ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಲಸಿಕಾ ಅಭಿಯಾನಕ್ಕೆ ಚಾಲನೆ; ಮೊದಲ ದಿನ 336 ಸಿಬ್ಬಂದಿಗೆ ಲಸಿಕೆ

28 ದಿನಗಳ ನಂತರ ಎರಡನೇ ಡೋಸ್
Last Updated 17 ಜನವರಿ 2021, 1:31 IST
ಅಕ್ಷರ ಗಾತ್ರ

ಬೀದರ್: ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ಕೋವಿಶೀಲ್ಡ್ ನೀಡಿಕೆಗೆ ಶನಿವಾರ ಚಾಲನೆ ದೊರೆತಿದೆ.

ಮೊದಲ ದಿನ ಆರೋಗ್ಯ ಇಲಾಖೆಯ 540 ಸಿಬ್ಬಂದಿ ಪೈಕಿ 336 ಮಂದಿಗೆ ಲಸಿಕೆ ನೀಡಿದ್ದು, ಶೇ 62ರಷ್ಟು ಗುರಿ ಸಾಧನೆ ಆಗಿದೆ.

ಬೀದರ್‌ನ ಬ್ರಿಮ್ಸ್‌ನಲ್ಲಿ 98 ಮಂದಿ ಪೈಕಿ 70, ಔರಾದ್ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ 98 ಪೈಕಿ 44, ಬಸವಕಲ್ಯಾಣ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ 83 ಪೈಕಿ 47, ಹುಮನಾಬಾದ್ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ 83 ಪೈಕಿ 51, ಭಾಲ್ಕಿ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ 100 ಪೈಕಿ 52 ಹಾಗೂ ಬೀದರ್ ತಾಲ್ಲೂಕಿನ ಆಣದೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 78 ಪೈಕಿ 72 ಜನರಿಗೆ ಲಸಿಕೆ ಕೊಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ವಿ.ಜಿ. ರೆಡ್ಡಿ ತಿಳಿಸಿದ್ದಾರೆ.

ಮೊದಲ ದಿನ ಜಿಲ್ಲೆಯ ಆರು ಕೇಂದ್ರಗಳಲ್ಲಿ ಲಸಿಕಾಕರಣ ನಡೆದಿದೆ. ಲಸಿಕೆ ಪಡೆದ ಯಾರಿಗೂ ತೀವ್ರತರವಾದ ಅಡ್ಡಪರಿಣಾಮ ಆಗಿಲ್ಲ. ಇನ್ನು ಮುಂದೆ ಹೆಚ್ಚಿನ ಸಿಬ್ಬಂದಿ ಸ್ವಯಂ ಪ್ರೇರಣೆಯಿಂದ ಲಸಿಕೆ ಪಡೆದುಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.

ಬ್ರಿಮ್ಸ್‌ನಲ್ಲಿ ಚಾಲನೆ: ನಗರದ ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ
ಲಸಿಕಾಕರಣಕ್ಕೆ ಚಾಲನೆ ನೀಡಲಾಯಿತು.

ಬ್ರಿಮ್ಸ್ ಗ್ರುಪ್ ಡಿ ಸಿಬ್ಬಂದಿ ಇಂದುಮತಿ ಹಾಗೂ ಪ್ರಯೋಗಾಲಯ ಸಿಬ್ಬಂದಿ ಉದಯಕುಮಾರ ಚಿಮ ಕೋಡೆ ಮೊದಲಿಗೆ ಲಸಿಕೆ ಪಡೆದರು.

ಲಸಿಕಾ ಕೇಂದ್ರದಲ್ಲಿ ಲಸಿಕೆ ಪಡೆಯಲಿರುವ ಸಿಬ್ಬಂದಿ ಹಾಗೂ ನಿಯೋಜಿತ ಅಧಿಕಾರಿಗಳನ್ನು ಹೊರತುಪಡಿಸಿ ಇತರರ ಪ್ರವೇಶ ನಿಷೇಧಿಸಲಾಗಿತ್ತು. ಲಸಿಕೆ ಪಡೆದವರು 28 ದಿನಗಳ ನಂತರ ಎರಡನೇ ಡೋಸ್ ಪಡೆಯಲು ಬರಬೇಕಾಗುತ್ತದೆ ಎಂದು ವೈದ್ಯರು ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಮಾತನಾಡಿ, ಮೊದಲ ಹಂತದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಗೆ ಲಸಿಕೆ ಕೊಡಲಾಗುತ್ತಿದೆ. ಎರಡನೇ ಹಂತದ ನೋಂದಣಿ ಕಾರ್ಯ ಶುರು ಮಾಡಲಾಗಿದೆ ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನಿರ್ಮಲಾ ಮಾನೆಗೋಪಾಳೆ, ಉಪಾಧ್ಯಕ್ಷ ವಿಜಯಕುಮಾರ ಪಾಟೀಲ ಗಾದಗಿ, ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುವಾಲಿ, ತಾಲ್ಲೂಕು ಪಂಚಾಯಿತಿ ಸದಸ್ಯ ವಿಜಯಕುಮಾರ ರಾಮಲು ಬರೂರು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗ್ಯಾನೇಂದ್ರಕುಮಾರ ಗಂಗ್ವಾರ್, ಬ್ರಿಮ್ಸ್ ಆಸ್ಪತ್ರೆಯ ನಿರ್ದೇಶಕ ಡಾ.ಶಿವಕುಮಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ವಿ.ಜಿ. ರೆಡ್ಡಿ, ಜಿಲ್ಲಾ ಕೋವಿಡ್ 19 ಲಸಿಕಾಕರಣ ನೋಡಲ್ ಅಧಿಕಾರಿ ಡಾ.ವಿವೇಕ ದೊರೆ, ಜಿಲ್ಲಾ ಶಸ್ತ್ರಚಿಕಿತ್ಸಕ ರತಿಕಾಂತ ಸ್ವಾಮಿ, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಮಹೇಶ ಬಿರಾದಾರ, ಡಾ.ಅನಿಲ ಕುಮಾರ ಚಿಂತಾಮಣಿ ಇದ್ದರು.

ನಂತರ ಜಿಲ್ಲಾಧಿಕಾರಿ ರಾಮಚಂದ್ರನ್ ಹಾಗೂ ಜಿ.ಪಂ ಸಿಇಒ ಗ್ಯಾನೇಂದ್ರಕುಮಾರ ಗಂಗ್ವಾರ್ ಅವರು ಆಣದೂರಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಲಸಿಕಾಕರಣ ಕಾರ್ಯವನ್ನು ವೀಕ್ಷಿಸಿದರು.

ಪ್ರತಿ ದಿನ 600 ಜನಕ್ಕೆ ಲಸಿಕೆ
ಬೀದರ್:
ಜಿಲ್ಲೆಯ ಆರು ಕೇಂದ್ರಗಳಲ್ಲಿ ತಲಾ 100ರಂತೆ ಪ್ರತಿದಿನ 600 ಜನರಿಗೆ ಕೋವಿಡ್ ಲಸಿಕೆ ನೀಡುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ವಿ.ಜಿ. ರೆಡ್ಡಿ ತಿಳಿಸಿದ್ದಾರೆ.

ಸದ್ಯ ಬೀದರ್‌ನ ಬ್ರಿಮ್ಸ್, ಆಣದೂರಿನ ಪ್ರಾಥಮಿಕ ಆರೋಗ್ಯ ಕೇಂದ್ರ, ಔರಾದ್, ಭಾಲ್ಕಿ, ಹುಮನಾಬಾದ್ ಹಾಗೂ ಬಸವಕಲ್ಯಾಣ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಲಸಿಕೆ ನೀಡಲಾಗುತ್ತಿದೆ. ಬರುವ ದಿನಗಳಲ್ಲಿ 11 ಲಸಿಕಾ ಕೇಂದ್ರಗಳು ಕಾರ್ಯ ನಿರ್ವಹಿಸಲಿವೆ ಎಂದು ಹೇಳಿದ್ದಾರೆ.

ಪ್ರಥಮ ಹಂತದಲ್ಲಿ ಆರೋಗ್ಯ ಕಾರ್ಯಕರ್ತರು, ಸ್ವಚ್ಛತಾ ಕರ್ಮಿಗಳು, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಪೊಲೀಸರಿಗೆ ಲಸಿಕೆ ಕೊಡಲಾಗುವುದು. ಎರಡನೇ ಹಂತದಲ್ಲಿ 50 ವರ್ಷ ಮೇಲ್ಪಟ್ಟ ಸಾರ್ವಜನಿಕರು ಹಾಗೂ ದೀರ್ಘಾವಧಿ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಲಸಿಕೆ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಚುಚ್ಚುಮದ್ದು ನೀಡಿದ ಸ್ಥಳದಲ್ಲಿ ಸ್ವಲ್ಪ ನೋವು ಕಾಣಿಸುತ್ತದೆಯೇ ಹೊರತು ಯಾವುದೇ ಅಡ್ಡಪರಿಣಾಮ ಉಂಟಾಗುವುದಿಲ್ಲ. ಲಸಿಕೆ ಸಂಪೂರ್ಣ ಸುರಕ್ಷಿತವಾಗಿದೆ. ಆದ್ಯತೆ ಗುಂಪಿನವರು ಲಸಿಕೆ ಪಡೆದು ಕೋವಿಡ್‍ನಿಂದ ರಕ್ಷಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.

ಬೀದರ್ ಜಿಲ್ಲೆಗೆ 5,500 ಡೋಸ್ ಕೊವಿಶೀಲ್ಡ್ ಲಸಿಕೆಗಳು ಬಂದಿದ್ದು, 10,240 ಜನ ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT