ್ರಹಿಸಿದ್ದಾರೆ.

‘ನಮ್ಮ ತಾಲ್ಲೂಕಿನಲ್ಲಿ 26ಕ್ಕೂ ಅಧಿಕ ಕೆರೆಗಳಿವೆ. ಆದರೆ ಈ ಕೆರೆಗಳ ಸೂಕ್ತ ನಿರ್ವಹಣೆ ಇಲ್ಲದೆ ಹಾಳಾಗಿವೆ. ಇದರಿಂದ ನೀರಿನ ಕೊರತೆಯಾಗಿ ಬೇಸಿಗೆಯಲ್ಲಿ ಪ್ರಾಣಿ ಪಕ್ಷಿಗಳಿಗೆ ಆಪತ್ತು ಬರುತ್ತಿದೆʼ ಎಂದು ಪಕ್ಷಿ ಪ್ರೇಮಿ ರಿಯಾಜ್ಪಾಶಾ ಕೊಳ್ಳೂರ್ ಕಳವಳ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT