ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಟಗುಪ್ಪ | ಪರಿಸರ ಸ್ನೇಹಿ ಗಣೇಶ ಮೂರ್ತಿಗೆ ಹೆಚ್ಚಿದ ಬೇಡಿಕೆ

Published 17 ಸೆಪ್ಟೆಂಬರ್ 2023, 23:30 IST
Last Updated 17 ಸೆಪ್ಟೆಂಬರ್ 2023, 23:30 IST
ಅಕ್ಷರ ಗಾತ್ರ

ಚಿಟಗುಪ್ಪ: ಶ್ರಾವಣ ಮುಗಿದು ಭಾದ್ರಪದ ಆರಂಭವಾಗುತ್ತಿದ್ದಂತೆ ಗಣೇಶ ಚತುರ್ಥಿ ಆಚರಣೆಯ ಸಂಬ್ರಮ ಎಲ್ಲೆಡೆ ಕಂಡು ಬರುತ್ತದೆ.

ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌(ಪಿಒಪಿ) ಗಣೇಶ ಮೂರ್ತಿಗಳು ನಿಷೇಧದ ನಡುವೆಯೂ ತಾಲ್ಲೂಕು ಜಿಲ್ಲೆಯ ಎಲ್ಲೆಡೆ ರಾರಾಜಿಸುತ್ತಿವೆ. ಕೆಲವೆಡೆ ಮಣ್ಣಿನ ಗಣಪನ ನಡುವೆಯೂ ಪಿಒಪಿ ಗಣೇಶನ ಮೂರ್ತಿಗಳು ಕಾಣುತ್ತವೆ.

ಏಳು ವರ್ಷಗಳಿಂದ ದೇಶಿಯ ಮಣ್ಣಿನಿಂದ ಗಣೇಶ ಮೂರ್ತಿಗಳನ್ನು ಸಿದ್ಧಪಡಿಸಿ, ಮಾರಾಟಮಾಡಿಕೊಂಡು ಹೊಟ್ಟೆತುಂಬಿಸಿಕೊಳ್ಳುತ್ತಿರುವ ತಾಲ್ಲೂಕಿನ ರಾಮಪುರ್‌ ಗ್ರಾಮದ ಕಾಶಿನಾಥ ಶಾಂತಪ್ಪ ಗಿರಗಿರಿ ಅವರು ಭಕ್ತರ ಪ್ರೋತ್ಸಾಹದ ನಿರೀಕ್ಷೆಯಲ್ಲಿದ್ದಾರೆ.

ಚತುರ್ಥಿಗೂ ಮುನ್ನ ನಾಲ್ಕು ತಿಂಗಳಿನಿಂದ ನಿರಂತರವಾಗಿ ದಿನಕ್ಕೆ ಕನಿಷ್ಠ ನಾಲ್ಕು ಮಂದಿ ಮಹಿಳೆಯರನ್ನು ಕೆಲಸಕ್ಕೆ ಸೇರಿಸಿಕೊಂಡು ಬಗೆ ಬಗೆಯ ಗಣೇಶ ಮೂರ್ತಿಗಳನ್ನು ಸಿದ್ಧಪಡಿಸುತ್ತಿದ್ದಾರೆ. ಕೆಲಸಗಾರರಿಗೆ ದಿನಕ್ಕೆ ₹ 300 ಸಂಬಳ ನೀಡುತ್ತಿದ್ದಾರೆ.

ಜೇಡಿಮಣ್ಣಿನಿಂದ ಸಿದ್ಧವಾದ ಪರಿಸರ ಸ್ನೇಹಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಹೆಚ್ಚುತ್ತಿದೆ. ನಮ್ಮಲ್ಲಿನ ಗಣಪನ ವಿಗ್ರಹಗಳು ಬಣ್ಣ ಲೇಪನವಿಲ್ಲದೇ ಮಾರಾಟವಾಗುತ್ತವೆ
ಕಾಶೀನಾಥ ಶಾಂತಪ್ಪ, ಗಣೇಶ ವಿಗ್ರಹ ತಯಾರಕ

‘ನಮ್ಮದೇ ಹೊಲದಲ್ಲಿಯ ಕೆಂಪು ಮಣ್ಣು ಚಕ್ಕಡಿಯಲ್ಲಿ ತುಂಬಿಕೊಂಡು ಬಂದು ಅದನ್ನು ಚೆನ್ನಾಗಿ ಒಣಗಿಸಿಕೊಳ್ಳುತ್ತೇವೆ. ಮತ್ತೆ ಕುಟ್ಟಿ ಪುಡಿ ಮಾಡಿ, ಅದರ ಜತೆ ಹತ್ತಿ ಬೆರೆಸಿ, ಮತ್ತೊಮ್ಮೆ ಕುಟ್ಟುತ್ತೇವೆ. ಮಣ್ಣು ಜಿಗುಟು ಹಂತಕ್ಕೆ ಬರಲು ತಿಂಗಳುಗಳು ಗತಿಸಲಿವೆ. ಮಣ್ಣು ನುಣುಪಾದ ಬಳಿಕ ಗಣಪ ಮೂರ್ತಿ ತಯಾರಿಸಲು ಆರಂಭಿಸುತ್ತೇವೆ. ಒಂದೂವರೆ ಅಡಿ ಎತ್ತರದ ಗಣಪ ಮೂರ್ತಿ ತಯಾರಿಕೆಗೆ ಕನಿಷ್ಠ 15 ದಿನ ಬೇಕು. ನಂತರ ಒಣಗಲು ಬಿಡುತ್ತೇವೆ. ಬಿರುಕನ್ನು ಸರಿಪಡಿಸಿ, ವಾಟರ್‌ ಪೇಯಿಂಟ್‌ ಬಳಿಯುತ್ತೇವೆ’ ಎಂದು ಕಾಶಿನಾಥ ಮಾಹಿತಿ ನೀಡಿದರು.

ಸೋಲಾಪುರದಲ್ಲಿ ಕೆಲದಿನಗಳ ಕಾಲ ಮೂರ್ತಿ ತಯಾರಿಕೆ ತರಬೇತಿ ಪಡೆದು ನಂತರ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿ ತಯಾರಿಕೆಯಲ್ಲಿಯೇ ದಿನಗಳನ್ನು ಕಳೆದಿದ್ದೇನೆ. ಈ ಕಾಯಕದಿಂದಲೇ ಕುಟುಂಬ ನಿರ್ವಹಣೆ ಮಾಡುತ್ತಿದ್ದೇನೆ. ಆದರೆ, ನಮ್ಮ ಶ್ರಮಕ್ಕೆ ತಕ್ಕಂತೆ ಗ್ರಾಹಕರು ಬೆಲೆ ಕೊಡುವುದಿಲ್ಲ, ಚೌಕಾಸಿ ಮಾಡುತ್ತಾರೆ. ಒಂದು ಪುಟ್ಟ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿ ಸಿದ್ಧಪಡಿಸಲು ಕನಿಷ್ಠ ₹ 60ರಿಂದ 100 ವರೆಗೂ ಖರ್ಚು ಬರುತ್ತದೆ ಆದರೆ ಮಾರುಕಟ್ಟೆಯಲ್ಲಿ ಆಕರ್ಷಕ ರಾಸಾಯನಿಕ ಬಣ್ಣಗಳಿಂಧ ಸಿಂಗರಿಸಿ ಮಾರಾಟ ಮಾಡುವ ಗಣೇಶ ಮೂರ್ತಿಗಳಿಗೆ ಜನ ಆಸಕ್ತಿ ತೋರಿಸುತ್ತಿರುವುದು ಬೇಸರದ ಸಂಗತಿಯಾಗಿದೆ ಎಂದು ಕಾಶಿನಾಥ ನುಡಿಯುತ್ತಾರೆ.

ಕಾಶಿನಾಥ ಶಾಂತಪ್ಪ ಅವರ ಕೈಚಳಕದಲ್ಲಿ ರೂಪುಗೊಳ್ಳುತ್ತಿರುವ ಗಣೇಶ ಮೂರ್ತಿ
ಕಾಶಿನಾಥ ಶಾಂತಪ್ಪ ಅವರ ಕೈಚಳಕದಲ್ಲಿ ರೂಪುಗೊಳ್ಳುತ್ತಿರುವ ಗಣೇಶ ಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT