ಭಾನುವಾರ, ನವೆಂಬರ್ 29, 2020
24 °C
ಅರಣ್ಯ ಇಲಾಖೆ ನಿರ್ಲಕ್ಷ್ಯ; ನಿತ್ಯ ಒಂದು ಮರಕ್ಕಾದರೂ ಕೊಡಲಿ ಪೆಟ್ಟು

ಬೀದರ್‌: ಬರಿದಾಗುತ್ತಿದೆ ದೇವಗಿರಿ ಅರಣ್ಯ ಪ್ರದೇಶ

ವೀರೇಶ್ ಎನ್.ಮಠಪತಿ Updated:

ಅಕ್ಷರ ಗಾತ್ರ : | |

Prajavani

ಚಿಟಗುಪ್ಪ: ಹುಮನಾಬಾದ್ ಪ್ರಾದೇಶಿಕ ಅರಣ್ಯ ವಿಭಾಗ ವಲಯ ಸದ್ಯ ಚಿಟಗುಪ್ಪದ ದೇವಗಿರಿ ಅರಣ್ಯ ಪ್ರದೇಶದಲ್ಲಿ ನಿತ್ಯ ಮರಗಳನ್ನು ಕಡಿಯುತ್ತಿರುವುದು ಕಂಡು ಬರುತ್ತಿದೆ.

ಮುತ್ತಂಗಿ ಗ್ರಾಮದಿಂದ ಭಾದ್ಲಾಪುರಗೆ ಹೋಗುವ ರಸ್ತೆಗೆ ಸಂಪರ್ಕ ಕಲ್ಪಿಸುವ ದೇವಗಿರಿ ರಸ್ತೆಯ ಎರಡೂ ಬದಿಗಳಲ್ಲಿ ದಟ್ಟವಾದ ಮರಗಳ ಸುಂದರ ಅರಣ್ಯ ಪ್ರದೇಶವಿದೆ.

ಇದರಲ್ಲಿ 70 ಹೆಕ್ಟೇರ್‍ ನೆಡುತೋಪು ಪ್ರದೇಶವೂ ದೈವಿವನವನ್ನಾಗಿ ಅರಣ್ಯ ಇಲಾಖೆ ನಿರ್ಮಿಸಿದೆ. ಇದರಲ್ಲಿ ವಿವಿಧ ಜಾತಿಯ ಕಾಡುಮರಗಳನ್ನು ಬೆಳೆಸಲಾಗಿದೆ. ಬೇವು, ನೆಲ್ಲಿ, ನೀಲಗಿರಿ, ಸುಬಬುಲ ಸೇರಿದಂತೆ ಇತರ ಜಾತಿಯ ಅತ್ಯಂತ ಹೆಚ್ಚು ಬೆಲೆ ಬಾಳುವ ಮರಗಳು ಅರಣ್ಯ ಪ್ರದೇಶದಲ್ಲಿ ಆಕಾಶದೆತ್ತರಕ್ಕೆ ಬೆಳೆದಿವೆ.

ಅರಣ್ಯ ವೀಕ್ಷಣೆಗೆ ಹೋಗುವ ಎಲ್ಲರಿಗೂ ನಿತ್ಯ ಮರಗಳನ್ನು ಕಡಿಯುತ್ತಿರುವ ದೃಶ್ಯ ಕಂಡುಬರುತ್ತದೆ. ಅರಣ್ಯದ ಒಳಗೆ ಪ್ರವೇಶ ಮಾಡುತ್ತಿದ್ದಂತೆ ಬಹುತೇಕ ಮರಗಳು ಕಡಿದಿರುವುದು ಕಂಡುಬರುತ್ತದೆ. ಕೆಲವು ಕಡೆ ಮರಗಳು ಕಡಿದು ನೆಲಕ್ಕುರುಳಿಸಿರುವುದು ಕಂಡರೆ ಮತ್ತೆ ಕೆಲವು ಭಾಗಗಳಲ್ಲಿ ಕೊಡಲಿಯಿಂದ ಕಡಿದುಕೊಂಡು ಹೋಗಿರುವುದು ಕಂಡುಬರುತ್ತದೆ.

‘ತಾಲ್ಲೂಕಿನಲ್ಲಿಯೇ ದೇವಗಿರಿ ಅರಣ್ಯ ಪ್ರದೇಶ ದೊಡ್ಡದಾಗಿದ್ದು, ಸಹಸ್ರಾರು ವನ್ಯಪ್ರಾಣಿ, ಪಕ್ಷಿಗಳಿಗೆ ಆಶ್ರಯ ತಾಣವಾಗಿದೆ. ಮುಖ್ಯವಾಗಿ ಮಂಗ, ನರಿ, ತೋಳ, ನವಿಲು, ಕೋಗಿಲೆ, ಗಿಳಿ, ನೀರಕೋಳಿ ಇತರ ಬಗೆಯ ಪ್ರಾಣಿ– ಪಕ್ಷಿಗಳು ಇಲ್ಲಿ ಕಂಡುಬರುತ್ತವೆ. ಅರಣ್ಯ ಮಧ್ಯಭಾಗದಲ್ಲಿ ದುರ್ಗಾದೇವಿ ದೇಗುಲ ಇರುವುದರಿಂದ ನಿತ್ಯ ನೂರಾರು ಭಕ್ತರು ದರ್ಶನಕ್ಕೆ ಬರುವುದರಿಂದ ಪ್ರೇಕ್ಷಣಿಯ ತಾಣವೂ ಇದಾಗಿದೆ. ಹೀಗಾಗಿ ಅರಣ್ಯ ಇಲಾಖೆ ಈ ಪ್ರದೇಶವನ್ನು ಪಕ್ಷಿಧಾಮವನ್ನಾಗಿ ಮಾರ್ಪಡಿಸಿ ಆ ಮೂಲಕ ಅಭಿವೃದ್ಧಿಪಡಿಸಬೇಕು’ ಎಂದು ಚಾಂಗಲೇರಾ ಗ್ರಾಮ ಪಂಚಾಯಿತಿ ಸದಸ್ಯ ನರೇಶ್ ತೊಂಟೆ ಆಗ್ರಹಿಸಿದ್ದಾರೆ.

ಅರಣ್ಯದಲ್ಲಿ ಹಲವು ಔಷಧಿ ಮರಗಳು ಬೆಳೆದಿವೆ. ಅವುಗಳ ಸಂರಕ್ಷಣೆಗೆ ಅರಣ್ಯ ಇಲಾಖೆ ಮುಂದಾಗಬೇಕಾಗಿದೆ. ಉತ್ತಮ ಪರಿಸರದಲ್ಲಿ ಸಹಸ್ರಾರು ಗಿಡಮರಗಳು ಬೆಳೆಸಿದ್ದರೂ ಸಿಬ್ಬಂದಿಯ ನಿರ್ಲಕ್ಷ್ಯತೆಯಿಂದ ಅರಣ್ಯ ಕ್ರಮೇಣ ಬರಿದಾಗುತ್ತಿರುವುದಕ್ಕೆ ನಾಗರಿಕರು ಆಕ್ರೋಶ ವ್ಯಕ್ತಪಡಿಸುವಂತಾಗಿದೆ.

‘ಅರಣ್ಯ ಪ್ರದೇಶದ ಸುತ್ತಲು ತಂತಿ ಬೇಲಿ ಹಾಕಿದ್ದು ಹಾಳಾಗಿದೆ. ಎಲ್ಲೆಂದರಲ್ಲಿ ಜನರು ನುಗ್ಗುವಂತಾಗಿದೆ. ರಾತ್ರಿ ಗಸ್ತು ಇಲ್ಲದಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಮರಗಳನ್ನು ಕಡಿಯಲಾಗುತ್ತಿದೆ’ ಎಂದು ಸುರಪ್ಪ ತಿಳಿಸಿದ್ದಾರೆ.

‘ಗಿಡ ನೆಟ್ಟು ಅರಣ್ಯ ಬೆಳೆಸುವುದು ಅರಣ್ಯ ಇಲಾಖೆಯ ಜವಾಬ್ದಾರಿ. ಇಲಾಖೆಯ ಸಿಬ್ಬಂದಿಗಳೇ ನಿರ್ಲಕ್ಷ್ಯ ವಹಿಸುತ್ತಿರುವುದರಿಂದ ಮರಗಳನ್ನು ಕಡಿಯುವವರ ಸಂಖ್ಯೆ ಹೆಚ್ಚುತ್ತಿದೆ. ಇದರಿಂದ ಸಮಾಜಕ್ಕೆ ಕೆಟ್ಟ ಸಂದೇಶ ರವಾನೆಯಾಗುತ್ತದೆ. ಹೀಗಾಗಿ ಅರಣ್ಯ ಸಂರಕ್ಷಣೆಗೆ ಮಾತ್ರ ನಮ್ಮ ಆದ್ಯತೆ ಎಂಬ ಜವಾಬ್ದಾರಿಯಿಂದ ಸಿಬ್ಬಂದಿ ಕರ್ತವ್ಯ ನಿರ್ವಹಿಸಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ರಾಜಕುಮಾರ ಹೇಳುತ್ತಾರೆ.

ಸರ್ಕಾರ, ಅರಣ್ಯ ಇಲಾಖೆ ಎಚ್ಚೆತ್ತು ತಕ್ಷಣ ದೇವಗಿರಿ ಅರಣ್ಯ ಪ್ರದೇಶದಲ್ಲಿಯ ಗಿಡಮರಗಳ ಸಂರಕ್ಷಿಸುವ, ಪೋಷಿಸಿ ಬೆಳೆಸುವ ಕಾರ್ಯಕ್ಕೆ ಮುಂದಾಗಬೇಕು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು