ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಶಾಲೆಗಳ ನವೀಕರಣ ಸರಳೀಕರಣಕ್ಕೆ ಆಗ್ರಹ

ಸರ್ಕಾರ ಬೇಡಿಕೆಗೆ ಸ್ಪಂದಿಸದಿದ್ದರೆ ಹೋರಾಟ: ಲೋಕೇಶ್ ತಾಳಿಕೋಟಿ ಎಚ್ಚರಿಕೆ
Last Updated 12 ಜುಲೈ 2022, 13:07 IST
ಅಕ್ಷರ ಗಾತ್ರ

ಬೀದರ್: ರಾಜ್ಯ ಸರ್ಕಾರ ನವೀಕರಣ ಸರಳೀಕರಣ ಸೇರಿದಂತೆ ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರಮುಖ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಹೋರಾಟ ಅನಿವಾರ್ಯವಾಗಲಿದೆ ಎಂದು ರಾಜ್ಯ ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ(ರುಕ್ಸಾ)ದ ಅಧ್ಯಕ್ಷ ಲೋಕೇಶ್ ತಾಳಿಕೋಟಿ ಎಚ್ಚರಿಕೆ ನೀಡಿದರು.

ನಗರದ ವಿದ್ಯಾಶ್ರೀ ಪಬ್ಲಿಕ್ ಸ್ಕೂಲ್‍ನಲ್ಲಿ ಕಲ್ಯಾಣ ಕರ್ನಾಟಕ ಅನುದಾನ ರಹಿತ ಖಾಸಗಿ ಶಾಲಾ ಆಡಳಿತ ಮಂಡಳಿ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲೆಯ ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರಮುಖರ ಸಭೆಯಲ್ಲಿ ಅವರು ಮಾತನಾಡಿದರು.

ಶಾಲಾ ಅನುಮತಿ, ನವೀಕರಣ ಸರಳೀಕರಿಸಬೇಕು. ಅನುದಾನಿತ ಶಾಲಾ ಕಾಲೇಜುಗಳಲ್ಲಿನ ಖಾಲಿ ಹುದ್ದೆಗಳ ಭರ್ತಿಗೆ ಅನುಮತಿ ಕೊಡಬೇಕು. ಬಡ ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡಲು ಆರ್‌ಟಿಇ ಮರು ಜಾರಿಗೊಳಿಸಬೇಕು. ಅಗ್ನಿಶಾಮಕ, ಕಟ್ಟಡ ಸುರಕ್ಷತೆ ನಿಯಮಗಳಿಂದ ಶಾಶ್ವತ ವಿನಾಯಿತಿ ನೀಡಬೇಕು. ಶಿಕ್ಷಣ ಕ್ಷೇತ್ರಕ್ಕೆ ವಿಶೇಷ ಅನುದಾನ ಮೀಸಲಿಡಬೇಕು ಎಂದು ಒತ್ತಾಯಿಸಿದರು.
ಸರ್ಕಾರ ನೂರೆಂಟು ಷರತ್ತುಗಳನ್ನು ವಿಧಿಸಿರುವುದರಿಂದ ಸದ್ಯ ಖಾಸಗಿ ಶಾಲೆಗಳನ್ನು ನಡೆಸುವುದು ಬಹಳ ಕಷ್ಟಕರವಾಗಿದೆ. 1995 ರಿಂದ ಈಚೆಗೆ ಯಾವೊಂದು ಶಿಕ್ಷಣ ಸಂಸ್ಥೆಯನ್ನೂ ಅನುದಾನಕ್ಕೆ ಒಳಪಡಿಸದಿರುವುದು ಬೇಸರದ ಸಂಗತಿಯಾಗಿದೆ ಎಂದು ಹೇಳಿದರು.
ಶಿಕ್ಷಣದಿಂದಲೇ ರಾಜ್ಯ, ದೇಶದ ಅಭಿವೃದ್ಧಿ ಸಾಧ್ಯವಿದೆ. ಹೀಗಾಗಿ ಸರ್ಕಾರ ಶಾಲೆಗಳ ವಿಚಾರದಲ್ಲಿ ಸರ್ಕಾರಿ, ಖಾಸಗಿ ಎಂದು ಭೇದ ಭಾವ ಮಾಡಬಾರದು ಎಂದರು.

ಸರ್ಕಾರ ಶಿಕ್ಷಣ ಕ್ಷೇತ್ರವನ್ನು ನಿರ್ಲಕ್ಷಿಸುತ್ತಿರುವುದರಿಂದ ಕನ್ನಡ ಮಾಧ್ಯಮದ ಶಾಲೆಗಳ ಸ್ಥಿತಿ ಅಧೋಗತಿಯಾಗಿದೆ. ಸರ್ಕಾರ ಯಾವುದೇ ರೀತಿಯ ನೆರವು ನೀಡದ ಕಾರಣ ಸಂಕಷ್ಟದ ಮಧ್ಯೆ ನಡೆಸಿಕೊಂಡು ಬರುತ್ತಿರುವ ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳು ಸೊರಗುತ್ತಿವೆ ಎಂದು ಹೇಳಿದರು.

ಖಾಸಗಿ ಶಿಕ್ಷಣ ಸಂಸ್ಥೆಯವರು ಸಂಘಟಿತರಾಗಬೇಕು. ತಮ್ಮ ಬೇಡಿಕೆಗಳ ಈಡೇರಿಕೆಗೆ ಹೋರಾಟ ನಡೆಸಲು ಸಹ ಸಿದ್ಧರಿರಬೇಕು ಎಂದು ತಿಳಿಸಿದರು.

ಕಲ್ಯಾಣ ಕರ್ನಾಟಕ ಅನುದಾನ ರಹಿತ ಖಾಸಗಿ ಶಾಲಾ ಆಡಳಿತ ಮಂಡಳಿ ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ರೇವಣಸಿದ್ದಪ್ಪ ಜಲಾದೆ ಅವರು, ಜಿಲ್ಲೆಯ ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಸಭೆಯ ಗಮನಕ್ಕೆ ತಂದರು.
ರಾಜ್ಯ ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಸಂಘಟನಾ ಕಾರ್ಯದರ್ಶಿ ಉಮೇಶ, ಕಲ್ಯಾಣ ಕರ್ನಾಟಕ ಅನುದಾನ ರಹಿತ ಖಾಸಗಿ ಶಾಲಾ ಆಡಳಿತ ಮಂಡಳಿ ಸಂಘದ ಕಲಬುರಗಿ ವಿಭಾಗ ಪ್ರಮುಖ ಸುನೀಲ್ ಹುಡಗಿ, ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಅಬ್ದುಲ್ ಖದೀರ್, ವಿಜಡಂ ಕಾಲೇಜು ಕಾರ್ಯದರ್ಶಿ ಮಹಮ್ಮದ್ ಆಸಿಫೊದ್ದಿನ್, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಮುಜಮಿಲ್ ಪಟೇಲ್, ಪ್ರಮುಖರಾದ ಗುರುನಾಥ ರೆಡ್ಡಿ, ಮಂಜೂರ್ ಇರ್ಫಾನ್, ಓಂಕಾರ ಮಠಪತಿ, ಮುಕ್ರಂ ಪಟೇಲ್ ಇದ್ದರು.

ಸಂಘದ ಜಿಲ್ಲಾ ಅಧ್ಯಕ್ಷ ರಾಜೇಂದ್ರ ಮಣಗೇರಿ ಸ್ವಾಗತಿಸಿದರು. ಸರ್ವಜ್ಞ ಪ್ರೌಢಶಾಲೆಯ ಅಧ್ಯಕ್ಷ ಬಸವರಾಜ ಬಶೆಟ್ಟಿ ನಿರೂಪಿಸಿದರು. ವೀರೇಶ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT