ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಹತ್ಯೆ ನಿಷೇಧ ಕಾಯ್ದೆ ರದ್ದುಪಡಿಸಿ: ನಬಿ ಖುರೇಶಿ

ಜಮಿಯತ್ ಉಲ್ ಖುರೇಶ್ ಸಂಘಟನೆ ಆಗ್ರಹ
Last Updated 7 ಜನವರಿ 2021, 15:37 IST
ಅಕ್ಷರ ಗಾತ್ರ

ಬೀದರ್: ರಾಜ್ಯದಲ್ಲಿ ನೂತನವಾಗಿ ಜಾರಿಗೆ ತಂದಿರುವ ಗೋಹತ್ಯೆ ನಿಷೇಧ ಕಾಯ್ದೆಯನ್ನು ರದ್ದುಪಡಿಸಬೇಕು ಎಂದು ಆಲ್ ಇಂಡಿಯಾ ಜಮಿಯತ್ ಉಲ್ ಖುರೇಶ್ ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷ ನಬಿ ಖುರೇಶಿ ಆಗ್ರಹಿಸಿದ್ದಾರೆ.

ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಈ ಕುರಿತು ಮನವಿಪತ್ರ ಸಲ್ಲಿಸಿದ್ದಾರೆ.

ಗೋ ಹತ್ಯೆ ನಿಷೇಧ ಕಾಯ್ದೆ ರಾಜ್ಯದಲ್ಲಿ 1964 ರಿಂದಲೂ ಜಾರಿಯಲ್ಲಿ ಇದೆ. ಆದರೂ, ಹಲವು ಹೊಸ ಅಂಶಗಳನ್ನು ಸೇರಿಸಿ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ– 2020 ಅನ್ನು ಜಾರಿಗೆ ತಂದು, ಜಾನುವಾರು ಕ್ಷೇತ್ರದಲ್ಲಿ ತೊಡಗಿಸಿಕೊಂಡವರನ್ನು ಪೇಚಿಗೆ ಸಿಲುಕಿಸಲಾಗಿದೆ ಎಂದು ಹೇಳಿದ್ದಾರೆ.

ಕಾಯ್ದೆಯಲ್ಲಿನ ಕೆಲ ಅಂಶಗಳ ಕಾರಣ ಬದುಕಿಗೆ ಜಾನುವಾರುಗಳನ್ನೇ ಅವಲಂಬಿಸಿರುವ ಖುರೇಶ ಸಮುದಾಯ ಸಂಕಷ್ಟಕ್ಕೆ ಒಳಗಾಗಿದೆ. ಮೊದಲೇ ಕೊರೊನಾದಿಂದಾಗಿ ತೊಂದರೆಯಲ್ಲಿರುವ ಸಮುದಾಯಕ್ಕೆ ಹೊಸ ಕಾಯ್ದೆಯಿಂದ ಬರಸಿಡಿಲು ಬಡಿದಂತಾಗಿದೆ ಎಂದು ತಿಳಿಸಿದ್ದಾರೆ.

ಸಮುದಾಯ ಹಿಂದಿನಿಂದಲೂ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಪಾಲಿಸಿಕೊಂಡೇ ಬಂದಿದೆ. ಆದರೆ, ಅಧಿಕ ಪ್ರಮಾಣದ ದಂಡ, ಜೈಲು ಶಿಕ್ಷೆ ಹಾಗೂ ಇತರ ಕಾರಣಗಳಿಂದ ಹೊಸ ಕಾಯ್ದೆಯ ದುರುಪಯೋಗದ ಸಾಧ್ಯತೆ ಹೆಚ್ಚಾಗಿದೆ. ಜಾನುವಾರು ಮಾಂಸ ಮಾರಾಟ ವ್ಯವಹಾರವೂ ಪಾತಾಳಕ್ಕೆ ಕುಸಿಯಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಬೆಳೆ ಕೈಕೊಟ್ಟಾಗ ನೆರವಿಗೆ ಬರಲಿ ಎನ್ನುವ ಕಾರಣಕ್ಕೆ ರೈತರು ಕೃಷಿ ಜತೆಗೆ ಪಶುಪಾಲನೆಯನ್ನೂ ಕೈಗೊಳ್ಳುತ್ತಾರೆ. ಆಕಳು, ಎಮ್ಮೆ, ಎತ್ತು, ಹೋರಿ ಮೊದಲಾದವುಗಳನ್ನು ಸಾಕುತ್ತಾರೆ. ಆಕಳು, ಎಮ್ಮೆಯ ಹಾಲು ಮಾರಾಟ ಮಾಡಿ ಆದಾಯ ಪಡೆಯುತ್ತಾರೆ. ಅವುಗಳ ಸಗಣಿಯನ್ನು ಹೊಲಕ್ಕೆ ಗೊಬ್ಬರವಾಗಿ ಬಳಸಿಕೊಳ್ಳುತ್ತಾರೆ. ವಯಸ್ಸಾಗಿ, ಅವುಗಳಿಂದ ಯಾವುದೇ ಕೆಲಸ ಆಗದ ಸಂದರ್ಭದಲ್ಲಿ ಮಾರಾಟ ಮಾಡುತ್ತಾರೆ. ಆದರೆ, ಹೊಸ ಕಾಯ್ದೆಯಿಂದ ಯಾರೂ ವಯಸ್ಸಾದ ಜಾನುವಾರು ಖರೀದಿಗೆ ಮುಂದೆ ಬರದೆ ರೈತರು ಕೂಡ ತೊಂದರೆ ಅನುಭವಿಸಲಿದ್ದಾರೆ ಎಂದು ಹೇಳಿದ್ದಾರೆ.

ಆಕಳು, ಎಮ್ಮೆ ಸೇರಿದಂತೆ ಜಾನುವಾರುಗಳು ತನ್ನ ಜೀವಿತ ಅವಧಿ ಹಾಗೂ ಮರಣದ ನಂತರವೂ ಜನರಿಗೆ ಹಲವು ರೀತಿಯಲ್ಲಿ ಉಪಕಾರಿಯಾಗಿವೆ. ಜಾನುವಾರುಗಳ ಕೊಬ್ಬಿನಾಂಶ, ಎಲುಬು, ಚರ್ಮ ಎಲ್ಲವೂ ವಿವಿಧ ಕೆಲಸಗಳಿಗೆ ಬಳಕೆಯಾಗುತ್ತದೆ. ಕೊಬ್ಬಿನಾಂಶದಿಂದ ಸಾಬೂನು, ಎಲುಬುಗಳಿಂದ ಗೊಬ್ಬರ, ಮುಖಕ್ಕೆ ಬಳಸುವ ಪೌಡರ್, ಚಪ್ಪಲಿ ಮೊದಲಾದವುಗಳನ್ನು ತಯಾರಿಸಲಾಗುತ್ತದೆ. ಹೊಸ ಕಾಯ್ದೆಯು ಈ ಎಲ್ಲ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡವರ ಮೇಲೆ ಪ್ರತ್ಯಕ್ಷ ಇಲ್ಲವೇ ಪರೋಕ್ಷ ಪರಿಣಾಮ ಉಂಟು ಮಾಡಲಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT