ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕ್‌ಗಳಲ್ಲಿ ಕನ್ನಡ ಬಳಕೆಗೆ ಒತ್ತುಕೊಡಿ

ಜಿಲ್ಲೆಯ ಬ್ಯಾಂಕ್‌ ಅಧಿಕಾರಿಗಳ ಸಭೆಯಲ್ಲಿ ನಾಗಾಭರಣ ಮನವಿ
Last Updated 5 ಜನವರಿ 2021, 15:39 IST
ಅಕ್ಷರ ಗಾತ್ರ

ಬೀದರ್: ‘ಬ್ಯಾಂಕ್‌ಗಳಲ್ಲಿ ಕನ್ನಡ ಬಳಕೆಗೆ ಒತ್ತು ಕೊಡಬೇಕು’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಬ್ಯಾಂಕ್‌ ಅಧಿಕಾರಿಗಳಿಗೆ ಹೇಳಿದರು.

ನಗರದ ಗುಂಪಾ ರಸ್ತೆ ಸಮೀಪದ ಲೀಡ್ ಬ್ಯಾಂಕ್ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಕನ್ನಡ ಬಳಕೆಗಾಗಿ ನಡೆದ ಬ್ಯಾಂಕಿನ ಅಧಿಕಾರಿಗಳ ಮತ್ತು ಸಿಬ್ಬಂದಿ ಸಭೆಯಲ್ಲಿ ಅವರು ಮಾತನಾಡಿದರು.

‘ಬ್ಯಾಂಕಿಗೆ ಬರುವ ಗ್ರಾಹಕರೊಂದಿಗೆ ಕನ್ನಡದಲ್ಲಿಯೇ ವ್ಯವಹರಿಸಬೇಕು. ಬ್ಯಾಂಕ್‌ಗಳಲ್ಲಿ ಕನ್ನಡದ ಫಲಕಗಳನ್ನು ತೂಗು ಹಾಕಿದರೆ ಸಾಲದು. ಕನ್ನಡ ನಮ್ಮ ಮಾತೃ ಭಾಷೆ, ಜೀವದ ಭಾಷೆ. ಅದನ್ನು ಬಳಸುವುದು ಉಳಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ’ ಎಂದು ತಿಳಿಸಿದರು.

‘ಬೀದರನ ಶಾಹಿನ್ ಕಾಲೇಜು, ಜ್ಞಾನ ಸುಧಾ ಕಾಲೇಜುಗಳಲ್ಲಿ ಕನ್ನಡ ಕಲಿಕಾ ಕೇಂದ್ರಗಳನ್ನು ಆರಂಭಿಸಲಾಗಿದೆ. ಬೇರೆ ರಾಜ್ಯಗಳಿಂದ ಇಲ್ಲಿಗೆ ಬಂದ ಕನ್ನಡರೇತರರು ಕನ್ನಡ ಕಲಿಯಬೇಕು. ಆನ್ ಲೈನ ಮೂಲಕವೂ ಕನ್ನಡ ಕಲಿಯಲು ಅವಕಾಶ ಇದೆ. ಎರಡು ತಿಂಗಳಲ್ಲಿ ಕನ್ನಡ ಕಲಿತು ಕನ್ನಡ ವಾತಾವರಣ ನಿರ್ಮಿಸಬೇಕು’ ಎಂದು ಮನವಿ ಮಾಡಿದರು.

ಲೀಡ್ ಬ್ಯಾಂಕಿನ ಮ್ಯಾನೇಜರ್ ಬಿ.ಎಂ ಕಮತಗಿ ಮಾತನಾಡಿ, ’ಬಿಡುವಿನ ವೇಳೆಯಲ್ಲಿ ಕನ್ನಡ ಕಲಿಕಾ ಕೇಂದ್ರಕ್ಕೆ ಹೋಗಿ ಕನ್ನಡ ಕಲಿಯಬೇಕು. ಛಲದಿಂದ ಕನ್ನಡದಲ್ಲಿ ಮಾತನಾಡಲು ಮುಂದಾಗಬೇಕು’ ಎಂದರು.

ಕರ್ನಾಟಕ ಗ್ರಾಮೀಣ ಬ್ಯಾಂಕಿನ ಪ್ರಾದೇಶಿಕ ವ್ಯವಸ್ಥಾಪಕ ಎಂ.ವಿ.ಭಾಗ್ವತ್ ಮಾತನಾಡಿ, ‘ಬೇರೆ ಬೇರೆ ಭಾಷಿಕರು ಬಂದರೆ ಅವರನ್ನು ಸ್ವಾಗತಿಸೋಣ. ಆದರೆ ಕನ್ನಡಕ್ಕೆ ಆದ್ಯತೆ ಕೊಡೋಣ’ ಎಂದು ಹೇಳಿದರು.

ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ವಿಜಯಕುಮಾರ ಸೋನಾರೆ ಮಾತನಾಡಿ, ‘ನಿಮಗೆ ಕೈ ಜೋಡಿಸುತ್ತೇವೆ. ಕನ್ನಡ ಕಲಿಯಿರಿ. ನಿಮಗೆ ಸಹಾಯ ಮಾಡುತ್ತೇವೆ. ಈ ಮೂಲಕ ಬೀದರ್ ಜಿಲ್ಲೆಯನ್ನು ಮಾದರಿ ಮಾಡೋಣ’ ಎಂದು ಮನವಿ ಮಾಡಿದರು.
ನಬಾರ್ಡನ ರಾಮರಾವ್, ಯುವ ಮುಖಂಡ ಶ್ರೀಮಂತ ಸಪಾಟೆ, ಬ್ಯಾಂಕ್‌ಗಳ ಮ್ಯಾನೇಜರ್ ಮತ್ತು ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT