ಬೀದರ್: ಜಿಲ್ಲೆಯ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳು ಪ್ರಸಕ್ತ ಶೈಕ್ಷಣಿಕ ಸಾಲಿನ ಪ್ರವೇಶ ಶುಲ್ಕವನ್ನು ಶೇ 10ರಿಂದ 15ರಷ್ಟು ಹೆಚ್ಚಿಸಿದ್ದು, ಮಕ್ಕಳ ಪೋಷಕರಿಗೆ ಶುಲ್ಕ ಏರಿಕೆಯ ಬರೆ ಎಳೆಯಲಾಗಿದೆ.

ಹೊಸದಾಗಿ ಪ್ರವೇಶ ಪಡೆಯಬೇಕಾದರೆ ಡೊನೇಶನ್ ಹಾಗೂ ಶುಲ್ಕ ಪ್ರತ್ಯೇಕವಾಗಿ ಭರಿಸಬೇಕು. ‘ರೀ ಅಡ್ಮಿಶನ್’ ಇದ್ದರೆ ಡೊನೇಶನ್ ಇರುವುದಿಲ್ಲ. ಆದರೆ, ಶುಲ್ಕ ಹೆಚ್ಚಳದ ಬಿಸಿ ಇಬ್ಬರಿಗೂ ತಟ್ಟಿದೆ.

ಪೆಟ್ರೋಲ್, ಡೀಸೆಲ್, ಗೃಹ ಬಳಕೆಯ ಸಿಲಿಂಡರ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿರುವುದರಿಂದ ಈಗಾಗಲೇ ಬಡ ಹಾಗೂ ಮಧ್ಯಮ ವರ್ಗದವರು ತತ್ತರಿಸಿ ಹೋಗಿದ್ದಾರೆ. ಈಗ ದಿಢೀರನೆ ಶಾಲಾ ಶುಲ್ಕ ಕೂಡ ಹೆಚ್ಚಿಸಿರುವುದರಿಂದ ಅವರ ಮೇಲೆ ಹೆಚ್ಚಿನ ಹೊರೆ ಬಿದ್ದಂತಾಗಿದೆ.

ಒಟ್ಟು ಪ್ರವೇಶ ಶುಲ್ಕದ ಮೇಲೆ ಶೇ 10ರಿಂದ 15ರಷ್ಟು ಹೆಚ್ಚಿಸಿದರೆ, ಶೇ 5ರಿಂದ 10ರಷ್ಟು ವಾಹನ ಶುಲ್ಕ ಮತ್ತು ಇತರೆ ಚಟುವಟಿಕೆಗಳ ಹೆಸರಲ್ಲಿ ₹ 3ರಿಂದ ₹ 5 ಸಾವಿರ ಪಡೆಯುತ್ತಿದ್ದಾರೆ. ಪಠ್ಯ ಪುಸ್ತಕ, ಸಮವಸ್ತ್ರ, ಶೂಗಾಗಿ ಪ್ರತ್ಯೇಕವಾಗಿ ಖರೀದಿಸಬೇಕು. ಶಾಲಾ ವಾರ್ಷಿಕೋತ್ಸವ, ವಿಜ್ಞಾನ ವಸ್ತು ಪ್ರದರ್ಶನ ಸೇರಿದಂತೆ ಇತರೆ ಚಟುವಟಿಕೆಗಳಿದ್ದಾಗ ಅವುಗಳಿಗೆ ಬೇಕಾಗುವ ವಸ್ತುಗಳು, ಉಡುಪುಗಳಿಗೆ ಪ್ರತ್ಯೇಕವಾಗಿ ಹಣ ಪಡೆಯಲಾಗುತ್ತದೆ. ಒಂದನೇ ತರಗತಿಗೆ ಒಬ್ಬ ಬಾಲಕ ಅಥವಾ ಬಾಲಕಿಯ ಪ್ರವೇಶ ಪಡೆಯಬೇಕಾದರೆ ಪೋಷಕರು ವಾರ್ಷಿಕವಾಗಿ ₹ 70ರಿಂದ ₹ 80 ಸಾವಿರ ತೆಗೆದಿರಿಸಬೇಕು. ಪ್ರೌಢಶಾಲೆಗೆ ಇನ್ನಷ್ಟು ಹೆಚ್ಚಿದೆ. ಎರಡರಿಂದ ಮೂವರು ಮಕ್ಕಳಿದ್ದರೆ ಬಡ ಹಾಗೂ ಮಧ್ಯಮ ವರ್ಗದವರ ದುಡಿಮೆಯ ಹೆಚ್ಚಿನ ಪಾಲು ಶಾಲಾ ಶುಲ್ಕ ಭರಿಸುವುದರಲ್ಲೇ ಹೋಗುತ್ತಿದೆ.

ಬಹುತೇಕರು ತಮ್ಮ ಮಕ್ಕಳನ್ನು ಸರ್ಕಾರಿ ಕನ್ನಡ ಶಾಲೆಗಳ ಬದಲು ಆಂಗ್ಲ ಭಾಷೆಯ ಸಿಬಿಎಸ್ಇ ಖಾಸಗಿ ಶಾಲೆಗಳಿಗೆ ಸೇರಿಸಲು ಇಷ್ಟಪಡುತ್ತಿದ್ದಾರೆ. ಇದರಿಂದ ಖಾಸಗಿ ಶಾಲೆಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದು, ಇದು ಕೂಡ ಶುಲ್ಕ ಏರಿಕೆಗೆ ಮುಖ್ಯ ಕಾರಣ ಎಂದು ಗೊತ್ತಾಗಿದೆ.

ಶುಲ್ಕ ಏರಿಕೆಯ ಬಗ್ಗೆ ಶಿಕ್ಷಣ ಸಂಸ್ಥೆಗಳವರನ್ನು ಬಹುತೇಕ ಪೋಷಕರು ಪ್ರಶ್ನಿಸುವ ಗೋಜಿಗೆ ಹೋಗುತ್ತಿಲ್ಲ. ಯಾವುದೇ ರೀತಿಯ ಪ್ರತಿರೋಧ ವ್ಯಕ್ತವಾಗದ ಕಾರಣ ಶಿಕ್ಷಣ ಸಂಸ್ಥೆಗಳವರು ಮನಬಂದಂತೆ ನಡೆದುಕೊಳ್ಳುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.

‘ಇತ್ತೀಚಿನ ದಿನಗಳಲ್ಲಿ ಪ್ರಶ್ನಿಸುವ, ಪ್ರತಿಭಟಿಸುವ ಗೋಜಿಗೆ ಯಾರೂ ಹೋಗುತ್ತಿಲ್ಲ. ಎಲ್ಲಿ, ಏನೇ ನಡೆದರೂ ಎಲ್ಲವನ್ನೂ ಜನ ನೋಡಿ ಸುಮ್ಮನಾಗುತ್ತಿದ್ದಾರೆ. ಸಿರಿವಂತರಿಗೆ ಎಷ್ಟೇ ಶುಲ್ಕ ಹೆಚ್ಚಳವಾದರೂ ವ್ಯತ್ಯಾಸವಾಗುವುದಿಲ್ಲ. ಆದರೆ, ಬಡ ಮತ್ತು ಮಧ್ಯಮ ವರ್ಗದವರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಆದರೆ, ಈ ಎರಡೂ ವರ್ಗಗಳ ಜನ ಹೆಚ್ಚಿನ ಸಮಯ ಅವರ ದೈನಂದಿನ ಕಾಯಕದಲ್ಲಿ ಕಳೆಯುವುದರಿಂದ ಅವರಿಗೆ ಬೇರೆಯದಕ್ಕೆ ಸಮಯ ಸಿಗುತ್ತಿಲ್ಲ. ಪೋಷಕರೆಲ್ಲ ಒಟ್ಟಾಗಿ ಶಿಕ್ಷಣ ಸಂಸ್ಥೆಯವರನ್ನು ಪ್ರಶ್ನಿಸುತ್ತಿಲ್ಲ. ಈ ಎಲ್ಲ ಕಾರಣಗಳಿಂದ ಎಲ್ಲ ರಂಗಗಳಲ್ಲೂ ಸತತವಾಗಿ ಶುಲ್ಕ ಹೆಚ್ಚಿಸಲಾಗುತ್ತಿದೆ. ಎಲ್ಲಿಯವರೆಗೆ ಜನ ಇದರ ವಿರುದ್ಧ ಸೆಡ್ಡು ಹೊಡೆದು ನಿಲ್ಲುವುದಿಲ್ಲವೋ ಅಲ್ಲಿಯವರೆಗೆ ಇದು ನಿರಂತರವಾಗಿ ಮುಂದವರಿಯುತ್ತದೆ’ ಎಂದು ಸಾಮಾಜಿಕ ಹೋರಾಟಗಾರರೂ ಆದ ಹಿರಿಯ ನಾಗರಿಕ ಬಸವರಾಜ ಅಭಿಪ್ರಾಯಪಟ್ಟರು.

‘ಇಂದಿನ ಪರಿಸ್ಥಿತಿಗೆ ಸರ್ಕಾರವೇ ಹೊಣೆ’

‘ಸರ್ಕಾರ ಸರ್ಕಾರಿ ಶಾಲೆಗಳನ್ನು ಸುಧಾರಣೆ ಮಾಡಿ ಉತ್ತಮ ಶಿಕ್ಷಣ ಕೊಟ್ಟರೆ ಪೋಷಕರು ಖಾಸಗಿ ಶಾಲೆಗಳತ್ತ ಹೋಗುತ್ತಿರಲಿಲ್ಲ. ಖಾಸಗಿ ಶಾಲೆಯಲ್ಲಿ ಅದರಲ್ಲೂ ಸಿಬಿಎಸ್ಇ ಕಲಿಸುವ ಆಂಗ್ಲ ಮಾಧ್ಯಮದ ಶಾಲೆಗಳ ವ್ಯಾಮೋಹ ಹೆಚ್ಚಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡು ಶುಲ್ಕ ಹೆಚ್ಚಿಸಲಾಗುತ್ತಿದೆ’ ಎಂದು ಕಲ್ಯಾಣ ಕರ್ನಾಟಕ ಖಾಸಗಿ ಶಾಲಾ ಅನುದಾನರಹಿತ ಆಡಳಿತ ಮಂಡಳಿ ಸಂಘದ ಗೌರವ ಅಧ್ಯಕ್ಷ ರೇವಣಸಿದ್ದಪ್ಪ ಜಲಾದೆ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. ಯಾರ ಮೇಲೆಯೂ ಅನಗತ್ಯ ಹೊರೆ ಹಾಕಬಾರದು. ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕೆನ್ನುವುದು ನಮ್ಮ ಉದ್ದೇಶ. ಶಿಕ್ಷಕರಿಗೆ ಸೂಕ್ತ ಗೌರವ ಧನ ಸಿಗಬೇಕು. ಮಕ್ಕಳ ಪೋಷಕರ ಮೇಲೆ ಹೆಚ್ಚಿನ ಹೊರೆಯಾಗದಂತೆ ಶುಲ್ಕ ಹೆಚ್ಚಿಸಬೇಕು ಎಂದಿದ್ದಾರೆ.

‘ಶುಲ್ಕ ಹೆಚ್ಚಳ ಅನಿವಾರ್ಯ’

‘ಸತತವಾಗಿ ಡೀಸೆಲ್ ದರ ಹೆಚ್ಚಾಗುತ್ತಿದೆ. ಕೆಲವು ದೊಡ್ಡ ದೊಡ್ಡ ಶಿಕ್ಷಣ ಸಂಸ್ಥೆಗಳು ಉತ್ತಮ ಪಾಠ ಮಾಡುವ ಶಿಕ್ಷಕರಿಗೆ ಹೆಚ್ಚಿನ ಸಂಬಳ ಕೊಡುತ್ತಿದ್ದಾರೆ. ಅಲ್ಲಿ ಪ್ರತಿ ವರ್ಷ ವೇತನ ಕೂಡ ಹೆಚ್ಚಿಸುತ್ತಾರೆ. ಅದರಂತೆ ನಾವು ಕೂಡ ನಮ್ಮ ಶಿಕ್ಷಕರಿಗೆ ವೇತನ ಕೊಡಬೇಕಾಗುತ್ತದೆ. ಇಲ್ಲವಾದರೆ ಅವರು ಬಿಟ್ಟು ಬೇರೆಡೆ ಹೋಗುತ್ತಾರೆ. ಈ ಎಲ್ಲ ಕಾರಣಗಳಿಂದ ಶುಲ್ಕ ಹೆಚ್ಚಿಸುವುದು ಅನಿವಾರ್ಯವಾಗಿದೆ’ ಎಂದು ಜ್ಞಾನಸುಧಾ ವಿದ್ಯಾಲಯದ ಮುಖ್ಯಸ್ಥೆ ಪೂರ್ಣಿಮಾ ಜಿ. ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

ಶಿಕ್ಷಣ ವಲಯದಲ್ಲಿ ಹೆಚ್ಚಿನ ಹೂಡಿಕೆ

ಆರೋಗ್ಯ ಕ್ಷೇತ್ರದ ನಂತರ ಶಿಕ್ಷಣ ವಲಯಕ್ಕೆ ಹೆಚ್ಚಿನ ಬೇಡಿಕೆ ಇದೆ. ಆದಾಯ ತಂದುಕೊಡುವ ದೊಡ್ಡ ಉದ್ಯಮವಾಗಿಯೂ ಬದಲಾಗಿದೆ. ಈ ಕಾರಣದಿಂದ ನೆರೆಯ ತೆಲಂಗಾಣ ಹಾಗೂ ಮಹಾರಾಷ್ಟ್ರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳವರು ಬೀದರ್ ಜಿಲ್ಲೆಯಲ್ಲಿ ಹೆಚ್ಚಿನ ಹೂಡಿಕೆ ಮಾಡುತ್ತಿದ್ದಾರೆ. ಕೆಲವರು ಅವರದ್ದೇ ಶಿಕ್ಷಣ ಸಂಸ್ಥೆಗಳನ್ನು ಹೊಸದಾಗಿ ಆರಂಭಿಸಿದರೆ ಮತ್ತೆ ಕೆಲವರು ಜಿಲ್ಲೆಯ ಕೆಲ ಶಿಕ್ಷಣ ಸಂಸ್ಥೆಗಳನ್ನು ಲೀಸ್ ಮೇಲೆ ಪಡೆದುಕೊಂಡು ಅವುಗಳಿಗೆ ಹೊಸ ರೂಪ ಕೊಡುತ್ತಿದ್ದಾರೆ. ಇಲ್ಲೂ ಕೂಡ ಬೇಕಾಬಿಟ್ಟಿ ಶುಲ್ಕ ಪಡೆಯಲಾಗುತ್ತಿದೆ. ಜೊತೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ದೊಡ್ಡಮಟ್ಟದ ಸ್ಪರ್ಧೆಗೂ ಕಾರಣವಾಗಿದೆ.

‘ದೂರು ಕೊಟ್ಟರೆ ಕ್ರಮ’

‘ಶುಲ್ಕ ಜಾಸ್ತಿಯಾಗಿದೆ ಎಂದು ಮಕ್ಕಳ ಪೋಷಕರು ಲಿಖಿತ ರೂಪದಲ್ಲಿ ದೂರು ಕೊಟ್ಟರೆ ಸಂಬಂಧಿತ ಶಿಕ್ಷಣ ಸಂಸ್ಥೆಗಳಿಗೆ ನೋಟಿಸ್ ಕೊಟ್ಟು ಕಾರಣ ತಿಳಿದುಕೊಳ್ಳಲಾಗುವುದು. ಆನಂತರ ಈ ವಿಷಯವನ್ನು ಜಿಲ್ಲಾಧಿಕಾರಿ ಜೊತೆ ಚರ್ಚಿಸಲಾಗುವುದು. ಅವರೇ ಮ್ಯಾಜಿಸ್ಟ್ರೇಟ್ ಆಗಿರುವುದರಿಂದ ಶುಲ್ಕ ಏರಿಕೆ ಸಂಬಂಧ ಅವರು ಕ್ರಮ ಕೈಗೊಳ್ಳುತ್ತಾರೆ’ ಎಂದು ಡಿಡಿಪಿಐ ಸಲೀಂ ಪಾಶಾ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.