ಗುರುವಾರ, 30 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್ | ಆಸ್ತಿ ನೋಂದಣಿಗೆ ಲಂಚ: ಅಧಿಕಾರಿಗೆ ಸಚಿವ ಈಶ್ವರ ಖಂಡ್ರೆ ತರಾಟೆ

ಉಪ ನೋಂದಣಾಧಿಕಾರಿ ಕಚೇರಿಗೆ ಈಶ್ವರ ಖಂಡ್ರೆ ದಿಢೀರ್ ಭೇಟಿ
Published 27 ಸೆಪ್ಟೆಂಬರ್ 2023, 15:35 IST
Last Updated 27 ಸೆಪ್ಟೆಂಬರ್ 2023, 15:35 IST
ಅಕ್ಷರ ಗಾತ್ರ

ಬೀದರ್: ಆಸ್ತಿ ನೋಂದಣಿಗೆ ಲಂಚ ಕೇಳಿದ ಅಧಿಕಾರಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ತರಾಟೆಗೆ ತೆಗೆದುಕೊಂಡ ಪ್ರಸಂಗ ಇಲ್ಲಿಯ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆಯಿತು.

ಸಾರ್ವಜನಿಕರ ದೂರುಗಳ ಹಿನ್ನೆಲೆಯಲ್ಲಿ ಕಚೇರಿಗೆ ದಿಢೀರ್ ಭೇಟಿ ನೀಡಿದ ಸಚಿವರು, ಕಚೇರಿಯಲ್ಲಿ ಲಂಚವೇನಾದರೂ ಪಡೆಯಲಾಗುತ್ತಿದೆಯಾ? ಎಂದು ಆಸ್ತಿ ನೋಂದಣಿಗೆ ಬಂದವರನ್ನು ವಿಚಾರಿಸಿದರು.

ವ್ಯಕ್ತಿಯೊಬ್ಬರಿಗೆ ನಿಮ್ಮ ಕೆಲಸಕ್ಕೆ ಎಷ್ಟು ಹಣ ಕೊಟ್ಟಿದ್ದೀರಿ. ಗಾಬರಿ ಪಡಬೇಡಿ, ಇದ್ದದ್ದು ಹೇಳಿ ಎಂದು ಕೇಳಿದರು.

ಆಸ್ತಿ ನೋಂದಣಿಗೆ ರೂ. 35.04 ಲಕ್ಷ ಸ್ಟ್ಯಾಂಪ್ ಡ್ಯೂಟಿ ಇದೆ. ಅಷ್ಟನ್ನು ಮಾತ್ರ ನಾವು ಕಟ್ಟಬೇಕು. ಆದರೆ, ಇವರು ರೂ. 48 ಲಕ್ಷ ಕಟ್ಟುವಂತೆ ಹೇಳುತ್ತಿದ್ದಾರೆ. ರೂ. 50 ಸಾವಿರ ಲಂಚ ಕೇಳಿದ್ದಾರೆ ಎಂದು ವ್ಯಕ್ತಿ ಉಪ ನೋಂದಣಾಧಿಕಾರಿ ಸುಭಾಷ್ ಹೊಸಳ್ಳಿ ಎದುರೇ ದೂರಿದರು.

ದುಡ್ಡು ಕೊಟ್ಟರೆ ಸ್ಟ್ಯಾಂಪ್ ಡ್ಯೂಟಿ ಕಡಿಮೆ ಆಗುತ್ತದೆಯಾ ಎಂದು ಸಚಿವರು ಕೇಳಿದಾಗ, ವ್ಯಕ್ತಿ ಹೌದು ಎಂದು ಉತ್ತರಿಸಿದರು.

ಈ ಬಗ್ಗೆ ತನಿಖೆ ನಡೆಸುವಂತೆ ಖಂಡ್ರೆ ಅವರು ಸ್ಥಳದಲ್ಲಿದ್ದ ಜಿಲ್ಲಾ ಆಡಳಿತದ ಅಧಿಕಾರಿಗಳಿಗೆ ಸೂಚಿಸಿದರು.

ದೂರುಗಳು ಬಂದ ಕಾರಣಕ್ಕಾಗಿಯೇ ಕಚೇರಿಗೆ ಭೇಟಿ ಕೊಟ್ಟಿದ್ದೇನೆ. ನಿಮ್ಮದು ಅತಿಯಾಯಿತು. ಸುಧಾರಿಸಿಕೊಳ್ಳಿ ಎಂದು ಉಪ ನೋಂದಣಾಧಿಕಾರಿಗೆ ಎಚ್ಚರಿಕೆ ನೀಡಿದರು.

ಉಪ ನೋಂದಣಾಧಿಕಾರಿ ಕೋಣೆಯಲ್ಲಿ ಸಾರ್ವಜನಿಕರಿಗೆ ಒಂದೂ ಕುರ್ಚಿ ಹಾಕದಿದ್ದಕ್ಕೂ ಸಚಿವರು ತೀವ್ರ ಅಸಮಾಧಾನ ಹೊರ ಹಾಕಿದರು. ನೀವೊಬ್ಬರೇ ಆರಾಮಾಗಿ ಕೂರುತ್ತೀರಾ?, ವಯಸ್ಸಾದವರು, ನೋಂದಣಿಗೆ ಬರುವವರನ್ನು ಎಲ್ಲಿ ಕೂರಿಸುತ್ತೀರಿ, ಒಂದಿಷ್ಟು ಕುರ್ಚಿಗಳನ್ನು ಹಾಕಲು ಆಗುವುದಿಲ್ಲವೇ ಎಂದು ಪ್ರಶ್ನಿಸಿದರು. ಯಾರಿಗೂ ಒಳಗೆ ಬರುವ ಅವಶ್ಯಕತೆಯೇ ಇರುವುದಿಲ್ಲ ಎಂದು ಅಧಿಕಾರಿ ಸಮಜಾಯಿಸಿ ನೀಡಲು ಮುಂದಾದಾಗ, ನಾನು ಬಂದಾಗ ಕೋಣೆಯಲ್ಲಿ ಆರು ಜನ ಇದ್ದರು. ಅವರು ಯಾಕೆ ಬಂದಿದ್ದರು ಎಂದು ಮರು ಪ್ರಶ್ನೆ ಹಾಕಿದರು. ಲೂಟಿ ನಡೆಯಲ್ಲ ಎಂದು ಕಡಕ್ ಎಚ್ಚರಿಕೆಯನ್ನೂ ನೀಡಿದರು.

ಇನ್ನೊಬ್ಬರು ಆಸ್ತಿ ನೋಂದಣಿಗೆ ಸರ್ವರ್ ಸಮಸ್ಯೆ ಕಾಡುತ್ತಿದೆ ಎಂದು ಗಮನ ಸೆಳೆದರು. ಆಗ ಸಚಿವರು ಸರ್ವರ್ ಸಮಸ್ಯೆ ಇದೆಯೋ ಅಥವಾ ಸೃಷ್ಟಿಸಲಾಗುತ್ತಿದೆಯೋ ಎಂದು ಅಧಿಕಾರಿಯನ್ನು ವಿಚಾರಿಸಿದರು. ಸಮಸ್ಯೆ ಬಗೆಹರಿಸಲು ಸೂಚಿಸಿದರು.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮುನೀಶ್ ಮೌದ್ಗಿಲ್, ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್. ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT