ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್: ಮೊಟ್ಟೆಗೆ ಧರ್ಮ, ಜಾತಿಯ ಲೇಪನ ಸಲ್ಲ- ಸಂಘಟನೆಗಳ ಮನವಿ

Last Updated 1 ಡಿಸೆಂಬರ್ 2021, 4:18 IST
ಅಕ್ಷರ ಗಾತ್ರ

ಬೀದರ್‌: ಮೊಟ್ಟೆ ಸಸ್ಯಾಹಾರವೂ ಅಲ್ಲ, ಮಾಂಸಾಹಾರವೂ ಅಲ್ಲ. ಅದರಲ್ಲಿರುವುದು ಕೇವಲ ಪೌಷ್ಟಿಕಾಂಶಗಳಿಂದ ತುಂಬಿದ ದ್ರವ. ಮೊಟ್ಟೆಗೆ ಧರ್ಮ, ಜಾತಿಯ ಲೇಪನ ಮಾಡಿ ಬಡ ಮಕ್ಕಳ ಹೊಟ್ಟೆಯ ಮೇಲೆ ಹೊಡೆಯಲು ಹೊರಟಿರುವವರ ಮಾತಿಗೆ ಸರ್ಕಾರ ಮಣಿಯಬಾರದು ಎಂದು ಆರ್‌ಪಿಐ, ಭಾರತೀಯ ವಿದ್ಯಾರ್ಥಿ ಸಂಘ ಸೇರಿದಂತೆ ಅನೇಕ ಸಂಘಟನೆಗಳು ಮನವಿ ಮಾಡಿವೆ.

ರಾಜ್ಯ ಸರ್ಕಾರ ಕಲ್ಯಾಣ ಕರ್ನಾಟಕದಲ್ಲಿ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ ತಜ್ಞರ ಸಮಿತಿ ರಚಿಸಿ ಮಕ್ಕಳಿಗೆ ಮೊಟ್ಟೆ ಕೊಡಲು ನಿರ್ಧರಿಸಿದೆ. ಮೊಟ್ಟೆ ತಿನ್ನದ ಮಕ್ಕಳಿಗೆ ಬಾಳೆಹಣ್ಣು ನೀಡಲು ತೀರ್ಮಾನಿದೆ. ಆದರೆ, ಬಡವರ ವಿರೋಧಿಗಳು ಅರ್ಧ ಸತ್ಯ ಹೇಳಿ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿವೆ.

ಎಸ್. ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲೂ ಮಕ್ಕಳಿಗೆ ಮೊಟ್ಟೆ ವಿತರಿಸಲಾಗಿತ್ತು. ಅಂಗನವಾಡಿ ಕೇಂದ್ರಗಳಲ್ಲಿ ಈಗಲೂ ನಿರಂತರವಾಗಿ ಮೊಟ್ಟೆ ವಿತರಣೆ ಮಾಡಲಾಗುತ್ತಿದೆ. ಮಾತೃಪೂರ್ಣ ಯೋಜನೆಯಡಿಯೂ ಗರ್ಭಿಣಿಯರಿಗೆ ಮೊಟ್ಟೆ ವಿತರಿಸಲಾಗುತ್ತಿದೆ. ಮಕ್ಕಳ ಆರೋಗ್ಯದ ದೃಷ್ಟಿಯಿಂದ ಸರ್ಕಾರ ಸರಿಯಾದ ತೀರ್ಮಾನವನ್ನೇ ತೆಗೆದುಕೊಂಡಿದೆ ಎಂದು ತಿಳಿಸಿವೆ.

ಮೊಟ್ಟೆ ಮಾಂಸಾಹಾರ ಎಂದು ವಾದಿಸುತ್ತಿರುವವರಿಗೆ ಹಾಲು ಸಹ ಮಾಂಸಾಹಾರವೇ ಎನ್ನುವ ಜ್ಞಾನ ಇರಲಿ. ಅಂಥವರು ತಮ್ಮ ಮನೆಗಳಿಗೆ ಹಾಲು ತರಿಸಿಕೊಳ್ಳುವುದನ್ನೂ ನಿಲ್ಲಿಸಲಿ. ಆದರೆ, ಕೆಳ ವರ್ಗದ ಹಾಗೂ ಬಡ ಕುಟುಂಬಗಳ ಮಕ್ಕಳ ಹೊಟ್ಟೆಯ ಮೇಲೆ ಬರೆ ಎಳೆಯುವ ಕೆಲಸಕ್ಕೆ ಕೈಹಾಕುವುದು ಬೇಡ ಎಂದು ಹೇಳಿವೆ.

ಪ್ರತಿಭಟನೆ ನಡೆಸಿದ ಮುಖಂಡರ ಮಕ್ಕಳು ಇಂಗ್ಲಿಷ್ ಕಾನ್ವೆಂಟ್‌ ಹಾಗೂ ಅವರದ್ದೇ ಸಮುದಾಯ ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳ ಶಾಲೆಗಳಲ್ಲಿ ಓದುತ್ತಿದ್ದಾರೆ. ಕೆಳ ವರ್ಗದವರ ಮೇಲಿನ ದ್ವೇಷದ ಭಾವನೆಯಿಂದ ಬಡ ಮಕ್ಕಳಿಗೆ ಪೌಷ್ಟಿಕ ಆಹಾರ ದೊರೆಯದಂತೆ ಮಾಡಲು ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ಆರೋಪಿಸಿವೆ.

ಮಕ್ಕಳಿಗೆ ಮೊಟ್ಟೆ ಕೊಡಲು ಕೊಡುತ್ತಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವುದು ಖಂಡನೀಯ ಎಂದು ರಿಪಬ್ಲಿಕನ್‌ ಪಾರ್ಟಿ ಆಫ್‌ ಇಂಡಿಯಾ(ಅಂಬೇಡ್ಕರ್) ಜಿಲ್ಲಾ ಘಟಕದ ಅಧ್ಯಕ್ಷ ಮಹೇಶ ಗೋರನಾಳಕರ್, ಭಾರತೀಯ ವಿದ್ಯಾರ್ಥಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪ್ರದೀಪ ನಾಟೆಕರ್, ದಲಿತ ವಿದ್ಯಾರ್ಥಿ ಪರಿಷತ್ತಿನ ಜಿಲ್ಲಾ ಸಂಚಾಲಕ ಸಂದೀಪ ಕಾಂಟೆ, ರಮಾಬಾಯಿ ಭಜನಾ ತಂಡದ ಅಧ್ಯಕ್ಷ ಗಂಗಮ್ಮ ಫುಲೆ, ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ರೇಷ್ಮಾ ಕುಂದನ್, ಗೊಂಡ ವಿದ್ಯಾರ್ಥಿ ಸಂಘದ ಸಂಸ್ಥಾಪಕ ಸಂತೋಷ ಜೋಳದಾಬಕಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT