ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್ - ಕುಂದು ಕೊರತೆ

ಕುಂದುಕೊರತೆ-2
Last Updated 23 ಜೂನ್ 2022, 4:06 IST
ಅಕ್ಷರ ಗಾತ್ರ

ಚರಂಡಿ ಹೂಳು ತೆಗೆಯಿರಿ

ಬೀದರ್‌: ಚಿದ್ರಿಯಲ್ಲಿ ಅವೈಜ್ಞಾನಿಕವಾಗಿ ಗಟಾರು ನಿರ್ಮಿಸಿರುವ ಕಾರಣ ಕೊಳಚೆ ನೀರು ಹರಿದು ಹೋಗುತ್ತಿಲ್ಲ. ಮಳೆ ಬಂದಾಗ ನೀರು ಉಕ್ಕಿ ಹರಿದು ಗಟಾರದ ಹೊಲಸು ಮನೆಗಳಿಗೆ ನುಗ್ಗುತ್ತಿದೆ. ಗಟಾರದಲ್ಲಿನ ಹೂಳು ತೆಗೆದು ನೀರು ಹರಿದು ಹೋಗುವಂತೆ ಮಾಡಬೇಕು ಎಂದು ಹಲವು ಬಾರಿ ನಗರಸಭೆ ಆಯುಕ್ತರಿಗೆ ಮನವಿ ಸಲ್ಲಿಸಲಾಗಿದೆ. ಆದರೆ, ಯಾವುದೇ ಪ್ರಯೋಜನ ಆಗುತ್ತಿಲ್ಲ.

ಕಸ ವಿಲೇವಾರಿ ವಾಹನ ಸರಿಯಾಗಿ ಬಾರದ ಕಾರಣ ಜನ ಗಟಾರಿನಲ್ಲಿ ಕಸ ಹಾಕುತ್ತಿದ್ದಾರೆ. ಇದರಿಂದ ಸಮಸ್ಯೆ ಇನ್ನಷ್ಟು ಗಂಭೀರವಾಗಿದೆ. ಮನೆ ಮಾಲೀಕರು ಮನೆಯಲ್ಲಿ ಉಳಿದುಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ನರಕಯಾತನೆ ಆನುಭವಿಸಬೇಕಾಗಿದೆ. ಸಂಬಂಧಪಟ್ಟವರು ಸಮಸ್ಯೆ ಬಗೆಹರಿಸಬೇಕು.

ಆಶಿಷ್‌ ಹಿಜಾರೆ, ಚಿದ್ರಿ ನಿವಾಸಿ

ಸಮಸ್ಯೆ ಬಗೆಹರಿಸಿ

ಹುಮನಾಬಾದ್: ತಾಲ್ಲೂಕಿನ ಹುಡಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಂದಿರಾ ನಗರದ ಕ್ರಿಶ್ಚಿಯನ್ ಗಲ್ಲಿಯಲ್ಲಿ ಅವೈಜ್ಞಾನಿಕವಾಗಿ ಚರಂಡಿ ನಿರ್ಮಿಸಲಾಗಿದ್ದು, ಕೊಳಚೆ ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ. ದುರ್ವಾಸನೆ ಬೀರುತ್ತಿದೆ. ಸಾಂಕ್ರಾಮಿಕ ರೋಗ ಭೀತಿ ಎದುರಾಗಿದೆ. ಈ ಸಂಬಂಧ ಹಲವು ಬಾರಿ ಮನವಿ ಮಾಡಿದರೂ ಗ್ರಾ ಮ ಪಂಚಾಯಿತಿಯವರು ಸ್ಪಂದನೆ ನೀಡಿಲ್ಲ. ಅಧಿಕಾರಿಗಳು ಈಗಾಲಾದರೂ ಎಚ್ಚೆತ್ತು ಸಮಸ್ಯೆ ಸರಿಪಡಿಸಬೇಕು.

ದೇವಿದಾಸ, ಪಾರ್ವತಿ, ಜಗದೇವಿ, ಕಸ್ತೂರಬಾಯಿ, ಸುಜಾತ, ಪ್ರಕಾಶ, ಡೇವಿಡ್, ಇಂದುಮತಿ, ನಿವಾಸಿಗಳು

ರಸ್ತೆ ತಗ್ಗು ಮುಚ್ಚಿ

ಬೀದರ್‌:ಕೆಇಬಿ ಮುಂಭಾಗದಿಂದ ಉದಗಿರ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹಾಳಾಗಿದೆ. ಒಳಚರಂಡಿ ನಿರ್ಮಾಣಕ್ಕೆ ಅಗೆದ ತೆಗ್ಗು ಮುಚ್ಚಿದ ನಂತರ ಅರ್ಧ ರಸ್ತೆ ದುರಸ್ತಿ ಮಾಡಿದರೂ ಇನ್ನರ್ಧ ರಸ್ತೆ ಹಾಗೆಯೇ ಉಳಿದಿದೆ.

ಕೆಇಬಿಇಯಿಂದ ರಂಗ ಮಂದಿರದ ಕಡೆಗೆ ಹೋಗುವ ರಸ್ತೆಯಲ್ಲಿ ನೀರು ಹರಿದು ಹೋಗುತ್ತಿಲ್ಲ. ರಸ್ತೆಯಲ್ಲಿ ಅಲ್ಲಲ್ಲಿ ತಗ್ಗು ಗುಂಡಿಗಳು ನಿರ್ಮಾಣವಾಗಿವೆ. ಮಳೆ ಬಂದಾಗ ಅಪಾರ ಪ್ರಮಾಣದಲ್ಲಿ ನೀರು ನಿಲ್ಲುತ್ತಿದೆ. ವೇಗವಾಗಿ ಬರುವ ದ್ವಿಚಕ್ರವಾಹನಗಳು ತಗ್ಗುಗುಂಡಿಯಲ್ಲಿ ಸಿಲುಕಿ ಬೀಳುತ್ತಿವೆ. ತಿರುವಿನಲ್ಲಿ ಕಾರುಗಳು ಮುಂದೆ ಹೋಗುತ್ತಿಲ್ಲ.

ಈ ಮಾರ್ಗದಲ್ಲಿ ಪಾದಚಾರಿಗಳು ನಡೆದುಕೊಂಡು ಮುಂದೆ ಹೋಗುವುದು ಕಷ್ಟವಾಗುತ್ತಿದೆ. ನಗರಸಭೆ ಕಚೇರಿಗೆ ಹೋಗಿ ಮನವಿ ಸಲ್ಲಿಸಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ದೂರವಾಣಿ ಕರೆ ಮಾಡಿದರೂ ಸ್ವೀಕರಿಸುತ್ತಿಲ್ಲ. ಜನರ ಕಷ್ಟಗಳಿಗೆ ಸ್ಪಂದಿಸುವವರೇ ಇಲ್ಲ. ನಗರ ಶಾಸಕರು ಓಲ್ಡ್‌ಸಿಟಿ ಬಿಟ್ಟರೆ ಬೇರೆ ಪ್ರದೇಶದಲ್ಲಿನ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಅಪರೂಪಕ್ಕೆ ಅತಿಥಿಗಳಂತೆ ಬಂದು ಹೋಗುತ್ತಿದ್ದಾರೆ. ಅವರು ನಗರದ ಜನತೆಯ ಪಾಲಿಗೆ ಇದ್ದೂ ಇಲ್ಲದಂತೆ ಆಗಿದ್ದಾರೆ. ಜಿಲ್ಲಾಧಿಕಾರಿ ಅವರು ನಗರ ಪ್ರದಕ್ಷಿಣೆ ನಡೆಸಿ ಜನರ ಸಮಸ್ಯೆ ಅರಿತುಕೊಳ್ಳಬೇಕು. ಕೆಲಸ ಮಾಡದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು

ಸಚಿನ್‌ ಕರ್ಮ, ಉದಯ.ಜಿ, ನಿತಿನ್‌ ಬರಡೆ, ನಗರದ ನಿವಾಸಿಗಳು

ಹೂಳು ತೆಗೆಯಿರಿ

ಔರಾದ್: ಪಟ್ಟಣದ ವಿವಿಧೆಡೆ ಚರಂಡಿಗಳಲ್ಲಿ ಹೂಳು ತುಂಬಿಕೊಂಡಿದೆ. ಹೂಳು ತೆಗೆದು ಹೊಲಸು ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡಬೇಕು.

ಸಂತೋಷ, ಶಿಕ್ಷಕ ಕಾಲೊನಿ ಸೇರಿ ವಿವಿಧೆಡೆ ಚರಂಡಿಯಲ್ಲಿ ನೀರು ನಿಂತಲ್ಲಿಯೇ ನಿಂತು ಗಬ್ಬು ನಾರುತ್ತಿದೆ. ಈಗ ಮಳೆಗಾಲ ಇರುವುದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಪರಿಸ್ಥಿತಿ ಹೀಗೇ ಆದರೆ ಜನರಿಗೆ ಅನಾರೋಗ್ಯ ಸಮಸ್ಯೆ ಕಾಡಲಿದೆ. ಕಾರಣ ಸ್ವಚ್ಛತೆ ಕೆಲಸಕ್ಕೆ ಆದ್ಯತೆ ನೀಡಬೇಕು.

ಗುರುನಾಥ ವಡ್ಡೆ, ಸಾಮಾಜಿಕ ಹೋರಾಟಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT