ಔರಾದ್: ‘ತಾಲ್ಲೂಕಿನ ವಿಶೇಷ ಚೇತನರಿಗಾಗಿ ₹1 ಕೋಟಿ ವೆಚ್ಚದಲ್ಲಿ ವಿವಿಧ ಸೌಲಭ್ಯ ಕಲ್ಪಿಸಲಾಗಿದೆ’ ಎಂದು ಶಾಸಕ ಪ್ರಭು ಚವಾಣ್ ಹೇಳಿದರು.
ಪಟ್ಟಣದ ಶಾಸಕರ ಕಚೇರಿ ಆವರಣದಲ್ಲಿ ಸೋಮವಾರ ವಿಶೇಷ ಚೇತನರಿಗೆ ತ್ರಿಚಕ್ರ ವಾಹನ ಸೇರಿದಂತೆ ವಿವಿಧ ಸೌಲಭ್ಯ ವಿತರಿಸಿ ಅವರು ಮಾತನಾಡಿದರು.
‘ವಿಶೇಷ ಚೇತನರು ಕುಟುಂಬ ಹಾಗೂ ಸಮಾಜಕ್ಕೆ ಭಾರವಾಗಬಾರದು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಅವರಿಗಾಗಿ ವಿಶೇಷ ಯೋಜನೆ ರೂಪಿಸಿದೆ. ವಿಶೇಷ ಚೇತನರಿಗಾಗಿ ಮಂಜೂರಾದ ಮನೆ ಅವರಿಗೆ ಕೊಡಬೇಕು. ಯಾವುದೇ ಕಾರಣಕ್ಕೂ ಅವರ ಬಳಿ ಹಣ ತೆಗೆದುಕೊಳ್ಳಬಾರದು. ಇಂತಹ ಜನರಿಗೆ ನಾನು ಯಾವಾಗಲೂ ಸಹಾಯ ಮಾಡಲು ಸಿದ್ಧ’ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಫಲಾನುಭವಿ ವಿಶೇಷ ಚೇತನರಿಗೆ ಟ್ರೈ ಸೈಕಲ್, ವೀಲ್ ಚೇರ್, ಬ್ಯಾಟರಿ ಚಾಲಿತ ಸೈಕಲ್, ಅಂಧರ ಕೋಲು, ಕೃತಕ ಕಾಲು, ಕೃತ ಕೈ, ಅಂಧರ ಮೊಬೈಲ್ ಫೋನ್ ಸೇರಿದಂತೆ ಒಟ್ಟು 141 ಫಲಾನುಭವಿಗಳಿಗೆ ವಿವಿಧ ಸಾಧನ ಸಲಕರಣೆಗಳನ್ನು ವಿತರಿಸಲಾಯಿತು.
ಎಪಿಎಂಸಿ ಅಧ್ಯಕ್ಷ ಧೊಂಡಿಬಾ ನರೋಟೆ, ತಾಲ್ಲೂಕು ಪಂಚಾಯತ್ ಇಒ ಬೀರೇಂದ್ರಸಿಂಗ್ ಠಾಕೂರ್, ಮಾಣಿಕರಾವ ಪಾಟೀಲ, ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸ್ವಾಮಿದಾಸ, ಬಸವರಾಜ, ದೇವೇಂದ್ರ, ಚನ್ನಬಸಪ್ಪ ಪಾಟೀಲ ಹಾಜರಿದ್ದರು.