ಭಾನುವಾರ, 3 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಾಹನ ಚಾಲಕರಿಗೆ ಕೊಲೆಗಡುಕರ ಕಾನೂನು’

ಕೇಂದ್ರ ಸರ್ಕಾರದ ಹೊಸ ಕಾನೂನು ವಿರುದ್ಧ ಬೀದಿಗಿಳಿದ ಚಾಲಕರು
Published 3 ಜನವರಿ 2024, 13:50 IST
Last Updated 3 ಜನವರಿ 2024, 13:50 IST
ಅಕ್ಷರ ಗಾತ್ರ

ಬೀದರ್‌: ಅಪಘಾತ ಸಂಭವಿಸಿದ ಬಳಿಕ ಪರಾರಿಯಾಗುವ ಪ್ರಕರಣಗಳಿಗೆ ಕಠಿಣ ಶಿಕ್ಷೆ ವಿಧಿಸುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಜಾರಿಗೆ ತರಲಿರುವ ಹೊಸ ಕಾನೂನು ವಿರೋಧಿಸಿ ವಾಹನ ಮಾಲೀಕರು ನಗರದಲ್ಲಿ ಬುಧವಾರ ಪ್ರತಿಭಟನಾ ರ್‍ಯಾಲಿ ನಡೆಸಿದರು.

ಕರ್ನಾಟಕ ಚಾಲಕರ ಒಕ್ಕೂಟ, ಬೀದರ್‌ ಜಿಲ್ಲಾ ಲಾರಿ ಚಾಲಕರು ಮತ್ತು ಮಜ್ದೂರ್‌ ಅಸೋಸಿಯೇಷನ್‌ ಪದಾಧಿಕಾರಿಗಳು ನಗರದ ಗಾಂಧಿ ಗಂಜ್‌ನಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ರ್‍ಯಾಲಿ ನಡೆಸಿದರು. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಹೆಸರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದರು.

ಕೇಂದ್ರ ಸರ್ಕಾರ ಅವೈಜ್ಞಾನಿಕವಾದ ಕಾನೂನು ಜಾರಿಗೆ ತರಲು ಹೊರಟಿದೆ. ಸಂಸತ್ತಿನಲ್ಲಿ ಒಪ್ಪಿಗೆ ಪಡೆದು, ರಾಷ್ಟ್ರಪತಿಯವರ ಅಂಕಿತಕ್ಕೆ ಕಳಿಸಲಾಗಿದೆ. ಚಾಲಕನಿಂದ ಅಪಘಾತ ಸಂಭವಿಸಿದರೆ ಗಾಯಗೊಂಡ ವ್ಯಕ್ತಿಯನ್ನು ರಸ್ತೆಯಲ್ಲಿ ಬಿಟ್ಟು ಹೋಗುವಂತಿಲ್ಲ. ಖುದ್ದು ಸ್ಥಳದಲ್ಲಿದ್ದು ಆಸ್ಪತ್ರೆಗೆ ಸಾಗಿಸಬೇಕು. ಮಹಜರು ಮಾಡುವಾಗ ಚಾಲಕ ಸ್ಥಳದಲ್ಲಿರಬೇಕು. ಇಲ್ಲವಾದಲ್ಲಿ ಚಾಲಕನಿಗೆ 10 ವರ್ಷ ಜೈಲು ಶಿಕ್ಷೆ. ₹10 ಲಕ್ಷ ದಂಡ ಹಾಕಲಾಗುತ್ತದೆ. ಅಪಘಾತ ಸಂಭವಿಸಿದ ಸ್ಥಳದಲ್ಲಿ ಚಾಲಕನಿದ್ದರೆ ಗಾಯಗೊಂಡ ವ್ಯಕ್ತಿಯ ಸಂಬಂಧಿಕರು, ಸಾರ್ವಜನಿಕರು ದಾಳಿ ನಡೆಸಬಹುದು. ಈ ರೀತಿಯ ಘಟನೆಗಳಲ್ಲಿ ಎಷ್ಟೋ ಚಾಲಕರು ಜೀವ ಕಳೆದುಕೊಂಡಿದ್ದಾರೆ ಎಂದು ಮನವಿ ಪತ್ರದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರ್ಕಾರ ತರಲಿರುವ ಹೊಸ ಕಾಯ್ದೆ ಚಾಲಕರಿಗೆ ವಿರುದ್ಧವಾದುದು. ಕೊಲೆಗಡುಕರಿಗೆ ವಿಧಿಸುವಂತಹ ಕಾನೂನು ಚಾಲಕರಿಗೆ ವಿಧಿಸಲು ಹೊರಟಿದೆ. ಇದರ ವಿರುದ್ಧ ಈಗಾಗಲೇ ದೇಶವ್ಯಾಪಿ ಪ್ರತಿಭಟನೆಗಳು ನಡೆಯುತ್ತಿವೆ. ಸಾವಿರಾರು ಚಾಲಕರು ಕೆಲಸ ಬಿಟ್ಟು ಮನೆಯಲ್ಲಿ ಕೂತಿದ್ದಾರೆ. ಕೇಂದ್ರ ಸರ್ಕಾರದ ಅವೈಜ್ಞಾನಿಕ ಕಾನೂನನ್ನು ರಾಜ್ಯ ಸರ್ಕಾರ ಜಾರಿಗೆ ತರಬಾರದು. ಚಾಲಕರ ಹಿತ ಕಾಪಾಡಬೇಕು ಎಂದು ಒತ್ತಾಯಿಸಿದ್ದಾರೆ.

ಕರ್ನಾಟಕ ಚಾಲಕರ ಒಕ್ಕೂಟ ಬೀದರ್‌ ಜಿಲ್ಲಾ ಘಟಕದ ಅಧ್ಯಕ್ಷ ಹುಲ್ಲೇಪ್ಪಾ ಡುಮೇ ಸೇರಿದಂತೆ ಎಲ್ಲರೂ ಸಂಘಟನೆಗಳ ಪ್ರಮುಖರು, ವಿವಿಧ ವಾಹನಗಳ ಚಾಲಕರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT