ಗುರುವಾರ , ಮಾರ್ಚ್ 30, 2023
24 °C
ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಆಕ್ರೋಶ; ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆ ಏರಿಕೆಗೆ ಖಂಡನೆ

ತೈಲ ಬೆಲೆ ಏರಿಕೆ ವಿರೋಧಿಸಿ ಸೈಕಲ್‌ ಜಾಥಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು
ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಬುಧವಾರ ಸೈಕಲ್‌ ಜಾಥಾ ನಡೆಸಿದರು.

ನಗರದಲ್ಲಿ ಪಕ್ಷದ ಮುಖಂಡರು, ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ನೌಬಾದ್ ಬಸವೇಶ್ವರ ವೃತ್ತದಿಂದ ಸೈಕಲ್ ಜಾಥಾ ಆರಂಭಿಸಿದರು. ಸೈಕಲ್‌ಗಳ ಮೇಲೆ ಪ್ರತಾಪನಗರ, ಶಿವನಗರ, ಮಡಿವಾಳ ವೃತ್ತ, ರೋಟರಿ ಕನ್ನಡಾಂಬೆ ವೃತ್ತ, ಅಂಬೇಡ್ಕರ್ ವೃತ್ತ, ಶಿವಾಜಿ ವೃತ್ತದ ಮಾರ್ಗವಾಗಿ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತ ಜಿಲ್ಲಾಧಿಕಾರಿ ಕಚೇರಿಗೆ ಬಂದರು.

ಕಾರ್ಯಕರ್ತರು ಸೈಕಲ್‌ಗಳ ಹ್ಯಾಂಡಲ್‌ಗೆ ಪಕ್ಷದ ಧ್ವಜ ಕಟ್ಟಿದ್ದರು. ಕೆಲವರು ಕೊರಳಲ್ಲಿ ಪಕ್ಷದ ಧ್ವಜದ ಬಣ್ಣ ಹೊಂದಿರುವ ಶಲ್ಯ ಧರಿಸಿದ್ದರು. ಜಾಥಾ ಸಾಗುತ್ತಿದ್ದ ಮಾರ್ಗದಲ್ಲಿ ಪೊಲೀಸರನ್ನು ನಿಯೋಜಿಸಿ ವಾಹನಗಳ ಸಂಚಾರ ಮಾರ್ಗವನ್ನು ಕೆಲ ಹೊತ್ತು ಬದಲಿಸಲಾಗಿತ್ತು. ಕೆಲ ಕಡೆ ಏಕಮುಖ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಅವರು ಜಿಲ್ಲಾಧಿಕಾರಿಗೆ ಮನವಿಪತ್ರ ಸಲ್ಲಿಸಿದರು.

‘ಕೋವಿಡ್‌ನಿಂದಾಗಿ ಜನ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸಾಕಷ್ಟು ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ಬೆಲೆ ಹೆಚ್ಚಳದಿಂದ ಅಗತ್ಯ ವಸ್ತುಗಳ ಬೆಲೆಯಲ್ಲೂ ಏರಿಕೆಯಾಗಿ ಜನಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆಪಿಸಿ ಪ್ರಧಾನ ಕಾರ್ಯದರ್ಶಿ ಒಬೆದುಲ್ಲಾ ಷರೀಫ್, ವಕ್ತಾರ ಡಾ.ಶರಣಪ್ರಕಾಶ ಪಾಟೀಲ, ಶಾಸಕ ರಹೀಂ ಖಾನ್, ಮಾಜಿ ಸಂಸದ ನರಸಿಂಹರಾವ್‌ ಸೂರ್ಯವಂಶಿ, ವಿಧಾನ ಪರಿಷತ್‌ ಮಾಜಿ ಸದಸ್ಯ ಕೆ.ಪುಂಡಲೀಕರಾವ್‌, ಕಾಂಗ್ರೆಸ್‌ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ದತ್ತಾತ್ರಿ ಮೂಲಗೆ, ಆನಂದ ದೇವಪ್ಪ, ಬಸಿರೋದ್ದಿನ್‌ ಹಾಲಹಿಪ್ಪರಗಾ, ಶಂಕರರಾವ್ ದೊಡ್ಡಿ, ಮುರಳೀಧರ್‌ ಏಕಲಾರಕರ್, ಅಮೃತರಾವ್‌ ಚಿಮಕೋಡೆ, ಇರ್ಷಾದ್‌ ಪೈಲ್ವಾನ್, ಮಹಮ್ಮದ್‌ ನಿಸಾರ್‌, ಲತಾ ರಾಠೋಡ್‌, ಪರ್ವೇಜ್‌ ಕಮಲ್, ಡಿ.ಕೆ.ಸಂಜುಕುಮಾರ, ಚಂದ್ರಕಾಂತ ಹಿಪ್ಪಳಗಾಂವ್‌, ಮಹಮ್ಮದ್‌ ಯುಸೂಫ್, ಫರೀದ್‌ ಖಾನ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ

ಬಸವಕಲ್ಯಾಣ: ತೈಲ ಹಾಗೂ ಅಡುಗೆ ಅನಿಲ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಪಕ್ಷದಿಂದ ಬುಧವಾರ ಇಲ್ಲಿ ಸೈಕಲ್ ಜಾಥಾ ನಡೆಯಿತು.

ಕೋಟೆಯಿಂದ ಮುಖ್ಯ ರಸ್ತೆಯ ಮೂಲಕ ಮಹಾತ್ಮ ಗಾಂಧಿ ವೃತ್ತದವರೆಗೆ ಜಾಥಾ ನಡೆಯಿತು. ಪ್ರಮುಖರು ಮಾತನಾಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನವಿರೋಧಿ ನೀತಿಯನ್ನು ಖಂಡಿಸಿದರು. ‘ಬಿಜೆಪಿ ಸರ್ಕಾರಕ್ಕೆ ಧಿಕ್ಕಾರ’ ಎಂಬಿತ್ಯಾದಿ ಘೋಷಣೆಗಳನ್ನು ಕೂಗಲಾಯಿತು.

ಪ್ರಮುಖರಾದ ಮಾಲಾ ಬಿ.ನಾರಾಯಣರಾವ್, ಶಾಂತಪ್ಪ ಜಿ.ಪಾಟೀಲ, ಶಿವರಾಜ ನರಶೆಟ್ಟಿ, ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ನೀಲಕಂಠ ರಾಠೋಡ, ನಗರ ಘಟಕದ ಅಧ್ಯಕ್ಷ ಅಜರ ಅಲಿ, ಅರ್ಜುನ ಕನಕ, ಮನೋಹರ ಮೈಸೆ, ಶಂಕರರಾವ್ ಜಮಾದಾರ, ಯುವರಾಜ ಭೆಂಡೆ, ರವೀಂದ್ರ ಬೋರೊಳೆ, ಕೇಶಪ್ಪ ಬಿರಾದಾರ, ಶಶಿಕಾಂತ ದುರ್ಗೆ, ರಾಮ ಜಾಧವ, ಸುಧಾಕರ ಗುರ್ಜರ್, ಸುರೇಶ ಮೋರೆ, ಮನೋಜ ಮಾಶೆಟ್ಟೆ, ಸಂದೀಪ ಬುಯೆ, ಅಶೋಕ ಢಗಳೆ, ಶ್ರೀಕಾಂತ ಕಾಂಬಳೆ, ರೈಸೊದ್ದೀನ್, ಪಿಂಟು ಕಾಂಬಳೆ, ಶಹಾಜಹಾನಾ ಬೇಗಂ, ಗೌತಮ ನಾರಾಯಣರಾವ್, ಮಲ್ಲಿಕಾರ್ಜುನ ಬೊಕ್ಕೆ ಇದ್ದರು.

ಯೂಥ್‌ ಕಾಂಗ್ರೆಸ್ ಖಂಡನೆ

ಭಾಲ್ಕಿ: ಇಲ್ಲಿ ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ಬೆಲೆ ಏರಿಕೆ, ಕೇಂದ್ರ, ರಾಜ್ಯ ಸರ್ಕಾರದ ಅಸಮರ್ಪಕ ನಿರ್ವಹಣೆ ವಿರೋಧಿಸಿ ಬುಧವಾರ ಯೂಥ್‌ ಕಾಂಗ್ರೆಸ್ ವತಿ ಯಿಂದ ಸೈಕಲ್‌ ಜಾಥಾ ನಡೆಯಿತು.

ಪುರಸಭೆ ಅಧ್ಯಕ್ಷ ಬಸವರಾಜ ವಂಕೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಕಾಶ ಮಾಶಟ್ಟೆ, ನಗರ ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್‌ ನಸೀರ್‌, ಯುವ ಕಾಂಗ್ರೆಸ್ ಅಧ್ಯಕ್ಷ ಟಿಂಕು ರಾಜಭವನ, ಜೈಪಾಲ್‌ ಬೋರಾಳೆ, ರಾಜಕುಮಾರ ವಂಕೆ, ಮಾಣಿಕಪ್ಪಾ ರೇಷ್ಮೆ, ಪ್ರಕಾಶ ಭಾವಿಕಟ್ಟಿ, ದತ್ತು ಪವಾರ್‌, ವಿಶಾಲ ಪೂರಿ, ವಿಲಾಸ ಮೋರೆ, ರಾಜಕುಮಾರ ಮೋರೆ, ಬಾಬುರಾವ್‌ ರಾಠೋಡ, ಧನರಾಜ ಪಾಂಚಾಳ, ಕಪಿಲ್‌ ಕಲ್ಯಾಣೆ, ಸಂಗಮೇಶ ವಾಲೆ ಉಪಸ್ಥಿತರಿದ್ದರು.

ಕಾಂಗ್ರೆಸ್‌ ಮುಖಂಡರಿಂದ ಪ್ರತಿಭಟನೆ

ಚಿಟಗುಪ್ಪ: ತಾಲ್ಲೂಕಿನ ಮನ್ನಾಎಖ್ಖೇಳಿ ಗ್ರಾಮದಿಂದ ಬಾಪುರ್‌ ಕ್ರಾಸ್‌ ವರೆಗೂ ಬುಧವಾರ ಕಾಂಗ್ರೆಸ್ ಮುಖಂಡರು ಸೈಕಲ್‌ ಜಾಥಾ ನಡೆಸಿ ಕೇಂದ್ರ ಸರ್ಕಾರದ ಬೆಲೆ ಏರಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಶಾಸಕ ಅಶೋಕ ಖೇಣಿ ಆದೇಶದಂತೆ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಚಂದ್ರಶೇಖರ ಚನ್ನಶೆಟ್ಟಿ ಮುಂದಾಳತ್ವದಲ್ಲಿ ಕಾರ್ಯಕರ್ತರು ನಡೆಸಿದ ಪ್ರತಿಭಟನೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

‘ದೇಶದಲ್ಲಿ ಮೋದಿ ನೇತೃತ್ವದ ಸರ್ಕಾರ ಬಂದ ಮೇಲೆ ನಿರಂತರವಾಗಿ ಡೀಸೆಲ್ ಹಾಗೂ ಪೆಟ್ರೋಲ್ ಬೆಲೆ ಹೆಚ್ಚುತ್ತಲೇ ಇದೆ. ಈಗ ದೇಶದಲ್ಲಿ ಪೆಟ್ರೋಲ್ ಬೆಲೆ ₹104 ಗಡಿ ದಾಟಿದರೂ ಸರ್ಕಾರ ಬಾಯಿ ಮುಚ್ಚಿ ಕುಳಿತಿದೆ’ ಎಂದು ಚಂದ್ರಶೇಖರ ಚನ್ನಶೆಟ್ಟಿ ದೂರಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಉಬೇದುಲ್ಲಾ ಶರೀಫ್ ಮಾತಾನಾಡಿ, ‘ಕೊರೊನಾ ಸಂಕಷ್ಟದ ಪರಿಸ್ಥಿತಿಯಲ್ಲಿ ಈಗಾಗಲೇ ಹಲವರು ಕೆಲಸ ಕಳೆದುಕೊಂಡು ನೋವು ಅನುಭವಿಸುತ್ತಿದ್ದಾರೆ. ನಾಗರಿಕರ ನೋವು ಸರ್ಕಾರಕ್ಕೆ ಮನವರಿಕೆ ಮಾಡಲು ಸೈಕಲ್ ಜಾಥಾ ಹಮ್ಮಿಕೊಳ್ಳಲಾಗಿದೆ’ ಎಂದರು.

ಬ್ಲಾಕ್ ಕಾಂಗ್ರೆಸ್‌ ಕಮಿಟಿಯ ಅಧ್ಯಕ್ಷರಾದ ಕರೀಮ ಸಾಬ್‌, ಜಿಲ್ಲಾ ಕಾಂಗ್ರೆಸ್‌ ಸಮಿತಿ ಉಪಾಧ್ಯಕ್ಷ ಯುಸೂಫ್‌ ಅಲಿ ಜಮಾದಾರ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಸ್ತಾನ್ ನೂರೊದ್ದಿನ್‌, ಶಿರೊಮಣಿ ಮಾತನಾಡಿದರು.

ಸಂತೋಷ ಕಮಲಪೂರ್, ಅಜಾಮತ್ ಅಲ್ಲೂರಿ, ಮಹ್ಮದ್ ಅಲಿ, ಖುದ್ದುಸ್, ಆಸ್ಕರ್ ಫರ್ನಾಂಡೀಸ್, ಮಾರುತಿ ವಾಗ್ಗೆ, ಶಿವಕುಮಾರ್, ಸಂತೋಷ ರಡ್ಡಿ, ಅಜೀಜ್, ಸಂಗಪ್ಟಾ ಪಾಟೀಲ, ರಮೇಶ ಹೌದಖಾನಿ, ಲೋಕೆಶ ಕನಶಟ್ಟಿ, ಮಾರ್ಟಿನ್‌, ರುಕ್ಮರಡ್ಡಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.