ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನ ರಕ್ಷಕರು, ವಿರೋಧಿಗಳ ನಡುವಿನ ಸಮರ: ಗುಲಾಂ ನಬಿ

'ದೇಶದ ಜನರ ಪಾಲಿಗೆ ಮಹತ್ವದ ಚುನಾವಣೆ'
Last Updated 20 ಏಪ್ರಿಲ್ 2019, 14:13 IST
ಅಕ್ಷರ ಗಾತ್ರ

ಬೀದರ್‌: ‘ಈ ಬಾರಿಯ ಲೋಕಸಭೆ ಚುನಾವಣೆಯು ಕೇವಲ ರಾಜಕೀಯ ಹೋರಾಟ ಅಲ್ಲ. ಸಂವಿಧಾನ ರಕ್ಷಕರು ಹಾಗೂ ಸಂವಿಧಾನ ವಿರೋಧಿಗಳ ನಡುವಿನ ಸಮರವಾಗಿದೆ’ ಎಂದು ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಗುಲಾಂ ನಬಿ ಆಜಾದ್‌ ಹೇಳಿದರು.

‘ಎಲ್ಲ ಧರ್ಮದವರಿಗೂ ಒಂದೊಂದು ಧರ್ಮ ಗ್ರಂಥ ಇದೆ. ಮನುಷ್ಯನಿಗೆ ಸನ್ಮಾರ್ಗ ತೋರುವುದು ಧರ್ಮಗ್ರಂಥ. ಪಕ್ಷಗಳಿಗೆ ರಾಜಕೀಯ ಮಾರ್ಗ ತೋರಿಸುವುದು ಸಂವಿಧಾನ. ಆದರೆ ಬಿಜೆಪಿಗೆ ಸಂವಿಧಾನದ ಮೇಲೆ ನಂಬಿಕೆ ಇಲ್ಲ. ಹೀಗಾಗಿ ಧರ್ಮವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ’ ಎಂದು ಟೀಕಿಸಿದರು.

‘ದೇಶದ ಪ್ರತಿಯೊಬ್ಬ ವ್ಯಕ್ತಿಗೆ ಸಂವಿಧಾನ ರಕ್ಷಣೆ ಒದಗಿಸಿದೆ. ಬಿಜೆಪಿಗೆ ಧರ್ಮ ನಿರಪೇಕ್ಷತೆಯ ಬಗೆಗೆ ವಿಶ್ವಾಸ ಇಲ್ಲ. ಹೀಗಾಗಿ ಸಂವಿಧಾನ ರಕ್ಷಣೆ ಹಾಗೂ ಸಂವಿಧಾನ ವಿರೋಧಿಗಳ ನಡುವೆ ಹೋರಾಟ ನಡೆದಿದೆ’ ಎಂದು ತಿಳಿಸಿದರು.

‘ಪ್ರತಿಪಕ್ಷಗಳ ಮುಖಂಡರನ್ನು ದಮನಗೊಳಿಸುವುದೇ ನರೇಂದ್ರ ಮೋದಿ ಅವರ ಮುಖ್ಯ ಉದ್ದೇಶವಾಗಿದೆ. ಅಂತೆಯೇ ಅವರು ದೇಶದ ವಿವಿಧ ರಾಜ್ಯಗಳ ಮಾಜಿ ಮುಖ್ಯಮಂತ್ರಿಗಳು ಹಾಗೂ ಅವರ ಸಂಬಂಧಿಗಳ ಮನೆಗಳ ಮೇಲೆ ಸಿಬಿಐ ದಾಳಿ ನಡೆಸಿದ್ದಾರೆ’ ಎಂದು ಗಂಭೀರ ಆರೋಪ ಮಾಡಿದರು.

‘ರಾಷ್ಟ್ರದಲ್ಲಿ ಬಿಜೆಪಿ ಒಂದೇ ಪ್ರಾಮಾಣಿಕರ ಪಕ್ಷ, ಇನ್ನುಳಿದ ರಾಜಕೀಯ ಪಕ್ಷಗಳಲ್ಲಿ ಪ್ರಾಮಾಣಿಕರೇ ಇಲ್ಲ ಎನ್ನುವ ರೀತಿಯಲ್ಲಿ ಮೋದಿ ಅವರು ಮಾತನಾಡುತ್ತಿದ್ದಾರೆ. ಸಣ್ಣಪುಟ್ಟ ವಿಷಯಗಳಿಗೆ ವಿವಾದರೂಪ ನೀಡುವುದು ಬಿಜೆಪಿಯ ಚಾಳಿಯಾಗಿದೆ’ ಎಂದು ಕಟುಕಿದರು.

‘ಇಂದು ಮಾಧ್ಯಮಗಳ ಸ್ಥಿತಿ ಗಂಭೀರವಾಗಿದೆ. ಒಂದು ಪಕ್ಷದ ವಿರುದ್ಧ ಸುದ್ದಿಗಳನ್ನು ಪ್ರಕಟಿಸದಂತೆ ಕೆಲ ಪತ್ರಿಕಾ ಸಂಸ್ಥೆಗಳ ಮೇಲೆ ಒತ್ತಡ ಹೇರಲಾಗುತ್ತಿದೆ. ಮೋದಿ ಹಗಲಲ್ಲಿ ಚಂದ್ರ, ರಾತ್ರಿ ವೇಳೆ ಸೂರ್ಯ ಕಾಣುತ್ತಿದ್ದಾನೆ ಎಂದರೆ ಅವರ ಬೆಂಬಲಿಗರು ಅದನ್ನೇ ಹೇಳುತ್ತಿದ್ದಾರೆ’ ಎಂದು ಟೀಕಿಸಿದರು.

‘ನರೇಂದ್ರ ಮೋದಿ ಸರ್ಕಾರ ಐದು ವರ್ಷಗಳ ಅವಧಿಯಲ್ಲಿ ಫ್ಯಾಕ್ಟರಿ ನಿರ್ಮಿಸಿ ದೇಶದ ಯುವಕರಿಗೆ ಉದ್ಯೋಗ ಕೊಡದಿದ್ದರೂ ಪಕ್ಷದ ಫ್ಯಾಕ್ಟರಿಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಸುಳ್ಳು ಹೇಳುವವರನ್ನು ಸೃಷ್ಟಿಸಿದೆ’ ಎಂದು ಆರೋಪಿಸಿದರು.


‘ಬಿಜೆಪಿಯಲ್ಲಿದ್ದ ಹಿರಿಯ ಮುಖಂಡರನ್ನು ಮೂಲೆ ಗುಂಪು ಮಾಡಲಾಗಿದೆ. ಸಂಸತ್ತಿನಲ್ಲಿ ಪ್ರತಿಪಕ್ಷದ ಸದಸ್ಯರಿಗೆ ಸಮರ್ಪಕ ಉತ್ತರ ನೀಡದ ಹಾಗೂ ಒಮ್ಮೆಯೂ ಪತ್ರಿಕಾಗೋಷ್ಠಿ ನಡೆಸದ ವಿಶ್ವದ ಏಕೈಕ ಪ್ರಧಾನಿ ನರೇಂದ್ರ ಮೋದಿ’ ಎಂದರು.

‘ಮೋದಿ ಅವರು ಪರೋಕ್ಷವಾಗಿ ತಮ್ಮನ್ನು ಸಾಮ್ರಾಟ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಸಾಮ್ರಾಟ ಅಲ್ಲ. ಕಾಶ್ಮೀರದಲ್ಲಿ ನಾಲ್ಕು ವರ್ಷಗಳಲ್ಲಿ ಅನೇಕ ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ. ಉಗ್ರವಾದಿಗಳು ನುಸುಳಿ ಬಂದಿದ್ದಾರೆ. ಪ್ರವಾಸೋದ್ಯಮ ನೆಲ ಕಚ್ಚಿದೆ’ ಎಂದು ಆರೋಪ ಮಾಡಿದರು.

‘ದೇಶದಲ್ಲಿ ಸಮಾನ ಮನಸ್ಕ ರಾಜಕೀಯ ಪಕ್ಷಗಳು ಒಂದೆಡೆ ಸೇರಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಮರು ಪ್ರತಿಷ್ಠಾಪಿಸಲು ಸಿದ್ಧತೆ ನಡೆಸಿವೆ. ಅದಕ್ಕೆ ಈ ಚುನಾವಣೆಯಲ್ಲಿ ಯಶ ದೊರೆಯಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಗೃಹ ಸಚಿವ ಎಂ.ಬಿ.ಪಾಟೀಲ, ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ, ಗಣಿ ಮತ್ತು ಭೂ ವಿಜ್ಞಾನ ಸಚಿವ ರಾಜಶೇಖರ ಪಾಟೀಲ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ರಹೀಂಖಾನ್‌, ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಪಾಟೀಲ ಸೋಲಪುರ, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಪ್ರಧಾನ ಕಾರ್ಯದರ್ಶಿ ದತ್ತಾತ್ರಿ ಮೂಲಗೆ, ಬಸವರಾಜ ಬುಳ್ಳಾ, ಚಂದ್ರಾಸಿಂಗ್, ಆನಂದ ದೇವಪ್ಪ, ಅಶೋಕ ಕೋಡಗೆ, ವಿಜಯಕುಮಾರ ಬರೂರ, ಡಿ.ಕೆ.ಸಂಜುಕುಮಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT