ಚಿಟಗುಪ್ಪ: ತಾಲ್ಲೂಕಿನ ಮುತ್ತಂಗಿ ಗ್ರಾಮದ ಆರಾಧ್ಯದೈವ ರಾಚೋಟೇಶ್ವರ ದೇವರ ಜಾತ್ರೆ ಹಾಗೂ ಪಲ್ಲಕ್ಕಿ ಉತ್ಸವವು ಸಂಭ್ರಮದಿಂದ ನಡೆಯಿತು.
ಪ್ರತಿ ವರ್ಷ ಶ್ರಾವಣ ಮಾಸದ ಮುಕ್ತಾಯದ ದಿನ ನಡೆಯುವ ಜಾತ್ರೆ, ಪಲ್ಲಕ್ಕಿ ಉತ್ಸವವು ಸುತ್ತಲಿನ ಗ್ರಾಮಗಳಲ್ಲಿ ಪ್ರಸಿದ್ಧಿ ಪಡೆದಿದೆ. ಮೂರು ದಿನಗಳ ಜಾತ್ರೆಯಲ್ಲಿ ಸೋಮವಾರ ದೇವರ ನಂದಿಕೋಲ ಮಹಾ ಪೂಜೆ, ರುದ್ರಾಭಿಷೇಕ ವೈದಿಕ ಪದ್ಧತಿಯಲ್ಲಿ ನಡೆಯಿತು.
ಮಂಗಳವಾರ ಬೆಳಿಗ್ಗೆ ರಾಚೊಟೇಶ್ವರ ದೇವರಿಗೆ ಸಂಗೀತ ರುದ್ರ ಪೂಜೆ ನಡೆಸಲಾಯಿತು. ಉತ್ಸವದಲ್ಲಿ ಭಾಗಿಯಾದ ಭಕ್ತರಿಗೆ ಹಾಲುಹುಗ್ಗಿಯ ಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಿತು. ಬೆಳಿಗ್ಗೆಯಿಂದಲೇ ದೇವರಿಗೆ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ದೇವರ ಪಲ್ಲಕ್ಕಿ ಉತ್ಸವದ ವೇಳೆ ಭಕ್ತರಿಂದ ಭಜನೆ ಹಾಗೂ ಪ್ರವಚನ ಕಾರ್ಯಕ್ರಮಗಳು ನಡೆದವು. ಜತೆಗೆ ಕೋಲಾಟ, ಸಿಡಿಮದ್ದು ಗುಂಡುಗಳು ಪಲ್ಲಕ್ಕಿ ಉತ್ಸವಕ್ಕೆ ಮೆರಗು ನೀಡಿದವು. ಪುರವಂತರು ಕೈ, ತುಟಿಗಳಿಗೆ ಸೂಜಿ ಹಾಯಿಸಿಕೊಳ್ಳುವ ಮೂಲಕ ಭಕ್ತರ ಗಮನ ಸೆಳೆದರು.
ಸಂಜೆ ಮೆರವಣಿಗೆ ದೇವಸ್ಥಾನಕ್ಕೆ ಆಗಮಿಸಿದಾಗ ವೀರಶೈವ ಪಂಚಾಚಾರ್ಯ ಸಿದ್ಧಾಂತದ ವೇದ ಘೋಷ ನಡೆದು ಮಹಾ ಮಂಗಳಾರತಿ ನಡೆಯಿತು. ಭಕ್ತರಿಗೆ ದೇವರ ವಿಶೇಷ ದರ್ಶನ ವ್ಯವಸ್ಥೆ ಕಲ್ಪಿಸುವ ಮೂಲಕ ಜಾತ್ರೋತ್ಸವ ಮಂಗಳ ಗೊಳಿಸಲಾಯಿತು ಎಂದು ಭಕ್ತರಾದ ಸುಭಾಷ ಪಾಲಾಟಿ, ಶಿವಪುತ್ರ ಸಾದಾ ಹೇಳಿದರು.
ಬೀದರ್, ಭಾಲ್ಕಿ, ಬಸವಕಲ್ಯಾಣ, ಔರಾದ್, ಕಲಬುರಗಿ, ಚಿಂಚೋಳಿ, ಸೇಡಂ, ಬೆಂಗಳೂರು, ಜಹಿರಾಬಾದ್, ಹೈದರಾಬಾದ್, ಮಹಾರಾಷ್ಟ್ರ ರಾಜ್ಯದ ಉಮರ್ಗಾ, ಸೋಲ್ಲಾಪುರ, ಉದಗೀರ ಕಡೆಗಳಿಂದ ಭಕ್ತರು ಆಗಮಿಸಿ ಉತ್ಸವದಲ್ಲಿ ಪಾಲ್ಗೊಂಡಿದ್ದರು.
ನಿರ್ಣಾ, ಮನ್ನಾಎಖ್ಖೇಳಿ, ಚಿಟಗುಪ್ಪ ಇತರೆಡೆಗಳಿಂದ ಜಾತ್ರೆಗೆ ಬರುವ ಭಕ್ತರಿಗೆ ಖಾಸಗಿ ವಾಹನ ಮಾಲೀಕರು ಉಚಿತ ಸಾರಿಗೆ ಸೇವೆ ಒದಗಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.