ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿತ್ತನೆ ಬೀಜ ವಿತರಣೆಗೆ ಹೆಚ್ಚುವರಿ ಕೇಂದ್ರ ಸ್ಥಾಪಿಸಿ

ಬಸವಕಲ್ಯಾಣ: ಶಾಸಕ ಶರಣು ಸಲಗರ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ ಸರಣಿ ಸಭೆ
Last Updated 20 ಮೇ 2021, 4:30 IST
ಅಕ್ಷರ ಗಾತ್ರ

ಬಸವಕಲ್ಯಾಣ: ‘ಮುಂಗಾರು ಹಂಗಾಮಿನ ಬಿತ್ತನೆ ಬೀಜ ಖರೀದಿಗೆ ರೈತರಿಗೆ ತೊಂದರೆ ಆಗದಿರಲು ತಾಲ್ಲೂಕಿನ ಸಸ್ತಾಪುರ, ಬಟಗೇರಾ, ಗದ್ಲೇಗಾಂವ್‌ಗಳಲ್ಲಿ ಹೆಚ್ಚುವರಿ ಬೀಜ ವಿತರಣಾ ಕೇಂದ್ರಗಳನ್ನು ಆರಂಭಿಸಬೇಕು’ ಎಂದು ಶಾಸಕ ಶರಣು ಸಲಗರ ಸಲಹೆ ನೀಡಿದರು.

ಕೃಷಿ ಇಲಾಖೆ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ರೈತ ಸಂಪರ್ಕ ಕೇಂದ್ರಗಳ ಮುಂಗಾರು ಹಂಗಾಮಿನ ಬಿತ್ತನೆ ಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.

‘ಬೇಡಿಕೆಗೆ ಅನುಗುಣವಾಗಿ ಹಾಗೂ ಸಕಾಲಕ್ಕೆ ಬಿತ್ತನೆ ಬೀಜಗಳನ್ನು ಪೂರೈಸಬೇಕು. ಹೋಬಳಿ ಮಟ್ಟದ 6 ರೈತ ಸಂಪರ್ಕ ಕೇಂದ್ರಗಳಲ್ಲಿ ಹಾಗೂ 25 ಇತರೆ ಬೀಜ ವಿತರಣಾ ಕೇಂದ್ರಗಳಲ್ಲಿ ಶೀಘ್ರದಲ್ಲಿ ಬಿತ್ತನೆ ಬೀಜಗಳ ದಾಸ್ತಾನು ಕೈಗೊಳ್ಳಬೇಕು’ ಎಂದು ಸೂಚಿಸಿದರು.

‘ಬೀಜ ಹಾಗೂ ರಸಗೊಬ್ಬರ ನಿಗದಿತ ಬೆಲೆಗೆ ಮಾತ್ರ ಸಿಗಬೇಕು. ರೈತ ಸಂಪರ್ಕ ಕೇಂದ್ರಗಳಲ್ಲಿ ಹಾಗೂ ಖಾಸಗಿ ಮಾರಾಟ ಮಳಿಗೆಗಳಲ್ಲಿ ಕಳಪೆ ಮಟ್ಟದ ಬೀಜ ದೊರಕದಂತೆ ಕ್ರಮ ತೆಗೆದುಕೊಳ್ಳಬೇಕು’ ಎಂದು ಅವರು ಹೇಳಿದರು.

ಸಹಾಯಕ ಕೃಷಿ ನಿರ್ದೇಶಕ ವೀರಶೆಟ್ಟಿ ರಾಠೋಡ ಮಾತನಾಡಿ, ‘ರೈತರು ಬಿತ್ತನೆಗೆ ಮನೆ ಬೀಜ ಸಹ ಉಪಯೋಗಿಸಬಹುದು. ಮನೆಗಳಲ್ಲಿಯೇ ಕೆಲ ಬೀಜಗಳನ್ನು ಮಣ್ಣಲ್ಲಿ ಹೂತಿಟ್ಟು ಶೇ 70-75 ರಷ್ಟು ಮೊಳಕೆಯೊಡೆದರೆ ಅವುಗಳನ್ನು ಬಿತ್ತನೆಗೆ ಉಪಯೋಗಿಸಬಹುದು. ರೈತ ಸಂಪರ್ಕ ಕೇಂದ್ರದಿಂದ ಖರೀದಿಸಿದ ಬೀಜಗಳನ್ನು ಕೂಡ ಹೀಗೆಯೇ ಪರೀಕ್ಷಿಸಿ ಬಿತ್ತನೆ ಕೈಗೊಳ್ಳಬೇಕು. ಶೇ 35ರಷ್ಟು ಕಡಿಮೆ ಮೊಳಕೆ ಬಂದರೆ ಬೀಜ ಹಿಂದಿರುಗಿಸಲು ಕೇಳಿಕೊಳ್ಳಲಾಗಿದೆ’ ಎಂದರು.

‘ಸೋಯಾಬಿನ್ ಬೀಜಕ್ಕೆ ಪಾಕೇಟ್‌ಗೆ ₹2,370 ಬೆಲೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ₹1995 ಬೆಲೆ ನಿಗದಿಗೊಳಿಸಲಾಗಿದೆ. ಈ ಸಲದ ಸೋಯಾಬಿನ್ ಬೀಜಗಳು ಕಳಪೆ ಆಗಿರುವ ಸಾಧ್ಯತೆ ಇದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಆದ್ದರಿಂದ ಇತರೆ ಬೆಳೆಗಳನ್ನು ಬೆಳೆಯುವುದಕ್ಕೆ ಪ್ರಯತ್ನಿಸಬೇಕು. ತಾಲ್ಲೂಕಿನಲ್ಲಿ ಒಟ್ಟು 20 ಸಾವಿರ ಕ್ವಿಂಟಲ್ ಬಿತ್ತನೆ ಬೀಜದ ಅಗತ್ಯವಿದ್ದು 6333 ಕ್ವಿಂಟಲ್ ಪೂರೈಕೆ ಆಗಿದೆ. ಜೂನ್ ಮೊದಲ ವಾರದಲ್ಲಿ ಸಮರ್ಪಕ ಮಳೆ ಬಂದಾಗ ಮಾತ್ರ ಬೀಜ ವಿತರಿಸಲು ಆರಂಭಿಸಲಾಗುತ್ತದೆ’ ಎಂದರು.

ತಹಶೀಲ್ದಾರ್ ಸಾವಿತ್ರಿ ಸಲಗರ, ಕೃಷಿ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಲ್ಲೂಕು ಹಸೀರೀಕರಣಕ್ಕೆ ಸಲಹೆ

ಸಾಮಾಜಿಕ ವಲಯ ಅರಣ್ಯ ಇಲಾಖೆಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಶಾಸಕ ಶರಣು ಸಲಗರ ಮಾತನಾಡಿ ತಾಲ್ಲೂಕು ಹಸೀರೀಕರಣಕ್ಕೆ ಯೋಜನೆ ರೂಪಿಸಬೇಕು ಎಂದು ಸಲಹೆ ನೀಡಿದರು.

ವಲಯ ಅರಣ್ಯಾಧಿಕಾರಿ ಮಹೇಂದ್ರ ಮೌರ್ಯ ಮಾತನಾಡಿ, ‘ನರೇಗಾ ಯೋಜನೆಯಲ್ಲಿ ರೈತರಿಗೆ 1 ಲಕ್ಷ ಸಸಿ ವಿತರಿಸಲಾಗುತ್ತದೆ. ಪ್ರಮುಖ ರಸ್ತೆಗಳ ಬದಿಯಲ್ಲಿ 10 ಸಾವಿರ ಗಿಡ ನೆಡಲಾಗುತ್ತದೆ’ ಎಂದು ಮಾಹಿತಿ ನೀಡಿದರು.

ಎಸ್.ಡಿ.ಚಾಕೂರೆ, ತಾನಾಜಿ ಸಾಗರ ಉಪಸ್ಥಿತರಿದ್ದರು.

‘ಕೆರೆ ಸಂರಕ್ಷಣಾ ಕಾರ್ಯ ನಡೆಯಲಿ’

‘ಕೆರೆಗಳ ಅಲ್ಪಸ್ವಲ್ಪ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ ಮಳೆ ನೀರು ಸಂಗ್ರಹವಾಗುವಂತೆ ನೋಡಿಕೊಳ್ಳಬೇಕು’ ಎಂದು ಸಣ್ಣ ನೀರಾವರಿ ಇಲಾಖೆಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಶಾಸಕರು ಸೂಚಿಸಿದರು.

ಎಇಇ ಬಾಬು ರಾಠೋಡ ಮಾತನಾಡಿ, ‘ಘೋಟಾಳ, ಯಲ್ಲದಗುಂಡಿ, ಶರಣ ನಗರಗಳಲ್ಲಿ ಹೊಸ ಕೆರೆ ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆ ಕೈಗೊಳ್ಳಲಾಗಿದೆ. ಕೆಲ ಕೆರೆಗಳ ದುರಸ್ತಿ ಕಾರ್ಯ ನಡೆಯುತ್ತಿದೆ. ಮಹತ್ವದ ಯೋಜನೆಗಳು ಬಾಕಿ ಇಲ್ಲ’ ಎಂದು ತಿಳಿಸಿದರು. ಇಲಾಖೆಯ ಎಂಜಿನಿಯರ್‌ಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT