ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ಪ್ರಮುಖ ಹೆದ್ದಾರಿ ಕಾಮಗಾರಿಗಳಿಗೆ ಚಾಲನೆ

ವಿಡಿಯೊ ಕಾನ್ಫರೆನ್ಸ್‌ ಮೂಲಕ ಕಾರ್ಯಕ್ರಮ ವೀಕ್ಷಣೆ
Last Updated 19 ಡಿಸೆಂಬರ್ 2020, 14:25 IST
ಅಕ್ಷರ ಗಾತ್ರ

ಬೀದರ್: ಔರಾದ್-ಬೀದರ್‌ 45 ಕಿ.ಮೀ ಹಾಗೂ ಬೀದರ್-ಹುಮನಾಬಾದ್ 47 ಕಿ.ಮೀ ರಾಷ್ಟ್ರೀಯ ಹೆದ್ದಾರಿ, ನೌಬಾದ್ ರೈಲ್ವೆ ಗೇಟ್ ಸಮೀ‍ಪದ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗಳಿಗೆ ಕೇಂದ್ರ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್‌ ಗಡ್ಕರಿ ಶನಿವಾರ ದೆಹಲಿಯಿಂದ ವಿಡಿಯೊ ಕಾನ್ಫರೆನ್ಸ್‌ ಮೂಲಕ ಚಾಲನೆ ನೀಡಿದರು.

ನಂತರ ಮಾತನಾಡಿದ ಸಚಿವರು ‘ಕರ್ನಾಟಕದಲ್ಲಿ 1,197 ಕಿ.ಮೀ ಉದ್ದದ ₹ 10,904 ಕೋಟಿ ವೆಚ್ಚದ 33 ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಲಾಗಿದೆ. ರಾಜ್ಯದಲ್ಲಿ ಪೂರ್ಣಗೊಂಡ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಾಗಿದೆ’ ಎಂದು ಹೇಳಿದರು.

‘₹586 ಕೋಟಿ ವೆಚ್ಚದಲ್ಲಿ ನಿರ್ಮಿಸಿದ 220 ಕಿ.ಮೀ ಉದ್ದದ ವಿಜಯಪುರ–ಕಲಬುರ್ಗಿ– ಹುಮನಾಬಾದ್ ವರೆಗಿನ ಹೆದ್ದಾರಿ ಯನ್ನು ರಾಷ್ಟ್ರಕ್ಕೆ ಸಮರ್ಪಿಸಲಾಗಿದೆ’ ಎಂದು ಹೇಳಿದರಾದರೂ ಔರಾದ್-ಬೀದರ್‌, ಬೀದರ್-ಹುಮನಾಬಾದ್ ರಾಷ್ಟ್ರೀಯ ಹೆದ್ದಾರಿಗಳ ಬಗ್ಗೆ ಉಲ್ಲೇಖಿಸಲಿಲ್ಲ. ರಾಜ್ಯದ ಪ್ರಮುಖ ಯೋಜನೆಗಳ ಕುರಿತು ಮಾತ್ರ ಪ್ರಸ್ತಾಪ ಮಾಡಿದರು.

ರಾಜ್ಯದಲ್ಲಿ ಕೈಗೊಳ್ಳಲಾಗುವ ಯೋಜನೆಗಳನ್ನು ವಿವರಿಸಿದ ಅವರು, ‘ಕಾಲಮಿತಿಯೊಳಗೆ ಯೋಜನೆಗಳು ಪೂರ್ಣಗೊಳ್ಳಬೇಕು. ಕೇಂದ್ರದಿಂದ ಹಂತ ಹಂತವಾಗಿ ಹಣ ಬಿಡಗಡೆ ಮಾಡಲಾಗುವುದು. ಕೇಂದ್ರದ ಅನುದಾನ ಬಳಕೆ ಮಾಡಿದ ಬಗ್ಗೆ ರಾಜ್ಯ ಸರ್ಕಾರ ಪ್ರಮಾಣಪತ್ರ ಕೊಟ್ಟರೆ ತಕ್ಷಣ ಇನ್ನುಳಿದ ಹಣವನ್ನೂ ಬಿಡುಗಡೆ ಮಾಡಲಾಗುವುದು’ ಎಂದು ಸ್ಪಷ್ಟಪಡಿಸಿದರು.

₹725 ಕೋಟಿ ವೆಚ್ಚದ ಮೂರು ಕಾಮಗಾರಿಗಳಿಗೆ ಚಾಲನೆ
‘ಬೀದರ್‌ ಜಿಲ್ಲೆಯಲ್ಲಿ ಒಟ್ಟು ₹725 ಕೋಟಿ ವೆಚ್ಚದ ಔರಾದ್-ಬೀದರ್‌ 45 ಕಿ.ಮೀ ಹಾಗೂ ಬೀದರ್-ಹುಮನಾಬಾದ್ 47 ಕಿ.ಮೀ ರಾಷ್ಟ್ರೀಯ ಹೆದ್ದಾರಿ ಹಾಗೂ ನೌಬಾದ್ ರೈಲ್ವೆ ಗೇಟ್ ಸಮೀ‍ಪದ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರು ಚಾಲನೆ ನೀಡಿದ್ದಾರೆ’ ಎಂದು ಸಂಸದ ಭಗವಂತ ಖೂಬಾ ತಿಳಿಸಿದರು.

‘ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಕೃತಜ್ಞತೆಗಳು. ಜಿಲ್ಲೆಯಲ್ಲಿ 13 ಕಡೆಗಳಲ್ಲಿ ಎಲ್‌ಇಡಿ ಟಿವಿ ಅಳವಡಿಸಿ ಕಾರ್ಯಕ್ರಮ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕರ್ತರು ಹಾಗೂ ಸಾರ್ವಜನಿಕರು ಕಾರ್ಯಕ್ರಮ ಕಣ್ತುಂಬಿಕೊಂಡಿದ್ದಾರೆ’ ಎಂದು ಹೇಳಿದರು.

‘ಸಂಚಾರ ಒತ್ತಡ ಕಡಿಮೆ ಮಾಡಲು ಹುಮನಾಬಾದ್‌ನಲ್ಲಿ ರಿಂಗ್‌ ರಸ್ತೆ ನಿರ್ಮಾಣ ಮಾಡುವ ಯೋಜನೆ ಇದೆ. ಶೀಘ್ರದಲ್ಲೇ ಟೆಂಡರ್ ಕರೆದು ಕಾಮಗಾರಿ ಆರಂಭಿಸಲಾಗುವುದು’ ಎಂದು ತಿಳಿಸಿದರು.

ಬೀದರ್‌ನ ಜಿಲ್ಲಾಧಿಕಾರಿ ಕಚೇರಿಯ ವಿಡಿಯೊ ಕಾನ್ಫರೆನ್ಸ್‌ ಹಾಲ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಸಿಒಪಿ ಪುರತ್ಡೊ, ವಿಧಾನ ಪರಿಷತ್‌ ಸದಸ್ಯರಾದ ರಘುನಾಥ ಮಲ್ಕಾಪುರೆ, ಅರವಿಂದಕುಮಾರ ಅರಳಿ, ರಾಜ್ಯ ಕೈಗಾರಿಕೆ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ.ಶೈಲೇಂದ್ರ ಬೆಲ್ದಾಳೆ, ಬುಡಾ ಅಧ್ಯಕ್ಷ ಬಾಬುವಾಲಿ, ಎನ್‌ಎಸ್‌ಎಸ್‌ಕೆ ಅಧ್ಯಕ್ಷ ಡಿ.ಕೆ.ಸಿದ್ರಾಮ, ಬಿಜೆಪಿ ಮುಖಂಡರಾದ ಈಶ್ವರಸಿಂಗ್‌ ಠಾಕೂರ್, ಗುರುನಾಥ ಕೊಳ್ಳೂರ, ರೇವಣಸಿದ್ದಪ್ಪ ಜಲಾದೆ, ರೌಫೋದ್ದಿನ್‌ ಕಚೇರಿವಾಲೆ ಇದ್ದರು.

ಜಿಲ್ಲಾಧಿಕಾರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರಲಿಲ್ಲ. ಚುನಾವಣೆ ಕಾರ್ಯದಲ್ಲಿ ತೊಡಗಿಸಿ ಕೊಂಡಿದ್ದರು. ನಗರದ ತೋಟಗಾರಿಕೆ ಇಲಾಖೆಯ ಕಚೇರಿ ಮುಂಭಾಗದಲ್ಲಿ ಕಾರ್ಯಕ್ರಮದ ವೀಕ್ಷಣೆಗೆ ಎಲ್‌ಇಡಿ ಟಿವಿ ಅಳವಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT