ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌: ಜಿಲ್ಲೆಯಾದ್ಯಂತ ಮೊಳಗಿದ ಬಾಬಾಸಾಹೇಬರ ಜಯಘೋಷ

ಸಂವಿಧಾನ ಶಿಲ್ಪಿಗೆ ಅಭಿಮಾನಿಗಳಿಂದ ಪುಷ್ಪ ನಮನ
Last Updated 14 ಏಪ್ರಿಲ್ 2022, 13:30 IST
ಅಕ್ಷರ ಗಾತ್ರ

ಬೀದರ್‌: ಎರಡು ವರ್ಷ ಮಹಾಪುರುಷರ ಜಯಂತಿ ಆಚರಣೆಗೆ ತೊಡಕಾಗಿದ್ದ ಕೋವಿಡ್‌ ತೊಲಗಿದ ನಂತರ ಡಾ.ಅಂಬೇಡ್ಕರ್‌ ವೃತ್ತದಲ್ಲಿ ಮೊದಲ ಬಾರಿಗೆ ಹಬ್ಬದ ವಾತಾವರಣ ಕಂಡು ಬಂದಿತು.

ಬಾಬಾಸಾಹೇಬರ ಅಭಿಮಾನಿಗಳು ಸೂರ್ಯೋದಯದ ವೇಳೆಗೆ ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಯ ಬಳಿ ಮೇಣದ ಬತ್ತಿಯನ್ನು ಬೆಳಗಿ ದಿನದ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸೂರ್ಯನ ಕಿರಣಗಳು ಭೂಮಿಯ ಮೇಲೆ ಬೀಳುವ ಮೊದಲೇ ಸಾವಿರಾರು ಸಂಖ್ಯೆಯಲ್ಲಿದ್ದ ಬಾಬಾಸಾಹೇಬರ ಅಭಿಮಾನಿಗಳು ವೃತ್ತದಲ್ಲಿ ಸಾಮೂಹಿಕವಾಗಿ ಮೇಣದ ಬತ್ತಿಯನ್ನು ಬೆಳಗಿಸಿ ಕೈಮುಗಿದ ಧನ್ಯತಾ ಭಾವ ಮೆರೆದರು. ಮನೆಯಿಂದ ಬರುವಾಗಲೇ ಹೂಮಾಲೆ ಹಿಡಿದುಕೊಂಡು ಬಂದಿದ್ದ ಅನೇಕರು ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಕೆಲವರು ಗುಲಾಬಿ ಹಾಗೂ ಸೇವಂತಿ ಪುಷ್ಪವೃಷ್ಟಿ ಮಾಡಿ ಗೌರವ ಸಮರ್ಪಿಸಿದರು.

ಸಂವಿಧಾನದ ಮೂಲಕ ಶೋಷಿತ ಸಮುದಾಯಕ್ಕೆ ಸಮಾನತೆ ಕಲ್ಪಿಸಿದಕ್ಕೆ ಕೃತಜ್ಞತೆ ಸಲ್ಲಿಸುವ ಭಾಗವಾಗಿ ಅನೇಕ ಜನ ತಮ್ಮ ಕುಟುಂಬಗಳೊಂದಿಗೆ ಬಂದು ಪ್ರತಿಮೆಯ ಎದುರು ತಲೆಬಾಗಿ ನಮಸ್ಕರಿಸಿದರು. ಸರತಿ ಸಾಲಿನಲ್ಲಿ ಮಾಲೆ ಹಾಕಿ ಫೊಟೊಗಳನ್ನು ತೆಗೆಸಿಕೊಂಡರು.

ಸಮತಾ ಸೈನಿಕ ದಳದ ಸಮುದಾಯ ಭವನದಿಂದ ಶಿವಾಜಿ ವೃತ್ತದ ಮಾರ್ಗವಾಗಿ ಡಾ.ಅಂಬೇಡ್ಕರ್‌ ವೃತ್ತದ ವರೆಗೆ ಪಥ ಸಂಚಲನ ನಡೆಸಿದರು. ನೀಲಿ ಅಂಚಿನ ಶ್ವೇತ ಬಣ್ಣದ ಸೀರೆ ತೊಟ್ಟಿದ್ದ ನೂರಾರು ಮಹಿಳೆಯರು ಪ್ರತಿಮೆಯ ಮುಂಭಾಗದಲ್ಲಿ ನಿಂತು ಸಾಮೂಹಿಕ ಗೌರವ ವಂದನೆ ನೀಡಿದರು.

ತೋಟಗಾರಿಕೆ ಕಚೇರಿಯ ಬಳಿ ಪಾದಚಾರಿ ರಸ್ತೆ ಮೇಲೆ ನಿರ್ಮಿಸಿದ್ದ ಚಿಕ್ಕದಾದ ವೇದಿಕೆಯಲ್ಲಿ ಸೂರ್ಯಕಾಂತ ಹಾಗೂ ಸಂಗಡಿಗರು ಭೀಮಗೀತೆಗಳನ್ನು ಹಾಡಿ ಪ್ರೇಕ್ಷಕರ ಮನ ರಂಜಿಸಿದರು. ಅಂಬೇಡ್ಕರ್‌ ಅಭಿಮಾನಿಗಳು ಮೆರವಣಿಗೆ ಮಾರ್ಗದಲ್ಲಿ ಉಪ್ಪಿಟು, ಶೀರಾ, ಜಿಲೇಬಿ, ಲಿಂಬೆ ಶರಬರ್‌ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದರು.

ಕೆಲ ಯುವಕರು ನೀಲಿ ಧ್ವಜ ಹಿಡಿದು ಬೈಕ್‌ ಮೇಲೆ ನಿಂತು ಕಸರತ್ತು ಪ್ರದರ್ಶಿಸಿದರು. ಮಹಿಳೆಯರು ಎತ್ತರದ ಧ್ವಜ ಹಿಡಿದು ಗಾಳಿಯಲ್ಲಿ ತೇಲಾಡಿಸಿ ಜಯಘೋಷ ಮೊಳಗಿಸಿದರು. ಆಟೊಗಳ ಮೇಲೆ ಹಾರಾಡಿದ ನೀಲಿ ಧ್ವಜ ಹಾರಾಡಿದವು. ಅಂಬೇಡ್ಕರ್‌ ವೃತ್ತದ ಬಳಿ ರಸ್ತೆಯ ಎರಡೂ ಬದಿಗೆ ಅಂಬೇಡ್ಕರ್‌ ಜನ್ಮದಿನದ ಶುಭಾಶಯ ಕೋರಿ ನೂರಾರು ಕಟೌಟ್‌ಗಳನ್ನು ಅಳವಡಿಸಲಾಗಿತ್ತು.

ಡಾ.ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ
ಡಾ.ಅಂಬೇಡ್ಕರ್‌ ಜಯಂತಿ ಅಂಗವಾಗಿ ಕೇಂದ್ರ ಸಚಿವ ಭಗವಂತ ಖೂಬಾ, ಶಾಸಕರಾದ ರಹೀಂ ಖಾನ್, ಬಂಡೆಪ್ಪ ಕಾಶೆಂಪೂರ್, ವಿಧಾನ ಪರಿಷತ್‌ ಸದಸ್ಯ ಅರವಿಂದಕುಮಾರ ಅರಳಿ, ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ.ಶೈಲೇಂದ್ರ ಕೆ.ಬೆಲ್ದಾಳೆ, ಕರ್ನಾಟಕ ರಾಜ್ಯ ಹಜ್ ಸಮಿತಿ ಅಧ್ಯಕ್ಷ ರೌಫೋದ್ದಿನ್ ಕಚೇರಿವಾಲೆ, ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ಕಿಶೋರಬಾಬು ಅವರು ಡಾ.ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.

ನಂತರ ಆರಂಭವಾದ ಬಾಬಾಸಾಹೇಬರ ಭಾವಚಿತ್ರದ ಮೆರವಣಿಗೆಯಲ್ಲಿ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಸೇರಿದಂತೆ ರಾಜಕಾರಣಿಗಳು ಡಿಜೆ ಸಂಗೀತಕ್ಕೆ ಹೆಜ್ಜೆ ಹಾಕಿದರು.

ಬಿಜೆಪಿ ಮುಖಂಡ ಉಮಾಕಾಂತ ನಾಗಮಾರಪಳ್ಳಿ, ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಪಾಟೀಲ ಸೋಲಪುರ, ರಾಜ್ಯ ಜಾನಪದ ಅಕಾಡೆಮಿ ಮಾಜಿ ಸದಸ್ಯ ವಿಜಯಕುಮಾರ ಸೋನಾರೆ, ಬುದ್ಧ, ಬಸವ, ಅಂಬೇಡ್ಕರ್‌ ವೇದಿಕೆಯ ಅಧ್ಯಕ್ಷ ಮಹೇಶ ಗೊರನಾಳಕರ್, ಸಾಮಾಜಿಕ ಕಾರ್ಯಕರ್ತ ಪ್ರದೀಪ ಜಂಜೀರೆ, ರಾಜಕುಮಾರ ಮೂಲಭಾರತಿ, ಮುಖಂಡರಾದ ಮಾರುತಿ ಬೌದ್ಧೆ, ಅನಿಲ ಬೆಲ್ದಾರ್, ಕಲ್ಯಾಣರಾವ್‌ ಭೋಸಲೆ, ನಾಗೇಂದ್ರ ದಂಡೆ, ದೇವೇಂದ್ರ ಸೋನಿ, ಉಮೇಶಕುಮಾರ ಸೋರಳ್ಳಿಕರ್, ಬಹುಜನ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಪ್ರದೀಪ ನಾಟಕೇರ್ ಬಸವರಾಜ ಮಾಳಗೆ, ಶ್ರೀಪತಿ ದೀನೆ, ಸಾಹಿತಿ ಸುಬ್ಬಣ್ಣ ಕರಕನಳ್ಳಿ ಮೆರವಣಿಗೆಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT