ಭಾನುವಾರ, ಜನವರಿ 19, 2020
27 °C
ಮಂಗಲಗಿ: ಶೇ60ರಷ್ಟು ವಾಹನ ಮಾಲೀಕರಿಂದ ನಗದು ಟೋಲ್‌ ಪಾವತಿ

ಫಾಸ್ಟ್‌ ಟ್ಯಾಗ್‌: ನೀರಸ ಪ್ರತಿಕ್ರಿಯೆ

ವೀರೇಶ್.ಎನ್.ಮಠಪತಿ Updated:

ಅಕ್ಷರ ಗಾತ್ರ : | |

Prajavani

ಚಿಟಗುಪ್ಪ: ತಾಲ್ಲೂಕು ವ್ಯಾಪ್ತಿಗೆ ಒಳಪಡುವ ಹೈದರಾಬಾದ್–ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 65ರ ಮಂಗಲಗಿ ಗ್ರಾಮದ ಬಳಿಯ ಎಲ್‌ ಆ್ಯಂಡ್‌ ಟಿ ಡೆಕ್ಕನ್‌ ಟೋಲ್‌ ಪ್ಲಾಜಾದಲ್ಲಿ ಫಾಸ್ಟ್‌ ಟ್ಯಾಗ್‌ ಮೂಲಕ ಶುಲ್ಕ ವಸೂಲಿ ಮಾಡುವ ಕಾರ್ಯ ತೀರ ನೀರಸವಾಗಿ ನಡೆದಿದೆ.

ಟೋಲ್‌ ಪ್ಲಾಜಾದ 8 ಲೈನ್‌ಗಳ ಪೈಕಿ 7 ರಲ್ಲಿ ಫಾಸ್ಟ್ ಟ್ಯಾಗ್ ಸೌಲಭ್ಯ ಒದಗಿಸಲಾಗಿದೆ. ಫಾಸ್ಟ್ ಟ್ಯಾಗ್ ಅಳವಡಿಸಿಕೊಳ್ಳದ ವಾಹನಗಳ ಮಾಲೀಕರು ಹಾಗೂ ಚಾಲಕರಿಗೆ ಕರಪತ್ರ ಕೊಟ್ಟು ಸ್ಥಳದಲ್ಲೇ ಫಾಸ್ಟ್ ಟ್ಯಾಗ್ ವಿತರಿಸಲಾಗುತ್ತಿದೆ.

ಈ ವಿನೂತನ ವ್ಯವಸ್ಥೆ ಆರಂಭವಾಗಿ ಹದಿನೈದು ದಿನಗಳು ಕಳೆದರೂ ಸಹ ಇದುವರೆಗೆ ಶೇ.40 ರಷ್ಟು ವಾಹನಗಳು ಮಾತ್ರ ಫಾಸ್ಟ್ ಟ್ಯಾಗ್ ಅಳವಡಿಸಿಕೊಂಡಿವೆ. ಶೇ 60ರಷ್ಟು ವಾಹನಗಳ ಮಾಲೀಕರು ಇನ್ನೂ ನಗದು ಪಾವತಿ ಮಾಡುತ್ತಿದ್ದಾರೆ.

‘ಮಂಗಲಗಿ ಟೋಲ್‌ ಪ್ಲಾಜಾದಲ್ಲಿ ಈ ಬಗ್ಗೆ 15 ದಿನ ಪ್ರಾಯೋಗಿಕ ಶುಲ್ಕ ಆಕರಣೆ ನಡೆಸಲಾಗಿದೆ ಆದರೂ ವಾಹನಗಳ ಮಾಲೀಕರಲ್ಲಿ ಜಾಗೃತಿ ಮೂಡಿಲ್ಲ’ ಎಂದು ಮಂಗಲಗಿ ಟೋಲ್ ಪ್ಲಾಜಾದ ವ್ಯವಸ್ಥಾಪಕ ವಿ.ಅರುಣಕುಮಾರ ತಿಳಿಸಿದರು.

‘ಟೋಲ್‌ ಪ್ಲಾಜಾದಲ್ಲಿ ಕನ್ನಡ, ಹಿಂದಿ, ತೆಲುಗು ಹಾಗೂ ಇಂಗ್ಲಿಷ್‌ನಲ್ಲಿ ಮಾಹಿತಿ ಇರುವ ಕರಪತ್ರಗಳನ್ನು ವಿತರಿಸಲಾಗುತ್ತಿದೆ. ದಿನದ 24 ಗಂಟೆಯೂ ಧ್ವನಿಮುದ್ರಿತ ಸಂದೇಶದ ಮೂಲಕ ತಿಳಿವಳಿಕೆ ನೀಡಲಾಗುತ್ತಿದೆ’ ಎಂದು ಅವರು ವಿವರಿಸಿದರು.

ಏರ್‌ಟೆಲ್‌ ಪೇಮೆಂಟ್‌ ಬ್ಯಾಂಕ್ ಹಾಗೂ ಪೇಟಿಯಂ ಕಂಪೆನಿ ಸಿಬ್ಬಂದಿ ಟೋಲ್‌ ಪ್ಲಾಜಾದಲ್ಲಿ ವಾಹನ ಮಾಲೀಕರಿಗೆ ತಿಳಿವಳಿಕೆ ನೀಡುವ ಕಾರ್ಯ ಮುಂದಿವರೆಸಿದ್ದಾರೆ.

ಹೆದ್ದಾರಿ ಮೇಲೆ ನಿತ್ಯ ಸಂಚರಿಸುವ ಭಾರಿ ವಾಹನಗಳ ಹಾಗೂ ಲಾರಿ ಮಾಲೀಕರು ಫಾಸ್ಟ್‌ ಟ್ಯಾಗ್‌ ಅಳವಡಿಸಿಕೊಂಡಿದ್ದಾರೆ. ಖಾಸಗಿ ಕಾರುಗಳ ಮಾಲೀಕರಲ್ಲಿ ನಿರಾಸಕ್ತಿ ಎದ್ದು ಕಾಣುತ್ತಿದೆ. ಸರದಿ ಸಾಲಿನಲ್ಲಿ ಕಾರುಗಳು ಹೆಚ್ಚಿನ ಸಂಖ್ಯೆಯಲ್ಲಿ ನಿಲ್ಲುತ್ತಿವೆ. ಸರ್ಕಾರಿ ವಾಹನಗಳು ಹಾಗೂ ಸಾರಿಗೆ ಇಲಾಖೆಯ ಬಸ್‌ಗಳು ಪೂರ್ತಿ ಫಾಸ್ಟ್‌ ಟ್ಯಾಗ್‌ ವ್ಯವಸ್ಥೆ ಅಳವಡಿಸಿಕೊಂಡಿವೆ ಎಂದು ಅವರು ಮಾಹಿತಿ ನೀಡಿದರು.

ಹಿಂಜರಿಕೆಗೆ ಕಾರಣ: ಬಹುತೇಕ ವಾಹನಗಳ ಮಾಲೀಕರಿಗೆ ತಂತ್ರಜ್ಞಾನದ ತಿಳಿವಳಿಕೆಯ ಕೊರತೆ, ಖಾಸಗಿ ಮೊಬೈಲ್ ಆ್ಯಪ್‌ಗಳ ಅಸುರಕ್ಷತೆ, ನೆಟ್ ಬ್ಯಾಂಕಿಂಗ್‌ ಸೌಲಭ್ಯ ಇಲ್ಲದಿರುವ ಕಾರಣ ವಾಹನ ಮಾಲೀಕರು ಫಾಸ್ಟ್‌ ಟ್ಯಾಗ್‌ ಅಳವಡಿಕೆಗೆ ಹಿಂದೇಟು ಹಾಕುತ್ತಿದ್ದಾರೆ ಎಂದು ಪ್ಲಾಜ್‌ದ ಮಾರುಕಟ್ಟೆ ಅಧಿಕಾರಿ ಸಿದ್ದಿ ವಾಲಿ ತಿಳಿಸುತ್ತಾರೆ.

ಮುಂದಿನ ದಿನಗಳಲ್ಲಿ ಸರ್ಕಾರದ ವತಿಯಿಂದ ವಾಹನಗಳ ಮಾಲೀಕರಲ್ಲಿ ಜಾಗೃತಿ ಮೂಡಿಸಬೇಕು. ಆಗ ಮಾತ್ರ ಯೋಜನೆ ಯಶಸ್ವಿಯಾಗುತ್ತದೆ ಎಂದು ಅಧಿಕಾರಿಗಳು ತಿಳಿಸುತ್ತಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು