ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಗಾಲದಲ್ಲಿ ಆಸರೆಯಾದ 'ಉದ್ಯೋಗ ಖಾತ್ರಿ'

ಕಳೆದ ವರ್ಷಕ್ಕಿಂತ ಅರ್ಜಿ ಹಾಕಿದ 1164 ಕುಟುಂಬಕ್ಕೆ ಕೆಲಸ
ಗುರುಪ್ರಸಾದ ಮೆಂಟೆ
Published 6 ಮೇ 2024, 5:35 IST
Last Updated 6 ಮೇ 2024, 5:35 IST
ಅಕ್ಷರ ಗಾತ್ರ

ಹುಲಸೂರ: ಬರಗಾಲದಲ್ಲಿ ಕೆಲಸವಿಲ್ಲದೆ ಮಹಾನಗರಗಳಿಗೆ ಗುಳೆ ಹೋಗುವಂತಹ ಪರಿಸ್ಥಿತಿ ಎದುರಿಸುತ್ತಿದ್ದ ತಾಲ್ಲೂಕಿನ ನಿರುದ್ಯೋಗಿ ಹಾಗೂ ಕೂಲಿಕಾರರಿಗೆ ಉದ್ಯೋಗ ಖಾತ್ರಿ ಕೆಲಸ ಆಸರೆಯಾಗಿದೆ.

ತಾಲ್ಲೂಕ ಪಂಚಾಯತ್‌ ಆಡಳಿತದಿಂದ ಗೋರಟಾ, ತೊಗಲುರ, ಮಿರಖಲ, ಬೇಲೂರ, ಗಡಿಗೌಡಗಾಂವ್, ಮುಚಳಂಬ ಪಂಚಾಯತ್ ವ್ಯಾಪ್ತಿಯ ಹಳ್ಳಿಗಳಲ್ಲಿ ಹಳ್ಳದ ಹೂಳೆತ್ತುವ ಕಾಮಗಾರಿಯನ್ನು ಕೊಡುವ ಉದ್ದೇಶದಿಂದ ಆರಂಭಿಸಿ ಅರ್ಜಿ ಹಾಕಿದ ಕೂಲಿಕಾರರಿಗೆ ಕೆಲಸ ಕೊಟ್ಟು ಗ್ರಾಮೀಣ ಜನರಿಗೆ ನರೇಗಾ ಯೋಜನೆ ಆಸರೆ ಆಗಿದೆ.

ಕೂಲಿ ಕಾರ್ಮಿಕರ ವಲಸೆ ತಡೆಗಟ್ಟುವುದು, ಗ್ರಾಮೀಣ ಭಾಗದ ಸಂಪನ್ಮೂಲ ಸಂರಕ್ಷಣೆ, ಮಣ್ಣು ಮತ್ತು ನೀರು ಸಂರಕ್ಷಣೆ, ಜಲ ಮೂಲಗಳ ಸಂರಕ್ಷಣೆ ಹಾಗೂ ಗ್ರಾಮೀಣ ಭಾಗದ ಮೂಲಸೌಕರ್ಯಗಳ ಅಭಿವೃದ್ಧಿ ಮತ್ತು ನಿರ್ಮಾಣವು ಉದ್ಯೋಗ ಖಾತ್ರಿ ಯೋಜನೆಯ ಮುಖ್ಯ ಉದ್ದೇಶವಾಗಿದ್ದು, ತಾಲ್ಲೂಕಿನಲ್ಲಿ ಬರದ ನಡುವೆ ನರೇಗಾ ಸಾಕಷ್ಟು ನೆರವಾಗುತ್ತಿದೆ.

ಕಳೆದ ವರ್ಷ ಮಳೆ ಕೈಕೊಟ್ಟಿದ್ದರಿಂದ ಬರಗಾಲ ಉಂಟಾಗಿ ದುಡಿಮೆ ಇಲ್ಲದೆ ಕೆಲಸಕ್ಕಾಗಿ ಅಲೆದಾಡುತ್ತಿದ್ದ ಜನತೆಗೆ ಉದ್ಯೋಗ ಖಾತ್ರಿ ಕೆಲಸ ವರವಾಗಿ ಪರಿಣಮಿಸಿದೆ. ಒಂದು ವೇಳೆ ಖಾತ್ರಿಯಲ್ಲಿ ಕೆಲಸ ಕೊಡದಿದ್ದರೆ ಬಹುತೇಕ ಜನರು ಪುಣೆ, ಮುಂಬೈ, ಬೆಂಗಳೂರಿನಂತಹ ಮಹಾನಗರಗಳಿಗೆ ಗುಳೆ ಹೋಗಬೇಕಾಗಿತ್ತು.

2023ನೇ ಸಾಲಿನ ಏಪ್ರಿಲ್ ತಿಂಗಳಲ್ಲಿ 623 ಕುಟುಂಬಗಳು ನರೇಗಾ ಕೆಲಸಕ್ಕೆ ಅರ್ಜಿ ಹಾಕಿದ್ದು ಇದರ ಪರಿಣಾಮ 6833 ಮಾನವ ದಿನಗಳು ಸೃಷ್ಟಿ ಆಗಿತ್ತು. ಆದರೆ ಪ್ರಸ್ತುತ ಏಪ್ರಿಲ್ ತಿಂಗಳಲ್ಲಿ 1787 ಕುಟುಂಬಗಳು ಕೆಲಸಕ್ಕೆ ಅರ್ಜಿ ಹಾಕಿದ್ದು ಪರಿಣಾಮ 12,510 ಮಾನವ ದಿನಗಳು ಸೃಷ್ಟಿಯಾಗಿದ್ದು ವಲಸೆ ಹೋಗುವರಿಗೆ ಉದ್ಯೋಗ ಸೃಷ್ಟಿಯಾಗಿ ವಲಸೆ ತಡೆಯುವ ಉದ್ದೇಶದಿಂದ ‘ವಲಸೆ ಯಾಕ್ರಿ ನಿಮ್ಮೂರಲ್ಲೆ ಉದ್ಯೋಗ ಖಾತ್ರಿ’ ಅಭಿಯಾನ ಆಸರೆಯಾಗಿದೆ.

ನರೇಗಾ ಯೋಜನೆ ಅಡಿ ವೈಯಕ್ತಿಕ ಮತ್ತು ಗುಂಪು ಕಾಮಗಾರಿಗಳು ಆರಂಭವಾಗಿದ್ದು, ಪ್ರಮುಖವಾಗಿ ನೈಸರ್ಗಿಕ ಸಂಪನ್ಮೂಲ ವೃದ್ಧಿಸುವಲ್ಲಿ ಕೆರೆ, ನಾಲೆ ಹೂಳು ತೆಗೆಯುವುದು, ಬದು, ಚೆಕ್‌ ಡ್ಯಾಂ ಹಾಗೂ ಕಾಲುವೆ ನಿರ್ಮಾಣ, ಕೆರೆ ಅಂಚಿನಲ್ಲಿ ಅರಣ್ಯೀಕರಣ, ಬತ್ತಿದ ಕೊಳವೆ ಬಾವಿಗಳ ಸುತ್ತ ಮಳೆ ನೀರು ಮರುಪೂರಣ ಘಟಕ ನಿರ್ಮಾಣ, ಗಿಡಗಳನ್ನು ನೆಡಲು ಗುಂಡಿಗಳನ್ನು ತೋಡುವ ಕಾಮಗಾರಿಗಳಿಗೆ ಆದ್ಯತೆ ನೀಡಲಾಗುತ್ತಿದೆ.

‘ಮಳೆಗಾಲ ಆರಂಭವಾಗಿ ಕೃಷಿ ಚಟುವಟಿಕೆಗಳು ನಡೆಯುವವರೆಗೆ ಖಾತ್ರಿ ಕೆಲಸ ಕೂಲಿಕಾರರಿಗೆ ಸಹಕಾರಿಯಾಗಲಿದೆ. ಮಾಡಿದ ಕೆಲಸಕ್ಕೆ ಸಮರ್ಪಕವಾಗಿ, ಆದಷ್ಟು ಶೀಘ್ರದಲ್ಲಿ ಕೂಲಿ ಪಾವತಿಸಲು ಗ್ರಾ.ಪಂ. ಆಡಳಿತ ಕ್ರಮಕೈಗೊಳ್ಳಬೇಕು’ ಎಂದು ಕೂಲಿಕಾರರು ಒತ್ತಾಯಿಸಿದ್ದಾರೆ.

‘ಉದ್ಯೋಗ ಖಾತ್ರಿ ಕೆಲಸದಲ್ಲಿ ಕಾಯ್ದೆ ಪ್ರಕಾರ ₹349 ದಿನಗೂಲಿ ಕೊಡಬೇಕು. ತಾಂತ್ರಿಕ ಸಮಸ್ಯೆಗಳಿಂದ ದಿನಗೂಲಿ ಸಮಯಕ್ಕೆ ಸರಿಯಾಗಿ ಜಮೆ ಆಗುತ್ತಿಲ್ಲ. ಕೂಲಿಕಾರರಿಗೆ ಅನುಕೂಲವಾಗಲಿ ಹಾಗೂ ಅವರು ಬೇರೆ ಊರುಗಳಿಗೆ ದುಡಿಯಲು ಹೋಗಬಾರದೆಂದು ಖಾತ್ರಿ ಕೆಲಸವನ್ನು ಕಾಯ್ದೆ ರೂಪದಲ್ಲಿ ಜಾರಿಗೆ ತಂದು ಕೆಲಸ ಕೊಡಲಾಗುತ್ತಿದೆ. ಹೀಗಾಗಿ ಸಮಯಕ್ಕೆ ಸರಿಯಾಗಿ ದಿನಗೂಲಿ ಕೊಡಬೇಕು’ ಎಂದು ಕೂಲಿಕಾರರು ಒತ್ತಾಯಿಸಿದ್ದಾರೆ.

ಮಹದೇವ್ ಬಾಬಳಗಿ  ಹುಲಸೂರ ತಾ.ಪಂ ಇಒ
ಮಹದೇವ್ ಬಾಬಳಗಿ  ಹುಲಸೂರ ತಾ.ಪಂ ಇಒ
ಮಹದೇವ ಜಮ್ಮು ನರೇಗಾ ಸಹಾಯಕ ನಿರ್ದೇಶಕ
ಮಹದೇವ ಜಮ್ಮು ನರೇಗಾ ಸಹಾಯಕ ನಿರ್ದೇಶಕ
- ರಮೇಶ ಮಿಲಿಂದಕರ ಮಿರಖಲ ಗ್ರಾ.ಪಂ ಪಿಡಿಒ
- ರಮೇಶ ಮಿಲಿಂದಕರ ಮಿರಖಲ ಗ್ರಾ.ಪಂ ಪಿಡಿಒ
ಫೊಟೋ ಶೀರ್ಷಿಕೆ: ತಾಲ್ಲೂಕಿನ ಮಿರಖಲ್ ಗ್ರಾಮದ ಜಮೀನಿನಲ್ಲಿ ನರೇಗಾ ಯೋಜನೆಯಡಿಯಲ್ಲಿ ನಾಲಾ ಹೂಳು ತೆಗೆಯುತ್ತಿರುವ ಕಾಮಗಾರಿ ನಡೆಯುತ್ತಿರುವುದು.
ಫೊಟೋ ಶೀರ್ಷಿಕೆ: ತಾಲ್ಲೂಕಿನ ಮಿರಖಲ್ ಗ್ರಾಮದ ಜಮೀನಿನಲ್ಲಿ ನರೇಗಾ ಯೋಜನೆಯಡಿಯಲ್ಲಿ ನಾಲಾ ಹೂಳು ತೆಗೆಯುತ್ತಿರುವ ಕಾಮಗಾರಿ ನಡೆಯುತ್ತಿರುವುದು.

ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಏಪ್ರಿಲ್ ತಿಂಗಳಲ್ಲಿ ಒಟ್ಟು 15 ಸಾವಿರ ಮಾನವ ಕೆಲಸದ ದಿನಗಳು ಸೃಷ್ಟಿ ಮಾಡಬೇಕಾಗಿತ್ತು ಇದರಲ್ಲಿ ಇಲ್ಲಿಯವರೆಗೆ 12510 ಮಾನವ ದಿನಗಳನ್ನು ಸೃಷ್ಟಿ ಮಾಡಲಾಗಿದ್ದು ದಿನಗೂಲಿಯನ್ನು ಕೆಲಸದ ಆಧಾರದ ಮೇಲೆ ಎಂಜಿನಿಯರ್ ನಿರ್ಧರಿಸುತ್ತಾರೆ

- ಮಹದೇವ್ ಬಾಬಳಗಿ ಹುಲಸೂರ ತಾ.ಪಂ ಇಒ

ಬರಗಾಲ ಪರಿಸ್ಥಿತಿಯಿಂದ ಗ್ರಾಮೀಣ ಪ್ರದೇಶದ ಜನರು ಗುಳೆ ಹೋಗುವುದನ್ನು ತಪ್ಪಿಸಲು ತಾಲ್ಲೂಕಿನಲ್ಲಿ ನರೇಗಾ ಅಡಿಯಲ್ಲಿ ಕೆರೆ ನಾಲೆ ಹೂಳು ತೆಗೆಯುವುದು ಕೃಷಿಹೊಂಡ ಹೊಲಗಳ ಬದು ನಿರ್ಮಾಣದ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ

–ಮಹದೇವ ಜಮ್ಮು ನರೇಗಾ ಸಹಾಯಕ ನಿರ್ದೇಶಕ

ಮಿರಖಲ್‌ ಗ್ರಾಮದ 403 ಜನರಿಗೆ ಉದ್ಯೋಗ ಖಾತ್ರಿಯಲ್ಲಿ ಕಳೆದ ಏಳು ದಿನಗಳಿಂದ ಕೆಲಸ ನೀಡಲಾಗಿದೆ. ಕೆಲಸದ ಸ್ಥಳದಲ್ಲಿ ನೀರು ನೆರಳಿನ ವ್ಯವಸ್ಥೆ ಹಾಗೂ ಮಕ್ಕಳಿಗೆ ಕೂಸಿನ ಮನೆಯ ವ್ಯವಸ್ಥೆ ಮಾಡಲಾಗಿದೆ

- ರಮೇಶ ಮಿಲಿಂದಕರ ಪಿಡಿಒ ಮಿರಖಲ ಗ್ರಾ.ಪಂ

ಏನೇನು ಉಪಯೋಗ? ಬದು ಕಟ್ಟಿಕೊಂಡರೆ ಪೋಲಾಗುವ ನೀರು ಜಮೀನಿನಲ್ಲೇ ಇಂಗುತ್ತದೆ ತೇವಾಂಶ ಕಾಪಾಡಿಕೊಳ್ಳಬಹುದು. ಮಣ್ಣಿನ ಸವಕಳಿ ತಡೆದು ಬದುವಿನ ಮೇಲೆ ಹೊಂಗೆ ಗ್ಲಿರಿಸೀಡಿಯಾ ಗಿಡಗಳ ಬೆಳೆಸಬಹುದು. ಕೃಷಿ ಹೊಂಡದಿಂದ ನೀರಿನ ಸಂಗ್ರಹ ಆಗಲಿದ್ದು ಮಳೆಯಾಶ್ರಿತ ತೋಟಗಾರಿಕೆ ಗಿಡಗಳಿದ್ದರೆ ನೀರು ಹಾಯಿಸಲು ಜತೆಗೆ ಅಂತರ್ಜಲ ಹೆಚ್ಚಳಕ್ಕೆ ಸಹಾಯ ಆಗಲಿದೆ. ಜಮೀನು ಸಮತಟ್ಟು ಮಾಡಿದರೆ ಬೆಳೆಗಳ ನಿರ್ವಹಣೆಗೆ ಸುಲಭ. ದನದ ಕೊಟ್ಟಿಗೆ ಕಟ್ಟಿಸಿದರೆ ಹೈನುಗಾರಿಕೆ ನಿರ್ವಹಣೆಗೆ ಸಹಾಯ ಆಗಲಿದೆ.

ಏನೇನು ನೆರವು? ನರೇಗಾ ಯೋಜನೆಯಡಿ ರೈತರ ಹೊಲಗಳಲ್ಲಿ ಎರೆಹುಳು ತೊಟ್ಟಿ ಗ್ರಾಮೀಣ ಪ್ರದೇಶದಲ್ಲಿ ಅಪೌಷ್ಟಿಕತೆ ಹೋಗಲಾಡಿಸಲು ಮನೆ ಸರ್ಕಾರಿ ಶಾಲೆ ಮತ್ತು ವಸತಿ ಶಾಲೆಗಳಲ್ಲಿ ಮಕ್ಕಳ ಅಪೌಷ್ಟಿಕತೆ ನಿರ್ವಹಣೆಗೆ ಪೌಷ್ಟಿಕ ಕೈತೋಟ ಬಚ್ಚಲು ಗುಂಡಿ ಕೃಷಿ ಹೊಂಡ ದನ ಕುರಿ ಮೇಕೆ ಶೆಡ್‌ ಕೊಳವೆಬಾವಿ ಮರು ಪೂರಣ ಘಟಕ ಕಂದಕ ಬದು ನಿರ್ಮಾಣ ತೋಟಗಾರಿಕೆ ಬೆಳೆಗಳಿಗೆ ನೆರವು ಸೇರಿದಂತೆ ಅನೇಕ ನೆರವನ್ನು ನರೇಗಾ ಮೂಲಕ ನೀಡಲಾಗುತ್ತಿದೆ. ವಿಶೇಷವೆಂದರೆ ಈ ಎಲ್ಲ ಕೆಲಸಗಳು ಶೇ 100ರಷ್ಟು ಮಾನವ ದಿನಗಳನ್ನು ಆಧರಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT