ಬುಧವಾರ, ಮೇ 12, 2021
24 °C
ಬಸವಕಲ್ಯಾಣ ತಾಲ್ಲೂಕಿನ ಜಲಾಶಯ, ಕೆರೆಗಳು ಭರ್ತಿ

ಕುಡಿವ ನೀರು: ಸದ್ಯಕ್ಕಿಲ್ಲ ಸಂಕಷ್ಟ

ಮಾಣಿಕ ಆರ್.ಭುರೆ Updated:

ಅಕ್ಷರ ಗಾತ್ರ : | |

Prajavani

ಬಸವಕಲ್ಯಾಣ: ಬಿಸಿಲಿನ ತಾಪ ಹೆಚ್ಚಾದಂತೆ ನೀರಿನ ಬಳಕೆಯೂ ಹೆಚ್ಚಿದ್ದು, ತಾಲ್ಲೂಕಿನ ಏಕಲೂರನಲ್ಲಿ ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ಇದೆ. ಮುಂಬರುವ ದಿನಗಳಲ್ಲಿ 10 ಗ್ರಾಮಗಳು ಸಮಸ್ಯೆ ಎದುರಿಸುವ ಸಾಧ್ಯತೆ ಇದೆ.

ಪ್ರಸಕ್ತ ಸಾಲಿನಲ್ಲಿ ಮಳೆ ಅಧಿಕ ಪ್ರಮಾಣದಲ್ಲಿ ಆಗಿರುವ ಕಾರಣ ತಾಲ್ಲೂಕಿನ ಚುಳಕಿನಾಲಾ ಜಲಾಶಯ ಹಾಗೂ ಖೇರ್ಡಾ(ಬಿ) ಹತ್ತಿರದ ಮುಲ್ಲಾಮಾರಿ ಜಲಾಶಯಗಳು ಭರ್ತಿ ಆಗಿವೆ. ಈ ಭಾಗದಲ್ಲಿಯೇ ದೊಡ್ಡದಾಗಿರುವ ತ್ರಿಪುರಾಂತ ಕೆರೆ ಒಳಗೊಂಡು ಪ್ರಮುಖ ಕೆರೆಗಳಲ್ಲಿ ಸಾಕಷ್ಟು ನೀರಿದೆ.

ಈ ಕಾರಣಗಳಿಂದ ಅರ್ಧ ಬೇಸಿಗೆ ಕಳೆದರೂ ಕೊಳವೆಬಾವಿ, ತೆರೆದ ಬಾವಿಗಳಲ್ಲಿನ ನೀರು ಬತ್ತಿಲ್ಲ. ಗ್ರಾಮಗಳಿಗೆ ನೀರು ಸರಬರಾಜು ಕೈಗೊಳ್ಳುವ ಜಲಮೂಲಗಳಲ್ಲಿಯೂ ಅಗತ್ಯವಾದಷ್ಟು ನೀರಿದೆ. ಆದ್ದರಿಂದ ಕೊಡಗಳನ್ನು ತಲೆ ಮೇಲೆ ಹೊತ್ತುಕೊಂಡು ಹೋಗುವ ಹಾಗೂ ನಳಗಳ ಎದುರಲ್ಲಿ ಕೊಡಗಳನ್ನು ಉದ್ದನೆಯ ಸಾಲುಗಳಲ್ಲಿ ಇಟ್ಟಿರುವ ದೃಶ್ಯಗಳು ಎಲ್ಲಿಯೂ ಗೋಚರಿಸುತ್ತಿಲ್ಲ.

‘ಕೋವಿಡ್ ಸಂಕಷ್ಟದ ಕಾಲದಲ್ಲಿ ಕೈಗೆ ಕೆಲಸ ಇಲ್ಲದೆ ಕೆಲವರಿಗೆ ಒಂದು ಹೊತ್ತಿನ ಊಟಕ್ಕೂ ಚಿಂತೆಯಾಗಿದೆ. ಆದರೆ, ಕುಡಿಯುವ ನೀರಿನ ಸಮಸ್ಯೆ ಇಲ್ಲವೆಂಬುದೊಂದು ಸಮಾಧಾನದ ಸಂಗತಿಯಾಗಿದೆ. ಆದರೂ, ಕೆಲವೊಂದು ಗ್ರಾಮಗಳಲ್ಲಿ ಕೆಲವರು ಬೇಕೆಂತಲೇ ಸಮಸ್ಯೆ ಸೃಷ್ಟಿಸುವ ಸಂಭವವಿದ್ದು, ಸಂಬಂಧಿತ ಅಧಿಕಾರಿಗಳು ಜಾಗೃತರಾಗಿರಬೇಕು’ ಎಂದು ಅಂಬಣ್ಣ ಕೊಹಿನೂರ, ಶಂಕರ ಮುಡಬೆ ಕೇಳಿಕೊಂಡಿದ್ದಾರೆ.

ಮಾರ್ಚ್ ತಿಂಗಳಲ್ಲಿ ಎಲ್ಲಿಯೂ ನೀರಿನ ಸಮಸ್ಯೆ ಆಗಿಲ್ಲ. ಏಪ್ರಿಲ್ ಕೊನೆಗೊಳ್ಳುವ ಹಂತದಲ್ಲಿದ್ದು, ಏಕಲೂರನಲ್ಲಿ ಮಾತ್ರ ನೀರಿನ ತತ್ವಾರ ಉಂಟಾಗಿದೆ. ಈ ಊರಲ್ಲಿ ನೀರಿನ ಲಭ್ಯತೆ ಇದ್ದರೂ ಅಸಮರ್ಪಕ ನಿರ್ವಹಣೆ ಹಾಗೂ ಕೆಲ ತಾಂತ್ರಿಕ ಕಾರಣಗಳಿಂದ ಸಮಸ್ಯೆ ಆಗಿತ್ತು. ಅದನ್ನು ಬಗೆಹರಿಸಲಾಗಿದೆ. ಇನ್ನು ಮುಂದೆ ಇಂಥ ಸಮಸ್ಯೆ ಉಂಟಾಗದಂತೆ ಕಾಳಜಿ ವಹಿಸಬೇಕು ಎಂದು ಗ್ರಾಮ ಪಂಚಾಯಿತಿಯವರಿಗೆ ಸೂಚಿಸಲಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಸಂತೋಷ ಚವಾಣ ತಿಳಿಸಿದ್ದಾರೆ.

ಸಮಸ್ಯೆ ಎಲ್ಲಿ ಆಗಬಹುದು?: ‘ಮೇ ತಿಂಗಳ ಪ್ರಖರ ಬಿಸಿಲಿನಲ್ಲಿ ಕೆಲ ಊರುಗಳಲ್ಲಿ ಸಮಸ್ಯೆ ಉಂಟಾಗಬಹುದು ಎಂದು ಅಂದಾಜಿಸಲಾಗಿದೆ. ಬಟಗೇರಾ, ಅಟ್ಟೂರ್, ಮದನೆವಾಡಿ, ಬೇಡರವಾಡಿ, ಹೊನ್ನಳ್ಳಿ, ಗದ್ಲೇಗಾಂವ(ಕೆ), ಗದ್ಲೇಗಾಂವ(ಕೆ) ತಾಂಡಾ, ಶಿರಗೂರ, ಮಿರಖಲ್, ಅಂಬೇವಾಡಿ ಈ ಹತ್ತು ಗ್ರಾಮಗಳಲ್ಲಿ ಸಮಸ್ಯೆ ಆಗಬಹುದಾಗಿದ್ದು, ಇದಕ್ಕಾಗಿ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿದೆ’ ಎಂದು ನೈರ್ಮಲ್ಯ ಹಾಗೂ ನೀರು ಸರಬರಾಜು ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಶಿವಕುಮಾರ ಬುದ್ರೆ ಹೇಳಿದ್ದಾರೆ.

ನಗರದಲ್ಲಿ ಮಂಗಳವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ ಕೂಡ ಗ್ರಾಮೀಣ ಭಾಗದಲ್ಲಿ ಹಾಗೂ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಹಾಗೇನಾದರೂ ಆದರೆ, ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ತಹಶೀಲ್ದಾರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಪೌರಾಯುಕ್ತರಿಗೆ ಎಚ್ಚರಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.