ಮಂಗಳವಾರ, ಮೇ 26, 2020
27 °C
ಎಟಿಎಂಗಳಲ್ಲಿ ಹಣ ಇಲ್ಲದೆ ಪರದಾಡಿದ ಜನ

ಸಗಟು ಮಾರುಕಟ್ಟೆಯಲ್ಲಿ ಜನಜಂಗುಳಿ

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ಜಿಲ್ಲೆಯಲ್ಲಿ ಮಾರ್ಚ್‌ 18ರಿಂದ ನಿರ್ಬಂಧ ವಿಧಿಸಲಾಗಿದೆ. ಪೂರ್ಣ ಲಾಕ್‌ಡೌನ್‌ ಆಗಿ ಒಂಬತ್ತು ದಿನಗಳು ಕಳೆದಿವೆ. ಜನ ಅಗತ್ಯ ಸಾಮಗ್ರಿಗಳನ್ನು ಪಡೆದುಕೊಳ್ಳಲು ಪರದಾಡಬೇಕಾಯಿತು. ಸಗಟು ಮಾರುಕಟ್ಟೆಯಲ್ಲಿ ಮಾತ್ರ ಖರೀದಿಗೆ ಅವಕಾಶ ದೊರೆಯಿತು.

ನಗರದಲ್ಲಿ ಎಟಿಎಂಗಳಲ್ಲಿ ಹಣ ದೊರೆಯುತ್ತಿಲ್ಲ. ಕೆಲವು ಕಡೆ ಎಟಿಎಂಗಳ ಸೆಟರ್‌ ಬಂದ್‌ ಮಾಡಲಾಗಿದೆ. 20 ಲೀಟರ್‌ ನೀರಿನ ಕ್ಯಾನ್ ಸರಬರಾಜು ಮಾಡುವ ಏಜೆನ್ಸಿಗಳು ಸಹ ನೀರು ಸರಬರಾಜು ಮಾಡಲು ಹಿಂದೇಟು ಹಾಕುತ್ತಿವೆ. ಕೆಲವು ಪ್ರದೇಶದಲ್ಲಿ ಓಣಿಯವರೇ ಬೊಂಬು ಕಟ್ಟಿ ಕೈಗಾಡಿಗಳನ್ನು ಅಡ್ಡಲಾಗಿ ಇಟ್ಟಿರುವ ಕಾರಣ ಸಿಲಿಂಡರ್‌ಗಳು ಮನೆಗಳಿಗೆ ಬರುತ್ತಿಲ್ಲ.

ಖಾಸಗಿ ವೈದ್ಯರು ಕ್ಲಿನಿಕ್‌ಗಳನ್ನು ತೆರೆದು ಜನರಿಗೆ ಸೇವೆ ಒದಗಿಸುವಂತೆ ಜಿಲ್ಲಾಧಿಕಾರಿ ಎಚ್.ಆರ್.ಮಹಾದೇವ ಒಂದು ವಾರದಿಂದ ಮನವಿ ಮಾಡುತ್ತಿದ್ದಾರೆ. ಆದರೆ, ವೈದ್ಯರು ಜಿಲ್ಲಾಡಳಿತ ಮನವಿಗೂ ಸ್ಪಂದಿಸುತ್ತಿಲ್ಲ. ರಕ್ತದೊತ್ತಡ ಹಾಗೂ ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳು ಹೆಚ್ಚು ತೊಂದರೆ ಅನುಭವಿಸುತ್ತಿದ್ದಾರೆ.

ನಗರ ಪ್ರದೇಶಧಲ್ಲಿ ಎಲ್ಲ ಕ್ಲಿನಿಕ್‌ಗಳ ಬಾಗಿಲು ಮುಚ್ಚಿವೆ. ಮೆಡಿಕಲ್‌ ಸ್ಟೋರ್‌ ತೆರೆದುಕೊಂಡಿದ್ದರೂ ಅಂಗಡಿಯವರು ವೈದ್ಯರ ಚೀಟಿ ಇಲ್ಲದೆ ಮಾತ್ರೆಗಳನ್ನು ಕೊಡುತ್ತಿಲ್ಲ. ವೈದ್ಯರು ಬರೆದುಕೊಟ್ಟಿರುವ ಚೀಟಿ ತೋರಿಸಿದವರಿಗೆ ಪೊಲೀಸರು ಯಾವುದೇ ರೀತಿಯ ತೊಂದರೆ ಉಂಟು ಮಾಡಿಲ್ಲ. ಆದರೆ, ಇದೀಗ ವೈದ್ಯರ ಬಳಿ ತೋರಿಸಿಕೊಂಡು ಬರುವುದೇ ದೊಡ್ಡ ಸವಾಲಾಗಿದೆ. ಜಿಲ್ಲಾ ಆರೋಗ್ಯ ಅಧಿಕಾರಿಗಳು ಕೆಲ ವೈದ್ಯರಿಗೆ ನೋಟಿಸ್‌ ಜಾರಿ ಮಾಡಲಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ, ಯಾವ ಪ್ರದೇಶದಲ್ಲಿ, ಎಷ್ಟು ವೈದ್ಯರಿಗೆ ನೋಟಿಸ್‌ ನೀಡಲಾಗಿದೆ ಎನ್ನುವ ಸ್ಪಷ್ಟ ಮಾಹಿತಿ ಕೊಡುತ್ತಿಲ್ಲ.

ಗಾಂಧಿ ಗಂಜ್‌ನಲ್ಲಿ ನೂಕುನುಗ್ಗಲು
ಬೀದರ್‌: ನಗರದ ಗಾಂಧಿಗಂಜ್‌ನಲ್ಲಿ ಗುರುವಾರ ಮಧ್ಯಾಹ್ನ ಬಹುತೇಕ ಎಲ್ಲ ಅಡತ್ ಅಂಗಡಿಗಳು ತೆರೆದುಕೊಂಡಿದ್ದವು. ರೈತರು ಆಹಾರಧಾನ್ಯಗಳನ್ನು ಮಾರುಕಟ್ಟೆಗೆ ತಂದು ಮಾರಾಟ ಮಾಡಿದರೆ, ಸಣ್ಣಪುಟ್ಟ ವ್ಯಾಪಾರಿಗಳು ತಮಗೆ ಬೇಕಿರುವಷ್ಟು ದಿನಸಿ ಸಾಮಗ್ರಿಗಳನ್ನು ಖರೀದಿಸಿದರು.

ಹಣದ ತುರ್ತು ಅಗತ್ಯವಿರುವ ರೈತರು ಟ್ರ್ಯಾಕ್ಟರ್‌ ಹಾಗೂ ಟೆಂಪೊಗಳಲ್ಲಿ ತೊಗರಿ ಹಾಗೂ ಕಡಲೆಯನ್ನು ತಂದು ಮಾರಾಟ ಮಾಡಿದರು. ಒಂದೇ ದಿನ ಐದು ಸಾವಿರ ಕ್ವಿಂಟಲ್ ತೊಗರಿ ಮಾರಾಟವಾಗಿದೆ. ಜಿಲ್ಲಾ ಆಡಳಿತ ರೈತರ ಉತ್ಪನ್ನಗಳ ಮಾರಾಟಕ್ಕೆ ವ್ಯವಸ್ಥೆ ಮಾಡಿದರೂ ವಾಹನಗಳ ನೂಕುನುಗ್ಗಲು ಉಂಟಾಯಿತು. ಆದರೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸಾಧ್ಯವಾಗಲಿಲ್ಲ.

‘ಗಾಂಧಿ ಗಂಜ್‌ ಮಾರುಕಟ್ಟೆ 15 ದಿನ ಬಂದ್‌ ಇತ್ತು. ಏಪ್ರಿಲ್‌ 3 ರಂದು ಅನುಮತಿ ನೀಡಿದರೂ ವ್ಯಾಪಾರ ನಡೆದಿರಲಿಲ್ಲ. ಗುರುವಾರ ಬೆಳಿಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆಯ ವರೆಗೆ ಕೃಷಿ ಉತ್ಪನ್ನಗಳ ಮಾರಾಟ ನಡೆದಿದೆ’ ಎಂದು ಉದ್ಯಮಿ ಬಸವರಾಜ ಧನ್ನೂರ್‌ ತಿಳಿಸಿದರು.

ಖಾಸಗಿ ವೈದ್ಯರ ಸೇವೆಗೆ ಸಚಿವ ಚವಾಣ್ ಮನವಿ
ಬೀದರ್:
ಕೋವಿಡ್-19 ಪ್ರಕರಣಗಳಲ್ಲಿ ರೋಗಿಗಳಿಗೆ ಅವಶ್ಯವಿರುವ ವೈದ್ಯಕೀಯ ಸೇವೆ ಒದಗಿಸಲು ಖಾಸಗಿ ವೈದ್ಯರು ಸಹಕಾರ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಮನವಿ ಮಾಡಿದ್ದಾರೆ.

ಕೋವಿಡ್ 19 ಭೀತಿಯಿಂದ ಜಿಲ್ಲೆಯ ಅನೇಕ ಖಾಸಗಿ ಆಸ್ಪತ್ರೆಗಳು ಬಂದ್ ಆಗಿರುವುದರಿಂದ ಅನೇಕ ರೋಗಿಗಳಿಗೆ ತೊಂದರೆಯಾಗುತ್ತಿದೆ. ಸರ್ಕಾರಿ ವೈದ್ಯರ ಕೊರತೆ ಇರುವಲ್ಲಿ ನುರಿತ ಖಾಸಗಿ ವೈದ್ಯರ ಸೇವೆ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಸಿಎಂಸಿ ಕಾಲೊನಿಲ್ಲಿ ಮಗು ಸಾವು
ಬೀದರ್‌:
ಮೈಲೂರಿನ ಸಿಎಂಸಿ ಕಾಲೊನಿಯ ತರಕಾರಿ ಮಾರಾಟ ಮಾಡುವ ವ್ಯಕ್ತಿಯ ಎರಡು ವರ್ಷದ ಮಗ ಬೆಳಗಿನ ಜಾವ ಅನಾರೋಗ್ಯದಿಂದ ಮೃತಪಟ್ಟಿದ್ದಾನೆ.

ಹತ್ತು ದಿನಗಳ ಶೀತ, ಕೆಮ್ಮು ಹಾಗೂ ಜ್ವರದಿಂದ ಬಳಲುತ್ತಿದ್ದ. ಇದರೊಂದಿಗೆ ಕಾಮಾಲೆಯೂ ಕಾಣಿಸಿಕೊಂಡಿತ್ತು ಎನ್ನಲಾಗಿದೆ. ಬೆಳಿಗ್ಗೆ ನಗರದಲ್ಲಿ ಬಾಲಕ ಕೋವಿಡ್‌ 19 ಸೋಂಕಿನಿಂದ ಮೃತಪಟ್ಟಿದ್ದಾನೆ ಎನ್ನುವ ಸುದ್ದಿ ಹಬ್ಬಿತು. ಪೊಲೀಸರು ಮೈಲೂರು ಪ್ರದೇಶವನ್ನು ಸುತ್ತವರಿದು ಬಂದೋಬಸ್ತ್‌ ಸಹ ಮಾಡಿದರು.

‘ಬಾಲಕ ಕಾಮಾಲೆಯಿಂದ ಮೃತಪಟ್ಟಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಆದರೂ ಬಾಲಕನ ಗಂಟಲು ಸ್ರಾವ ಹಾಗೂ ರಕ್ತ ಮಾದರಿಯನ್ನು ಪಡೆದು ಕಲಬುರ್ಗಿಗೆ ಕಳಿಸಲಾಗಿದೆ. ವರದಿ ಬಂದ ಮೇಲೆ ನಿಖರವಾದ ಮಾಹಿತಿ ಗೊತ್ತಾಗಲಿದೆ’ ಎಂದು ಜಿಲ್ಲಾಧಿಕಾರಿ ಎಚ್.ಆರ್.ಮಹಾದೇವ ತಿಳಿಸಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.