ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನತಾ ಜಲಧಾರೆ ರಥ ಯಾತ್ರೆಗೆ ಚಾಲನೆ: 22 ರಂದು ಕಮಠಾಣದಲ್ಲಿ ಬೃಹತ್ ಸಮಾವೇಶ

22 ರಂದು ಬೀದರ್ ತಾಲ್ಲೂಕಿನ ಕಮಠಾಣದಲ್ಲಿ ಬೃಹತ್ ಸಮಾವೇಶ
Last Updated 16 ಏಪ್ರಿಲ್ 2022, 13:52 IST
ಅಕ್ಷರ ಗಾತ್ರ

ಬೀದರ್‌: ಕಮಲನಗರ ತಾಲ್ಲೂಕಿನ ಸಂಗಮ ಗ್ರಾಮ ಸಮೀಪದ ದೇವಣಿ, ನಾರಂಜಾ ಹಾಗೂ ಕಾರಂಜಾ ನದಿಗಳ ತ್ರಿವೇಣಿ ಸಂಗಮದಲ್ಲಿ ಜಾತ್ಯತೀತ ಜನತಾ ದಳದ ಜನತಾ ಜಲಧಾರೆ ರಥ ಯಾತ್ರೆಗೆ ಶನಿವಾರ ಚಾಲನೆ ದೊರೆಯಿತು.

ಜೆಡಿಎಸ್ ಶಾಸಕಾಂಗ ಪಕ್ಷದ ಉಪ ನಾಯಕ ಬಂಡೆಪ್ಪ ಕಾಶೆಂಪೂರ ಹಾಗೂ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಪಾಟೀಲ ಸೋಲಪೂರ ಜಂಟಿಯಾಗಿ ರಥಯಾತ್ರೆಗೆ ಚಾಲನೆ ನೀಡಿದರು.

ಇದಕ್ಕೂ ಮೊದಲು ಸಂಗಮೇಶ್ವರ ದೇವಸ್ಥಾನದ ನದಿಗಳ ತ್ರಿವೇಣಿ ಸಂಗಮದಲ್ಲಿ ಗಂಗಾ ಪೂಜೆ ನೆರವೇರಿಸಿದರು. ಮಹಿಳೆಯರು ಹಾಗೂ ಪಕ್ಷದ ಕಾರ್ಯಕರ್ತರು ಬಿಂದಿಗೆಗಳಲ್ಲಿ ಜಲ ಸಂಗ್ರಹಿಸಿ ಮಂಗಲ ವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ದೇವಸ್ಥಾನದ ಆವರಣಕ್ಕೆ ಬಂದು ಜಲಧಾರೆ ರಥಕ್ಕೆ ಪೂಜೆ ಸಲ್ಲಿಸಿ, ಬಿಂದಿಗೆಯಲ್ಲಿ ತಂದಿದ್ದ ಜಲವನ್ನು ಜಲಧಾರೆ ರಥದಲ್ಲಿನ ಕಳಸದಲ್ಲಿ ಸುರಿದರು. ಬಳಿಕ ಸಂಗಮೇಶ್ವರನಿಗೆ ಪೂಜೆ ಸಲ್ಲಿಸಿದರು.

ಮಂದಿರದ ಸಭಾಂಗಣದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಬಂಡೆಪ್ಪ ಕಾಶೆಂಪೂರ, ‘ರಾಜ್ಯದಲ್ಲಿನ ಅನೇಕ ಜಲಮೂಲಗಳ ಬಳಕೆಯಾಗುತ್ತಿಲ್ಲ. ನಾಡಿನ ಭೂಮಿಯಲ್ಲಿ ನೀರಾವರಿ ಯೋಜನೆಗಳ ಮೂಲಕ ನೀರು ಹರಿಸಿ ಭೂಮಿ ಹಸಿರು ಮಾಡುವ ಸಂಕಲ್ಪದೊಂದಿಗೆ ಈ ಯಾತ್ರೆಯನ್ನು ಆರಂಭಿಸಲಾಗಿದೆ’ ಎಂದರು.

‘ಜನತಾ ಜಲಧಾರೆ ಯಾತ್ರೆಯ ಮೂಲಕ ಜನತಾ ಪರಿವಾರ ಅಧಿಕಾರದಲ್ಲಿದ್ದಾಗ ಜಾರಿಗೊಳಿಸಿದ ನೀರಾವರಿ ಯೋಜನೆಗಳ ಬಗ್ಗೆ ಜನತೆಗೆ ಮಾಹಿತಿ ನೀಡಲಾಗುವುದು. ಬರುವ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ತಂದರೆ ಮತ್ತೆ ಕೈಗೊಳ್ಳಲಿರುವ ಯೋಜನೆಗಳ ಬಗ್ಗೆಯೂ ಜಾಗೃತಿ ಮೂಡಿಸಲಾಗುವುದು’ ಎಂದು ತಿಳಿಸಿದರು.

‘ರಾಜ್ಯದಾದ್ಯಂತ ಹದಿನೈದು ಜನತಾ ಜಲಧಾರೆ ರಥಗಳು ಏಕಕಾಲಕ್ಕೆ ಯಾತ್ರೆ ಆರಂಭಿಸಿವೆ. ರಾಜ್ಯದ ಪವಿತ್ರ ನದಿಗಳಿಗೆ ತೆರಳಿ ಗಂಗಾ ಮಾತೆಗೆ ಪೂಜೆ ಸಲ್ಲಿಸಿ ಜಲ ಸಂಗ್ರಹ ಮಾಡಲಾಗಿದೆ. ಹೀಗೆ ಸಂಗ್ರಹಿಸಿರುವ ಜಲವನ್ನು ಜೆಡಿಎಸ್‌ನ ಕೇಂದ್ರ ಕಚೇರಿಯಲ್ಲಿರಿಸಿ 2023ರ ಸಾರ್ವತ್ರಿಕ ಚುನಾವಣೆಯ ಫಲಿತಾಂಶದ ವರೆಗೂ ಪೂಜಿಸಲಾಗುವುದು’ ಎಂದು ಹೇಳಿದರು.

‘ಜೆಡಿಎಸ್‌ ಅಧಿಕಾರದಲ್ಲಿದ್ದಾಗ ಬೀದರ್ ಜಿಲ್ಲೆಗೆ ಮಹತ್ವದ ಯೋಜನೆಗಳನ್ನು ಘೋಷಿಸಿತ್ತು. ಜಿಲ್ಲೆಯ 33 ಕೆರೆಗಳನ್ನು ತುಂಬಿಸುವುದು, ಕೆರೆ ಹೂಳೆತ್ತುವುದು, ಹೊಸ ಕೆರೆಗಳ ನಿರ್ಮಾಣ ಸೇರಿದಂತೆ ಅನೇಕ ಯೋಜನೆಗಳನ್ನು ಬಜೆಟ್ ನಲ್ಲಿ ಘೋಷಿಸಲಾಗಿತ್ತು. ಆದರೆ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಆ ಯೋಜನೆಗಳು ಸ್ಥಗಿತಗೊಂಡಿವೆ’ ಎಂದು ತಿಳಿಸಿದರು.

‘ಜನತಾ ಜಲಧಾರೆ ರಥ ಜಿಲ್ಲೆಯಾದ್ಯಂತ ಸಂಚರಿಸಲಿದೆ. ರಥ ಸಂಚರಿಸಲಿರುವ ಮಾರ್ಗಗಳಲ್ಲಿರುವ ಪಟ್ಟಣ ಹಾಗೂ ಗ್ರಾಮಗಳಲ್ಲಿ ಕಾರ್ಯಕ್ರಮ ನಡೆಸಲಾಗುವುದು. ಏಪ್ರಿಲ್ 22ರಂದು ಸಂಜೆ 5 ಗಂಟೆಗೆ ಬೀದರ್‌ ತಾಲ್ಲೂಕಿನ ಕಮಠಾಣ ಗ್ರಾಮದಲ್ಲಿ ಸಮಾವೇಶ ನಡೆಸಲಾಗುವುದು. ಮಾಜಿ ಪ್ರಧಾನಮಂತ್ರಿ ಎಚ್‌.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ಹಿರಿಯ ಮುಖಂಡರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದು ತಿಳಿಸಿದರು.


‘ಜೆಡಿಎಸ್‌ ಅಧಿಕಾರಕ್ಕೆ ಬಂದ ನಂತರ ಜಿಲ್ಲೆಯ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸದಿದ್ದರೆ ಒಂದು ಕ್ಷಣ ರಾಜಕೀಯದಲ್ಲಿ ಇರುವುದಿಲ್ಲ. ರಾಜಕೀಯದಿಂದಲೇ ನಿವೃತ್ತಿ ಪಡೆಯುವೆ’ ಎಂದು ಘೋಷಣೆ ಮಾಡಿದರು.

ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಪಾಟೀಲ ಸೋಲಪೂರ, ಮುಖಂಡ ರಮೇಶ ಡಾಕುಳಗಿ ಮೊದಲಾದವರು ಮಾತನಾಡಿದರು.

ಮುಖಂಡರಾದ ರಾಜು ಚಿಂತಾಮಣಿ, ಅಶೋಕ ಕೊಡಗೆ, ಯಸ್ರಬ್ ಅಲಿ ಖಾದ್ರಿ, ಅಶೋಕಕುಮಾರ ಕರಂಜಿ, ಅಶೋಕ ಪಾಟೀಲ ಸಂಗೋಳಗಿ, ದೇವೇಂದ್ರ ಸೋನಿ, ರಾಜು, ಸಂತೋಷ ರಾಸೂರ್, ರಾಜು ಕಡ್ಯಾಳ, ಶಿವರಾಜ್ ಹುಲಿ, ಸಂಜುರೆಡ್ಡಿ ನಿರ್ಣಾ, ಐಲಿನ್ಜಾನ್ ಮಠಪತಿ, ಮಲ್ಲಪ್ಪ ಮನ್ನಾಎಖ್ಖೆಳ್ಳಿ, ಬೊಮ್ಮಗೊಂಡ ಚಿಟ್ಟವಾಡಿ, ಶಿವಪುತ್ರ ಮಾಳಗೆ, ಅಶೋಕಕುಮಾರ ಭಾವಿಕಟ್ಟಿ, ಬಸವರಾಜ ಪಾಟೀಲ ಹಾರೋಗೇರಿ, ಮನೋಹರ ದಂಡೆ, ಅರುಣ್, ಶಿವು ಭಾವಿಕಟ್ಟಿ, ಸಂಜು ಚಿದ್ರಿ ಇದ್ದರು.

ಜೆಡಿಎಸ್‌ ಮುಖಂಡರಿಗೆ ಸನ್ಮಾನ

ಬೀದರ್‌: ಕಮಲನಗರ ತಾಲ್ಲೂಕಿನ ಸಂಗಮ ಗ್ರಾಮದಲ್ಲಿ ಆಯೋಜಿಸಿದ್ದ ಜನತಾ ಜಲಧಾರೆ ರಥ ಯಾತ್ರೆಯಲ್ಲಿ ಪಾಲ್ಗೊಳ್ಳಲು ಬಂದಿದ್ದ ಜೆಡಿಎಸ್ ಶಾಸಕಾಂಗ ಪಕ್ಷದ ಉಪ ನಾಯಕ ಬಂಡೆಪ್ಪ ಕಾಶೆಂಪೂರ ಹಾಗೂ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಪಾಟೀಲ ಅವರನ್ನು ಗ್ರಾಮಸ್ಥರು ಆತ್ಮೀಯವಾಗಿ ಸ್ವಾಗತಿಸಿ ಬರ ಮಾಡಿಕೊಂಡರು.

ಗ್ರಾಮದ ಪ್ರಮುಖರಾದ ಶಶಿಕುಮಾರ ಪಾಟೀಲ, ಶಮ್ಸುದ್ದೀನ್ ಕಲ್ಲೇಸೂರ, ರಾಜು ನೇಳಗೆ, ಪರಮೇಶ ಬಿರಾದಾರ ಅವರು ಬೃಹತ್‌ ತುಳಸಿ ಮಾಲೆಯನ್ನು ಹಾಕುವ ಮೂಲಕ ಜೆಡಿಎಸ್‌ ನಾಯಕರಿಗೆ ಭವ್ಯ ಸ್ವಾಗತ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT