ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಮೊದಲ ಸಲ ರೂಪುರೇಷೆ, ಎರಡನೇ ಸಲ ಉದ್ಘಾಟನೆ ನಿಶ್ಚಿತ’

Published 8 ಮಾರ್ಚ್ 2024, 15:57 IST
Last Updated 8 ಮಾರ್ಚ್ 2024, 15:57 IST
ಅಕ್ಷರ ಗಾತ್ರ

ಬಸವಕಲ್ಯಾಣ: `ಸಿದ್ದರಾಮಯ್ಯನವರು ಮೊದಲ ಸಲ ಮುಖ್ಯಮಂತ್ರಿ ಆಗಿದ್ದಾಗ ನೂತನ ಅನುಭವ ಮಂಟಪದ ರೂಪುರೇಷೆ ಸಿದ್ಧಪಡಿಸಲು ಸಮಿತಿ ರಚಿಸಿ ಅನುಮೋದನೆ ನೀಡಿದ್ದರು. ಈಗ ಎರಡನೇ ಸಲ ಆ ಸ್ಥಾನ ಪಡೆದಿರುವ ಇವರು ಶೀಘ್ರದಲ್ಲಿ ಕಟ್ಟಡ ಕಾಮಗಾರಿ ಪೂರ್ಣಗೊಳಿಸಿ ಉದ್ಘಾಟನೆ ನೆರವೆರಿಸುವುದು ನಿಶ್ಚಿತ' ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಭರವಸೆ ವ್ಯಕ್ತಪಡಿಸಿದರು.

ನಗರದ ಥೇರ ಮೈದಾನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕನನ್ನಾಗಿ ಘೋಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಆಮಂತ್ರಣ ಪತ್ರಿಕೆಯಲ್ಲಿ ಅವರು ಅಧ್ಯಕ್ಷತೆ ವಹಿಸುವರು ಎಂದು ಮುದ್ರಿಸಲಾಗಿತ್ತು. ಆದರೆ, ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

`ಸಾಹಿತಿ ಗೋ.ರು.ಚನ್ನಬಸಪ್ಪ ನೇತೃತ್ವದ ಸಮಿತಿ ನೀಡಿದ ವರದಿಯಂತೆ ಅನುಭವ ಮಂಟಪಕ್ಕೆ ₹620 ಕೋಟಿ ಅನುದಾನ ನೀಡಲು ಒಪ್ಪಿದ್ದರು. ಆದರೆ ಕೆಲ ದಿನಗಳಲ್ಲಿಯೇ ಚುನಾವಣೆ ಬಂದು ಬೇರೆ ಪಕ್ಷದವರು ಅಧಿಕಾರ ಹಿಡಿದರು. ಈಗ ಮತ್ತೆ ಇದಕ್ಕಾಗಿ ₹50 ಕೋಟಿ ಅನುದಾನ ಒದಗಿಸಿದ್ದು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದಾರೆ. ಇನ್ನೂ ಎಷ್ಟೇ ಅನುದಾನ ಬೇಕಾದರೂ ಕೊಡುತ್ತೇನೆ ಎಂಬ ಭವವಸೆಯೂ ಅವರು ನೀಡಿದ್ದಾರೆ. ಮಹಿಳಾ ವಿಶ್ವವಿದ್ಯಾಲಯಕ್ಕೆ ಅಕ್ಕಮಹಾದೇವಿ ಹೆಸರು ಇಟ್ಟಿದ್ದಾರೆ. ಜಿಲ್ಲೆಯಲ್ಲಿನ ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ ಬಿಜೆಪಿ ಆಡಳಿತದಲ್ಲಿ ಮುಚ್ಚಿದ್ದು ಪುನರಾರಂಭ ಮಾಡಬೇಕು. ಕಾರಂಜಾ ಸಂತ್ರಸ್ತರಿಗೆ ಪರಿಹಾರ ನೀಡಬೇಕು' ಎಂದು ಆಗ್ರಹಿಸಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಗೌರವ ಅಧ್ಯಕ್ಷ ಗೋ.ರು.ಚನ್ನಬಸಪ್ಪ ಮಾತನಾಡಿ, `ನಾನು ಅಧ್ಯಕ್ಷನಾಗಿದ್ದ ಸಮಿತಿಯ ವರದಿಯನ್ನು ಸಿದ್ದರಾಮಯ್ಯನವರು ಒಪ್ಪಿಕೊಂಡು ಅದರಂತೆ ಅನುಭವ ಮಂಟಪ ಕಾಮಗಾರಿ ಕೈಗೊಂಡಿದ್ದಾರೆ. ಬಸವಣ್ಣನವರ ಷಟಸ್ಥಲ, ಪಂಚಾಚಾರ, ಕಾಯಕ, ದಾಸೋಹ ತತ್ವದ ತಳಹದಿಯಲ್ಲಿ ಮಂಟಪ ನಿರ್ಮಾಣ ಆಗುತ್ತಿದ್ದು ವಿಶ್ವದಲ್ಲಿಯೇ ವಿಶಿಷ್ಟ ಕಟ್ಟಡ ಇದಾಗಲಿದೆ' ಎಂದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಮಾತನಾಡಿ, `ಬಸವಣ್ಣನವರಿಗೆ ಸಾಂಸ್ಕೃತಿಕ ನಾಯಕನ ಪಟ್ಟ ನೀಡಿದ್ದರಿಂದ ಶರಣತತ್ವದ ಪ್ರಸಾರ ಹೆಚ್ಚಿನ ಪ್ರಮಾಣದಲ್ಲಿ ಆಗಲು ಅನುಕೂಲ ಆಗಲಿದೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT