ಭಾನುವಾರ, ಜೂನ್ 13, 2021
21 °C
ಸರ್ಕಾರ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಿರಿ

ಬೀದರ್ ಜಿಲ್ಲೆಯಲ್ಲಿ ಸರಳ ಗಣೇಶೋತ್ಸವ ಆಚರಿಸಲು ಜಿಲ್ಲಾಧಿಕಾರಿ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ರಾಜ್ಯ ಸರ್ಕಾರದ ಮಾರ್ಗಸೂಚಿಯಂತೆ ಗಣೇಶೋತ್ಸವವನ್ನು ಸರಳವಾಗಿ ಆಚರಿಸಬೇಕು ಎಂದು
ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಮನವಿ ಮಾಡಿದರು.

ಇಲ್ಲಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲೆಯ ಗಣೇಶೋತ್ಸವ ಮಂಡಳದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.

‘ನಮ್ಮೆಲ್ಲರ ಆರೋಗ್ಯದ ಹಿತೃದೃಷ್ಟಿಯಿಂದ ಮಾಡಿದ ಮಾರ್ಗಸೂಚಿ ಇದಾಗಿದೆ. ರಾಜ್ಯದಲ್ಲಿ ಕೋವಿಡ್ 19 ಸೋಂಕು ವ್ಯಾಪಕವಾಗಿ ಹರಡುತ್ತಿರುವುದು ಅಂಕಿ ಅಂಶಗಳಿಂದ ಗೊತ್ತಾಗಿದೆ. ಸೋಂಕು ಹರಡುವಿಕೆಯ ಸರಪಳಿಯನ್ನು ತುಂಡರಿಸುವ ದಿಸೆಯಲ್ಲಿ ಗಣೇಶೋತ್ಸವವನ್ನು ಸರಳ ರೀತಿಯಲ್ಲಿ ಭಕ್ತಿಪೂರ್ವಕವಾಗಿ ಆಚರಿಸಬೇಕು ಎಂದು ಹೇಳಿದರು.

‘ಮುಂದಿನ ಪೀಳಿಗೆಗೆ ಸುರಕ್ಷಿತ ವಾತಾವರಣ ಕಲ್ಪಿಸಿಕೊಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಗಣೇಶೋತ್ಸವ ಆಚರಣೆ ವೇಳೆ ಸುರಕ್ಷತೆಗೆ ಸಾಕಷ್ಟು ಒತ್ತು ಕೊಡಬೇಕು. ಇದಕ್ಕೆ ಸಂಬಂಧಿಸಿದಂತೆ ಜೆಸ್ಕಾಂ ಹಾಗೂ ಅಗ್ನಿಶಾಮಕ ಅಧಿಕಾರಿಗಳಿಗೆ ಮಾರ್ಗಸೂಚಿ ಪಾಲನೆಗೆ ಸೂಚಿಸಲಾಗುವುದು’ ಎಂದರು.

‘ಹಬ್ಬ ಆಚರಣೆ ವೇಳೆ ಗುಂಪು ಸೇರಿದರೆ ಒಬ್ಬರಿಂದ ಒಬ್ಬರಿಗೆ ಕೋವಿಡ್ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಆದ್ದರಿಂದ ಅಂತರ ಪಾಲನೆ ಮಾಡಬೇಕು’ ಎಂದು ಸೂಚನೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್ ಮಾತನಾಡಿ, ‘ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ಹೆಚ್ಚಿನ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಸರಳ ಆಚರಣೆ ಮಾಡಬೇಕು’ ಎಂದು ಹೇಳಿದರು.

ಜಿಲ್ಲಾಡಳಿತದ ಮಾರ್ಗಸೂಚಿ ಅನುಸಾರ ಗಣೇಶೋತ್ಸವ ಆಚರಣೆಗೆ ಸಹಕರಿಸಲಾಗುವುದು ಎಂದು ಗಣೇಶ ಮಹಾಮಂಡಳದ ಅಧ್ಯಕ್ಷ ಚಂದ್ರಶೇಖರ ಪಾಟೀಲ, ಪ್ರಧಾನ ಕಾರ್ಯದರ್ಶಿ ಬಾಬು ವಾಲಿ, ಪದಾಧಿಕಾರಿಗಳಾದ ಸೂರ್ಯಕಾಂತ ಶೆಟಕಾರ, ರಜನೀಶ ವಾಲಿ, ವೀರಶೆಟ್ಟಿ, ವೆಂಕಟೇಶ ಮೋರ್ಖಂಡಿ ತಿಳಿಸಿದರು.

ಹೈದರಾಬಾದ್ ಮತ್ತಿತರ ನಗರಗಳಿಂದ ಬೀದರ್ ನಗರಕ್ಕೆ ಬರುತ್ತಿರುವ ದೊಡ್ಡ ಗಾತ್ರದ ಗಣೇಶ ಮೂರ್ತಿಗಳನ್ನು ನಿಷೇಧಿಸಬೇಕು ಎಂದು ಮಹಾಮಂಡಳದ ಸದಸ್ಯರು ಸಲಹೆ ಮಾಡಿದರು.

 

ಗಣೇಶೋತ್ಸವ: ಮಾರ್ಗಸೂಚಿ

ಬೀದರ್: ಕೋವಿಡ್ ಸೋಂಕು ಹರಡುವಿಕೆ ತಡೆಯುವ ದಿಸೆಯಲ್ಲಿ ಗಣೇಶೋತ್ಸವ ಆಚರಣೆಗೆ ಮಾರ್ಗಸೂಚಿ ಜಾರಿಗೊಳಿಸಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ರಾಮಚಂದ್ರನ್ ಆದೇಶ ಹೊರಡಿಸಿದ್ದಾರೆ

ಗಣಪತಿ ಮೂರ್ತಿಗಳನ್ನು ಮನೆ ಅಥವಾ ದೇವಸ್ಥಾನಗಳಲ್ಲಿ ಪ್ರತಿಷ್ಠಾಪನೆ ಮಾಡಬೇಕು. ಯಾವುದೇ ಕಾರಣಕ್ಕೂ ರಸ್ತೆ, ಗಲ್ಲಿ, ಮೈದಾನಗಳಲ್ಲಿ ಪೆಂಡಾಲ್ ಹಾಕಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಬಾರದು. ನದಿ, ಕೆರೆ, ಕೊಳ, ಬಾವಿ ಮತ್ತು ಕಲ್ಯಾಣಿಗಳಲ್ಲಿ ಮೂರ್ತಿಯನ್ನು ವಿಸರ್ಜನೆ ಮಾಡಬಾರದು ಎಂದು ತಿಳಿಸಿದರು.

ಗಣೇಶ ಪ್ರತಿಷ್ಠಾಪನೆಗೆ ತರುವಾಗ ಹಾಗೂ ಮೂರ್ತಿ ವಿಸರ್ಜನೆಗೆ ಹೋಗುವಾಗ ಮೆರವಣಿಗೆ ಹೊರಡಿಸಬಾರದು. ಚಿಕ್ಕ ಮೂರ್ತಿಗಳನ್ನು ಮನೆಗಳಲ್ಲಿ ಪ್ರತಿಷ್ಠಾಪಿಸಿ ಕೊನೆಯ ದಿನ ಬಕೆಟ್‌ಗಳಲ್ಲಿ ವಿಸರ್ಜನೆ ಮಾಡಬೇಕು. ದರ್ಶನಕ್ಕೆ ಬರುವ ಭಕ್ತರಿಗೆ ಸ್ಯಾನಿಟೈಸರ್ ವ್ಯವಸ್ಥೆ ಮಾಡಬೇಕು. ಅಂತರ ಕಾಯ್ದುಕೊಳ್ಳಬೇಕು. ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು ಎಂದು ಸೂಚಿಸಿದರು.

ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಸ್ಥಳೀಯ ಸಂಸ್ಥೆ, ಮಾಲಿನ್ಯ ನಿಯಂತ್ರಣ ಮಂಡಳಿ, ಅಗ್ನಿಶಾಮಕ ಇಲಾಖೆ ಹಾಗೂ ಇತರೆ ಇಲಾಖೆಗಳಿಂದ ಹೊರಡಿಸಲಾದ ಸೂಚನೆ ಹಾಗೂ ಮಾರ್ಗಸೂಚಿಗಳನ್ನು ಸಹ ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚನೆ ನೀಡಿದರು.

ರಾಷ್ಟ್ರೀಯ ನಿರ್ದೇಶನ ಹಾಗೂ ರಾಜ್ಯ ಸರ್ಕಾರದ ಮಾರ್ಗಸೂಚಿಗಳನ್ನು ಉಲ್ಲಂಘಿಸುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ, 2005 ಹಾಗೂ ಭಾರತೀಯ ದಂಡ ಸಂಹಿತೆ ಸೆಕ್ಷನ್ 188ರ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಕೆ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು