ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏನು ಕೆಲಸ ಮಾಡಿದ್ದೀರಿ?: ಸಚಿವ ರಹೀಂ ಖಾನ್‌ಗೆ ಬಿಜೆಪಿ ಪ್ರಶ್ನೆ

Published 10 ಫೆಬ್ರುವರಿ 2024, 14:28 IST
Last Updated 10 ಫೆಬ್ರುವರಿ 2024, 14:28 IST
ಅಕ್ಷರ ಗಾತ್ರ

ಬೀದರ್‌: ‘ನೀವು ಅಧಿಕಾರಕ್ಕೆ ಬಂದು ಒಂದು ವರ್ಷ ಸಮೀಪಿಸುತ್ತಿದೆ. ಈ ಅವಧಿಯಲ್ಲಿ ನಿಮ್ಮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಏನೇನು ಕೆಲಸ ಮಾಡಿದ್ದೀರಿ. ನಮ್ಮ 15 ಪ್ರಶ್ನೆಗಳಿಗೆ ಉತ್ತರ ಕೊಡಿ’

ಬಿಜೆಪಿ ಕೈಗೊಂಡಿರುವ ‘ಮತದಾರರಿಗೆ ಉತ್ತರಿಸಿ’ ಅಭಿಯಾನದಡಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಶನಿವಾರ ನಗರದ ಚಿದ್ರಿಯಲ್ಲಿರುವ ಸಚಿವ ರಹೀಂ ಖಾನ್‌ ಅವರ ಕಚೇರಿಗೆ ತೆರಳಿ 15 ಪ್ರಶ್ನೆಗಳ ಪತ್ರವನ್ನು ಸಚಿವರ ಅನುಪಸ್ಥಿತಿಯಲ್ಲಿ ಅವರ ಕಚೇರಿಯ ಸಹಾಯಕರಿಗೆ ಸಲ್ಲಿಸಿ ಉತ್ತರಿಸುವಂತೆ ಆಗ್ರಹಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ ಹುಡಗಿ ಮಾತನಾಡಿ, ಬೀದರ್‌ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ಆರಂಭವಾಗಿಲ್ಲ. ಮತ ನೀಡಿದ ಮತದಾರರಿಗೆ ಕ್ಷೇತ್ರದ ಅಭಿವೃದ್ಧಿಯ ಕುರಿತು ಮಾಹಿತಿ ಒದಗಿಸಬೇಕಾದದ್ದು ನಿಮ್ಮ ಕರ್ತವ್ಯ. ಮತದಾರರ ಧ್ವನಿಯಾಗಿ 15 ಪ್ರಶ್ನೆಗಳನ್ನು ನಿಮ್ಮ ಮುಂದಿಟ್ಟಿದ್ದು ಅವುಗಳಿಗೆ ಉತ್ತರ ಕೊಡಬೇಕು ಎಂದು ಒತ್ತಾಯಿಸಿದರು.

ಬೀದರ್‌ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ನಂತರ ಕ್ಷೇತ್ರಕ್ಕೆ ತಂದ ಅನುದಾನವೆಷ್ಟು?, ಇದುವರೆಗೆ ಬಿಡುಗಡೆಯಾಗಿರುವ ಅನುದಾನವೆಷ್ಟು? ಅನುದಾನ ಬಿಡುಗಡೆಗೊಂಡಿದ್ದರೆ ಅದರಿಂದ ಕೈಗೊಂಡ ಅಭಿವೃದ್ಧಿ ಕಾರ್ಯಗಳು ಯಾವುವು? ಕ್ಷೇತ್ರದ ಅಭಿವೃದ್ಧಿಗಾಗಿ ತಾವು ರೂಪಿಸಿರುವ ಹಾಗೂ ಚುನಾವಣಾ ಸಂದರ್ಭದಲ್ಲಿ ತಾವು ಕೊಟ್ಟ ಭರವಸೆಗಳು ಅನುಷ್ಠಾನದ ಹಂತದಲ್ಲಿದ್ದರೆ ತಿಳಿಸಿ. ಬರದಿಂದ ಸಂಕಷ್ಟಕ್ಕೆ ಒಳಗಾಗಿರುವ ರೈತರಿಗೆ ಸರ್ಕಾರದಿಂದ ಬಿಡುಗಡೆಗೊಳಿಸಿರುವ ಪರಿಹಾರವೆಷ್ಟು? ನಿರುದ್ಯೋಗ ನಿರ್ಮೂಲನೆಗೆ ಮಾಡಿದ್ದೇನು?  ಶೈಕ್ಷಣಿಕ ಅಭಿವೃದ್ಧಿಗೆ ಏನು ಮಾಡಿದ್ದೀರಿ? ಉತ್ತಮ ದರ್ಜೆಯ ಆರೋಗ್ಯ ಸೇವೆ ಒದಗಿಸಲು ಯಾವ ಯೋಜನೆಗಳನ್ನು ರೂಪಿಸಿದ್ದೀರಿ? ಇದುವರೆಗೆ  ಹೊಸದಾಗಿ ಎಷ್ಟು ಕಿ.ಮೀ. ರಸ್ತೆ ನಿರ್ಮಿಸಿದ್ದೀರಿ? ಕುಡಿಯುವ ನೀರು ಹಾಗೂ ಒಳಚರಂಡಿ ವ್ಯವಸ್ಥೆಗಳನ್ನು ಪರಿಪೂರ್ಣಗೊಳಿಸಲು ಹೊಸದಾಗಿ ಕೈಗೊಂಡ ಕಾಮಗಾರಿಗಳ ವಿವರ ಕೊಡಬೇಕೆಂದು ಆಗ್ರಹಿಸಿದರು.

ಬಿಜೆಪಿಯಿಂದ ಕೇಳಿರುವ ಪ್ರಶ್ನೆಗಳಿಗೆ ನೀವು ಉತ್ತರ ಕೊಟ್ಟರೆ ಅದನ್ನು ಮಾಧ್ಯಮದ ಮೂಲಕ ಕ್ಷೇತ್ರದ ಮತದಾರರಿಗೆ ವಿವರಿಸಲಾಗುವುದು ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ರಘುನಾಥರಾವ ಮಲ್ಕಾಪುರೆ, ಶಾಸಕ ಡಾ.ಶೈಲೇಂದ್ರ ಕೆ. ಬೆಲ್ದಾಳೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪೀರಪ್ಪ ಔರಾದೆ, ಕಲಬುರಗಿ ವಿಭಾಗೀಯ ಸಂಘಟನಾ ಸಹ ಪ್ರಭಾರಿ ಈಶ್ವರಸಿಂಗ್ ಠಾಕೂರ, ಮುಖಂಡರಾದ ಬಾಬು ವಾಲಿ, ಕುಶಾಲ ಪಾಟೀಲ ಗಾದಗಿ, ಮಹೇಶ ಪಾಲಂ, ರಾಜಕುಮಾರ ಚಿದ್ರಿ , ಮಹೇಶ್ವರ ಸ್ವಾಮಿ, ಹಣುಮಂತ ಬುಳ್ಳಾ, ಸಂಗಮೇಶ ನಾಸಿಗರ, ರಾಜೇಂದ್ರ ಪೂಜಾರಿ, ನಿತಿನ್ ನವಲ್ಕೆರೆ, ರಾಜಶೇಖರ ನಾಗಮೂರ್ತಿ, ಅಶೋಕ ಹೊಕ್ರಾಣೆ, ಜೈಕುಮಾರ ಕಾಂಗೆ, ನರೇಶ ಗೌಳಿ, ಬಸವರಾಜ ಜೋಜನಾ, ರಾಜುಕುಮಾರ ಪಾಟೀಲ ನೆಮತಾಬಾದ, ಗಣೇಶ ಭೋಸಲೆ, ರೋಷನ್ ವರ್ಮಾ, ವಿರೇಶ ಸ್ವಾಮಿ, ಶ್ರೀನಿವಾಸ ಚೌಧರಿ ಇತರರಿದ್ದರು.

15 ಪ್ರಶ್ನೆ ಕೇಳಿದ ಜಿಲ್ಲಾ ಬಿಜೆಪಿ ಸಚಿವ ರಹೀಂ ಖಾನ್‌ ಅನುಪಸ್ಥಿತಿ ಸಚಿವರ ಸಹಾಯಕನಿಗೆ ಪತ್ರ ಸಲ್ಲಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT