ಜನವಾಡ: ಬಿತ್ತನೆ ಬೀಜ ವಿತರಣೆಗೆ ಚಾಲನೆ

ಜನವಾಡ: ರಿಯಾಯಿತಿ ದರದಲ್ಲಿ ಮುಂಗಾರು ಬಿತ್ತನೆ ಬೀಜ ವಿತರಣೆಗೆ ಬೀದರ್ ತಾಲ್ಲೂಕಿನ ಕಮಠಾಣ ಹಾಗೂ ಮನ್ನಳ್ಳಿ ಗ್ರಾಮಗಳ ರೈತ ಸಂಪರ್ಕ ಕೇಂದ್ರಗಳಲ್ಲಿ ಶಾಸಕ ಬಂಡೆಪ್ಪ ಕಾಶೆಂಪೂರ್ ಗುರುವಾರ ಚಾಲನೆ ನೀಡಿದರು.
ರೈತರಿಗೆ ಗುಣಮಟ್ಟದ ಬೀಜ ವಿತರಿಸಬೇಕು. ಸೋಯಾಬೀನ್ ಸೇರಿದಂತೆ ಯಾವುದೇ ಬೀಜದ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.
ಕೋವಿಡ್ ಕಾರಣ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು. ಒಂದೊಂದು ಊರಿನ ರೈತರಿಗೆ ಒಂದೊಂದು ಸಮಯ ನಿಗದಿ ಮಾಡಿ ಬೀಜ ವಿತರಿಸಬೇಕು ಎಂದು ತಿಳಿಸಿದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ತಾರಾಮಣಿ, ಬೀದರ್ ಸಹಾಯಕ ಕೃಷಿ ನಿರ್ದೇಶಕ ಧೂಳಪ್ಪ ಎಚ್, ಕೃಷಿ ಅಧಿಕಾರಿಗಳಾದ ಜಮಿರೊದ್ದಿನ್, ವಿಜಯಕುಮಾರ ಸಿರಂಜೆ ಇದ್ದರು.
‘ಬಿತ್ತನೆ ಬೀಜ ಖರೀದಿಗೆ ಪಹಣಿ ಕಡ್ಡಾಯವಲ್ಲ’
‘ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಖರೀದಿಗೆ ಪಹಣಿ ಕಡ್ಡಾಯವಲ್ಲ’ ಎಂದು ಶಾಸಕ ಬಂಡೆಪ್ಪ ಕಾಶೆಂಪೂರ್ ತಿಳಿಸಿದರು.
‘ಬೀಜ ಖರೀದಿಗೆ ಪಹಣಿ ಬೇಕೇ ಬೇಕು ಎಂದು ಕೃಷಿ ಅಧಿಕಾರಿಗಳು ಹೇಳುತ್ತಿದ್ದಾರೆ’ ಎಂದು ರೈತರೊಬ್ಬರು ಗಮನ ಸೆಳೆದಾಗ, ಕಾಶೆಂಪೂರ್ ಸ್ಥಳದಲ್ಲೇ ಮೊಬೈಲ್‍ನಲ್ಲಿ ಕೃಷಿ ಸಚಿವ ಬಿ.ಸಿ. ಪಾಟೀಲ ಅವರನ್ನು ಸಂಪರ್ಕಿಸಿ, ಸ್ಪಷ್ಟೀಕರಣ ಬಯಸಿದರು.
‘ಬೀಜಕ್ಕೆ ಪಹಣಿ ಕಡ್ಡಾಯ ಮಾಡಿಲ್ಲ. ರೈತರು ಆಧಾರ್ ಕಾರ್ಡ್ ಅಥವಾ ಯಾವುದಾದರೊಂದು ಗುರುತಿನ ಚೀಟಿ ತೋರಿಸಿ ಬೀಜ ಪಡೆಯಬಹುದು’ ಎಂದು ಪಾಟೀಲ ತಿಳಿಸಿದರು.
‘ಬಳಿಕ ಕೃಷಿ ಇಲಾಖೆ ಆಯುಕ್ತರ ಕಚೇರಿ ಅಧಿಕಾರಿಗಳು ಶಾಸಕರನ್ನು ಸಂಪರ್ಕಿಸಿದರು. ಬೀಜ ಖರೀದಿಗೆ ಪಹಣಿ ಕಡ್ಡಾಯಗೊಳಿಸಿಲ್ಲ. ಯಾವುದಾದರೊಂದು ಗುರುತಿನ ಚೀಟಿ ಪಡೆದು ಬೀಜ ವಿತರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇವೆ’ ಎಂದು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.