ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಹಕರ ನೆಚ್ಚಿನ ತರಕಾರಿ ಬೆಲೆ ಸ್ಥಿರ; ಈರುಳ್ಳಿ, ಗಜ್ಜರಿ, ಟೊಮೆಟೊ ಬೆಲೆ ಇಳಿಕೆ

Last Updated 13 ನವೆಂಬರ್ 2021, 15:26 IST
ಅಕ್ಷರ ಗಾತ್ರ

ಬೀದರ್‌: ಹಬ್ಬಗಳ ಸೀಸನ್ ಮುಗಿದಿದೆ. ಈಗ ಏನಿದ್ದರೂ ಜಾತ್ರೆ, ಮದುವೆ– ಮುಂಜಿವೆಗಳೇ ಜನರ ಪಾಲಿನ ಹಬ್ಬ. ಜಿಲ್ಲೆ, ನೆರೆಯ ತೆಲಂಗಾಣ ಹಾಗೂ ಮಹಾರಾಷ್ಟ್ರದಿಂದಲೂ ನಗರದ ಮಾರುಕಟ್ಟೆಗೆ ಹೆಚ್ಚಿನ ತರಕಾರಿ ಬರುತ್ತಿರುವ ಕಾರಣ ಬಹುತೇಕ ತರಕಾರಿಗಳ ಬೆಲೆ ಕಡಿಮೆಯಾಗಿದೆ.

ನುಗ್ಗೆಕಾಯಿ ಬೆಲೆ ಪ್ರತಿ ಕ್ವಿಂಟಲ್‌ಗೆ ₹ 2 ಸಾವಿರ, ಬೆಳ್ಳುಳ್ಳಿ ₹ 1,500, ಈರುಳ್ಳಿ, ಗಜ್ಜರಿ, ಟೊಮೆಟೊ, ಬೀನ್ಸ್‌, ಮೆಂತೆ ಸೊಪ್ಪು ₹ 1 ಸಾವಿರ, ಹಸಿ ಮೆಣಸಿನಕಾಯಿ, ಬೀಟ್‌ರೂಟ್‌, ಸಬ್ಬಸಗಿ ಹಾಗೂ ಪಾಲಕ್‌ ಬೆಲೆ ₹ 500 ಇಳಿಕೆಯಾಗಿದೆ.

ನಿತ್ಯ ಅಡುಗೆಗೆ ಬಳಕೆಯಾಗುವ ಈರುಳ್ಳಿ ಹಾಗೂ ಬೆಳ್ಳುಳ್ಳಿ ಬೆಲೆ ಇಳಿಕೆಯಾಗಿರುವುದು ಗ್ರಾಹಕರಲ್ಲಿ ಸಂತಸ ಉಂಟು ಮಾಡಿದೆ. ಈರುಳ್ಳಿ ಬೆಲೆ ಹೆಚ್ಚಿದಾಗಲೆಲ್ಲ ಗ್ರಾಹಕರು ಆತಂಕ ಪಡುತ್ತಿದ್ದರು. ಅಗತ್ಯವಿರುವಷ್ಟನ್ನು ಮಾತ್ರ ಖರೀದಿಸುತ್ತಿದ್ದರು. ಈಗ ಒಂದು ವಾರಕ್ಕೆ ಸಾಲುವಷ್ಟು ಮನೆಗೆ ಒಯ್ಯುತ್ತಿದ್ದಾರೆ. ಟೊಮೆಟೊ ಹಾಗೂ ಹಸಿ ಮೆಣಸಿನಕಾಯಿ ಬೆಲೆಯೂ ಇಳಿದ ನಂತರ ಅಡುಗೆ ಸ್ವಾದ ಹೆಚ್ಚಿದೆ.

ನಗರದ ತರಕಾರಿ ಸಗಟು ಮಾರುಕಟ್ಟೆಗೆ ಕಡಿಮೆ ಪ್ರಮಾಣದಲ್ಲಿ ಆವಕವಾಗಿರುವ ಎಲೆಕೋಸು, ಹೂಕೋಸು ಹಾಗೂ ಕರಿಬೇವು ಬೆಲೆ ಮಾತ್ರ ಪ್ರತಿ ಕ್ವಿಂಟಲ್‌ಗೆ ₹ 500 ಹೆಚ್ಚಳವಾಗಿದೆ. ಸಾಮಾನ್ಯವಾಗಿ ಚಿಟಗುಪ್ಪ ಹಾಗೂ ಭಾಲ್ಕಿ ತಾಲ್ಲೂಕುಗಳಿಂದಲೇ ನಗರದ ಮಾರುಕಟ್ಟೆಗೆ ಎಲೆಕೋಸು, ಹೂಕೋಸು ಬರುತ್ತಿದೆ.

ದೀಪಾವಳಿಯಿಂದ ಹುಣ್ಣಿಮೆ ವರೆಗೂ ಲಕ್ಷ್ಮಿ ಪೂಜೆ ಮಾಡುವ ಸಂಪ್ರದಾಯ ಜಿಲ್ಲೆಯಲ್ಲಿ ಇದೆ. ಅನೇಕ ರೈತರು ತಮ್ಮ ಮನೆಗಳಲ್ಲಿ ಪೂಜೆ ಇಟ್ಟುಕೊಂಡಿರುವ ಕಾರಣ ಎಲೆಕೋಸು, ಹೂಕೋಸು ಕಟಾವು ಮಾಡಿಲ್ಲ. ಇದೇ ಕಾರಣಕ್ಕೆ ಗ್ರಾಮೀಣ ಪ್ರದೇಶದಿಂದ ಹೆಚ್ಚು ತರಕಾರಿ ಬಂದಿಲ್ಲ.

ಜಿಲ್ಲೆಯ ಜನರ ಅಚ್ಚುಮೆಚ್ಚಿನ ತರಕಾರಿಗಳಾದ ಬದನೆಕಾಯಿ, ಬೆಂಡೆಕಾಯಿ, ಹಿರೇಕಾಯಿ, ತೊಂಡೆಕಾಯಿ, ಕೊತಂಬರಿ ಬೆಲೆ ಸ್ಥಿರವಾಗಿದೆ. ಹೋಟೆಲ್‌, ಖಾನಾವಳಿ ಹಾಗೂ ರೆಸ್ಟೋರೆಂಟ್‌ ಮಾಲೀಕರು ಈ ಬಾರಿ ಹೆಚ್ಚು ತರಕಾರಿ ಖರೀದಿ ಮಾಡಿದ್ದಾರೆ.

‘ಕೋವಿಡ್‌ ಕಡಿಮೆಯಾದರೂ ಜನರ ಆದಾಯದಲ್ಲಿ ಹೆಚ್ಚಳವಾಗಿಲ್ಲ. ಸಂಬಳ ಕಡಿತ ಮುಂದುವರಿದಿದೆ. ಸದ್ಯ ಗ್ರಾಹಕರ ಕೈಗೆಟಕುವ ಬೆಲೆಯಲ್ಲಿ ತರಕಾರಿ ಲಭ್ಯ ಇದೆ. ಹೀಗಾಗಿ ಸ್ವಲ್ಪ ಮಟ್ಟಿಗೆ ನೆಮ್ಮದಿಯಿಂದ ತರಕಾರಿ ಖರೀದಿಸಿದ್ದೇನೆ’ ಎನ್ನುತ್ತಾರೆ ಗೃಹಿಣಿ ವಿಜಯಲಕ್ಷ್ಮಿ.

‘ಹಬ್ಬಗಳ ಸಂದರ್ಭದಲ್ಲಿ ಜನ ಹೆಚ್ಚು ತರಕಾರಿ ಬಳಸಿ ಸ್ವಾದಿಷ್ಟ ಅಡುಗೆ ಮಾಡಲು ಇಷ್ಟ ಪಡುತ್ತಾರೆ. ಉಳಿದ ಸಮಯದಲ್ಲಿ ಬೇಳೆ ಕಾಳುಗಳನ್ನು ಅಡುಗೆಗೆ ಬಳಸುತ್ತಾರೆ. ವ್ಯಾಪಾರ ವಹಿವಾಟು ಮಧ್ಯಮವಾಗಿದೆ. ಇನ್ನೂ ಎರಡು ತಿಂಗಳು ತರಕಾರಿ ಮಾರುಕಟ್ಟೆಯಲ್ಲಿ ಇದೇ ಸ್ಥಿತಿ ಮುಂದುವರಿಯಲಿದೆ’ ಎಂದು ತರಕಾರಿ ವ್ಯಾಪಾರಿ ವಿಜಯಕುಮಾರ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT