ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಕಮಹಾದೇವಿ ಜಯಂತಿ ಸಾರ್ವತ್ರಿಕವಾಗಿ ಆಚರಿಸಲಿ: ರಾಜಶೇಖರ ಶಿವಾಚಾರ್ಯರು

Published 26 ಫೆಬ್ರುವರಿ 2024, 4:09 IST
Last Updated 26 ಫೆಬ್ರುವರಿ 2024, 4:09 IST
ಅಕ್ಷರ ಗಾತ್ರ

ಬೀದರ್‌: ‘ಕನ್ನಡದ ಮೊದಲ ಕವಯತ್ರಿ, ವೈರಾಗ್ಯನಿಧಿ ಅಕ್ಕಮಹಾದೇವಿ ಅವರ ಜಯಂತಿಯನ್ನು ರಾಜ್ಯ ಸರ್ಕಾರ ಸಾರ್ವತ್ರಿಕವಾಗಿ ಆಚರಿಸಲು ಕ್ರಮ ಜರುಗಿಸಬೇಕು’ ಎಂದು ಜ್ಞಾನ ಶಿವಯೋಗಾಶ್ರಮದ ರಾಜಶೇಖರ ಶಿವಾಚಾರ್ಯರು ಒತ್ತಾಯಿಸಿದರು.

ನಗರ ಹೊರವಲಯದ ಜ್ಞಾನ ಶಿವಯೋಗಾಶ್ರಮದಲ್ಲಿ ಶನಿವಾರ ಶ್ರೀಶೈಲದ ಅಕ್ಕ ಮಹಾದೇವಿ ಚೈತನ್ಯ ಪೀಠದ ಪೀಠಾಧಿಪತಿ ಕರುಣಾದೇವಿ ಮಾತಾ ಅವರ ಜನ್ಮ ದಿನೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಬಸವಾದಿ ಶಿವಶರಣರ ಗೌರವಾಭಿಮಾನಕ್ಕೆ ಪಾತ್ರಳಾಗಿರುವ ಅಕ್ಕಳ ವ್ಯಕ್ತಿತ್ವದ ಕುರಿತು ‘ಡಣ್ಣಾಯಕರ 60 ವಚನಗಳಿಗೆ ಮಹಾದೇವಿಯಕ್ಕಗಳ ಒಂದು ವಚನ ನಿರ್ವಚನ ಕಾಣಾ ಎಂದು  ಚನ್ನಬಸವಣ್ಣನವರು ತಮ್ಮದೊಂದು ವಚನದಲ್ಲಿ ಅಕ್ಕಳ ಜ್ಞಾನ ಸಂಪತ್ತನ್ನು ಕೊಂಡಾಡಿದ್ದಾರೆ. ಅದಕ್ಕಾಗಿ ಅಕ್ಕಳನ್ನು ಭಕ್ತಿ, ಜ್ಞಾನ. ವೈರಾಗ್ಯಗಳ ಖಣಿ ಎಂದು ಶರಣರು ಬಣ್ಣಿಸಿರುವರು. ಆದಕಾರಣ ಶರಣರಿಗೆ ಬಸವಣ್ಣ ಪ್ರಮುಖರಾದಂತೆ ಶರಣೆಯರಿಗೆ ಮಹಾದೇವಿಯಕ್ಕ ಆದರ್ಶರಾಗಿರುವರು ಎಂದರು.

ಜಾಗತಿಕ ಮಹಿಳಾ ಸ್ವಾಭಿಮಾನ. ಆತ್ಮಬಲದ ಸಂಕೇತ ಅಕ್ಕ. ಮಹಾದೇವಿಯವರ ಜೀವನ ಯಶೋಗಾಥೆಯು ಅಬಲೆಯರಿಗೆ ಶಕ್ತಿಯ ಮೈಲಿಗಲ್ಲಾಗಿ ಎದ್ದು ಕಾಣುತ್ತದೆ. ಇಡೀ ನಾರಿಕುಲದ ಆತ್ಮ ಗೌರವದ ಪ್ರತೀಕವಾಗಿ ಅಕ್ಕ ಮಹಾದೇವಿಯವರು ನಮಗೆ ಎದ್ದು ಕಾಣುವರು. ಜಗತ್ತಿಗೊಬ್ಬರು ಅಣ್ಣ ಬಸವಣ್ಣನಾದರೆ, ಜಗತ್ತಿಗೊಬ್ಬಳು ಅಕ್ಕ ಮಹಾದೇವಿಯವರು ಎಂದು ತಿಳಿಸಿದರು.

ಸಾಂಸ್ಕೃತಿಕ ನಾಯಕ ಬಸವಣ್ಣನವರ ಜಯಂತಿಯನ್ನು ರಾಜ್ಯ ಸರ್ಕಾರ ಯಶಸ್ವಿಯಾಗಿ ಆಚರಿಸಿಕೊಂಡು ಬರುತ್ತಿರುವುದು ನಾಡಿನ ಇಡೀ ಪುರುಷ ಸಮಾಜಕ್ಕೆ ಗೌರವ ದೊರೆತಿರುವಂತೆ ನಾಡಿನ ಮಹಿಳೆಯರಿಗೆ ಮನ್ನಣೆ, ಗೌರವ ದೊರೆಯಬೇಕಾದರೆ ವೈರಾಗ್ಯನಿಧಿ  ಅಕ್ಕಮಹಾದೇವಿಯವರ ಜಯಂತಿ ಆಚರಿಸುವುದು ಅತ್ಯವಶ್ಯಕವಾಗಿದೆ ಎಂದು ಹೇಳಿದರು.

ಶ್ರೀಶೈಲದ ಅಕ್ಕಮಹಾದೇವಿ ಚೈತನ್ಯ ಪೀಠವು 2013 ರಿಂದಲೂ ಅಕ್ಕನ ಜಯಂತಿಗಾಗಿ ಸರ್ಕಾರಕ್ಕೆ ಒತ್ತಾಯಿಸುತ್ತಲೇ ಬಂದಿದೆ. ಈ ಹಿಂದೆ ನಮ್ಮ ಬೇಡಿಕೆಯನ್ನು ಮನ್ನಿಸಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು 2016ರ ಏಪ್ರಿಲ್‌ನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಅಕ್ಕ ಮಹಾದೇವಿ ಜಯಂತಿ ಆಚರಿಸಿ ಪ್ರತಿ ವರ್ಷ ಆಚರಿಸುವ ಘೋಷಣೆ ಮಾಡಿದ್ದರು. ಅಕ್ಕಳ ಹೆಸರಿನಲ್ಲಿ ಪ್ರಶಸ್ತಿಯನ್ನು ಘೋಷಿಸಿ ಮಲ್ಲಿಕಾ ಘಂಟಿ ಅವರಿಗೆ ನೀಡಲಾಗಿತ್ತು. ನಂತರ ಇದನ್ನು ನಿಲ್ಲಿಸಲಾಗಿತ್ತು. ಕಾರಣ ತಿಳಿದಿಲ್ಲ. ಅದನ್ನು ಪುನಃ ಅನುಷ್ಠಾನಕ್ಕೆ ತರಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್‌ ಯುವ ಮುಖಂಡ ಸಾಗರ ಖಂಡ್ರೆ ಉದ್ಘಾಟಿಸಿದರು. ಮುಖಂಡರಾದ ಮಾರುತಿ ಕಾಶೆಂಪುರ್‌, ಡಾ. ಸುಭಾಷ ಪಾಟೀಲ, ನಗರಸಭೆ ಸದಸ್ಯೆ ಮಹಾದೇವಿ ಹುಮನಾಬಾದೆ, ಶಶಿಕಲಾ ಮಾತಾ, ಗುಣವಂತರಾವ ಶಿಂಧೆ, ವೈ.ಬಿ.ಪಾಟೀಲ ಉದಗೀರ, ಮಹಾದೇವಪ್ಪ ಭಂಗೂರೆ, ಬಸವರಾಜ ಜಹೀರಾಬಾದ್‌, ಸರಸ್ವತಿ ಗೌರಶೆಟ್ಟಿ, ಅನಿಲ್‌ ಪಾಟೀಲ, ಮಹಾದೇವಿ ಮಠಪತಿ, ಜಯಕ್ಕ ಚಡಚಣಕರ್, ರಮೇಶ ಸೋಲಪೂರ, ಶಿವಯ್ಯ ಸ್ವಾಮಿ ಕಮಠಾಣ, ಡಾ. ಓಂಕಾರ ಸ್ವಾಮಿ, ಪ್ರಭು ತರನಳ್ಳಿ, ರಾಜಕುಮಾರ ಬುಧೇರಾ, ಶಿವರಾಜ ಕೋಟೆ, ಮಲ್ಲಿಕಾರ್ಜುನ ಶಂಭು, ಪರಮೇಶ್ವರ ಪಾಟೀಲ, ಜನ್ಮದಿನ ಸ್ವಾಗತ ಸಮಿತಿಯ ಅಧ್ಯಕ್ಷ ಕಂಟೆಪ್ಪ ಭಂಗೂರೆ, ಬಸವರಾಜ ಹಾಲಹಳ್ಳಿ, ಗಂಗಾಧರ ಸ್ವಾಮಿ ಧನ್ನೂರು, ಸುನೀತಾ ಕಂಟೆಪ್ಪ ಭಂಗೂರೆ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT