ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯಪಾಲರಿಂದ ಪ್ರಜಾಪ್ರಭುತ್ವದ ಕಗ್ಗೊಲೆ– ಕಾಂಗ್ರೆಸ್‌ ಆರೋಪ

ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ
Published : 17 ಆಗಸ್ಟ್ 2024, 13:55 IST
Last Updated : 17 ಆಗಸ್ಟ್ 2024, 13:55 IST
ಫಾಲೋ ಮಾಡಿ
Comments

ಬೀದರ್‌: ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿರುವ ರಾಜ್ಯಪಾಲರನ್ನು ತಕ್ಷಣವೇ ರಾಜ್ಯದಿಂದ ವಾಪಸ್‌ ಕರೆಸಿಕೊಳ್ಳಬೇಕೆಂದು ಆಗ್ರಹಿಸಿ ಕಾಂಗ್ರೆಸ್‌ ಕಾರ್ಯಕರ್ತರು ನಗರದ ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತದಲ್ಲಿ ಶನಿವಾರ ಸಂಜೆ ಪ್ರತಿಭಟನೆ ನಡೆಸಿದರು.

ಸಂಸದ ಸಾಗರ್‌ ಖಂಡ್ರೆ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾಂಗ್ರೆಸ್‌ ಪಕ್ಷದ ವಿವಿಧ ಮೋರ್ಚಾಗಳ ಮುಖಂಡರು, ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ವಿರುದ್ಧ ಘೋಷಣೆಗಳನ್ನು ಹಾಕಿದರು. ಆನಂತರ ಜಿಲ್ಲಾಧಿಕಾರಿ ಕಚೇರಿ ವರೆಗೆ ರ್‍ಯಾಲಿ ನಡೆಸಿದರು. ಬಳಿಕ ರಾಷ್ಟ್ರಪತಿ ಹೆಸರಿಗೆ ಬರೆದ ಮನವಿ ಪತ್ರವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಅವರಿಗೆ ಸಲ್ಲಿಸಿದರು.

ಸಾಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರು ರಾಜಕೀಯ ಪ್ರೇರಿತವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿದ್ದಾರೆ. ಹೀಗೆ ಮಾಡುವುದರ ಮೂಲಕ ಅವರು ತಾನು ಪಕ್ಷಪಾತಿ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ರಾಜ್ಯಪಾಲರು ನಡೆದುಕೊಂಡಿದ್ದು, ಅವರನ್ನು ತಕ್ಷಣವೇ ವಾಪಸ್‌ ಕರೆಸಿಕೊಳ್ಳಬೇಕೆಂದು ಒತ್ತಾಯಿಸಿದರು.

ಜನಪರ ಸರ್ಕಾರ ನಡೆಸುತ್ತಿರುವ ಸಿದ್ದರಾಮಯ್ಯನವರು ಸಾಮಾಜಿಕ ನ್ಯಾಯ ಎತ್ತಿ ಹಿಡಿಯುವ ಕೆಲಸ ಮಾಡುತ್ತಿದ್ದಾರೆ. ಅವರು ಮುಖ್ಯಮಂತ್ರಿಯಾಗಿ ಅಧಿಕಾರ ದುರುಪಯೋಗ ಪಡಿಸಿಕೊಂಡಿಲ್ಲ. ಯಾವುದೇ ಅಪರಾಧ ಮಾಡದಿದ್ದರೂ ಖಾಸಗಿ ದೂರು ಆಧರಿಸಿ ಮೈಸೂರಿನ ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿದ್ದಾರೆ. ಇದು ರಾಜಕೀಯ ಪ್ರೇರಿತ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ರಾಜ್ಯಪಾಲರನ್ನು ವಾಪಸ್‌ ಕರೆಸಿಕೊಳ್ಳದಿದ್ದರೆ ಬರುವ ದಿನಗಳಲ್ಲಿ ರಾಜ್ಯದಾದ್ಯಂತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಂಸದ ಸಾಗರ್‌ ಖಂಡ್ರೆ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಅಮೃತರಾವ್‌ ಚಿಮಕೋಡೆ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದತ್ತು ಮೂಲಗೆ, ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಅಭಿಷೇಕ ಪಾಟೀಲ, ಸಂಜಯ್‌ ಜಾಹಗೀರದಾರ್‌ ಮತ್ತಿತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT