ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಲ್ಲಿ ರಾಷ್ಟ್ರಗಳಲ್ಲಿದ್ದಾರೆ ಈ ಗ್ರಾಮದ 1500 ಜನ

ಅಲ್ಲಿಯೂ–ಇಲ್ಲಿಯೂ ಸಮಸ್ಯೆ ಇಲ್ಲ: ಆದರೂ ಗ್ರಾಮಸ್ಥರಲ್ಲಿ ತಪ್ಪಿಲ್ಲ ಆತಂಕ
Last Updated 16 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ಬೀದರ್‌: ಚಿಟಗುಪ್ಪ ತಾಲ್ಲೂಕಿನ ಕೊಡಂಬಲ್ ಸುಮಾರು ಒಂದು ಸಾವಿರ ಮನೆ ಮತ್ತು 5 ಸಾವಿರ ಜನಸಂಖ್ಯೆ ಹೊಂದಿರುವಗ್ರಾಮ. ಇಲ್ಲಿಯ ಪ್ರತಿ ಕುಟುಂಬದ ಸದಸ್ಯರು ಕೊಲ್ಲಿ ರಾಷ್ಟ್ರಗಳಲ್ಲಿ ಇದ್ದು, ಪ್ರಸ್ತುತ 1,500ಕ್ಕೂ ಹೆಚ್ಚು ಜನ ವಿದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ.

ಗ್ರಾಮದ ಯುವಕರು ಸೌದಿಅರೇಬಿಯಾ, ಅಬುದಾಬಿ, ದುಬೈ, ಕುವೈತ್ ಹಾಗೂ ಓಮನ್‌ನಲ್ಲಿ ಪೇಂಟರ್, ಬ್ಲಾಸ್ಟರ್, ಪ್ಲಂಬರ್ ಹಾಗೂ ಹೆಲ್ಪರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪ್ರತಿ ಎರಡು ಅಥವಾ ಮೂರು ತಿಂಗಳಿಗೆ ಒಮ್ಮೆ ಇಬ್ಬರು, ಮೂವರು ಗ್ರಾಮಕ್ಕೆ ಬಂದು ಹೋಗುತ್ತಾರೆ. ಆದರೆ, ಈ ಬಾರಿ ಸೌದಿಅರೇಬಿಯಾದಿಂದ ಯಾರೊಬ್ಬರೂ ಊರಿಗೆ ಮರಳಿಲ್ಲ. ಕುವೈತ್‌ನಲ್ಲಿ ಕೆಲಸ ಮಾಡುತ್ತಿದ್ದ ಒಬ್ಬರು ಮಾತ್ರ ಊರಿಗೆ ಬಂದಿದ್ದಾರೆ.

‘ತ್ವರಿತ ವೀಸಾ ದೊರೆತ ಕಾರಣ ಎಂಟು ದಿನಗಳ ಹಿಂದೆಯೇ ಕುವೈತ್‌ನಿಂದ ಗ್ರಾಮಕ್ಕೆ ಮರಳಿದ್ದೇನೆ. ಮುಂಬೈ ವಿಮಾನ ನಿಲ್ದಾಣದಲ್ಲಿ ನನ್ನ ವಿವರ ಪಡೆದಿದ್ದಾರೆ. ಕುವೈತ್‌ನಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿಲ್ಲ. ಆದರೂ ಅಲ್ಲಿ ಕಟ್ಟೆಚ್ಚರ ವಹಿಸಲಾಗಿದೆ’ ಎಂದು ರಮೇಶ ಭೋಸಗಿ ಹೇಳಿದರು.

‘ಸೌದಿಅರೇಬಿಯಾದಲ್ಲಿ ಕೆಲ ಕಂಪನಿಗಳು ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಒಂದು ವಾರ ರಜೆ ಘೋಷಿಸಿವೆ. ಕಾರ್ಮಿಕರು ವಾಸವಾಗಿರುವ ಸ್ಥಳಗಳಲ್ಲಿ ಊಟೋಪಚಾರದ ವ್ಯವಸ್ಥೆಯನ್ನೂ ಮಾಡಿವೆ’ ಎಂದು ತಿಳಿಸಿದರು.

‘20 ವರ್ಷಗಳ ಹಿಂದೆ ಗ್ರಾಮದ ಬಳಿ ಇದ್ದ ಕೊಡಂಬಲ್ ಸಕ್ಕರೆ ಕಾರ್ಖಾನೆ ಆರ್ಥಿಕ ಸಮಸ್ಯೆಯಿಂದಾಗಿ ಬಾಗಿಲು ಮುಚ್ಚಿದ ಮೇಲೆ ಬಹಳಷ್ಟು ಜನ ನಿರುದ್ಯೋಗಿಗಳಾದರು. ಕೆಲಸಕ್ಕೆ ಎಲ್ಲಿಯಾದರೂ ಗುಳೆ ಹೋಗಲು ಸಿದ್ಧರಿದ್ದರು. ಆಗ ಒಂದಿಬ್ಬರು ವಿದೇಶಕ್ಕೆ ಹೋಗಿ ಬಂದಿದ್ದರು. ಇಲ್ಲಿಯವರನ್ನೂ ಕರೆದುಕೊಂಡು ಹೋಗಿದ್ದರು. ನಂತರ ಒಬ್ಬರ ಮುಖಾಂತರ ಇನ್ನೊಬ್ಬರು ಹೀಗೆ ಇಂದು 1500ಕ್ಕೂ ಹೆಚ್ಚು ಜನರು ಕೊಲ್ಲಿ ರಾಷ್ಟ್ರಗಳಲ್ಲಿ ಸಣ್ಣಪುಟ್ಟಕೆಲಸ ಮಾಡುತ್ತಿದ್ದಾರೆ. ಇವರೆಲ್ಲ ಅಲ್ಲಿ ಸುರಕ್ಷಿತವಾಗಿದ್ದು, ಯಾವುದೇ ಸಮಸ್ಯೆ ಇಲ್ಲ’ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಬೀರಪ್ಪ ಮಾರ್ತಂಡ್‌,ಎಲ್.ಐ.ಸಿ. ಏಜೆಂಟ್ ಮುಕುಂದ ಸಂಗೊಳಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT