ಶನಿವಾರ, ಸೆಪ್ಟೆಂಬರ್ 18, 2021
28 °C

ಫೋನ್‌ಇನ್‌| ಮೊಳಕೆಯೊಡೆಯದ ಸೋಯಾ ಬೆಳೆಯ ಕುರಿತು ಗೊಂದಲ ನಿವಾರಿಸಿಕೊಂಡ ರೈತರು

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ಇಲ್ಲಿಯ ‘ಪ್ರಜಾವಾಣಿ’ ಕಚೇರಿಯಲ್ಲಿ ಗುರುವಾರ ನಡೆದ ‘ಫೋನ್‌ ಇನ್‌’ ಕಾರ್ಯಕ್ರಮದಲ್ಲಿ ಮೊಳಕೆಯೊಡೆಯದ ಸೋಯಾ, ಪರ್ಯಾಯ ಬೆಳೆ, ಕೃಷಿ ಇಲಾಖೆಯಿಂದ ದೊರೆಯುವ ಸೌಲಭ್ಯಗಳು, ಕೇಂದ್ರ ಸರ್ಕಾರದ ಯೋಜನೆಗಳು ಇನ್ನಿತರ ಮಾಹಿತಿ ಕೇಳಿ ಜಿಲ್ಲೆಯ ವಿವಿಧೆಡೆಯಿಂದ ಅನೇಕ ಹಲವು ರೈತರ ಕರೆಗಳು ಬಂದವು. ಕೆಲ ರೈತರು ಆದಷ್ಟು ಬೇಗ ಬೆಳೆ ವಿಮೆ ಪರಿಹಾರ ಬಿಡುಗಡೆ ಮಾಡಿಸಬೇಕೆಂದೂ ಮನವಿ ಮಾಡಿಕೊಂಡರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕ ವಿದ್ಯಾನಂದ ಸಿ. ಅವರು ರೈತರ ಪ್ರಶ್ನೆಗಳಿಗೆ ಸಮಾಧಾನದಿಂದ ಉತ್ತರಿಸಿದರು. ಕೆಲ ಕ್ಲಿಷ್ಟಕರ ಪ್ರಶ್ನೆಗಳಿಗೂ ಉತ್ತರಿಸಿ ಕೆಲವು ನಿರ್ಧಾರಗಳನ್ನು ಸರ್ಕಾರದ ಮಟ್ಟದಲ್ಲೇ ತೆಗೆದುಕೊಳ್ಳಲಾಗುತ್ತದೆ. ರೈತರಿಗೆ ಅನುಕೂಲ ಮಾಡಿಕೊಡುವ ದಿಸೆಯಲ್ಲಿ ಎಲ್ಲ ಸಮಸ್ಯೆಗಳನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.

ಸೋಯಾ ಬಿತ್ತನೆ ಮಾಡಿ 12 ದಿನಗಳು ಕಳೆದರೂ ಮೊಳಕೆಯೊಡೆದಿಲ್ಲ. ಕೆಲವು ಕಡೆ ಪೂರ್ಣ ಪ್ರಮಾಣದಲ್ಲಿ ಮೊಳಕೆ ಬಂದಿಲ್ಲ. ಅರ್ಧಮರ್ಧ ಬೆಳೆ ಬೆಳೆದಿದೆ. ಇದಕ್ಕೆ ಏನು ಕಾರಣ, ಪರಿಹಾರ ಏನು ಎಂದು ಬಹಳಷ್ಟು ರೈತರು ಕೇಳುವ ಮೂಲಕ ಗೊಂದಲ ನಿವಾರಿಸಿಕೊಂಡರು.

ತೊಗರಿ ಬೆಳೆಗೆ ಕಾಂಡಕೊರಕ ನೊಣ ಬಾಧೆ ಕಾಡುತ್ತಿದೆ. ಗಿಡದ ಎಲೆಗಳು ಒಣಗುತ್ತಿದ್ದು, ಯಾವ ಕ್ರಿಮಿನಾಶಕ ಸಿಂಪಡಿಸಬೇಕು?
–ಚಿಟಗುಪ್ಪ ತಾಲ್ಲೂಕಿನ ಮಂಗಲಗಿ ಗ್ರಾಮದ ರುದ್ರಪ್ಪ

ಉತ್ತರ: ಪ್ರತಿ ಎಕರೆಗೆ ಹಿಮ್ಡಾಕ್ಲೋಪ್ರಿಡ್‌ 0.3 ಎಂ.ಎಲ್‌. ಅನ್ನು 200 ಲೀಟರ್‌ ನೀರಲ್ಲಿ ಬೆರಸಿ ಸಿಂಪಡಿಸಬೇಕು. ಒಮ್ಮೆ ಕ್ರಿಮಿನಾಶಕ ಸಿಂಪಡಿಸಿದ ಮೇಲೆ ಮತ್ತೆ ನೊಣಗಳು ಕಾಣಿಸಿಕೊಂಡರೆ 15 ದಿನಗಳ ನಂತರ ಮತ್ತೆ ಕ್ರಿಮಿನಾಶಕ ಸಿಂಪರಣೆ ಮಾಡಬೇಕು. ಇದರಿಂದ ಕೀಟಬಾಧೆ ಕಡಿಮೆಯಾಗಲಿದೆ.

ಕಳೆದ ವರ್ಷ ಹೊಲ ಖರೀದಿಸಿದ್ದೇನೆ. ಪ್ರಧಾನಮಂತ್ರಿ ಯೋಜನೆಯಿಂದ ಹಣ ಬಂದಿಲ್ಲ. ಇದಕ್ಕೆ ಏನು ಕಾರಣ?
–ಸಂಗಮೇಶ, ಭಾಲ್ಕಿ ತಾಲ್ಲೂಕಿನ ಮೆಹಕರ್‌ ಗ್ರಾಮ

ಆನ್‌ಲೈನ್‌ನಲ್ಲಿ ಫ್ರುಟ್ಸ್‌ ಪಿಎಂ ಕಿಸಾನ್ ವೈಬ್‌ ಪೋರ್ಟಲ್‌ನಲ್ಲಿ ಹೆಸರು ನೋಂದಣಿ ಮಾಡಿಕೊಳ್ಳಬೇಕು. ಡಿಸೆಂಬರ್‌ ಒಳಗೆ ಜಮೀನು ಖರೀದಿ ಮಾಡಿದ ಹಾಗೂ ನೋಂದಣಿ ಮಾಡಿದ ಎಲ್ಲ ರೈತರ ಖಾತೆಗೆ ಹಣ ಜಮಾ ಆಗಿದೆ.
ರೈತ ಸಂಪರ್ಕ ಕೇಂದ್ರಕ್ಕೆ ತೆರಳಿ ಆರ್‌ಟಿಸಿ, ಆಧಾರ್‌ ಕಾರ್ಡ್‌, ಪಹಣಿ ಹಾಗೂ ಇತ್ತೀಚಿನ ಭಾವಚಿತ್ರದ ಜತೆ ಭರ್ತಿ ಮಾಡಿದ ಅರ್ಜಿ ಸಲ್ಲಿಸಬೇಕು.

ಹೊಲಗಳಲ್ಲಿ ಸೋಯಾ ಬಿತ್ತನೆ ಮಾಡಿ 10, 12 ದಿನಗಳಾದರೂ ಮೊಳಕೆಯೊಡೆದಿಲ್ಲ. ಇದಕ್ಕೆ ಏನು ಕಾರಣ, ರೈತರಿಗೆ ಪರಿಹಾರ ದೊರೆಯಲಿದೆಯೇ?

ಭಾಲ್ಕಿ ತಾಲ್ಲೂಕಿನ ಮೇಥಿ ಮೇಳಕುಂದಾದ ರೈತ ವಿಜಯಕುಮಾರ ಪಾಟೀಲ, ಹಲಬರ್ಗಾದ ಪ್ರಭು ಮೂಲಗೆ, ಬಾಳೂರಿನ ಕಾಶಿನಾಥ ಎಸಗೆ, ಔರಾದ್‌ ತಾಲ್ಲೂಕಿನ ಚಿಂತಾಕಿಯ ಸಂಗಮೇಶ, ಯನಗುಂದಾದ, ಜನಾರ್ಧನ ರೆಡ್ಡಿ, ಚಿಂತಾಕಿಯ ಶಿವಾನಂದ, ಬೆಲ್ದಾಳದ ಸಂಗಾ ರೆಡ್ಡಿ, ಚಿಲ್ಲರ್ಗಿಯ ಶ್ರೀನಿವಾಸ ರೆಡ್ಡಿ.

ಪ್ರಸ್ತುತ ಉತ್ತರ ಭಾರತದ ರಾಜ್ಯಗಳಿಂದ ಸೋಯಾ ಬೀಜ ಪೂರೈಕೆಯಾಗಿದೆ. ವಿದೇಶಿ ಮೂಲದ ಈ ಬೀಜದ ಮೊಳಕೆಹೊಡೆಯುವ ಪ್ರಮಾಣ ಶೇಕಡ 60ರಷ್ಟು ಇದೆ. ಬಿತ್ತನೆ ಮಾಡದವರು ಸೋಯಾ ಬ್ಯಾಗ್‌ಗಳನ್ನು ಇಲಾಖೆಗೆ ಮರಳಿಸಬಹುದಾಗಿದೆ.

ಈಗಾಗಲೇ ಪತ್ರಿಕೆಗಳಲ್ಲಿ ವಿವರವಾದ ಮಾಹಿತಿಯನ್ನು ಪ್ರಕಟಿಸಲಾಗಿದೆ. ಸೋಯಾ ಬೀಜದ ಚೀಲದ ಮೇಲೆಯೂ ಬರೆಯಲಾಗಿದೆ. ರಾಯಚೂರು ವಿಶ್ವವಿದ್ಯಾಲಯದ ಕೃಷಿ ವಿಜ್ಞಾನಿಗಳ ಎರಡು ತಂಡ ಜಿಲ್ಲೆಯಲ್ಲಿ ಸಮೀಕ್ಷೆ ನಡೆಸಿದೆ.
ಕೃಷಿ ಇಲಾಖೆ ಅಧಿಕಾರಿ, ಬೀಜ ಸರಬರಾಜು ಸಂಸ್ಥೆಯ ಪ್ರತಿನಿಧಿಗಳು ತಂಡದಲ್ಲಿ ಇದ್ದಾರೆ. ತಂಡವು ಬೆಂಗಳೂರಿಗೆ ವರದಿ ಕಳಿಸಿದೆ.

ಹೋಬಳಿ ಮಟ್ಟದಲ್ಲೂ ಕೃಷಿ ಇಲಾಖೆಯ ಅಧಿಕಾರಿಗಳು ಕ್ಷೇತ್ರ ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.
ಸೋಯಾ ಬಿತ್ತನೆ ಮಾಡಿದವರು ಒತ್ತಾಗಿ ಹಾಗೂ ಮಿಶ್ರ ಬೆಳೆ ಬೆಳೆಯಬೇಕು. ಪರ್ಯಾಯ ಬೆಳೆಗಳನ್ನು ಬೆಳೆಯುವ ಮೂಲಕ ಮುಂದಾಗಬಹುದಾದ ಹಾನಿಯಿಂದ ತಪ್ಪಿಸಿಕೊಳ್ಳಬಹುದು.

ಎರಡು ಎಕರೆ ಜಮೀನಿನಲ್ಲಿ ಉದ್ದು, ಹೆಸರು, ನವಣೆ ಬಿತ್ತನೆ ಮಾಡಿದ್ದೇನೆ. ಸರಿಯಾಗಿ ಮೊಳೆಕೆಯೇ ಒಡೆದಿಲ್ಲ ಏಕೆ?
ವಿಶ್ವನಾಥ ಹುಡಗಿ, ಚಿಟಗುಪ್ಪ ತಾಲ್ಲೂಕಿನ ಕಾರಪಾಕಪಳ್ಳಿಯ ರೈತ.

ಕೃಷಿ ಇಲಾಖೆಯ ಅಧಿಕಾರಿಗಳ ತಂಡ ಕಳಿಸಿ ಕ್ಷೇತ್ರ ಪರಿಶೀಲನೆ ನಡೆಸಲಾಗುವುದು. ವರದಿ ಆಧರಿಸಿ ಸ್ಪಷ್ಟವಾದ ಮಾಹಿತಿ ನೀಡಲಾಗುವುದು.

ಒಬ್ಬ ರೈತನಿಗೆ ಕೇವಲ ಐದು ಚೀಲ ಬೀಜ ಕೊಡಲಾಗುತ್ತಿದೆ. ಹೆಚ್ಚು ಹೊಲ ಇದ್ದವರು ಎಲ್ಲಿಗೆ ಹೋಗಬೇಕು?
ಚಂದ್ರಕಾಂತ ಪಾಟೀಲ, ಭಾಲ್ಕಿ ತಾಲ್ಲೂಕಿನ ಜೈನಾಪುರದ ರೈತ

ಹೆಚ್ಚು ಹೊಲ ಇದ್ದವರು ತಮ್ಮ ಹೊಲದಲ್ಲಿ ಬೆಳೆದ ಉತ್ತಮವಾದ ಬೀಜಗಳನ್ನು ಆಯ್ಕೆ ಮಾಡಿ ಬರುವ ವರ್ಷಕ್ಕೆ ಬೀಜಕ್ಕೆ ವ್ಯವಸ್ಥೆ ಮಾಡಿಕೊಳ್ಳಬೇಕು. ಮೂರು ವರ್ಷಗಳ ವರೆಗೆ ಹೀಗೆ ಸಂಗ್ರಹಿಸಬಹುದು. ನಂತರ ಹೊಸದಾಗಿ ಖರೀದಿಸಬೇಕು. ಇನ್ನೂ 15 ದಿನ ಬಿತ್ತನೆಗೆ ಸಮಯ ಇದೆ. ರೈತರು ಸೋಯಾ ಜತೆಗೆ ತೊಗರಿ, ಉದ್ದು, ಜೋಳ ಬೆಳೆಯಬೇಕು.

ನಾಲ್ಕು ಎಕರೆ ಜಮೀನು ಇದ್ದಲ್ಲಿ ಬ್ಯಾಂಕ್‌ನಿಂದ ಎಷ್ಟು ಸಾಲ ಪಡೆಯುಬಹುದು?
ರಮೇಶ, ಕಮಲನಗರ

ಬೆಳೆಯ ಆಧಾರದ ಮೇಲೆ ಡಿಸಿಸಿ ಬ್ಯಾಂಕ್‌ ಸಾಲಸೌಲಭ್ಯ ಒದಗಿಸುತ್ತಿದೆ. ಬ್ಯಾಂಕ್‌ ಅಧಿಕಾರಿಗಳಿಂದ ನಿಖರ ಮಾಹಿತಿ ಪಡೆಯಬಹುದಾಗಿದೆ. ಒಟ್ಟು ಹದಿಮೂರು ಬೆಳೆಗಳನ್ನು ವಿಮೆ ವ್ಯಾಪ್ತಿಗೆ ಒಳಪಡಿಸಲಾಗಿದೆ. ಸಕಾಲದಲ್ಲಿ ವಿಮೆ ಮಾಡಿಸಿ ಅದರ ಲಾಭ ಪಡೆಯಬೇಕು.

ಕಳೆದ ವರ್ಷದ ಬೆಳೆ ವಿಮೆ ಹಣ ಬಂದಿಲ್ಲ. ಯಾರಿಗೆ ಕೇಳಬೇಕು?
ಸಂಗಮೇಶ ಬಿರಾದಾರ, ಭಾಲ್ಕಿ ತಾಲ್ಲೂಕಿನ ಹಾಲಹಿಪ್ಪರ್ಗಾ

ಹೌದು. ವಿಮಾ ಹಣ ಜಮಾ ಆಗುವಲ್ಲಿ ವಿಳಂಬವಾಗಿದೆ. ಸರ್ಕಾರದಿಂದ ಆದೇಶ ಬಂದ ತಕ್ಷಣ ಗ್ರಾಮ ಪಂಚಾಯಿತಿ ಹಾಗೂ ರೈತ ಸಂಪರ್ಕ ಕೇಂದ್ರಗಳ ಮೂಲಕ ರೈತರಿಗೆ ಮಾಹಿತಿ ಒದಗಿಸಲಾಗುವುದು.

ಸಲಹೆ ಕೇಳಿದ ರೈತರು

ಅರ್ಹ ರೈತರಿಗೆ ತಾಡಪತ್ರಿಗಳ ಹಂಚಿಕೆ ಮಾಡಬೇಕು ಎಂದು ಬೀದರ್‌ನ ವೀರಭದ್ರಪ್ಪ ಉಪ್ಪಿನ್‌ ಮನವಿ ಮಾಡಿದರು.
ಆದಾಯ ತಂದು ಕೊಡುವ ನುಗ್ಗೇಕಾಯಿ ಬೆಳೆಯಲು ಇಚ್ಛಿಸಿದ್ದೇನೆ. ಮಾಹಿತಿ ಕೊಡಿ ಔರಾದ್‌ ತಾಲ್ಲೂಕಿನ ಖಾನಾಪುರದ ಸಿದ್ದು ಸ್ವಾಮಿ ಕೇಳಿದರು.
ರೈತರು ನುಗ್ಗೆ ಸೇರಿದಂತೆ ತೋಟಗಾರಿಕೆ ಬೆಳೆಗಳಿಗೆ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆಯಬಹುದು. ಇಲಾಖೆಯಿಂದ ರಿಯಾಯಿತಿ ದರದಲ್ಲಿ ಸಸಿಗಳನ್ನೂ ಪಡೆಯಬಹುದಾಗಿದೆ ಎಂದು ವಿದ್ಯಾನಂದ ಉತ್ತರಿಸಿದರು.
ಕಮಲನಗರದಲ್ಲಿ ಕೃಷಿ ಇಲಾಖೆಯ ಕಚೇರಿಯನ್ನು ತೆರೆಯಬೇಕು ಎಂದು ರೈತ ಮುಖಂಡ ಪ್ರವೀಣ ಕುಲಕರ್ಣಿ ಒತ್ತಾಯಿಸಿದರು. ನೋಂದಣಿ ಮಾಡಿಕೊಳ್ಳಲು ವಿಮಾ ಕಂಪನಿ ಸಿಬ್ಬಂದಿ ಹಣ ಪಡೆಯುತ್ತಿದ್ದಾರೆ ಎಂದು ದೂರಿದರು.

ಕಾಡು ಪ್ರಾಣಿಗಳಿಂದ ಬೆಳೆ ಹಾನಿ

ಕಾಡು ಹಂದಿ, ಕೃಷ್ಣಮೃಗ, ನವಿಲುಗಳ ಹಿಂಡು ಬೆಳೆಗೆ ಹಾನಿ ಮಾಡುತ್ತಿವೆ. ಇದಕ್ಕೆ ಪರಿಹಾರ ಕೊಡುವವರು ಯಾರು?
ಶಶಿಕಾಂತ ಪಾಟೀಲ, ಶಿವಕುಮಾರ ಪಾಟೀಲ, ಭಾಲ್ಕಿ ತಾಲ್ಲೂಕಿನ ತೇಗಂಪೂರದ ರೈತರು

ಕಾಡು ಪ್ರಾಣಿಗಳು ಬೆಳೆ ಹಾನಿ ಮಾಡಿದರೆ ಅರಣ್ಯ ಇಲಾಖೆಯ ಮೂಲಕ ಪರಿಹಾರ ಪಡೆಯಲು ಸಾಧ್ಯವಿದೆ. ಬೆಳೆಹಾನಿಯ ಭಾವಚಿತ್ರ ತೆಗೆದು, ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸಬೇಕು. ಅರಣ್ಯ ಇಲಾಖೆಯ ಅಧಿಕಾರಿಗಳು ಈ ವಿಷಯದಲ್ಲಿ ಕ್ರಮ ಕೈಗೊಳ್ಳಲಿದ್ದಾರೆ.

ಮನೆಯಲ್ಲಿ ಮೊಳಕೆ ಟೆಸ್ಟ್‌ ಮಾಡಿ

ದೇಶದ ರೈತರೂ ಎಂದಿಗೂ ಬೀಜಕ್ಕಾಗಿ ಬೇರೆಯವರನ್ನು ಅವಲಂಬಿಸಿಲ್ಲ. ಸಾಂಪ್ರದಾಯಿಕ ಪದ್ಧತಿಯ ಮೂಲಕ ಗುಣಮಟ್ಟದ ಬೀಜ ಸಂಗ್ರಹಿಸಿಕೊಂಡು ಮುಂದಿನ ವರ್ಷ ಬಳಸುವ ಪದ್ಧತಿ ಇದೆ. ಅದು ನಿರಂತರವಾಗಿ ಮುಂದುವರಿಯಬೇಕು ಎಂದು ವಿದ್ಯಾನಂದ ಹೇಳಿದರು.

ಹೈಬ್ರೀಡ್‌ ಬೀಜ ಬಹಳ ನಾಜೂಕು ಆಗಿರುತ್ತವೆ. ಅವುಗಳನ್ನು ವ್ಯವಸ್ಥಿತವಾಗಿ ಸಂಗ್ರಹಿಸಿ ಇಡಬೇಕು. ಬಿತ್ತನೆಯ 15 ದಿನ ಮುಂಚೆ ಮನೆಯಲ್ಲಿ ಪ್ರಾಯೋಗಿಕವಾಗಿ 50 ಕಾಳುಗಳನ್ನು ಬಿತ್ತನೆ ಮಾಡಬೇಕು. ಬೀಜ ಪರೀಕ್ಷೆ ನಡೆಸಿದ ನಂತರವೇ ಬಿತ್ತನೆ ಮಾಡಬೇಕು.
ಸರ್ಕಾರದ ಪ್ರಮಾಣಿಕೃತ ಬೀಜ ಉತ್ತಮವಾಗಿವೆ. ಸಂಗ್ರಹ ಹಾಗೂ ಸಾಗಣೆಯಲ್ಲಿ ಹೆಚ್ಚುಕಡಿಮೆಯಾದರೂ ಸರಿಯಾಗಿ ಮೊಳಕೆಯೊಡೆಯುವುದಿಲ್ಲ. ರೈತರು ಪರ್ಯಾಯ ಬೆಳೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.