ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರೆಯಾಗುತ್ತಿರುವ ಆಣಿ ಪೀಣಿ

Last Updated 16 ನವೆಂಬರ್ 2020, 5:13 IST
ಅಕ್ಷರ ಗಾತ್ರ

ದೀಪಾವಳಿ ಭಾರತೀಯರಿಗೆ ರಾಷ್ಟ್ರೀಯ ಹಬ್ಬ. ಇದಕ್ಕೆ ಪ್ರಾಚೀನ ಐತಿಹಾಸಿಕ ಪರಂಪರೆ ಇದ್ದು ವಿದೇಶಿ ಪ್ರವಾಸಿಗರಾದ ಅಲ್ ಬರೌನಿ, ಅಬ್ದುಲ್ ರೆಹಮಾನ್, ನಿಕಲೊ ಕೊಂಟಿ, ಅಬ್ದುಲ್ ಫಜಲ್ ಮೊದಲಾದವರು ತಮ್ಮ ಬರವಣಿಗೆಯಲ್ಲಿ ಉಲ್ಲೇಖಿಸಿದ್ದಾರೆ. ವಾತ್ಸಾಯನ ಕಾಮಶಾಸ್ತ್ರದಲ್ಲಿಯೂ ಉಲ್ಲೇಖವಾಗಿದೆ.

ಭಾರತೀಯ ಸಾಂಪ್ರದಾಯಿಕ ಹಬ್ಬಗಳಲ್ಲಿ ಒಂದಾದ ದೀಪಾವಳಿ ದೀಪದ ಹಬ್ಬವೆಂದೆ ಖ್ಯಾತಿ ಪಡೆದಿದ್ದು ಪ್ರಾದೇಶಿಕವಾಗಿ ವೈವಿಧ್ಯಮಯವಾದ ಭಿನ್ನ ಆಚರಣೆಗಳು ಕಂಡುಬರುತ್ತವೆ. ಮೂರರಿಂದ ಐದು ದಿನಗಳ ವರೆಗೆ ಜರುಗುವ ಹಬ್ಬದಲ್ಲಿ ದೀಪಗಳದ್ದೆ ಮಹತ್ವದ ಪಾತ್ರ.

ಉದ್ಯಮಿ, ವ್ಯಾಪಾರಿಗಳಿಗೆ ಲಕ್ಷ್ಮಿ ಪೂಜೆ, ಮಹಿಳೆಯರಿಗೆ ನೀರು ತುಂಬಿಕೊಳ್ಳುವುದು, ಮಕ್ಕಳಿಗೆ ಪಟಾಕಿ ಹೊಡೆಯುವುದು, ಆಡುವವರಿಗೆ ಜೂಜಾಟವಾದರೆ ದನಕಾಯುವ ಹುಡುಗರಿಗೆ ದೀಪ ಬೆಳಗುವುದು ಪ್ರಮುಖವಾಗಿದ್ದು ಅದನ್ನೇ ‘ಆಣಿಪೀಣಿ’ ಎಂದು ಕರೆಯುವರು. ಅಂಗಡಿ ಹಾಗೂ ಮನೆಗಳ ಮುಂದೆ ದೀಪಾಲಂಕಾರ ಮಾಡುವುದು ವಿಶೇಷ.

ಅಂಟಿಕೆ-ಪಂಟಿಕೆ: ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆ ಒಳಗೊಂಡಂತೆ ಕೆಲವೆಡೆ ದೀಪ ಬೆಳಗುವ ಸಂಪ್ರದಾಯವಿದೆ. ಇದನ್ನು ಅಂಟಿಕೆ ಪಂಟಿಕೆ ಎಂದು ಕರೆದರೂ ಅದನ್ನು ಅವಂಟಿಗ್ಯೋ-ಪವಂಟಿಗೋ, ಆಡೀ-ಪೀಡೀ, ಅಚಿಟಿ-ಪಂಟಿ, ಅವಟಿಗೋ-ಪವಟಿಗೋ, ಚೌಂಟಿಗೋ-ಸೂಂಟಿಗೊ ಇತ್ಯಾದಿ ಹೆಸರಿ ನನಿಂದ ಕರೆಯಲಾಗುತ್ತದೆ. ದೀಪಾವಳಿ ಬಲಿಪಾಢ್ಯಮಿ ದಿನದಿಂದ ಹಿಡಿದು ಮೂರು ದಿನಗಳವರೆಗೆ ನಾಲ್ಕರಿಂದ ಆರು ಜನ ರೈತರು ಅಥವಾ ಮೇಳದವರು ಮನೆಮನೆಗೆ ತೆರಳಿ ಹಾಡು ಹೇಳಿ ದೀಪ ಬೆಳಗಿ ಕಾಣಿಕೆ ಪಡೆವ ಪರಿಪಾಠವಿದೆ. ಇದನ್ನು ಹಬ್ಬ ಹಾಡುವುದು, ಜ್ಯೋತಿ ಬೆಳಗುವುದು, ದೀಪ ನೀಡುವುದು ಎಂದೂ ಹೇಳುತ್ತಾರೆ.

ಆಣಿಪೀಣಿ: ಉತ್ತರ ಕರ್ನಾಟಕದಲ್ಲಿ ವಿಶೇಷವಾಗಿ ಕಲ್ಯಾಣ ಕರ್ನಾಟಕದಲ್ಲಿ ಮಾತ್ರ ಬಳಕೆಯಲ್ಲಿರುವ ಈ ‘ಆಣಿಪೀಣಿ’ ತೀರ ಭಿನ್ನವಾಗಿದೆ. ಅಂಟಿಕೆ-ಪಂಟಿಕೆ ಆಚರಣೆಯಲ್ಲಿ ಮನೆಗಳಿಗೆ ತೆರಳಿ ಮನುಷ್ಯರಿಗೆ ದೀಪ ಬೆಳಗಿದರೆ, ಇಲ್ಲಿ ದನಗಳಿಗೆ ದೀಪ ಬೆಳಗುತ್ತಾರೆ.

ಲವಳಿ (ಒಂದು ಜಾತಿಯ ಹುಲ್ಲು) ಕಡ್ಡಿಯಿಂದ ದೀವಟಿಗೆ ಮಾಡಿ ಅದಕ್ಕೊಂದು ಹಾವಿನ ಹೆಡೆ ಆಕಾರ ಹೆಣೆದು ಅದರಲ್ಲಿ ದೀಪವಿಟ್ಟು ಆಣಿ ಪೀಣಿ ಹಾಡು ಹೇಳಿ ಎಲ್ಲ ದನ ಕರುಗಳಿಗೆ ಬೆಳಗುತ್ತಾರೆ. ಪ್ರತಿ ಹಾಡಿನ ಕೊನೆಗೆ ಆಣಿ ಪೀಣಿ ಜಾಂದೇ, ಸೇರು ಕೊಬ್ಬರಿ ಫಿರಾಂದೆ ಎಂದು ಸೇರಿಸುತ್ತಾರೆ.

ಬೆಳಗ್ಗೆ ಅದೆ ದನಕರುಗಳಿಗೆ ಎಳ್ಳಿನ ಕೊದಳಿ (ಒಣಗಿದ ಎಳ್ಳಿನ ದಂಟು)ಗೆ ಬೆಂಕಿ ಹಚ್ಚಿ ಅದರ ಮೇಲಿಂದ ದಾಟಿಸುತ್ತಾರೆ. ಹೀಗೆ ಮೂರು ದಿನಗಳ ಕಾಲ ನಡೆಯುತ್ತದೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ದನಗಳ ಖುರದಲ್ಲಿ, ಮೈಯಲ್ಲಿ ಕೀಟಗಳು, ಹುಳಗಳು ಆಗುವ ಸಾಧ್ಯತೆಗಳಿರುವುದರಿಂದ ಚಳಿಗಾಲಕ್ಕೆ ಬೆಂಕಿ ದಾಟಿಸಿದರೆ ಕ್ರಿಮಿಕೀಟಗಳು ನಾಶವಾಗಿ ದನಗಳು ಆರೋಗ್ಯದಿಂದ ಇರಲೂ ಈ ಆಚರಣೆ ನೆರವಾಗುತ್ತದೆ. ದನಗಳಿಗೆ ಬೆಳಗುವ ಈ ಆಚರಣೆ ಉತ್ತರಕರ್ನಾಟಕದಲ್ಲಿ ಮಾತ್ರ ಚಾಲ್ತಿಯಲ್ಲಿದೆ.

ಹೋರಿ ಹೋರಿ ಹ್ಯಾಂಗಿರಬೇಕು
ನಾರಿನ ಮುಗುಡ ಹಾಕಿರಬೇಕು,
ಗೆಜ್ಜೆ ಕಟ್ಟಿ ಘೋಳಾಡಿಸಬೇಕು
ಗಳಾ ಕಟ್ಟಿ ಉಡಾಸ ಬೇಕೊ
ಆಣಿ ಪೀಣಿ ಜಾಂದೇ,
ಸೇರು ಕೊಬ್ಬರಿ ಫಿರಾಂದೆ

ಇಂಥ ಹಲವಾರು ಆಣಿ-ಪೀಣಿ ಹಾಡುಗಳಲ್ಲಿ ದೇವತಾಸ್ತುತಿ, ಕರುವಿನ ಹಾಡು, ಆಕಳ ಪದಗಳು, ಎಮ್ಮೆ, ಹೋರಿ, ಎತ್ತಿನ, ಗೂಳಿಯ ಪದಗಳು, ಆಡು, ಕುದುರೆ, ಕೋಣದ ಪದಗಳು, ವಿಚಾರಣೆ ಹಾಗೂ ಸ್ವಾಭಿಮಾನದ ಪದಗಳೆಂಬ ಹಲವಾರು ಪ್ರಭೇದಗಳಿವೆ. ಈ ಆಣಿ ಪೀಣಿ ಹಾಡು ಕುರಿತು “ಬೀದರ್ ಜಿಲ್ಲೆಯ ಆಣಿ ಪೀಣಿ ಹಾಡುಗಳು ಎನ್ನುವ ಸಂಕಲನವನ್ನು ಮ.ಮಾ. ಬೋರಾಳಕರ್ ಹೊರತಂದರೆ, ಅಂಟಿಕೆ-ಪಂಟಿಕೆ ಕುರಿತ ಕೃತಿಯನ್ನು ಶ್ರೀಕಂಠ ಕೋಡಗೆಯವರು ಹೊರತಂದಿದ್ದಾರೆ. ಇಂಥ ಮಹತ್ವದ ಸಾಂಪ್ರದಾಯಿಕ ಆಚರಣೆಯೊಂದು ಆಧುನಿಕತೆಯ ಭರಾಟೆಯಲ್ಲಿ ಮರೆಯಾಗುತ್ತಿದ್ದು ಕೆಲವೇ ಕೆಲವು ಹಳ್ಳಿಗಳಲ್ಲಿ ರೂಢಿಯಲ್ಲಿರುವುದು ಈ ಹೊತ್ತಿನ ಸಾಂಸ್ಕೃತಿಕ ದುರಂತವೇ ಸರಿ. ಆದ್ದರಿಂದ ಈ ಆಚರಣೆ ಕುರಿತ ವಿಸ್ತೃತ ಅಧ್ಯಯನ ಹಾಗೂ ದಾಖಲೀಕರಣದ ಕೆಲಸವಾಗಬೇಕಿದೆ.

‘ಇದು ದನಗಳ ಹಾಡು, ಬೆಳಗುವ ಹಬ್ಬ. ದನಗಳಿಗೂ ಮನುಷ್ಯರಂತೆ ಗೌರವಿಸುವ ಸದ್ಭಾವದ ಪ್ರತೀಕ. ಭಕ್ತಿ ಕೇಂದ್ರವಾದ ಈ ಸಂಪ್ರದಾಯ ರೂಢಿಗತವಾಗಿದ್ದರೂ ಎಲ್ಲ ಪರಂಪರಾಗತ ಆಚರಣೆಗಳು ಮರೆಯಾಗುತ್ತಿರುವಂತೆ ಆಣಿ-ಪೀಣಿ ಕೂಡಾ ಮರೆಯಾಗುತ್ತಿರುವುದು ವಿಷಾದದ ಸಂಗತಿ’ ಎಂದು ಹಿರಿಯ ಸಾಹಿತಿ ದೇಶಾಂಸ ಹುಡಗಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT