ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ | 24ನೇ ಸ್ಥಾನಕ್ಕೆ ಬಡ್ತಿ ಪಡೆದ ಬೀದರ್

ಜಿಲ್ಲೆಯ 160 ಶಾಲೆಗಳಿಗೆ ‘ಎ’ ಗ್ರೇಡ್ : ಜಿಲ್ಲೆಯ ಬಾಲಕಿಗೆ 5ನೇ ರ‍್ಯಾಂಕ್‌
Last Updated 10 ಆಗಸ್ಟ್ 2020, 20:00 IST
ಅಕ್ಷರ ಗಾತ್ರ

ಬೀದರ್: ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶದಲ್ಲಿ ಕಾಯಂ ಆಗಿ ಕೊನೆಯ ನಾಲ್ಕು ಜಿಲ್ಲೆಗಳ ಸ್ಥಾನಗಳಲ್ಲೇ ಗುರುತಿಸಿಕೊಳ್ಳುತ್ತಿದ್ದ ಬೀದರ್ ಈ ಬಾರಿ ಉತ್ತಮ ಫಲಿತಾಂಶ ಪಡೆದ ರಾಜ್ಯದ ಜಿಲ್ಲೆಗಳ ಪಟ್ಟಿಯಲ್ಲಿ 24ನೇ ಸ್ಥಾನ ಪಡೆಯುವ ಮೂಲಕ ಬಡ್ತಿ ಪಡೆದಿದೆ. ಬೀದರ್ ಜಿಲ್ಲೆ ‘ಬಿ’ ಗ್ರೇಡ್‌ನಲ್ಲಿ ಗುರುತಿಸಿಕೊಂಡಿದೆ.

ಭಾಲ್ಕಿ ತಾಲ್ಲೂಕಿನ ಕರಡ್ಯಾಳದ ಶ್ರೀ ಚನ್ನಬಸವೇಶ್ವರ ಗುರುಕುಲ ಸಂಚಾಲಿತ ಪ್ರೌಢಶಾಲೆಯ ವಿದ್ಯಾರ್ಥಿನಿ ಅಪರಾಜಿತೇಶ್ವರಿ 625ಕ್ಕೆ 621 ಅಂಕಗಳನ್ನು ಪಡೆಯುವ ಮೂಲಕ ಕನ್ನಡ ಮಾಧ್ಯಮ ವಿಭಾಗದಲ್ಲಿ ರಾಜ್ಯಕ್ಕೆ 3ನೇ ರ‍್ಯಾಂಕ್‌ ಗಳಿಸಿದ್ದಾರೆ. ರಾಜ್ಯದ ಎಲ್ಲ ಮಾಧ್ಯಮಗಳ ರ‍್ಯಾಂಕ್‌ ಪಟ್ಟಿಯಲ್ಲಿ 5ನೇ ಸ್ಥಾನ ಪಡೆದಿದ್ದಾರೆ. ಬೀದರ್ ಜಿಲ್ಲೆಯ ಟಾಪರ್ ಆಗಿ ಹೊರ ಹೊಮ್ಮಿದ್ದಾರೆ.

ಬೀದರ್ ತಾಲ್ಲೂಕಿನ 44, ಹುಮನಾಬಾದ್ ತಾಲ್ಲೂಕಿನ 40, ಭಾಲ್ಕಿ ಹಾಗೂ ಬಸವಕಲ್ಯಾಣ ತಾಲ್ಲೂಕಿನ ತಲಾ 30, ಮತ್ತು ಔರಾದ್ ತಾಲ್ಲೂಕಿನ 16 ಶಾಲೆಗಳು ಸೇರಿ ಜಿಲ್ಲೆಯ ಒಟ್ಟು 160 ಶಾಲೆಗಳು ‘ಎ’ ಗ್ರೇಡ್ ಪಡೆದುಕೊಂಡಿವೆ.

ಕಳೆದ ವರ್ಷ 29ನೇ ಸ್ಥಾನದಲ್ಲಿ ಗುರುತಿಸಿಕೊಂಡಿದ್ದ ಜಿಲ್ಲೆ ಪ್ರಸಕ್ತ ವರ್ಷ ಐದು ಸ್ಥಾನ ಮೇಲಕ್ಕೆ ಏರಿದೆ.
2018ರಲ್ಲಿ ಕೊನೆಯ ಸ್ಥಾನದಲ್ಲಿ ಗುರುತಿಸಿಕೊಂಡು ಶಿಕ್ಷಣ ಇಲಾಖೆಯ ಅಧಿಕಾರಿಗಳು ತಲೆ ತಗ್ಗಿಸುವಂತಾಗಿತ್ತು.

ಕೊರೊನಾ ಸೋಂಕಿನ ಭಯದ ಮಧ್ಯೆಯೇ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಬಾರಿ ಸಾಧನೆ ಮಾಡಿದ ಜಿಲ್ಲೆಗಳ ಪಟ್ಟಿಯನ್ನು ಮಾಡದೆ ರಾಜ್ಯದ ಜಿಲ್ಲೆಗಳ ಸಾಧನೆಯನ್ನು ಮೂರು ಶ್ರೇಣಿಗಳಲ್ಲಿ ವರ್ಗಿಕರಿಸಲಾಗಿದೆ. ಕಲ್ಯಾಣ ಕರ್ನಾಟಕದ ಒಂದು ಜಿಲ್ಲೆಯೂ ‘ಎ’ ಶ್ರೇಣಿಯಲ್ಲಿ ಗುರುತಿಸಿಕೊಂಡಿಲ್ಲ. ಬೀದರ್ ಜಿಲ್ಲೆ ‘ಬಿ’ ಗ್ರೇಡ್‌ನಲ್ಲಿ ಗುರುತಿಸಿಕೊಂಡಿರುವುದು ಪಾಲಕರು ಹಾಗೂ ಶಿಕ್ಷಣ ಇಲಾಖೆ ಸಿಬ್ಬಂದಿಗೆ ಸಮಾಧಾನ ತಂದಿದೆ.

ಪಿಯುಸಿಯಲ್ಲಿ 18ನೇ ಸ್ಥಾನ ಪಡೆದು ಜಿಲ್ಲೆಯ ಗೌರವ ಹೆಚ್ಚಿಸಿದ ಬೆನ್ನಲ್ಲೇ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲೂ ಉತ್ತಮ ಫಲಿತಾಂಶ ಗಳಿಸಿರುವುದು ಜಿಲ್ಲೆಯ ಜನರಿಗೆ ಹರ್ಷ ತಂದಿದೆ. ಜಿಲ್ಲೆಯ ಶಿಕ್ಷಣ ವ್ಯವಸ್ಥೆಯಲ್ಲಿ ತಕ್ಕ ಮಟ್ಟಿಗೆ ಸುಧಾರಣೆಯಾಗಿರುವುದು ಪ್ರಶಂಸೆಗೆ ಪಾತ್ರವಾಗಿದೆ.

ರಾಜ್ಯದ ಜಿಲ್ಲೆಗಳ ಪಟ್ಟಿಯಲ್ಲಿ 20ರ ಒಳಗೆ ಸ್ಥಾನ ಪಡೆಯಬೇಕು ಎಂಬ ಛಲದೊಂದಿಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಶಿಕ್ಷಕರು ನಡೆಸಿದ ಪ್ರಯತ್ನಕ್ಕೆ ಯಶ ದೊರಕಿದೆ. ಎಂದಿನಂತೆ ಜಿಲ್ಲೆಯ ಖಾಸಗಿ ಹಾಗೂ ಅನುದಾನ ರಹಿತ ಶಾಲೆಗಳು ಉತ್ತಮ ಫಲಿತಾಂಶ ಪಡೆದುಕೊಂಡಿವೆ.

‘ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಸುಧಾರಣೆಗೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಅವರಿಗಾಗಿ ವಿಶೇಷ ತರಗತಿಗಳನ್ನು ನಡೆಸಲಾಗಿತ್ತು. ಪಾಲಕರ ಸಹಕಾರ ಹಾಗೂ ಶಿಕ್ಷಕರ ಪರಿಶ್ರಮದ ಫಲವಾಗಿ ಉತ್ತಮ ಫಲಿತಾಂಶ ಬಂದಿದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಚಂದ್ರಶೇಖರ ಎಚ್.ಸಿ. ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT