ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ಫ್ಯೂನಿಂದ ಸಮಾರಂಭಗಳಿಗೆ ನಿರ್ಬಂಧ: ಆರ್ಥಿಕ ಸಂಕಷ್ಟದಲ್ಲಿ ರೊಟ್ಟಿ ತಯಾರಕರು

Last Updated 7 ಮೇ 2021, 5:18 IST
ಅಕ್ಷರ ಗಾತ್ರ

ಖಟಕಚಿಂಚೋಳಿ: ಕೋವಿಡ್‌–19 ನಿಯಂತ್ರಣಕ್ಕಾಗಿ ಸರ್ಕಾರ ವಿಧಿಸಿರುವ ಕರ್ಫ್ಯೂನಿಂದಾಗಿ ದೊಡ್ಡ ವ್ಯಾಪಾರಗಳ ಜೊತೆಗೆ ಸಣ್ಣಪುಟ್ಟ ವ್ಯಾಪಾರಗಳು ಸಹ ನೆಲಕಚ್ಚಿವೆ. ಮದುವೆ, ಸಭೆ– ಸಮಾರಂಭಗಳಿಗೆ ನಿರ್ಬಂಧ ಹೇರಿರುವುದರಿಂದ ರೊಟ್ಟಿ ತಯಾರಿಕರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಸ್ವಾವಲಂಬಿ ಜೀವನ ನಡೆಸಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಭಾಲ್ಕಿ ತಾಲ್ಲೂಕಿನ ಮಾವಿನಹಳ್ಳಿ ಗ್ರಾಮದ ಮಹಾನಂದಾ ಉಡಬಾಳೆ ಹಾಗೂ ಚಳಕಾಪುರದ ಕವಿತಾ ಸುಭಾಷ ಕೆನಾಡೆ ಅವರು ರೊಟ್ಟಿ ತಯಾರಕ ಯಂತ್ರಗಳನ್ನು ಪಡೆದಿದ್ದರು. ಯಂತ್ರದ ಸಹಾಯದಿಂದ ರೊಟ್ಟಿ ತಯಾರಿಸಿ ಮಾರಾಟ ಮಾಡುತ್ತಿದ್ದರು.

‘ನಾನು ಸ್ವಾವಲಂಬಿ ಜೀವನ ನಡೆಸಬೇಕು ಹಾಗೂ ಕುಟುಂಬಕ್ಕೆ ನೆರವಾಗಬೇಕು ಅನ್ನುವ ಉದ್ದೇಶದಿಂದ ಧರ್ಮಸ್ಥಳ ಸಂಸ್ಥೆಯಿಂದ ರೊಟ್ಟಿ ತಯಾರಿಸುವ ಯಂತ್ರ ಪಡೆದುಕೊಂಡೆ. ಆದರೆ, ಕೋವಿಡ್‌ ಪ್ರಯುಕ್ತ ಸರ್ಕಾರ ಮದುವೆ, ಸಭೆ, ಸಮಾರಂಭಗಳಿಗೆ ನಿರ್ಬಂಧ ಹೇರಿದೆ. ಇದರಿಂದಾಗಿ ರೊಟ್ಟಿ ಕೇಳುವವರೇ ಇಲ್ಲದಂತಾಗಿದೆ’ ಎಂದು ಮಹಾನಂದಾ ಉಡಬಾಳೆ ಅಳಲು ತೋಡಿಕೊಂಡರು.

‘ಪ್ರತಿ ರೊಟ್ಟಿ ₹5 ರಂತೆ ಮಾರಾಟ ಮಾಡುತ್ತೇವೆ. ಮದುವೆ, ಚಿಕ್ಕಪುಟ್ಟ ಕಾರ್ಯಕ್ರಮದವರು 500ರಿಂದ 1 ಸಾವಿರ ರೊಟ್ಟಿ ತೆಗೆದುಕೊಂಡು ಹೋಗುತ್ತಿದ್ದರು. ಇದರಿಂದ ಉತ್ತಮ ಲಾಭವಾಗುತ್ತಿತ್ತು. ಸಾಲದ ಕಂತುಗಳನ್ನು ಸುಗಮವಾಗಿ ಪಾವತಿಸಲಾಗುತ್ತಿತ್ತು. ಆದರೆ, ಈಗ ಸಾಲದ ಕಂತನ್ನು ಪಾವತಿಸಲು ಕಷ್ಟವಾಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಮಹಿಳೆಯರು ಆರ್ಥಿಕವಾಗಿ ಸದೃಢರಾಗಲಿ ಎನ್ನುವ ಉದ್ದೇಶದಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯವರು ಗ್ರಾಮೀಣ ಭಾಗದ ಮಹಿಳೆಯರಿಗೆ ರೊಟ್ಟಿ ತಯಾರಕ ಯಂತ್ರ, ಹೋಲಿಗೆ ಯಂತ್ರ ಸೇರಿದಂತೆ ವಿವಿಧ ಸಲಕರಣೆಗಳನ್ನು ನೀಡುತ್ತಿದೆ. ಅದೇ ರೀತಿ ನಾವು ರೊಟ್ಟಿ ತಯಾರಕ ಯಂತ್ರಗಳನ್ನು ಪಡೆದುಕೊಂಡಿದ್ದೇವೆ. ಕರ್ಫ್ಯೂ ನಮ್ಮ ಆದಾಯ ಕಸಿದು ಜೀವನವನ್ನು ಸಂಕಷ್ಟಕ್ಕೆ ಗುರಿಮಾಡಿದೆ’ ಎಂದು ಕವಿತಾ ಕೆನಾಡೆ ಅಸಹಾಯಕತೆ ವ್ಯಕ್ತ‍ಪಡಿಸಿದರು.

‘ಸಾಮಾನ್ಯವಾಗಿ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿಯೇ ಮದುವೆ ಹೆಚ್ಚಾಗಿ ನಡೆಯುತ್ತವೆ. ಆದರೆ, ಕಳೆದ ವರ್ಷವೂ ಏಪ್ರಿಲ್‌ನಲ್ಲಿಯೇ ಲಾಕ್‌ಡೌನ್ ಹೇರಲಾಗಿತ್ತು. ಈ ವರ್ಷವೂ ಇದೇ ತಿಂಗಳಿನಲ್ಲಿ ಕೊರೊನಾ ಎರಡನೇ ಅಲೆ ಪ್ರಾರಂಭ ಆಗಿರುವುದರಿಂದ ಮದುವೆಗಳು ಸೀಮಿತ ಜನರಿಗೆ ಮೀಸಲಿಡಲಾಗಿದೆ. ಇದರಿಂದ ವ್ಯಾಪಾರದಲ್ಲಿ ನಷ್ಟವಾಗುತ್ತಿದೆ’ ಎಂದು ತಿಳಿಸಿದರು.

‘ಶ್ರೀಮಂತರು ಹೇಗೋ ಬದುಕುತ್ತಾರೆ. ಆದರೆ, ನಮ್ಮಂತ ಚಿಕ್ಕ ವ್ಯಾಪಾರಸ್ಥರು ಅವರಿವರ ಹತ್ತಿರ ಸಾಲ ಪಡೆದು ಜೀವನ ಸುಧಾರಿಸಿಕೊಳ್ಳೋಣ ಎನ್ನುವಷ್ಟರಲ್ಲಿ ಕರ್ಫ್ಯೂನಿಂದಾಗಿ ಮತ್ತೆ ಸಾಲದ ಸುಳಿಯಲ್ಲಿ ಸಿಲುಕುವಂತಾಗಿದೆ’ ಎಂದು ಮಹಾದೇವ ಉಡಬಾಳೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಹಣವಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣ’
‘ಸಾಮಾನ್ಯವಾಗಿ ಮದುವೆಯ ದಿನಾಂಕವು ಎರಡು– ಮೂರು ತಿಂಗಳ ಮೊದಲೇ ನಿಗದಿಯಾಗಿರುತ್ತದೆ. ಹಾಗಾಗಿ, ಮದುವೆ ಇದ್ದವರು ರೊಟ್ಟಿಗಾಗಿ ಮುಂಗಡ ಹಣ ಪಾವತಿಸುತ್ತಾರೆ. ಅದರಂತೆ ನಮ್ಮಲ್ಲಿಯೂ ₹50 ಸಾವಿರ ಪಾವತಿಸಿದ್ದರು. ಆ ಹಣದಿಂದ ನಾವು ರೊಟ್ಟಿಗೆ ಬೇಕಾಗುವ ಸಾಮಗ್ರಿಗಳನ್ನು ತಂದುಕೊಂಡಿದ್ದೇವೆ. ಆದರೆ, ಕರ್ಫ್ಯೂ ಘೋಷಣೆ ಆಗಿದ್ದರಿಂದ ಅವರು ಮರಳಿ ಕೊಡಬೇಕು ಎಂದು ಒತ್ತಾಯಿಸಿ, ಹಣ ಮರಳಿ ಪಡೆದರು. ಹೀಗಾಗಿ ಸದ್ಯ ಕೈಯಲ್ಲಿ ಹಣವಿಲ್ಲದೆ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ’ ಎಂದು ರೊಟ್ಟಿ ತಯಾರಕಿ ಕವಿತಾ ಸುಭಾಷ ಕೆನಾಡೆ ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT