ಸೋಮವಾರ, ಆಗಸ್ಟ್ 15, 2022
23 °C
ಕೃಷಿ ಇಲಾಖೆ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ

ಬಿತ್ತನೆ ಬೀಜಕ್ಕಾಗಿ ರೈತರ ಪರದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಔರಾದ್: ತಾಲ್ಲೂಕಿನಲ್ಲಿ ಕಳೆದ ಎರಡು ದಿನಗಳಿಂದ ಉತ್ತಮ ಮಳೆಯಾಗಿ ರೈತರು ಬಿತ್ತನೆ ಕೆಲಸ ಶುರು ಮಾಡಿದ್ದಾರೆ. ತಾಲ್ಲೂಕಿನ 80 ಸಾವಿರ ಹೆಕ್ಟೇರ್ ಪ್ರದೇಶದ ಪೈಕಿ 50 ಸಾವಿರ ಹೆಕ್ಟೇರ್‌ನಲ್ಲಿ ಸೋಯಾ ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆದರೆ ಸಮರ್ಪಕ ಬೀಜ ಸಿಗದೆ ರೈತರು ಕಂಗಾಲಾಗಿದ್ದಾರೆ.

‘ಅನ್ನ, ನೀರು ಬಿಟ್ಟು ರೈತ ಸಂಪರ್ಕ ಕೇಂದ್ರದ ಎದುರು ಅಹೋ ರಾತ್ರಿ ಕುಳಿತುಕೊಳ್ಳುತ್ತಿದ್ದಾರೆ. ಆದರೆ ಕೃಷಿ ಅಧಿಕಾರಿಗಳು ಮಾತ್ರ ತಮ್ಮ ಮೊಬೈಲ್ ಸ್ವಿಚ್‌ ಆಫ್ ಮಾಡಿ ಮನೆಯಲ್ಲೇ ಕುಳಿತಿದ್ದಾರೆ’ ಎಂದು ರೈತ ಮುಖಂಡರು ದೂರಿದ್ದಾರೆ.

‘ಜಮಗಿ ಗ್ರಾಮದಲ್ಲಿ ಸುಮಾರು 500 ಸೋಯಾ ಬ್ಯಾಗ್ ಬೇಕು. ಆದರೆ ಕೆಲವು ರೈತರಿಗೆ ಮಾತ್ರ ಬೀಜ ಕೊಟ್ಟು ಮೂರು ದಿನಗಳಿಂದ ವಿತರಣಾ ಕೇಂದ್ರಕ್ಕೆ ಬೀಗ ಹಾಕಲಾಗಿದೆ’ ಎಂದು ಕಿಸಾನ್ ಸಭಾ ತಾಲ್ಲೂಕು ಅಧ್ಯಕ್ಷ ಅಹೆಮ್ಮದ್ ಜಮಗಿ ದೂರಿದ್ದಾರೆ.

ಔರಾದ್ ಹೋಬಳಿ ವ್ಯಾಪ್ತಿಯಲ್ಲಿ ಬರುವ ಮಹಾಡೋಣಗಾಂವ್, ನರಸಿಂಹಪುರ ತಾಂಡಾ ರೈತರು ಎರಡು ದಿನಗಳಿಂದ ರೈತ ಸಂಪರ್ಕ ಕೇಂದ್ರದ ಎದುರು ಬೀಜಕ್ಕಾಗಿ ಕಾಯುತ್ತಿದ್ದಾರೆ. ಆದರೆ ಅಧಿಕಾರಿಗಳು ಸೌಜನ್ಯಕ್ಕಾದರೂ ಬಂದು ಇವರ ಸಮಸ್ಯೆ ಕೇಳದಿರುವುದು ರೈತರನ್ನು ಕೆರಳಿಸಿದೆ.

‘ಕೃಷಿ ಅಧಿಕಾರಿಗಳು ತಾಲ್ಲೂಕಿಗೆ 27 ಸಾವಿರ ಕ್ವಿಂಟಲ್ ಸೋಯಾ ಬೀಜ ತರಿಸಿದ್ದೇವೆ ಎಂದು ಹೇಳುತ್ತಿದ್ದಾರೆ. ಆದರೆ ಸಾಕಷ್ಟು ರೈತರಿಗೆ ಬೀಜ ಸಿಕ್ಕಿಲ್ಲ. ಹೀಗಾದರೆ ಬೀಜ ಎಲ್ಲಿಗೆ ಹೋಯಿತು’ ಎಂದು ರಾಜ್ಯ ರೈತ ಸಂಘದ ಕಾರ್ಯಾ ಧ್ಯಕ್ಷ ಶ್ರೀಮಂತ ಬಿರಾದಾರ ಪ್ರಶ್ನಿಸಿದ್ದಾರೆ.

‘ನಮ್ಮ ತಾಲ್ಲೂಕಿಗೆ ಒಟ್ಟು 34 ಸಾವಿರ ಕ್ವಿಂಟಲ್ ಸೋಯಾ ಬೀಜದ ಅಗತ್ಯವಿದೆ. ಈಗಾಗಲೇ 27 ಸಾವಿರ ಕ್ವಿಂಟಲ್ ಬೀಜ ವಿತರಿಸಲಾಗಿದೆ. ಇನ್ನು ಏಳು ಕ್ವಿಂಟಲ್ ಬೀಜ ಬರಬೇಕಿದೆ. ಬಂದ ನಂತರ ವಿತರಿಸುತ್ತೇವೆ. ಅಲ್ಲಿಯ ತನಕ ರೈತರು ಅವಸರ ಮಾಡದೇ ಶಾಂತವಾಗಿ ಇರಬೇಕು’ ಎಂದು ಸಹಾಯಕ ಕೃಷಿ ನಿರ್ದೆಶಕ ಅಬ್ದುಲ್ ಮಾಜೀದ್ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.