ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಳ್ಳು ಜಾತಿಪ್ರಮಾಣಪತ್ರ: ಕಠಿಣ ಕ್ರಮಕ್ಕೆ ಆಗ್ರಹ

Last Updated 5 ಏಪ್ರಿಲ್ 2022, 10:43 IST
ಅಕ್ಷರ ಗಾತ್ರ

ಬೀದರ್: ಕಾನೂನು ಬಾಹಿರವಾಗಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಬೇಡಜಂಗಮ ಜಾರಿ ಪ್ರಮಾಣಪತ್ರ ಪಡೆದ ಶಾಸಕ ಎಂ.ಪಿ.ರೇಣುಕಾಚಾರ್ಯರ ಮಗಳು ಹಾಗೂ ಸೋದರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಸುಳ್ಳು ಜಾತಿ ಪ್ರಮಾಣ ಪತ್ರ ವಿರೋಧಿ ಹೋರಾಟ ಸಮಿತಿಯ ಬೀದರ್ ಜಿಲ್ಲಾ ಘಟಕ ಒತ್ತಾಯಿಸಿದೆ.

ಅಕ್ಷರ ವಂಚಿತ, ಕಾನೂನು ಅರಿವಿಲ್ಲದ ಅಲೆಮಾರಿ ಸಮುದಾಯಗಳಾದ ಬೇಡಜಂಗಮ, ಮಾಲಜಂಗಮ, ಭೋವಿ ಜನಾಂಗದವರಿಗೆ ಸರ್ಕಾರ ನೀಡುತ್ತಿರುವ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ಅಧಿಕಾರಿಗಳು ವೀರಶೈವ ಲಿಂಗಾಯತ ಜಂಗಮರಿಗೆ ನೀಡುತ್ತಿರುವುದು ಖಂಡನೀಯ ಎಂದು ಹೇಳಿದೆ.

ಹಂದಿ ಮಾಂಸ ಸೇವನೆ ಮಾಡುವ, ಗೊಂಬೆ ವೇಷ, ಗಿಳಿ ಶಾಸ್ತ್ರ ಹೇಳುವ, ವಾದ್ಯ ಬಾರಿಸಿ ಭಿಕ್ಷೆ ಬೇಡಿ ಬದುಕು ಸಾಗಿಸುವ ಬೇಡ ಜಂಗಮರು ಬಳ್ಳಾರಿ, ರಾಯಚೂರು, ಕಲಬುರಗಿ, ಕೊಪ್ಪಳ, ದಾವಣಗೆರೆಯಲ್ಲಿ ನೆಲೆಸಿದ್ದಾರೆ. ಜಮಲಮ್ಮ, ಸುಂಕಲಮ್ಮ, ಹುಲಿಗೆಮ್ಮ, ಪೋಷಮ್ಮ, ಮಾತಂಗ, ಮಾರಮ್ಮ, ಭೂತಪ್ಪ, ದುರ್ಗಮ್ಮ, ದ್ಯಾಮವ್ವ, ದೇಶಮಿಂದ ತಲ್ಲಿ, ಗಾಳಮ್ಮ. ವಿಷಯಪಟ್ಟ ಯಲ್ಲಮ್ಮ ಇವರ ಆರಾಧ್ಯ ದೇವತೆಗಳಾಗಿದ್ದಾರೆ ಎಂದು ತಿಳಿಸಿದೆ.

ಆದರೆ, ವೀರಶೈವ ಲಿಂಗಾಯತ ಜಂಗಮರಿಗೂ ಈ ಸಮುದಾಯಕ್ಕೆ ಯಾವ ಸಂಬಂಧವೂ ಇಲ್ಲ ಈ ಸಮುದಾಯದ ಹೆಸರಿನಲ್ಲಿ ಮೇಲ್ವರ್ಗದವರು ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆಯುತ್ತಿರುವುದು ಖಂಡನೀಯ ಎಂದು ಹೇಳಿದೆ.

ದಾವಣಗೆರೆ ಜಿಲ್ಲೆಯ ಹೊನ್ನಳ್ಳಿ ಶಾಸಕ ಎಂ.ಪಿ.ರೇಣುಕಾಚಾರ್ಯರ ಮಗಳು ಎಂ.ಆರ್. ಚೇತನ ಹಾಗೂ ಅವರ ಸೋದರ ಎಂ.ಪಿ. ದಾರಕೇಶ್ವರಯ್ಯ ಅವರು ಲಿಂಗಾಯತ ಜಾತಿಗೆ ಸೇರಿದವರಾಗಿದ್ದರೂ ಪರಿಶಿಷ್ಟ ಜಾತಿಯ ಬೇಡ ಜಂಗಮ ಜಾತಿ ಪ್ರಮಾಣ ಪತ್ರ ಪಡೆದು ಪರಿಶಿಷ್ಟ ಸಮುದಾಯಕ್ಕೆ ಮೋಸ ಮಾಡಿದ್ದಾರೆ ಎಂದು ದೂರಿದೆ.

ಎಂ.ಪಿ. ದಾರಕೇಶ್ವರಯ್ಯ, ಸಿದ್ದಲಿಂಗ ಸ್ವಾಮಿ, ದೇವಿಕೇರೆ ಶಿವಕುಮಾರ ಸ್ವಾಮಿ, ರುದ್ರ ಸ್ವಾಮಿ, ಉಮೇಶ ಎಂ.ಎಸ್ ಮಹೋನಕುಮಾರ, ಕೆ.ಎಂ.ಪರಮೇಶ್ವರಯ್ಯ, ರೇವಣ ಸಿದ್ದಯ್ಯ, ಗುರುಪಾದಯ್ಯ ಮಠದ ಗುರು ಪ್ರಕಾಶ, ಡಾ.ಉಮೇಶ ಹೀರೆಮಠ ವಿರುದ್ಧ ಈಗಾಗಲೇ ದಾವಣಗೆರೆ ನಗರದ ಪೊಲೀಸ್ ಠಾಣೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದೆ.

ಸರ್ಕಾರದ ಸೌಲಭ್ಯಗಳನ್ನು ಕಬಳಿಸಲು ಹಾಗೂ ರಾಜಕೀಯ ಲಾಭ ಪಡೆಯಲು ಸುಳ್ಳು ಜಾತಿ ಪ್ರಮಾಣಪತ್ರ ಪಡೆದವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದೆ.

ರಾಜ್ಯಪಾಲರಿಗೆ ಬರೆದ ಮನವಿಪತ್ರವನ್ನು ಸಮಿತಿಯ ಸುಳ್ಳು ಜಾತಿ ಪ್ರಮಾಣ ಪತ್ರ ವಿರೋಧಿ ಹೋರಾಟ ಸಮಿತಿ ಬೀದರ್ ಜಿಲ್ಲಾ ಘಟಕದ ಗೌರವಾಧ್ಯಕ್ಷ ಶಿವರಾಜ ತಡಪಳ್ಳಿ, ಜಿಲ್ಲಾ ಘಟಕದ ಅಧ್ಯಕ್ಷ ರಾಜಕುಮಾರ ಮೂಲಭಾರತಿ, ಕಾರ್ಯಾಧ್ಯಕ್ಷ ಅಭಿ ಕಾಳೆ, ಚಂದ್ರಕಾಂತ ನಿರಾಟೆ, ಬಾಬುರಾವ್‌ ಪಾಸ್ವಾನ್, ಶಿವಕುಮಾರ ನೀಲಿಕಟ್ಟಿ ಅವರು ನಗರದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಅವರಿಗೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT