ಮಂಗಳವಾರ, ಸೆಪ್ಟೆಂಬರ್ 28, 2021
24 °C
ಡಿಸಿಸಿ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಲ್ಲಿಕಾರ್ಜುನ ಮಹಾಜನ್ ಅಭಿಮತ

ಸಹಕಾರ ಆಂದೋಲನದಿಂದ ಪ್ರತಿ ಕುಟುಂಬದ ಅಭಿವೃದ್ಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಸಹಕಾರ ಆಂದೋಲನದಿಂದ ಪ್ರತಿ ಕುಟುಂಬದ ಅಭಿವೃದ್ಧಿ ಸಾಧ್ಯವಿದೆ ಎಂದು ಜಿಲ್ಲಾ ಸಹಕಾರ ಕೇಂದ್ರ(ಡಿಸಿಸಿ) ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಲ್ಲಿಕಾರ್ಜುನ ಮಹಾಜನ್ ಅಭಿಪ್ರಾಯಪಟ್ಟರು.

ನಬಾರ್ಡ್ ವತಿಯಿಂದ ನಗರದ ಡಾ. ಗುರುಪಾದಪ್ಪ ನಾಗಮಾರಪಳ್ಳಿ ಸಹಾರ್ದ ತರಬೇತಿ ಸಂಸ್ಥೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರಿಗೆ ಆಯೋಜಿಸಿರುವ ಆಡಳಿತ ನಿರ್ವಹಣೆ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಹಕಾರ ಕ್ಷೇತ್ರವು ಸರ್ಕಾರದ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ರೈತರಿಗೆ ಆರ್ಥಿಕ ಸೇವೆಗಳನ್ನು ಒದಗಿಸುತ್ತಿದೆ. ನಾಯಕತ್ವ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಹೇಳಿದರು.

ಸಹಕಾರ ಸಂಘಗಳು ಹಳ್ಳಿಗಳಲ್ಲಿನ ಸಾಮಾಜಿಕ ಅಸಮಾನತೆ ಹೋಗಲಾಡಿಸಿ, ಸಮಾನತೆ ತರಲು ಶ್ರಮಿಸುತ್ತಿವೆ. ಜನರಲ್ಲಿ ಭ್ರಾತೃತ್ವ, ಪರಸ್ಪರ ಸಹಕಾರ, ಸೇವಾ ಮನೋಭಾವ ಬೆಳೆಸುತ್ತಿವೆ ಎಂದು ತಿಳಿಸಿದರು.

ಸಮಾಜದ ನಡುವೆ ಬೆಸುಗೆ ಹಾಕುವ ಸಾಮರ್ಥ್ಯ ಸಹಕಾರಿಗಳಿಗೆ ಇದೆ ಎಂದು ನುಡಿದರು.

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಹೊಳಲ್ಕೆರೆ ಸಹಕಾರ ಸಂಘದ ಅಧ್ಯಕ್ಷೆ ಜಯಮ್ಮ ಮಾತನಾಡಿ, ಸಹಕಾರ ಆಂದೋಲನದ ವಿಶೇಷ ಸಾಮಥ್ರ್ಯಗಳನ್ನು ಪರಿಗಣಿಸಿ, ಸಮಾಜದ ಬಗ್ಗೆ ಕಾಳಜಿ ಹೊಂದಿರುವ ಜನರು ಶಿಸ್ತು ಹಾಗೂ ಪ್ರಾಮಾಣಿಕತೆಯಿಂದ ಸಹಕಾರ ಸಂಸ್ಥೆಗಳಲ್ಲಿ ತೊಡಗಿಸಿಕೊಳ್ಳಬೇಕು. ಜನಪರ ಕಾರ್ಯ ಕೈಗೊಳ್ಳಬೇಕು. ಜನರ ಅಭಿವೃದ್ಧಿಗೆ ನೆರವಾಗಬೇಕು ಎಂದು ಹೇಳಿದರು.

ಚಳ್ಳಕೆರೆ ತಾಲ್ಲೂಕಿನ ಸಹಕಾರ ಸಂಘದ ಅಧ್ಯಕ್ಷ ನಾರಾಯಣ ರೆಡ್ಡಿ ಮಾತನಾಡಿ, ಸಹಕಾರ ಸಂಘಗಳ ಆಡಳಿತ ಮಂಡಳಿಗಳ ಸದಸ್ಯರು, ಉತ್ತಮ ಆಡಳಿತ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಸಲಹೆ ಮಾಡಿದರು.

ಡಾ. ಗುರುಪಾದಪ್ಪ ನಾಗಮಾರಪಳ್ಳಿ ಸಹಾರ್ದ ತರಬೇತಿ ಸಂಸ್ಥೆಯ ನಿರ್ದೇಶಕ ಸುಬ್ರಹ್ಮಣ್ಯ ಪ್ರಭು ಸ್ವಾಗತಿಸಿದರು. ಅನಿಲ್ ಪಿ. ಮತ್ತು ಅಪ್ಪಣ್ಣ ನಿರೂಪಿಸಿದರು. ಉಪನ್ಯಾಸಕ ಎಸ್.ಜಿ. ಪಾಟೀಲ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.