ಬುಧವಾರ, ಜುಲೈ 28, 2021
20 °C
ಮತ್ತೆ 45 ಜನರಿಗೆ ಕೋವಿಡ್ ಸೋಂಕು

ಬೀದರ್| ಜಿಲ್ಲೆಯಲ್ಲಿ ಮೃತರ ಸಂಖ್ಯೆ 59ಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಭಾನುವಾರದ ವರದಿಯ ಪ್ರಕಾರ ಬಜಿಲ್ಲೆಯಲ್ಲಿ ಮತ್ತೆ 45 ಮಂದಿಗೆ ಕೋವಿಡ್‌ ಸೋಂಕು ತಗುಲಿದೆ. ಕೋವಿಡ್ ವೈರಾಣು ಪೀಡಿತರ ಸಂಖ್ಯೆ 1378ಕ್ಕೆ ಏರಿದೆ. ಈಚೆಗೆ ಅನಾರೋಗ್ಯದಿಂದಾಗಿ ನಿಧನರಾಗಿದ್ದ ಮೂವರಿಗೆ ಕೋವಿಡ್‌ ಸೋಂಕು ತಗುಲಿರುವುದು ದೃಢಪಟ್ಟಿದೆ. ಮೃತರ ಸಂಖ್ಯೆ 59ಕ್ಕೆ ತಲುಪಿದೆ.

ಬೀದರ್‌ನ 60 ವರ್ಷದ ವ್ಯಕ್ತಿಯೊಬ್ಬರು ಉಸಿರಾಟ ತೊಂದರೆಯಿಂದಾಗಿ ಜುಲೈ 14 ರಂದು ಬ್ರಿಮ್ಸ್ ಆಸ್ಪತ್ರೆಗೆ ದಾಖಲಾಗಿ ಅಂದೇ ಕೊನೆಯುಸಿರೆಳೆದಿದ್ದರು. ಬೀದರ್‌ ತಾಲ್ಲೂಕಿನ ಕಮಠಾಣಾದನ 52 ವರ್ಷದ ಪುರುಷ ಉಸಿರಾಟ ತೊಂದರೆಯಿಂದಾಗಿ ಜುಲೈ 16ರಂದು ಮೃತಪಟ್ಟಿದ್ದರು.

70 ವರ್ಷದ ಮಹಿಳೆ ಉಸಿರಾಟ ತೊಂದರೆ ಹಾಗೂ ನಿಶಕ್ತಿಯಾಗಿ ಜುಲೈ 7 ರಂದು ಬ್ರಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೆ 17 ರಂದು ಮೃತಪಟ್ಟಿದ್ದರು. ಈ ಮೂವರ ಗಂಟಲು ದ್ರವ ಮಾದರಿ ಪಡೆದು ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು. ವರದಿ ಪಾಸಿಟಿವ್‌ ಬಂದಿದೆ.

ನಗರದಲ್ಲಿ ಕ್ವಾರಂಟೈನ್‌ಲ್ಲಿರುವ ಒಂಬತ್ತು ಜನರಿಗೆ, ವಿದ್ಯಾನಗರದ ಇಬ್ಬರಿಗೆ, ನಾರಾಯಣಪುರ, ರಾಮಪುರೆ ಕಾಲೊನಿ, ಚೌಬಾರಾ, ನಾವದಗೇರಿ ಹಾಗೂ ದೀನದಯಾಳನಗರದ ಒಬ್ಬರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ.

ಬಸವಕಲ್ಯಾಣದ ಏಳು ಜನರಿಗೆ, ಹುಮನಾಬಾದ್‌ನ ನೂರಖಾನ್‌ ಅಖಾಡಾದ 13 ಜನರಿಗೆ, ಪೊಲೀಸ್‌ ಸಿಬ್ಬಂದಿ ವಸತಿಗೃಹ ಹಾಗೂ ಭಾಲ್ಕಿಯ ನಾವದಗಿಯಲ್ಲಿ ಒಬ್ಬರಿಗೆ ಸೋಂಕು ತಗುಲಿದೆ. ಭಾನುವಾರ ಪತ್ತೆಯಾದ 45 ಸೋಂಕಿತರಲ್ಲಿ 6 ಬಾಲಕರು, ಮೂವರು ಬಾಲಕಿಯರು, 17 ಮಹಿಳೆಯರು ಹಾಗೂ 20 ಪುರುಷರು ಇದ್ದಾರೆ.

ಬರಬೇಕಿದೆ 1004 ಮಂದಿಯ ವರದಿ

ಜಿಲ್ಲೆಯಲ್ಲಿ ಈವರೆಗೆ 45,963 ಜನರ ಗಂಟಲು ದ್ರವ ಮಾದರಿ ಪಡೆಯಲಾಗಿದೆ. ಇವರಲ್ಲಿ 43,581 ಮಂದಿಯ ವೈದ್ಯಕೀಯ ವರದಿ ನೆಗೆಟಿವ್ ಹಾಗೂ 1,378 ಜನರ ವರದಿ ಪಾಸಿಟಿವ್‌ ಬಂದಿದೆ. 579 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಭಾನುವಾರ 21 ಜನ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 1004 ಮಂದಿಯ ಗಂಟಲು ದ್ರವ ಮಾದರಿ ಪರೀಕ್ಷೆಯ ವರದಿ ಬರಬೇಕಿದೆ.

ಲಾಕ್‌ಡೌನ್‌: ನಾಲ್ಕನೆಯ ದಿನವೂ ಬಂದ್‌
ಬೀದರ್‌: ಲಾಕ್‌ಡೌನ್‌ನ ನಾಲ್ಕನೇ ದಿನವಾದ ಭಾನುವಾರವೂ ಜಿಲ್ಲೆ ಸ್ತಬ್ಧಗೊಂಡಿತ್ತು. ಮೆಡಿಕಲ್‌, ಕಿರಾಣಿ ಹಾಗೂ ತರಕಾರಿ ಅಂಗಡಿಗಳು ಬಿಟ್ಟರೆ ಉಳಿದೆಲ್ಲ ಅಂಗಡಿಗಳು ಬಂದ್‌ ಇದ್ದವು. ಭಾನುವಾರ ಮಧ್ಯಾಹ್ನದ ನಂತರ ಆಸ್ಪತ್ರೆಗಳಲ್ಲಿ ಹೊರ ರೋಗಿಗಳಿಗೂ ಚಿಕಿತ್ಸೆ ದೊರೆಯಲಿಲ್ಲ.

ನಗರದ ಉದಗಿರ ರಸ್ತೆಯಲ್ಲಿರುವ ಬರೀದ್‌ಶಾಹಿ ಉದ್ಯಾನದ ಆವರಣದಲ್ಲಿ ರೈತರು ಹಾಗೂ ಕೆಲ ವ್ಯಾಪಾರಸ್ಥರು ಬೆಳಿಗ್ಗೆ ತರಕಾರಿ ಮಾರಾಟ ಮಾಡಿದರು. ಮಾಸ್ಕ್‌ ಧರಿಸಿಕೊಂಡು ಬಂದ ಜನ ತರಕಾರಿ ಖರೀದಿಸಿ ಮನೆಗಳಿಗೆ ತೆರಳಿದರು. ದೊಡ್ಡ ಹೋಟೆಲ್‌ಗಳು ತೆರೆದುಕೊಂಡಿದ್ದರೂ ನೀರಿಕ್ಷಿಸಿದಷ್ಟು ಜನ ಉಪಾಹಾರದ ಪಾರ್ಸಲ್‌ ಹಾಗೂ ಊಟ ಒಯ್ಯಲಿಲ್ಲ.

ಗಾಂಧಿಗಂಜ್‌ ಸಂಪೂರ್ಣ ಬಂದ್‌ ಇತ್ತು. ಗಾಂಧಿಗಂಜ್‌ನಲ್ಲಿ ಬೇಳೆ ಕಾಳು ಇನ್ನಿತರ ಅಗತ್ಯ ವಸ್ತುಗಳನ್ನು ಖರೀದಿಸಲು ಬೈಕ್‌ ಮೇಲೆ ನಗರಕ್ಕೆ ಬಂದಿದ್ದ ಜನ ಅನ್ಯ ಮಾರ್ಗವಿಲ್ಲದೆ ಊರುಗಳಿಗೆ ತೆರಳಿದರು. ನಗರ ಸಾರಿಗೆ ಬಸ್‌ ಹಾಗೂ ಆಟೊರಿಕ್ಷಾಗಳು ಸಂಚರಿಸಲಿಲ್ಲ.

ಪೊಲೀಸ್‌ ಸಿಬ್ಬಂದಿ ಗಸ್ತು ನಡೆಸಿ ನಗರದಲ್ಲಿ ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದ ಬೈಕ್‌ ಸವಾರರಿಗೆ ಎಚ್ಚರಿಕೆ ನೀಡಿ ಮನೆಗಳಿಗೆ ಕಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು