ಶನಿವಾರ, ಸೆಪ್ಟೆಂಬರ್ 25, 2021
27 °C
ಜಂಟಿ ಸಮೀಕ್ಷೆ ವರದಿ ಸರ್ಕಾರಕ್ಕೆ: ಖೂಬಾ

ಕೇಂದ್ರ ಸಚಿವರಿಂದ ಬೆಳೆ ಹಾನಿ ಪರಿಶೀಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜನವಾಡ: ಕೇಂದ್ರ ನವೀಕರಿಸಬಹುದಾದ ಇಂಧನ ಮೂಲ, ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಅವರು ಬೀದರ್ ತಾಲ್ಲೂಕಿನ ಕಾಡವಾದದಲ್ಲಿ ಶನಿವಾರ ಮಳೆಯಿಂದ ಆಗಿರುವ ಬೆಳೆ ಹಾನಿಯನ್ನು ಪರಿಶೀಲಿಸಿದರು.

ಗ್ರಾಮದ ಕೆಲ ಜಮೀನುಗಳಲ್ಲಿನ ಬೆಳೆಗಳನ್ನು ವೀಕ್ಷಿಸಿದ ಅವರು, ರೈತರ ಅಹವಾಲನ್ನೂ ಆಲಿಸಿದರು.

ಮಳೆಯಿಂದಾಗಿ ತಮ್ಮ 3 ಎಕರೆ 6 ಗುಂಟೆ ಜಮೀನಿನಲ್ಲಿ ಬೆಳೆದ ಸೋಯಾಅವರೆ ನಷ್ಟವಾಗಿದೆ ಎಂದು ರೈತ ವಿಶ್ವನಾಥ ಮೀನಕೇರಿ ತಿಳಿಸಿದರು.

ಜಿಲ್ಲೆಯಲ್ಲಿ ಸೆಪ್ಟೆಂಬರ್ ವರೆಗೆ ಸುರಿದ ಮಳೆಗೆ 23,844 ಹೆಕ್ಟೇರ್ ಬೆಳೆ ಹಾನಿಯಾಗಿದೆ. ಬೀದರ್ ತಾಲ್ಲೂಕಿನಲ್ಲಿ 3,030 ಎಕರೆ ಬೆಳೆ ನಷ್ಟವಾಗಿದೆ, ಈ ಕುರಿತು ಈಗಾಗಲೇ ಪ್ರಾಥಮಿಕ ವರದಿ ಸಲ್ಲಿಸಲಾಗಿದೆ ಎಂದು ಕೃಷಿ ಉಪ ನಿರ್ದೇಶಕ ಸಚಿವರಿಗೆ ಮಾಹಿತಿ ನೀಡಿದರು.

ಇದೇ ವೇಳೆ ಖೂಬಾ ಅವರು ಬೆಳೆ ಹಾನಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಹಾಗೂ ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಬೆಳೆ ಹಾನಿ ಸಂಬಂಧ ಕಂದಾಯ, ಕೃಷಿ ಮತ್ತು ತೋಟಗಾರಿಕೆ ಅಧಿಕಾರಿಗಳು ಜಂಟಿ ಸಮೀಕ್ಷೆ ಕೈಗೊಂಡು ಸಲ್ಲಿಸುವ ನಿಖರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಪರಸ್ಪರ ಸಮನ್ವಯದೊಂದಿಗೆ ಬೆಳೆ ಹಾನಿಯ ವಾಸ್ತವ ಮಾಹಿತಿ ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ಹೇಳಿದರು.

ಮಳೆಯಿಂದ ಹಾನಿಗೀಡಾದ ಸಿರ್ಸಿ(ಎ) ಗ್ರಾಮದ ಸೇತುವೆಗೂ ಸಚಿವರು ಭೇಟಿ ಕೊಟ್ಟು ಪರಿಶೀಲಿಸಿದರು. ಕೂಡಲೇ ಸೇತುವೆ ದುರಸ್ತಿಪಡಿಸಲು ಸಂಬಂಧಪಟ್ಟವರಿಗೆ ಸೂಚಿಸಿದರು.

ನಂತರ ಗ್ರಾಮದ ಕೋವಿಡ್ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು. ರಾಜ್ಯ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ. ಶೈಲೇಂದ್ರ ಬೆಲ್ದಾಳೆ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.