ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್ | ಕೇಂದ್ರ ಮಾದರಿ ವೇತನ: ಮುಖ್ಯಮಂತ್ರಿಗೆ ಪತ್ರ

ಪ್ರತಿಭಾ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಕೇಂದ್ರ ಸಚಿವ ಖೂಬಾ ಹೇಳಿಕೆ
Last Updated 8 ಜನವರಿ 2022, 11:34 IST
ಅಕ್ಷರ ಗಾತ್ರ

ಬೀದರ್: ಕೇಂದ್ರ ಮಾದರಿ ವೇತನದ ರಾಜ್ಯ ಸರ್ಕಾರಿ ನೌಕರರ ಬಹುದಿನಗಳ ಬೇಡಿಕೆಗೆ ಸ್ಪಂದಿಸುವಂತೆ ಮುಖ್ಯಮಂತ್ರಿಗೆ ಪತ್ರ ಬರೆಯಲಾಗಿದೆ ಎಂದು ಕೇಂದ್ರದ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ತಿಳಿಸಿದರು.

ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ವತಿಯಿಂದ ಇಲ್ಲಿಯ ಪ್ರತಾಪನಗರದ ನೌಕರರ ಭವನದಲ್ಲಿ ಆಯೋಜಿಸಿದ್ದ ಸಾವಿತ್ರಿಬಾಯಿ ಫುಲೆ ಜಯಂತಿ, ಪ್ರತಿಭಾ ಪುರಸ್ಕಾರ ಪ್ರದಾನ ಹಾಗೂ ಸನ್ಮಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನೌಕರರ ಭವನ ನವೀಕರಣಕ್ಕೆ ಕಳೆದ ಅವಧಿಯಲ್ಲಿ ₹ 7 ಲಕ್ಷ ಅನುದಾನ ನೀಡಿದ್ದೆ. ಅನುದಾನ ಸದ್ಬಳಕೆ ಆಗಿರುವ ಕಾರಣ ಖುಷಿಯಾಗಿದೆ. ನವೀಕರಣದ ಮುಂದುವರಿದ ಕಾಮಗಾರಿಗೆ ಇನ್ನೂ ಹೆಚ್ಚಿನ ಅನುದಾನ ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ರಾಜೇಂದ್ರಕುಮಾರ ಗಂದಗೆ ಅವರ ನೇತೃತ್ವದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘವು ಜಿಲ್ಲೆಯಲ್ಲಿ ಉತ್ತಮ ಕೆಲಸ ಮಾಡುತ್ತಿದೆ. ನೌಕರರ ಸಮಸ್ಯೆಗಳಿಗೆ ಸ್ಪಂದಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಗರದ ಗುಂಪಾ ಪ್ರದೇಶದಲ್ಲಿ ಸರ್ಕಾರಿ ನೌಕರರು ಅತಿಹೆಚ್ಚು ಸಂಖ್ಯೆಯಲ್ಲಿ ಇದ್ದಾರೆ. ಆ ಪ್ರದೇಶದಲ್ಲಿ ಇನ್ನೊಂದು ಭವನ ನಿರ್ಮಾಣಕ್ಕೆ ಸಿಎ ನಿವೇಶನ ಪಡೆಯಲು ಪ್ರಯತ್ನಿಸಲಾಗುವುದು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಹೇಳಿದರು.

ಈಗಾಗಲೇ ಗಮನ ಸೆಳೆಯುವ ರೀತಿಯಲ್ಲಿ ನೌಕರರ ಭವನದ ನವೀಕರಣ ಮಾಡಲಾಗಿದೆ. ಈಗಿನ ಅಧಿಕಾರ ಅವಧಿಯಲ್ಲಿ ನವೀಕರಣದ ಮುಂದುವರಿದ ಕಾಮಗಾರಿಯನ್ನೂ ಪೂರ್ಣಗೊಳಿಸಲಾಗುವುದು. ಭವನವನ್ನು ರಾಜ್ಯದಲ್ಲೇ ಮಾದರಿ ಮಾಡಲಾಗುವುದು ಎಂದು ತಿಳಿಸಿದರು.

ಸರ್ಕಾರ, ನೂತನ ಪಿಂಚಣಿ ಯೋಜನೆ(ಎನ್‍ಪಿಎಸ್) ರದ್ದುಪಡಿಸಿ ಎಲ್ಲ ನೌಕರರಿಗೂ ಹಳೆಯ ಪಿಂಚಣಿ ಯೋಜನೆ (ಒಪಿಎಸ್)ಯನ್ನೇ ಮುಂದುವರಿಸಬೇಕು ಎಂದು ಒತ್ತಾಯಿಸಿದರು.

ನೌಕರರ ಸಂಘವು ನೌಕರರ ಹಿತರಕ್ಷಣೆ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಸಮುದಾಯ ಭವನದಿಂದ ನೌಕರರಿಗೆ ಅನುಕೂಲವಾಗಿದೆ. ಭವನದ ನವೀಕರಣದ ಮುಂದುವರಿದ ಕಾಮಗಾರಿಗೂ ಕೈಜೋಡಿಸಲಾಗುವುದು ಎಂದು ಪ್ರಾಥಮಿಕ ಶಾಲಾ ಪದವೀಧರೇತರ ಮುಖ್ಯಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಕಪಲಾಪುರೆ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪಾಂಡುರಂಗ ಬೆಲ್ದಾರ್, ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಸಾರಿಕಾ ಗಂಗಾ ಹಾಗೂ ಗ್ರೇಡ್ 1 ದೈಹಿಕ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಂಜು ಸೂರ್ಯವಂಶಿ ಹೇಳಿದರು.

ರಾಜ್ಯ ಹಜ್ ಸಮಿತಿ ಅಧ್ಯಕ್ಷ ರೌಫೊದ್ದಿನ್ ಕಚೇರಿವಾಲೆ, ಬಿಡಿಎ ಅಧ್ಯಕ್ಷ ಬಾಬುವಾಲಿ ಮಾತನಾಡಿದರು. ವೈಷ್ಣವಿ ಬೆಲ್ದಾರ್ ಭರತನಾಟ್ಯ ಪ್ರದರ್ಶಿಸಿದರು.

ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸಾಧನೆಗೈದ 40 ಸರ್ಕಾರಿ ನೌಕರರ ಮಕ್ಕಳಿಗೆ ತಲಾ ₹500 ನಗದು ಬಹುಮಾನ ಹಾಗೂ ಫಲಕ ವಿತರಿಸಲಾಯಿತು. ವಿವಿಧ ಕ್ರೀಡೆಗಳಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ನೌಕರರನ್ನು ಸನ್ಮಾನಿಸಲಾಯಿತು. ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಬಸವರಾಜ ಜಕ್ಕಾ, ಉಪಾಧ್ಯಕ್ಷರಾದ ಬಕ್ಕಪ್ಪ ನಿರ್ಣಾಕರ್, ಓಂಕಾರ ಮಲ್ಲಿಗೆ, ಕ್ರೀಡಾ ಕಾರ್ಯದರ್ಶಿ ಸುಮತಿ ರುದ್ರಾ, ತಾಲ್ಲೂಕು ಘಟಕಗಳ ಅಧ್ಯಕ್ಷರಾದ ರಾಜಪ್ಪ ಪಾಟೀಲ, ಶಿವಕುಮಾರ ಘಾಟೆ, ರಾಜಕುಮಾರ ಬೇಲೂರೆ, ಮಲ್ಲಿಕಾರ್ಜುನ ಮೇತ್ರೆ, ನಿರ್ದೇಶಕ ಶಿವಶಂಕರ ಟೋಕರೆ, ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಹಡಪದ, ರೂಪಾವತಿ, ಸಿದ್ದಮ್ಮ, ಗಣಪತಿ ಜಮಾದಾರ್, ಸುನೀಲ್, ಸುಧಾಕರ್ ಶೇರಿಕಾರ ಇದ್ದರು.

ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ರಾಜಶೇಖರ ಮಂಗಲಗಿ ಸ್ವಾಗತಿಸಿದರು. ಕಾರ್ಯಾಧ್ಯಕ್ಷ ಪ್ರೊ. ರಾಜಕುಮಾರ ಹೊಸದೊಡ್ಡೆ ನಿರೂಪಿಸಿದರು. ಉಪಾಧ್ಯಕ್ಷೆ ಡಾ. ವೈಶಾಲಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT