ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿಕ್ಷಣದೊಂದಿಗೆ ಸಂಸ್ಕಾರ, ರಾಷ್ಟ್ರಪ್ರೇಮ ಮುಖ್ಯ: ಬಸವಲಿಂಗ ಪಟ್ಟದ್ದೇವರು

Published 13 ಫೆಬ್ರುವರಿ 2024, 15:24 IST
Last Updated 13 ಫೆಬ್ರುವರಿ 2024, 15:24 IST
ಅಕ್ಷರ ಗಾತ್ರ

ಬೀದರ್‌: ‘ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರವೂ ಬಹಳ ಮುಖ್ಯವಾದುದು. ಆ ಮೂಲಕ ರಾಷ್ಟ್ರಪ್ರೇಮ ಕೂಡ ಬೆಳೆಸಬೇಕು’ ಎಂದು ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಹೇಳಿದರು.

ನಗರದ ಡಾ. ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗಮಂದಿರದಲ್ಲಿ ಮಂಗಳವಾರ ಏರ್ಪಡಿಸಿದ್ದ ಕೆ.ಪಿ. ವಿದ್ಯಾ ಸಂಸ್ಥೆಯ ವಾರ್ಷಿಕ ಸ್ನೇಹ ಸಮ್ಮೇಳನ, ಸಾಂಸ್ಕೃತಿಕ ಉತ್ಸವದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಶಿಕ್ಷಣ ಕ್ಷೇತ್ರ ಬಹಳ ಪೈಪೋಟಿಯಿಂದ ಬೆಳೆಯುತ್ತಿದೆ. ಆದರೆ, ಸಂಸ್ಕಾರವಿಲ್ಲದ ಶಿಕ್ಷಣ ವ್ಯರ್ಥ. ಮಕ್ಕಳಲ್ಲಿ ಸಂಸ್ಕಾರ ಬೆಳೆಸಲು ಹೆಚ್ಚಿನ ಒತ್ತು ಕೊಡಬೇಕಿದೆ. ಇದರಿಂದ ಅವರು ಉತ್ತಮ ಪ್ರಜೆಗಳಾಗಲು ಸಾಧ್ಯ ಎಂದರು.

ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು ಮಾತನಾಡಿ, ಶಿಕ್ಷಣ ಸಂಸ್ಥೆಗಳು ಮಕ್ಕಳ ಉಜ್ವಲ ಭವಿಷ್ಯ ಬೆಳಗಿಸುವ ಕೆಲಸ ಮಾಡಬೇಕು. ಶಿಕ್ಷಕರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ ಎಂದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಸೋಮನಾಥ ಪಾಟೀಲ ಹುಡಗಿ ಉದ್ಘಾಟಿಸಿ, ಬಡವರ ಮಕ್ಕಳಿಂದ ರಾಷ್ಟ್ರ ಬೆಳಗುವ ಕಾರ್ಯ ನಡೆಯುತ್ತದೆ. ಇದಕ್ಕೆ ತಾಜಾ ಉದಾಹರಣೆ ಚಹಾ ಮಾರುವವರ ಮಗ ನರೇಂದ್ರ ಮೋದಿ ದೇಶದ ಪ್ರಧಾನಿಯಾಗಿದ್ದು. ಆದಿವಾಸಿ ಜನಾಂಗಕ್ಕೆ ಸೇರಿದ ದ್ರೌಪದಿ ಮುರ್ಮು ರಾಷ್ಟ್ರಪತಿಯಾಗಿದ್ದಾರೆ. ಇದು ಶಿಕ್ಷಣದ ಶಕ್ತಿ ಎಂದರು.

ಕೆ.ಪಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಬಾಬು ವಾಲಿ ಮಾತನಾಡಿ, ಸಂಸ್ಥೆಯಲ್ಲಿ ಬಡ ವಿದ್ಯಾರ್ಥಿಗಳ ಉತ್ತಮ ಭವಿಷ್ಯ ನಿರ್ಮಾಣ ಹಾಗೂ ವಿದ್ಯಾರ್ಥಿಗಳಲ್ಲಿ ರಾಷ್ಟ್ರ ಪ್ರೇಮ ಬೆಳೆಸುವುದಕ್ಕೆ ಹೆಚ್ಚಿನ ಒತ್ತು ಕೊಡಲಾಗುತ್ತಿದೆ ಎಂದು ಹೇಳಿದರು. 

ಕೆ.ಪಿ ವಿದ್ಯಾ ಸಂಸ್ಥೆಯಲ್ಲಿ ನಿರ್ಮಿಸಿದ ಸಭಾಂಗಣಕ್ಕೆ ವಚನ ಮಂಟಪವೆಂದು ಹೆಸರಿಡಲಾಯಿತು. ಅಟಲ್ ಫೌಂಡೇಶನ್‌ ಅಧ್ಯಕ್ಷ ಗುರುನಾಥ ಕೊಳ್ಳೂರು ಬಸವೇಶ್ವರ ಪೂಜೆ ನೆರವೇರಿಸಿದರು. ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಮಲ್ಲಪ್ಪ ಬೋತಗಿ, ಸುಧೀರ ರಾಗಾ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಶಿವರಾಜ ಕಣಜಿ ಅವರನ್ನು ಸತ್ಕರಿಸಲಾಯಿತು. 

ಕನ್ನಿಕಾ ಪರಮೇಶ್ವರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಮುಖ್ಯಶಿಕ್ಷಕ ವಿಜಯಕುಮಾರ ಪಾಟೀಲ ಯರನಳ್ಳಿ, ಮುಖಂಡರಾದ ಅನಂತ ಬಿರಾದಾರ, ಆನಂದ ದೇವಪ್ಪ, ಜೆಡಿಎಸ್ ಜಿಲ್ಲಾಧ್ಯಕ್ಷ ರಮೇಶ ಪಾಟೀಲ ಸೋಲಪುರ, ಅಂಬೇಡ್ಕರ್ ಸೇನೆಯ ಜಿಲ್ಲಾಧ್ಯಕ್ಷ ಅನಿಲಕುಮಾರ ಬೇಲ್ದಾರ, ಕೆಪಿ ವಿದ್ಯಾ ಸಂಸ್ಥೆಯ ಉಪಾಧ್ಯಕ್ಷ ಮಲ್ಲಯ್ಯ ಸ್ವಾಮಿ, ಸದಸ್ಯರಾದ ಸಂಗಶೆಟ್ಟಿ ಹಲಬರ್ಗೆ, ಬಾಬುರಾವ ಕಾರಬಾರಿ, ರಾಜಶೇಖರ ನಾಗಮೂರ್ತಿ, ಉದ್ಯಮಿ ಜಯರಾಜ ಖಂಡ್ರೆ, ರಮೇಶ ಬಿರಾದಾರ, ಪ್ರಭುಶೆಟ್ಟಿ ಬುಳ್ಳಾ, ವಿಜಯಲಕ್ಷ್ಮಿ ಕೌಟಗೆ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT