ಗುರುವಾರ , ಸೆಪ್ಟೆಂಬರ್ 29, 2022
26 °C
ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ಚುನಾವಣೆ

ನಿರ್ದೇಶಕರಾಗಿ ಉಮಾಕಾಂತ ನಾಗಮಾರಪಳ್ಳಿ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಜಿಲ್ಲೆಯ ಸಹಕಾರ ಧುರೀಣ, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷರೂ ಆಗಿರುವ ಉಮಾಕಾಂತ ನಾಗಮಾರಪಳ್ಳಿ ಅವರು ಬೆಂಗಳೂರಿನ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳದ ನಿರ್ದೇಶಕರಾಗಿ ಚುನಾಯಿತರಾಗಿದ್ದಾರೆ.

28 ಮತಗಳ ಪೈಕಿ 19 ಮತಗಳನ್ನು ಪಡೆದು, ಅತಿ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದಾರೆ.

ಹಾಲಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷರೂ ಆಗಿರುವ ಉಮಾಕಾಂತ ನಾಗಮಾರಪಳ್ಳಿ ಅವರು, ಇದೀಗ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳದ ನಿರ್ದೇಶಕರಾಗಿ ಆಯ್ಕೆಯಾಗುವ ಮೂಲಕ ಗಮನ ಸೆಳೆದಿದ್ದಾರೆ. ಜತೆಗೆ, ಅಪೆಕ್ಸ್ ಬ್ಯಾಂಕ್‍ನ ನಿರ್ದೇಶಕರಾಗಿ, ಕರ್ನಾಟಕ ಸಹಕಾರ ಮಹಾ ಮಂಡಳದ ನಿರ್ದೇಶಕರಾಗಿ, ಕರ್ನಾಟಕ ವಸತಿ ಮಹಾ ಮಂಡಳದ ನಿರ್ದೇಶಕರಾಗಿ ಹಾಗೂ ಕರ್ನಾಟಕ ಗ್ರಾಹಕರ ಮಹಾ ಮಂಡಳದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಕ್ಕೆ ಈ ಹಿಂದೆ ದಿ. ಡಾ. ಗುರುಪಾದಪ್ಪ ನಾಗಮಾರಪಳ್ಳಿ ಅವರು ಅಧ್ಯಕ್ಷರಾಗಿ, ರಾಜ್ಯದಲ್ಲಿ ಅತ್ಯುತ್ತಮ ಕೆಲಸ ಮಾಡಿದ್ದರು. ಇದೀಗ ಅದೇ ಸಂಸ್ಥೆಗೆ ಅವರ ಪುತ್ರ ಉಮಾಕಾಂತ ನಾಗಮಾರಪಳ್ಳಿ ಅವರು ಆಯ್ಕೆಯಾಗಿದ್ದಾರೆ. ತಂದೆಯ ದಾರಿಯಲ್ಲೇ ಸಾಗುತ್ತಿದ್ದಾರೆ. ರೈತರಿಗೆ ಸಕಾಲದಲ್ಲಿ ರಸಗೊಬ್ಬರ ವಿತರಣೆ ಸೇರಿದಂತೆ ಅಗತ್ಯ ಎಲ್ಲ ರೀತಿಯ ಅನುಕೂಲ ಮಾಡಿಕೊಡಲಾಗುತ್ತದೆ ಎಂದು ಉಮಾಕಾಂತ ನಾಗಮಾರಪಳ್ಳಿ ಪ್ರತಿಕ್ರಿಯಿಸಿದ್ದಾರೆ.

ಡಿಸಿಸಿ ಬ್ಯಾಂಕ್ ಮುನ್ನಡೆಸುತ್ತಿರುವ ಉಮಾಕಾಂತ ನಾಗಮಾರಪಳ್ಳಿ ಅವರು ಇದೀಗ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿಗೆ ನಿರ್ದೇಶಕರಾಗಿ ಆಯ್ಕೆಯಾಗಿದ್ದು, ಜಿಲ್ಲೆಯ ರೈತರಿಗೆ ಅನುಕೂಲವಾಗಲಿದೆ ಎಂದು ಬೀದರ್ ಜಿಲ್ಲಾ ಸಹಕಾರ ಯೂನಿಯನ್‍ನ ಅಧ್ಯಕ್ಷ ಪರಮೇಶ್ವರ ಮುಗಟೆ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ವಿಜಯಕುಮಾರ ಎಸ್. ಪಾಟೀಲ ಗಾದಗಿ, ಬಸವರಾಜ ಹೆಬ್ಬಾಳೆ, ಸೂರಜಸಿಂಗ್ ಹಜಾರಿ ತಿಳಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.