ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

63 ಮಂದಿಗೆ ಕೋವಿಡ್ ಸೋಂಕು, ಒಬ್ಬ ಸಾವು

ಸಾವಿರ ಹತ್ತಿರದಲ್ಲಿ ವೈರಾಣು ಪೀಡಿತರ ಸಂಖ್ಯೆ
Last Updated 11 ಜುಲೈ 2020, 13:54 IST
ಅಕ್ಷರ ಗಾತ್ರ

ಬೀದರ್: ಜಿಲ್ಲೆಯಲ್ಲಿ ಶನಿವಾರ 63 ಜನರಿಗೆ ಕೋವಿಡ್ 19 ಸೋಂಕು ತಗುಲಿದೆ. ಕೋವಿಡ್ ವೈರಾಣು ಪೀಡಿತರ ಸಂಖ್ಯೆ 976ಕ್ಕೆ ಏರಿದೆ. ನಗರದ ವ್ಯಕ್ತಿಯೊಬ್ಬರು ಸೋಂಕಿನಿಂದ ಮೃತಪಟ್ಟಿದ್ದಾರೆ.

ಬೀದರ್‌ನ 40 ವರ್ಷದ ವ್ಯಕ್ತಿ ಉಸಿರಾಟದ ತೊಂದರೆಯಿಂದ ಜುಲೈ 2 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೆ ಜುಲೈ 10 ರಂದು ಕೊನೆಯುಸಿರೆಳೆದಿದ್ದಾರೆ.

ಹುಮನಾಬಾದ್ ತಾಲ್ಲೂಕಿನಲ್ಲಿ ಅತಿ ಹೆಚ್ಚು 38, ಕಮಲನಗರ ತಾಲ್ಲೂಕಿನಲ್ಲಿ 8, ಔರಾದ್ ತಾಲ್ಲೂಕಿನಲ್ಲಿ 5, ಬೀದರ್‌ನಲ್ಲಿ ಒಂದು, ಬಸವಕಲ್ಯಾಣದಲ್ಲಿ 3 ಹಾಗೂ ಭಾಲ್ಕಿ ತಾಲ್ಲೂಕಿನಲ್ಲಿ 8 ಜನರಿಗೆ ಸೋಂಕು ದೃಢಪಟ್ಟಿದೆ. ಇವರಲ್ಲಿ 40 ಪುರುಷರು, 19 ಮಹಿಳೆಯರು, ಒಬ್ಬ ಬಾಲಕಿ ಹಾಗೂ ಮೂವರು ಬಾಲಕರು ಇದ್ದಾರೆ.

ಹುಮನಾಬಾದ್‌ ಪೊಲೀಸ್ ಕ್ವಾಟರ್ಸ್‌ನ ನಾಲ್ವರು, ಇಂದಿರಾನಗರದ ಇಬ್ಬರು, ಶಿವನಗರ, ವಾಂಜ್ರಿಯ ನಾಲ್ವರು, ಕೋಳಿವಾಡ, ನೂರಖಾನ್ ಅಖಾಡಾ, ಅಗ್ನಿಶಾಮಕ ಸಿಬ್ಬಂದಿ ಕಚೇರಿ ಸಮೀಪ, ಬಾಲಾಜಿ ಮಂದಿರ, ಪಾಶಾಮಿಯಾ ಕಾಲೊನಿಯ ತಲಾ ಒಬ್ಬರು, ಕಮಲನಗರದ ನಾಲ್ವರು, ಕಮಲನಗರ ತಾಲ್ಲೂಕಿನ ಹೊಳಸಮುದ್ರದ ನಾಲ್ವರು, ಹಾಲಹಳ್ಳಿಯಲ್ಲಿ ಮೂವರು, ಹಂದಿಕೇರಾ, ಬಸವಕಲ್ಯಾಣ ಹಾಗೂ ಬೀದರ್‌ನ ಶಹಾಗಂಜ್ ಮುಲ್ತಾನಿ ಕಾಲೊನಿಯ ತಲಾ ಒಬ್ಬರಿಗೆ ಸೋಂಕು ತಗುಲಿರುವ ಮಾಹಿತಿ ಇದೆ.

ಔರಾದ್ ತಾಲ್ಲೂಕಿನ ಶೆಂಬೆಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಟ್ನಳ್ಳಿಯ ಆಶಾ ಕಾರ್ಯಕರ್ತೆಯೊಬ್ಬರಿಗೆ ಸೋಂಕು ದೃಢಪಟ್ಟಿದ್ದರಿಂದ ಗ್ರಾಮದ ಓಣಿಯನ್ನು ಸೀಲ್‌ಡೌನ್‌ ಮಾಡಿ ಸೋಂಕು ನಿವಾರಕ ಸಿಂಪಡಿಸಲಾಗಿದೆ. ಔರಾದ್ ತಾಲ್ಲೂಕಿನ ಸಂತಪುರ ಹಾಗೂ ಮಹಾಗಾಂವದಲ್ಲಿ ತಲಾ ಒಬ್ಬರಿಗೆ ಸೋಂಕು ತಗುಲಿದೆ.

ಬ್ರಿಮ್ಸ್‌ ಕೋವಿಡ್ ಪ್ರಯೋಗಾಲಯ ಪುನರಾರಂಭ

ಬೀದರ್: ಬ್ರಿಮ್ಸ್‌ನ ಕೋವಿಡ್ ಪ್ರಯೋಗಾಲಯ ಶನಿವಾರ ಮತ್ತೆ ಕಾರ್ಯಾರಂಭ ಮಾಡಿದೆ. ನಾಲ್ವರು ಟೆಕ್ನಿಷಿಯನ್‌ಗಳು ಹೋಂ ಕ್ವಾರಂಟೈನ್‌ನಲ್ಲಿರುವ ಕಾರಣ ಪ್ರಯೋಗಾಲಯವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿತ್ತು.
ಜಿಲ್ಲೆಯಲ್ಲಿ ಎರಡು ದಿನ ಕೋವಿಡ್ ಸೋಂಕು ಶಂಕಿತ ವ್ಯಕ್ತಿಗಳ ಗಂಟಲು ದ್ರವ ಮಾದರಿ ಪಡೆದು ಬೆಂಗಳೂರಿನ ಯುರೊಫೈನ್ ಕ್ಲಿನಿಕಲ್ ಜನಿಟಿಕ್ಸ್ ಇಂಟಿಯಾ ಪ್ರೈವೇಟ್ ಲಿಮಿಟೆಡ್, ಅಪೊಲೊ ಹಾಸ್ಪಿಟಲ್ ಲ್ಯಾಬ್‌ರೋಟರಿ ಸರ್ವಿಸ್ಸ್, ನಾರಾಯಣ ನೇತ್ರಾಲಯ, ಇನ್‌ಸ್ಟಿಟ್ಯೂಟ್ ಫಾರ್ ಸೆಮ್ ಸೆಲ್ ಸೈನ್ಸ್ ರಿಜನರೇಟಿವ್ ಮೆಡಿಸಿನ್ ಇನ್ಸ್ಟಮ್ ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು.

ಪೊಲೀಸರ ಬೆನ್ನು ಹತ್ತಿದ ಕೊರೊನಾ

ಬೀದರ್: ಜಿಲ್ಲೆಯಲ್ಲಿ ಶನಿವಾರ ಎಎಸ್ಐ ಸೇರಿ ನಾಲ್ವರು ಕಾನ್‌ಸ್ಟೆಬಲ್‌ಗಳಿಗೆ ಕೋವಿಡ್ ಸೋಂಕು ತಗುಲಿದೆ.

ಹುಮನಾಬಾದ್ ಠಾಣೆಯ 54 ವರ್ಷದ ಎಎಸ್ಐ, ಭಾಲ್ಕಿ ಗ್ರಾಮೀಣ ಠಾಣೆಯ 43 ವರ್ಷದ ಹೆಡ್ ಕಾನ್‌ಸ್ಟೆಬಲ್, ಭಾಲ್ಕಿ ನಗರ ಠಾಣೆಯ ಕಾನ್‌ಸ್ಟೆಬಲ್, ಬೀದರ್ ನ್ಯೂಟೌನ್ ಪೊಲೀಸ್ ಠಾಣೆಯ 42 ವರ್ಷದ ಹೆಡ್‌ ಕಾನ್‌ಸ್ಟೆಬಲ್‌ಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದೆ. ’ಕೊರೊನಾ ವಾರಿಯರ್ ಆಗಿ ಕಾರ್ಯನಿರ್ವಹಿಸುತ್ತಿರುವ ಕಾನ್‌ಸ್ಟೆಬಲ್‌ಗಳಿಗೆ ಸೋಂಕು ತಗುಲಿರುವುದರಿಂದ ಸಂಬಂಧಪಟ್ಟ ಪೊಲೀಸ್ ಠಾಣೆಗಳ ಸ್ಯಾನಿಟೈಸೇಷನ್‌ಗೆ ಕ್ರಮ ಕೈಗೊಳ್ಳಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT