ಶನಿವಾರ, ಜೂನ್ 19, 2021
23 °C
ನಾಗೋರಾದಲ್ಲಿ ಸ್ಥಳದಲ್ಲೇ ರ್‍ಯಾಟ್ ಪರೀಕ್ಷೆ ನಡೆಸಿದ ಆರೋಗ್ಯ ಸಿಬ್ಬಂದಿ

ಮನೆಮನೆ ಆರೋಗ್ಯ ತಪಾಸಣೆಗೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಾಗೋರಾ (ಜನವಾಡ): ಕೋವಿಡ್ ಲಕ್ಷಣವುಳ್ಳವರು ತಪಾಸಣೆಯಿಂದ ಬಿಟ್ಟು ಹೋಗಬಾರದು ಎನ್ನುವ ಉದ್ದೇಶದ ಮಹತ್ವದ ಮನೆ ಮನೆ ಆರೋಗ್ಯ ತಪಾಸಣೆ ಅಭಿಯಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಬೀದರ್ ತಾಲ್ಲೂಕಿನ ನಾಗೋರಾದಲ್ಲಿ ಗುರುವಾರ ಚಾಲನೆ ನೀಡಿದರು.

ಶಾಸಕ ಬಂಡೆಪ್ಪ ಕಾಶೆಂಪೂರ್ ಅವರೊಂದಿಗೆ ಸಚಿವರು ಗ್ರಾಮದ ರವೀಂದ್ರ ರೆಡ್ಡಿ ಅವರ ಮನೆಗೆ ಭೇಟಿ ನೀಡಿದ ವೇಳೆ ನಾಗೋರಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಾಯತ್ರಿದೇವಿ ಹೊಸಮನಿ ಅವರ ಸಮ್ಮುಖದಲ್ಲಿ ಆಶಾ ಕಾರ್ಯಕರ್ತೆಯರಾದ ನಿರ್ಮಲಾ ಮತ್ತು ಪ್ರಮಿಳಾ ಅವರು, ಶ್ರೀದೇವಿ, ಓಂಕಾರ, ನಿಖಲ್ ಅವರ ದೇಹದ ತಾಪಮಾನ ಹಾಗೂ ಪಲ್ಸ್ ರೇಟ್ ಪರೀಕ್ಷಿಸಿ ಆರೋಗ್ಯ ತಪಾಸಣೆ ಮಾಡಿದರು.

ವಾರದ ಒಳಗಿನ ಅವಧಿಯ ಜ್ವರ, ಕೆಮ್ಮು, ನೆಗಡಿ, ಮೈ-ಕೈ ನೋವು, ಗಂಟಲು ನೋವು ಹಾಗೂ ದೇಹದ ತಾಪಮಾನ 38ಕ್ಕಿಂತ ಹೆಚ್ಚಿದ್ದವರಿಗೆ ರ್‍ಯಾಟ್ ಪರೀಕ್ಷೆ ಮಾಡಲಾಗುವುದು ಎಂದು ಆರೋಗ್ಯ ಕಾರ್ಯಕರ್ತರು ಸಚಿವರಿಗೆ ಮಾಹಿತಿ ನೀಡಿದರು.

ನಾಗೋರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾತೋಳಿ, ಯಾಕತಪುರ, ಘೋಡಂಪಳ್ಳಿ, ನಾಗೋರಾ ಮತ್ತು ಮಿರ್ಜಾಪುರ ಗ್ರಾಮಗಳನ್ನು ಒಳಗೊಂಡಂತೆ ಕೋವಿಡ್– 19 ಸಹಾಯವಾಣಿ ಆರಂಭಿಸಿ, ಉತ್ತಮ ಕಾರ್ಯ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ತಿಳಿಸಿದರು.

ನಾಗೋರಾದಲ್ಲಿ 2,775 ಜನಸಂಖ್ಯೆ ಪೈಕಿ ಏಳು ಜನರಿಗೆ, ಯಾಕತಪುರದಲ್ಲಿ 3,234 ಜನಸಂಖ್ಯೆ ಪೈಕಿ ಮೂವರಿಗೆ ಮತ್ತು ಸಾತೋಳಿ ಗ್ರಾಮದಲ್ಲಿ 2,240 ಜನಸಂಖ್ಯೆ ಪೈಕಿ ಮೂವರಿಗೆ ಕೋವಿಡ್ ದೃಢಪಟ್ಟಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಹೀರಾ ನಸೀಮ್ ಮಾಹಿತಿ ನೀಡಿದರು.

ನಾಗೋರಾದಲ್ಲಿ 45 ವರ್ಷ ಮೇಲ್ಪಟ್ಟ 230 ಜನ, ಟಿ. ಮಿರ್ಜಾಪುರದಲ್ಲಿ 100, ಘೋಡಂಪಳ್ಳಿಯಲ್ಲಿ 110, ಯಾಕತಪುರದಲ್ಲಿ 270 ಮತ್ತು ಸಾತೋಳಿನಲ್ಲಿ 120 ಜನಲಸಿಕೆಯ ಮೊದಲ ಡೋಸ್ ಪಡೆದುಕೊಂಡಿದ್ದಾರೆ. ಎರಡನೇ ಡೋಸ್ ಕೂಡ ಪಡೆಯುತ್ತಿ ದ್ದಾರೆ ಎಂದು ಪಿಡಿಒ ತಿಳಿಸಿದರು.

ಮನೆ ಮನೆ ಆರೋಗ್ಯ ತಪಾಸಣೆ ಬಳಿಕ ಸಚಿವರು, ಗ್ರಾಮದ ಗ್ರಂಥಾಲಯ ಪಕ್ಕದ ಜಾಗದಲ್ಲಿ ಜ್ವರ, ಕೆಮ್ಮು, ನೆಗಡಿ ಲಕ್ಷಣವಿರುವವರಿಗೆ ನಡೆಸುತ್ತಿದ್ದ ಕೋವಿಡ್ ರ್‍ಯಾಟ್ ತಪಾಸಣೆಯನ್ನು ಗಮನಿಸಿದರು.

ಟಿಎಚ್‍ಒ ಡಾ.ಸಂಗಾರೆಡ್ಡಿ, ಎಂಎಲ್‍ಎಚ್‍ವಿ ಇಮಾನ್ವೆಲ್ ಮತ್ತು ಎಎನ್‍ಎಂ ಝರೆಮ್ಮ ಅವರು ಕೆಲವರಿಗೆ ರ್‍ಯಾಟ್ ಪರೀಕ್ಷೆ ನಡೆಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್, ಬೀದರ್ ಉಪ ವಿಭಾಗಾಧಿಕಾರಿ ಗರಿಮಾ ಪನ್ವಾರ್, ಡಿವೈಎಸ್‍ಪಿ ಬಸವರಾಜ ಹೀರಾ, ತಹಶೀಲ್ದಾರ್ ಗಂಗಾದೇವಿ ಸಿ.ಎಚ್, ಡಿಎಚ್‍ಒ ಡಾ.ವಿ.ಜಿ ರೆಡ್ಡಿ, ಡಿಎಸ್‍ಒ ಡಾ. ಕೃಷ್ಣಾ ರೆಡ್ಡಿ, ವೈದ್ಯಾಧಿಕಾರಿಗಳಾದ ಡಾ.ಮಹೇಶ ಬಿರಾದಾರ, ನಾಗೋರಾ ಗ್ರಾ.ಪಂ ಅಧ್ಯಕ್ಷೆ ಪ್ರಭಾವತಿ ಪಾಟೀಲ, ಉಪಾಧ್ಯಕ್ಷ ಶಿವಕುಮಾರ ಇದ್ದರು.

ಕೋವಿಡ್ ನಿಯಂತ್ರಣಕ್ಕೆ ಅಗತ್ಯ ಕ್ರಮ

ರಾಜ್ಯ ಸರ್ಕಾರ ಕೋವಿಡ್ ನಿಯಂತ್ರಣಕ್ಕೆ ಎಲ್ಲ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಹೇಳಿದರು.

ಬೀದರ್ ತಾಲ್ಲೂಕಿನ ನಾಗೋರಾದಲ್ಲಿ ನಡೆದ ಮನೆ ಮನೆ ಆರೋಗ್ಯ ತಪಾಸಣೆ ಅಭಿಯಾನದ ಚಾಲನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮನೆ ಮನೆಗೆ ಭೇಟಿ ನೀಡಿ ಆರೋಗ್ಯ ತಪಾಸಣೆ ನಡೆಸುವ ಅಭಿಯಾನದಲ್ಲಿ ಆಶಾ, ಅಂಗನವಾಡಿ ಹಾಗೂ ಇತರ ಆರೋಗ್ಯ ಕಾರ್ಯಕರ್ತರು ಸಕ್ರಿಯವಾಗಿ ಭಾಗವಹಿಸಬೇಕು ಎಂದು ಸೂಚಿಸಿದರು.

ಕೆಮ್ಮು, ನೆಗಡಿ, ಜ್ವರ, ಮೈ ಕೈ ನೋವು ಹಾಗೂ ಇತರ ಅನಾರೋಗ್ಯ ಲಕ್ಷಣ ಇರುವವರು ಸ್ವಯಂ ಪ್ರೇರಣೆಯಿಂದ ರ್‍ಯಾಟ್ ಪರೀಕ್ಷೆ ಮಾಡಿಸಿಕೊಳ್ಳಲು ಮುಂದೆ ಬರಬೇಕು ಎಂದು ಸಾರ್ವಜನಿಕರಿಗೆ ಮನವಿ ಮಾಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.