ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್: ಸಿಎಎ ಬೆಂಬಲಿಸಿ ಬೃಹತ್ ರ್‍ಯಾಲಿ

ರಾಜಕೀಯ ಮುಖಂಡರಿಗೆ ವೇದಿಕೆಯಲ್ಲಿ ಇರಲಿಲ್ಲ ಅವಕಾಶ
Last Updated 7 ಜನವರಿ 2020, 15:57 IST
ಅಕ್ಷರ ಗಾತ್ರ

ಬೀದರ್: ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ರಾಷ್ಟ್ರ ಹಿತರಕ್ಷಣಾ ವೇದಿಕೆಯ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ನಗರದಲ್ಲಿ ಮಂಗಳವಾರ ಬೃಹತ್‌ ಜಾಗೃತಿ ರ್‍ಯಾಲಿ ನಡೆಸಿದರು.

ಗಣೇಶ ಮೈದಾನದಿಂದ ಆರಂಭವಾದ ರ್‍ಯಾಲಿಯಲ್ಲಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ರಾಷ್ಟ್ರಧ್ವಜ, ಕೇಸರಿ ಧ್ವಜ, ಬ್ಯಾನರ್‌, ಪೋಸ್ಟರ್‌ಗಳನ್ನು ಹಿಡಿದು ಪಾಲ್ಗೊಂಡಿದ್ದರು. ‘ಮೋದಿ ಬಾಬಾ ಕೀ ಜೈ’, ‘ನರೇಂದ್ರ ಮೋದಿ ಅವರಿಗೆ ಜಯವಾಗಲಿ’, ‘ಭಾರತ ಮಾತಾಕೀ ಜೈ, ವಂದೇ ಮಾತರಂ’, ‘ರಾಷ್ಟ್ರದ ಹಿತಕ್ಕಾಗಿ ಸಿಎಎ ಬೆಂಬಲಿಸಿ’ ಎನ್ನುವ ಘೋಷಣೆಗಳನ್ನು ಮೊಳಗಿಸಿದರು.

ವಿದ್ಯಾರ್ಥಿಗಳು ‘ಅಂಬೇಡ್ಕರ್‌ ಕನಸು ಸಿಎಎಯಿಂದ ನನಸು’, ‘ಗಾಂಧಿ ಕನಸು ಸಿಎಎಯಿಂದ ನನಸು’, ‘ಸಂವಿಧಾನ ಉಳಿಸಲು ಸಿಎಎ ಬೆಂಬಲಿಸಿ’, ಬಹುದಿನಗಳ ವರೆಗೂ ಸಂವಿಧಾನ ಉಳಿಯಲಿ’, ‘ಸಿಎಎ ಬಗ್ಗೆ ಅರಿಯಿರಿ’,‘ಸಿಎಎ ಸಮ್ಮಾನ್‌ ಮೇ, ಹಮ್‌ ಸಬ್‌ ಮೈದಾನ ಮೇ’ ಎನ್ನುವ ಘೋಷಣಾ ಫಲಕಗಳನ್ನು ಹಿಡಿದುಕೊಂಡು ಮೆರವಣಿಗೆಯಲ್ಲಿ ಸಾಗಿದರು.

ಮುಸ್ಲಿಂ ಹಾಗೂ ದಲಿತರು ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳನ್ನು ಹೊರತುಪಡಿಸಿ ಉಳಿದೆಲ್ಲ ಪ್ರಮುಖ ಶಿಕ್ಷಣ ಸಂಸ್ಥೆಗಳು ತಮ್ಮ ಕಾಲೇಜಿನ ವಿದ್ಯಾರ್ಥಿಗಳನ್ನು ಸಾಯಿ ಆದರ್ಶ ಶಾಲೆಯ ಆವರಣದಲ್ಲಿ ತಂದು ಬಿಟ್ಟಿದ್ದವು. ಮೆರವಣಿಗೆ ನಂತರ ಮತ್ತೆ ಅವರನ್ನು ಕಾಲೇಜುಗಳಿಗೆ ಕರೆದೊಯ್ದವು.

ಇದಕ್ಕೂ ಮೊದಲು ನಗರದ ಗಣೇಶ ಮೈದಾನದಲ್ಲಿ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಸಿದ್ಧಾರೂಢ ಮಠದ ಶಿವಕುಮಾರ ಸ್ವಾಮೀಜಿ ಮಾತನಾಡಿ, ‘ವಸುದೇವ ಕುಟುಂಬಕಂ ಹಾಗೂ ಸರ್ವೇಜನ ಸುಖಿನೋಭವಂತು ನಂಬಿರುವ ದೇಶ ಇದು. ಸಿಎಎ ಕಾಯ್ದೆಯಿಂದ ಎಲ್ಲರಿಗೂ ಅನುಕೂಲ ಇದೆ. ದೇಶದಲ್ಲಿ ವಾಸವಾಗಿರುವವರಿಗೆ ಯಾವುದೇ ತೊಂದರೆ ಇಲ್ಲ. ಎಲ್ಲರೂ ಕಾಯ್ದೆಯನ್ನು ಬೆಂಬಲಿಸಬೇಕು’ ಎಂದು ಹೇಳಿದರು.

ಸಾಮಾಜಿಕ ಕಾರ್ಯಕರ್ತ ನಾಗೇಶ ರೆಡ್ಡಿ ಮಾತನಾಡಿ, ‘ವಿಶ್ವ ಭ್ರಾತೃತ್ವ ಸಂದೇಶ ಕೊಟ್ಟ ದೇಶ ನಮ್ಮದು. ಸಿಎಎ ಕಾಯ್ದೆ ಯಾರ ಹಕ್ಕನ್ನೂ ಕಸಿದುಕೊಳ್ಳುವುದಿಲ್ಲ. ಜನರ ಕಣ್ಣೀರು ಒರೆಸುವ ಕಾಯ್ದೆಯನ್ನು ವಿರೋಧಿಸುವುದು ಸರಿಯಲ್ಲ’ ಎಂದು ಹೇಳಿದರು.

ರಾಷ್ಟ್ರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಬಸವರಾಜ ಧನ್ನೂರ ಮಾತನಾಡಿ, ‘ರಾಷ್ಟ್ರದ ಹಿತಕ್ಕಾಗಿ ರಚಿಸಲಾಗಿರುವ ಕಾಯ್ದೆಯನ್ನು ಎಲ್ಲರೂ ಬೆಂಬಲಿಸೋಣ. ನಮ್ಮ ರ್‍ಯಾಲಿ ಯಾರ ವಿರುದ್ಧವೂ ಅಲ್ಲ’ ಎಂದರು.

ವೇದಿಕೆ ಕಾರ್ಯಕ್ರಮದಲ್ಲಿ ರಾಜಕೀಯ ಪಕ್ಷಗಳ ಮುಖಂಡರಿಗೆ ವೇದಿಕೆ ಮೇಲೆ ಅವಕಾಶ ಕಲ್ಪಿಸಿರಲಿಲ್ಲ. ಹೀಗಾಗಿ ಸಂಸದ ಭಗವಂತ ಖೂಬಾ, ವಿಧಾನ ಪರಿಷತ್‌ ಸದಸ್ಯ ರಘುನಾಥ ಮಲ್ಕಾಪುರೆ, ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶೈಲೆಂದ್ರ ಬೆಲ್ದಾಳೆ, ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಸೂರ್ಯಕಾಂತ ನಾಗಮಾರಪಳ್ಳಿ, ಈಶ್ವರಸಿಂಗ್‌ ಠಾಕೂರ್ ವೇದಿಕೆ ಮುಂಭಾಗದ ಆಸನದಲ್ಲಿ ಕುಳಿತ್ತಿದ್ದರು.

ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು, ರಾಷ್ಟ್ರ ಹಿತರಕ್ಷಣಾ ವೇದಿಕೆಯ ಗೌರವಾಧ್ಯಕ್ಷರಾದ ಗುರುನಾಥ ಕೊಳ್ಳೂರ, ಶಿವಶರಣಪ್ಪ ವಾಲಿ, ಬಿ.ಜಿ.ಶೆಟಕಾರ್‌, ಚನ್ನಬಸಪ್ಪ ಹಾಲಹಳ್ಳಿ, ಎಂ.ಆರ್. ಗೋಡಬೋಲೆ, ಕಾರ್ಯಾಧ್ಯಕ್ಷ ಸೋಮಶೇಖರ ಪಾಟೀಲ ಗಾದಗಿ, ಉಪಾಧ್ಯಕ್ಷರಾದ ಭರತ ಶೆಟಕಾರ, ಪ್ರಕಾಶ ಟೊಣ್ಣೆ, ಕಾರ್ಯದರ್ಶಿಗಳಾದ ರಮೇಶ ಕುಲಕರ್ಣಿ, ವೀರೇಂದ್ರ ಶಾಸ್ತ್ರಿ, ರೇವಣಸಿದ್ದಪ್ಪ ಜಲಾದೆ, ಸಂಚಾಲಕ ಭಗುಸಿಂಗ್ ಜಾಧವ, ಸಹ ಸಂಚಾಲಕ ಶಿವಶರಣಪ್ಪ ಪಾಟೀಲ, ಬಸವರಾಜ ಪಾಟೀಲ ಅಷ್ಟೂರ್, ಕುಶಾಲ ಪಾಟೀಲ ಗಾದಗಿ, ಬಲಬೀರ್‌ ಸಿಂಗ್, ದರ್ಬಾರಾ ಸಿಂಗ್, ವಕೀಲೆ ಶಕುಂತಲಾ, ಸುನೀಲ ಮೊಟ್ಟಿ, ರಂಜೀತ್ ಪಾಟೀಲ, ಹಾವಶೆಟ್ಟಿ ಪಾಟೀಲ ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT