ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಸ್ಲಿಮರಿಗೆ ಮೀಸಲಾತಿ; ಬಿಜೆಪಿ ಅಪಪ್ರಚಾರ: ಮಾವಳ್ಳಿ ಶಂಕರ್‌

Published 29 ಏಪ್ರಿಲ್ 2024, 16:32 IST
Last Updated 29 ಏಪ್ರಿಲ್ 2024, 16:32 IST
ಅಕ್ಷರ ಗಾತ್ರ

ಬೀದರ್‌: ‘ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗದವರ ಮೀಸಲಾತಿಯನ್ನು ಮುಸ್ಲಿಮರಿಗೆ ಹಂಚಿಕೆ ಮಾಡುತ್ತಾರೆ ಎಂದು ಆರ್‌ಎಸ್‌ಎಸ್‌, ಬಿಜೆಪಿ ಅಪಪ್ರಚಾರ ಮಾಡುತ್ತಿದೆ. ಹೀಗೆ ಮಾಡಲು ಸಂವಿಧಾನದಲ್ಲಿ ಅವಕಾಶವೇ ಇಲ್ಲ’ ಎಂದು ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿ ಮುಖಂಡ ಮಾವಳ್ಳಿ ಶಂಕರ್‌ ಹೇಳಿದರು.

‘ದೇಶದಲ್ಲಿನ ಎಲ್ಲ ಬಿಕ್ಕಟ್ಟುಗಳಿಗೆ ಆರ್‌ಎಸ್‌ಎಸ್‌ ಕಾರಣ. ಜನ ಹಸಿವು, ಅರಾಜಕತೆಯಿಂದ ನರಳುತ್ತಿರಬೇಕೆನ್ನುವುದು ಇವರ ಅಜೆಂಡಾ. ಇದನ್ನು ಸ್ವತಃ ಆರ್‌ಎಸ್‌ಎಸ್‌ನ ಗೋಳ್ವಾಳಕರ್‌ ಅವರೇ ಹೇಳಿದ್ದಾರೆ’ ಎಂದು ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಕೋಮುವಿರೋಧಿ ನೀತಿ ವಿರುದ್ಧ ಧ್ವನಿ ಎತ್ತಿದ್ದೆವು. ಈಗ ಪುನಃ ಲೋಕಸಭೆ ಚುನಾವಣೆಯಲ್ಲಿ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ. ಹಿಜಾಬ್‌, ಹಲಾಲ್‌ ಕಟ್‌ ಸೇರಿದಂತೆ ಇತರೆ ವಿಷಯಗಳ ಮೂಲಕ ಬಿಜೆಪಿ ರಾಜ್ಯದಲ್ಲಿ ಜನರನ್ನು ವಿಭಜಿಸಲು ಪ್ರಯತ್ನಿಸಿತ್ತು. ಆದರೆ, ಚುನಾವಣೆಯಲ್ಲಿ ಸೋಲು ಕಂಡಿತು. ಲೋಕಸಭೆ ಚುನಾವಣೆಯಲ್ಲೂ ಅದಕ್ಕೆ ಸೋಲಾಗಬೇಕು. ಈ ದೇಶದ ಸಂವಿಧಾನ, ಪ್ರಜಾಪ್ರಭುತ್ವ, ಬಹುತ್ವ ಉಳಿಯಬೇಕು’ ಎಂದು ಹೇಳಿದರು.

‘ಬಸವಾದಿ ಶರಣರು ಕಲ್ಯಾಣ ರಾಜ್ಯಕ್ಕೆ ಬಂದು ಬಹುತ್ವ ಚಳವಳಿ ಕಟ್ಟಿದ್ದರು. ದುಡಿಮೆ ಮತ್ತು ದಾಸೋಹ ಜನಸಮುದಾಯದಲ್ಲಿ ಬಿತ್ತಿದ್ದವರು ಶರಣರು. ಆದರೆ, ಅವರನ್ನು ಕಲ್ಯಾಣ ರಾಜ್ಯದಿಂದ ಓಡಿಸಿದರು. ಮನುಷ್ಯತ್ವ, ಮಾನವೀಯತೆಗಾಗಿ ಕೆಲಸ ಮಾಡಿದ ಶರಣರನ್ನು ವೈದಿಕರು ಕೊಲೆ ಮಾಡಿದರು. ಈಗಿನ ಚುನಾವಣೆಯಲ್ಲಿ ಕೊಡುವ ಮತ ಕಾಯಕ, ದಾಸೋಹಕ್ಕೆ ಕೊಡುವಂತಹದ್ದು. ಇಲ್ಲವಾದರೆ ಹತ್ಯೆ ಮಾಡಿದವರ ಕಳಂಕಿತರ ಸಾಲಿಗೆ ಸೇರುತ್ತೇವೆ’ ಎಂದು ಎಚ್ಚರಿಸಿದರು.

‘ಹತ್ತು ವರ್ಷಗಳಲ್ಲಿ ಭಾರತ ಹಿಮ್ಮುಖವಾಗಿ ಚಲಿಸುತ್ತಿದೆ. ಬಿಜೆಪಿಯ ಅವಕಾಶವಾದಿ ರಾಜಕೀಯ, ಲೂಟಿಕೋರ, ಉದ್ದಿಮೆದಾರರು, ಪುರೋಹಿತಷಾಹಿ ವರ್ಗದವರು ಇವರಿಗೆ ಬೆಂಬಲವಾಗಿ ನಿಂತಿದ್ದಾರೆ. ಹತ್ತು ವರ್ಷಗಳಲ್ಲಿ ಹಸಿವು, ನಿರುದ್ಯೋಗ ಪ್ರಮಾಣ ಹೆಚ್ಚಾಗಿದೆ. ಕೋಮುವಾದಿಗಳು ವಿಜೃಂಭಿಸಿ ಚರಿತ್ರೆ ತಿರುಚಿ, ಧರ್ಮ ಧರ್ಮಗಳ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿಯೇ ಮತದಾರರು ಬಿಜೆಪಿಯನ್ನು ತಿರಸ್ಕರಿಸಬೇಕು’ ಎಂದು ಮನವಿ ಮಾಡಿದರು.

ಮುಖಂಡ ಗುರುಪ್ರಸಾದ್‌ ಕೆರೆಗೋಡು ಮಾತನಾಡಿ, ‘ಈ ಸಲದ ಚುನಾವಣೆಯಲ್ಲಿ ಮತದಾರರು ಯೋಚಿಸಿ ಮತ ಚಲಾಯಿಸಬೇಕು ಇಲ್ಲವಾದಲ್ಲಿ ಭಾರತ ಸರ್ವಾಧಿಕಾರ ಆಡಳಿತಕ್ಕೆ ಒಳಪಡುತ್ತದೆ. ಮುಂದೆ ಚುನಾವಣೆಗಳು ನಡೆಯುವುದು ಅನಿಶ್ಚಿತ’ ಎಂದರು.

‘ಮೋದಿ ಅವರು ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ಮಾಡಿ ಲಜ್ಜೆಗೆಟ್ಟ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಮಂಗಳಸೂತ್ರ ಕಸಿಯುತ್ತಾರೆ ಎಂದು ಹೇಳಿರುವುದು ಭಾರತೀಯರು ತಲೆ ತಗ್ಗಿಸುವ ವಿಷಯ. ಹಿಂದಿನ ಯಾವ ಪ್ರಧಾನಿಯೂ ಜನಾಂಗೀಯ ದ್ವೇಷ ಭಾಷಣ ಮಾಡಿರಲಿಲ್ಲ’ ಎಂದರು.

ಮುಖಂಡ ಎಸ್‌.ಆರ್‌. ಕೊಲ್ಲೂರ ಮಾತನಾಡಿ, ‘ಚುನಾವಣೆಯಲ್ಲಿ ಸೋಲುತ್ತೇವೆ ಎನ್ನುವುದು ಪ್ರಧಾನಿಗೆ ಗೊತ್ತಾಗಿದೆ. ಹೀಗಾಗಿಯೇ ಹುಚ್ಚುಚ್ಚಾಗಿ ಮಾತನಾಡುತ್ತಿದ್ದಾರೆ. ಎಸ್ಸಿ/ಎಸ್ಟಿಗಳ ಮೀಸಲಾತಿ ತೆಗೆದು ಮುಸ್ಲಿಮರಿಗೆ ಕೊಡುವ ಅಧಿಕಾರವೇ ರಾಜ್ಯ ಸರ್ಕಾರಗಳಿಗಿಲ್ಲ. ಜನರನ್ನು ದಿಕ್ಕು ತಪ್ಪಿಸಲು ಮೋದಿ ಈ ರೀತಿಯ ಹೇಳಿಕೆಗಳನ್ನು ಕೊಡುತ್ತಿದ್ದಾರೆ’ ಎಂದರು.

ಮುಖಂಡರಾದ ಬಾಬುರಾವ್‌ ಪಾಸ್ವಾನ್‌, ಅನಿಲಕುಮಾರ್‌ ಬೇಲ್ದಾರ್‌, ರಮೇಶ ಡಾಕುಳಗಿ, ಅರ್ಜುನ್‌ ಭದ್ರೆ, ಅಂಬಾದಾಸ ಗಾಯಕವಾಡ, ವಿಠ್ಠಲದಾಸ ಪ್ಯಾಗೆ, ಶ್ರೀಪತರಾವ ದೀನೆ ಮತ್ತಿತರರು ಹಾಜರಿದ್ದರು.

ಬಸವಣ್ಣನ ನೆಲದಲ್ಲಿ ಕೋಮು ರಕ್ತ ಚೆಲ್ಲಬಾರದು. ಎಲ್ಲರೂ ಒಂದಾಗಿ ಬದುಕಬೇಕು. ಕೋಮುವಾದಿ ಸರ್ಕಾರ ತೊಲಗಬೇಕು
– ಮಾವಳ್ಳಿ ಶಂಕರ್‌ ಮುಖಂಡ
ಮುಂದಿನ ಐದು ವರ್ಷಗಳಿಗೆ ನೀಲನಕಾಶೆ ಸಿದ್ಧವಾಗುತ್ತಿದೆ ಎಂದು ಮೋದಿ ಹೇಳಿದ್ದಾರೆ. ಹಾಗಿದ್ದರೆ ಹತ್ತು ವರ್ಷಗಳಲ್ಲಿ ಅವರು ಟ್ರೈಲರ್‌ ತೋರಿಸಿದ್ದಾರೆ ಎಂದರ್ಥ
– ಗುರುಪ್ರಸಾದ್‌ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT