ಹುಲಸೂರ: ಸತತ ಸುರಿಯುತ್ತಿರುವ ಮಳೆಯಿಂದ ಮಾಂಜ್ರಾ ತೀರದ ಎರೆ ಜಮೀನುಗಳಲ್ಲಿ ನೀರು ಸಂಗ್ರಹಗೊಂಡಿದ್ದು, ಬಿತ್ತನೆ ಮಾಡಿದ ತೊಗರಿ ಬೆಳೆ ನೆಟೆ ರೋಗಕ್ಕೆ ತುತ್ತಾಗುವ ಭೀತಿಯಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ.
ಪಟ್ಟಣದ ಸೇರಿದಂತೆ ಮಾಂಜ್ರಾ ತೀರದ ಗ್ರಾಮಗಳಾದ ಹಲಸಿ ತುಗಾಂವ, ಕೊಂಗಳಿ, ವಾಂಜರಖೇಡ, ಮೆಹಕರ, ಬೋಳೆಗಾಂವ ನಾರದಾ ಸಂಗಮ, ಅಟ್ಟರಗಾ, ಸಾಯಗಾಂವ, ಹುಲಸೂರ ಜಮೀನುಗಳಲ್ಲಿ ತೊಗರಿ ಬೆಳೆಗಳ ಮಧ್ಯೆ ನಿಂತ ನೀರು ನೆಟೆ ರೋಗಕ್ಕೆ ಆಹ್ವಾನ ನೀಡುತ್ತಿದೆ. ತೊಗರಿ ಗಿಡಗಳಿಗೆ ಅಲ್ಲಲ್ಲಿ ನೆಟೆ ರೋಗದ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ.
ಕಪ್ಪು ಮಿಶ್ರಿತ ಭೂಮಿಯಿದ್ದು, ಹಸಿ ತೇವಾಂಶ ಸಮಸ್ಯೆ ಕಾಡುತ್ತಿದೆ. ಮಳೆ ಇದೇ ರೀತಿ ಮುಂದುವರಿದರೆ ಸಮಸ್ಯೆ ಮತ್ತಷ್ಟು ಉಲ್ಬಣಿಸಲಿದೆ. ನೀರು ಬಸಿದು ಹೋಗುವ ಮಸಾರಿ ಜಮೀನುಗಳಲ್ಲಿ ಬಿತ್ತಿರುವ ತೊಗರಿಗೂ ಆಪತ್ತು ಎದುರಾಗಲಿದೆ ಎಂಬುದು ರೈತರ ಆತಂಕಕ್ಕೆ ಕಾರಣವಾಗಿದೆ.
ಜೂನ್, ಜುಲೈ ತಿಂಗಳಿನಲ್ಲಿ ಬಿತ್ತಿರುವ ತೊಗರಿ ಬೆಳೆಗೆ ಈಗ 60-70 ದಿನಗಳಾಗಿದ್ದು, ಕೆಲವು ಕಡೆ ಹೂವು ಬಿಡುವ ಹಂತದಲ್ಲಿದೆ. ಉಳಿದ ಕಡೆ ಬೆಳವಣಿಗೆ ಹಂತದಲ್ಲಿದೆ. ಸತತ ಮಳೆಯಿಂದ ಬೆಳೆಗಳ ಮಧ್ಯೆ ಯಥೇಚ್ಚವಾಗಿ ಕಳೆ ಬೆಳೆದು ನಿಂತಿದೆ. ತೊಗರಿ ಮಧ್ಯೆ ಅಂತರ ಬೆಳೆಯಾಗಿ ಹೆಸರು ಬಿತ್ತಿದ್ದ ಹಲವು ರೈತರು, ಹೆಸರು ರಾಶಿ ನಂತರ ಜಮೀನು ಸ್ವಚ್ಛಗೊಳಿಸಲು ಮಳೆ ಅವಕಾಶ ನೀಡುತ್ತಿಲ್ಲ. ತೊಗರಿ ಬಿತ್ತಿರುವ ಜಮೀನು ಕಳೆಗಳಿಂದ ಮುಕ್ತವಾಗಿರಬೇಕು. ಕಾಲಕಾಲಕ್ಕೆ ಎಡೆಕುಂಟೆ ಹೊಡೆದು ಸ್ವಚ್ಛಗೊಳಿಸಬೇಕು. ಆದರೆ ಇದಕ್ಕೆ ಮಳೆ ಅವಕಾಶ ನೀಡುತ್ತಿಲ್ಲ.
ಪಟ್ಟಣದ ಪ್ರಗತಿಪರ ರೈತ ಬಸಪ್ಪಾ ಚೌರೆ, 'ಈಗ ಬಿತ್ತನೆ ಮಾಡಿದ ತೊಗರಿ ಬೆಳೆಗೆ 15 ದಿನಗಳಿಗೊಮ್ಮೆ ಮಳೆ ಬಂದರೆ ಸಾಕಾಗಿತ್ತು. ಆದರೆ, ಈಗ ಸತತವಾಗಿ ಸುರಿದ ಮಳೆಯಿಂದ ಜಮೀನುಗಳ ಅರ್ಧ ಭಾಗ ನೀರಿನಿಂದ ತುಂಬಿ, ತೊಗರಿ ಬೆಳೆ ನೆಟೆ ರೋಗಕ್ಕೆ ತುತ್ತಾಗಿದೆ. ಈಗ ಬರುತ್ತಿರುವ ಮಳೆ ಇನ್ನೂ ಮುಂದುವರಿದರೆ ಉಳಿದ ಬೆಳೆಯೂ ಹಾಳಾಗುವುದರಲ್ಲಿ ಸಂದೇಹವಿಲ್ಲ' ಎಂದು ಆತಂಕ ವ್ಯಕ್ತಪಡಿಸಿದರು.
'ಕೆಲ ಜಮೀನುಗಳಿಗೆ ಮಳೆ ಅನುಕೂಲಕರ ಆಗಿರಬಹುದು. ಆದರೆ, ಹಿತಮಿತ ತೇವಾಂಶ ಬಯಸುವ ಎರೆ ಜಮೀನುಗಳಿಗೆ ಅತಿ ತೇವಾಂಶವಾದರೆ ಬೆಳೆ ಬರುವುದೇ ಕಷ್ಟ. ಈಗಾಗಲೇ ಮಾಂಜ್ರಾ ತೀರದ ಜಮೀನುಗಳಲ್ಲಿ ಶೇ 25ರಷ್ಟು ನೀರು ನಿಂತಿದೆ. ಈಗ ಮಳೆ ನಿಲ್ಲಬೇಕು. ಆಗ ಮಾತ್ರ ಉಳಿದ ಬೆಳೆಯಾದರೂ ಬರುತ್ತದೆ. ಒಂದು ವೇಳೆ ಹೀಗೆ ಮಳೆ ಮುಂದುವರಿದರೆ ಬೆಳೆ ಬರುವುದು ಕಷ್ಟ' ಎಂದು ಪ್ರಗತಿಪರ ರೈತ ದಯಾನಂದ ಸೊನಫುಲೆ ಬೇಸರ ವ್ಯಕ್ತಪಡಿಸಿದರು.
‘ಎರೆ ಜಮೀನುಗಳಲ್ಲಿ ಅತಿಯಾದ ಮಳೆಯಿಂದ ನೀರು ನಿಲ್ಲದಂತೆ ಮಾಡಲು ಬಸಿಕಾಲುವೆಗಳನ್ನು ನಿರ್ಮಿಸಬೇಕು. ಆದರೆ, ಈಗ ನೆಟೆ ರೋಗಕ್ಕೆ ತುತ್ತಾಗಿರುವ ಬೆಳೆಗೆ ಏನನ್ನೂ ಮಾಡಲು ಸಾಧ್ಯವಿಲ್ಲ ಹಾಗೂ ಸಮಯವಿಲ್ಲ' ಎಂದು ಹುಲಸೂರ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ವಿಶ್ವನಾಥ ತಿಳಿಸಿದರು.
ಮಳೆ ನೀರು ನಿಂತು ಹಾಳಾದ ತೊಗರಿ ಬೆಳೆದ ರೈತರು 72 ಗಂಟೆಯ ಒಳಗಾಗಿ ನಷ್ಟದ ವಿವರಗಳನ್ನು ವಿಮಾ ಕಂಪನಿಯ ಟೋಲ್ ಫ್ರೀ ಸಂಖ್ಯೆ 180020 05142 ಗೆ ಸಂಪರ್ಕಿಸಬೇಕು.ವಿಶ್ವನಾಥ ಕೃಷಿ ಅಧಿಕಾರಿ ರೈತ ಸಂಪರ್ಕ ಕೇಂದ್ರ
ಬೆಳೆ ಕಟಾವಿಗೆ ಮಳೆ ಕಾಟ
ಪಟ್ಟಣ ಸೇರಿ ಗ್ರಾಮೀಣ ಭಾಗದಲ್ಲಿ ಕಟಾವಿಗೆ ಬಂದಿರುವ ಸೋಯಾ ಅವರೆ ಬೆಳೆಗಳ ಕೊಯ್ಲಿಗೆ ಮಳೆ ಅಡ್ಡಿಯಾಗಿದೆ. ತಾಲ್ಲೂಕಿನ ಮುಖ್ಯ ಬೆಳೆ ಸೋಯಾ ಅವರೆ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವ ಬೆಳೆಯಾಗಿದ್ದು ಕಟಾವಿನ ಹಂತಕ್ಕೆ ಬಂದಿದ್ದು ಈ ನಡುವೆ ಮಳೆಯಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬರೆದಂತಾಗಿದೆ. ಕಳೆದ ವಾರ ಮಳೆ ಬಿಡುವು ಕೊಟ್ಟಿದ್ದರಿಂದ ಕೆಲವು ರೈತರು ಬೆಳೆ ಕೊಯ್ಲು ಮಾಡಲು ಮುಂದಾಗಿದ್ದರು. ಆದರೆ ಈಗ ಮಳೆಯಿಂದ ಕಟಾವಿಗೆ ಅಡ್ಡಿಯಾಗಿದೆ. ಕೃಷಿ ಕಾರ್ಮಿಕರ ಕೊರತೆ ಕೂಲಿ ಹಾಗೂ ಗುತ್ತಿಗೆ ಬೇಡಿಕೆ ಹೆಚ್ಚಾಗಿದ್ದರಿಂದ ಹಲವು ರೈತರು ಕಟಾವು ಯಂತ್ರದಿಂದ ಕೊಯ್ಲು ಮಾಡಿಸಲು ಸಿದ್ಧತೆ ನಡೆಸಿದ್ದರು. ಆದರೆ ಮೋಡಕವಿದ ವಾತಾವರಣದೊಂದಿಗೆ ಮಳೆ ಬೀಳುತ್ತಿರುವುದರಿಂದ ಬೆಳೆಯ ಕೊಯ್ಲು ಸಾಧ್ಯವಾಗುತ್ತಿಲ್ಲ. ನೆರೆ ರಾಜ್ಯದಿಂದ ನದಿಗೆ 1500 ಕ್ಯೂಸೆಕ್ ನೀರು: ನೆರೆಯ ಮಹಾರಾಷ್ಟ್ರದ ಧನೇಗಾಂವ್ ತೆರಣ ಹೂಸುರ ಮಸಲಗಾ ಜಲಾಶಯದಿಂದ ಬುಧವಾರ 1500ಕ್ಕೂ ಹೆಚ್ಚು ಕ್ಯುಸೆಕ್ ನೀರನ್ನು ಮಾಂಜ್ರಾ ನದಿಗೆ ಬಿಡಲಾಗಿದ್ದು ಬೆಳಿಗ್ಗೆಯಿಂದ ನದಿಯ ಹರಿವಿನಲ್ಲೂ ಸ್ವಲ್ಪ ಏರಿಕೆ ಕಂಡು ಬಂದಿದೆ. ಮಾಂಜ್ರಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕೊಂಗಳಿ ಏತ ನೀರಾವರಿ ಯೋಜನೆಯ ಬ್ರಿಜ್ ಕಮ್ ಬ್ಯಾರೇಜ್‌ನ 3 ಗೇಟ್ ತೆರೆದು ನೀರು ಹರಿ ಬಿಡಲಾಗಿದೆ. ಮಳೆಗಾಲದ ಕೊನೆಯ ಹಂತದಲ್ಲಿ ಬ್ಯಾರೇಜ್‌ನ ಗೇಟ್ ಮುಚ್ಚಲಾಗುವುದು ಎಂದು ಕರ್ನಾಟಕ ನೀರಾವರಿ ನಿಗಮ ನೀರಾವರಿ ಇಲಾಖೆಯ ಎಇಇ ಸಂತೋಷ ಮಾಕಾ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.