ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌ನಲ್ಲಿ ಮತ್ತೆ ಐವರು ಸಾವು: ಹೆಚ್ಚಿದ ಭೀತಿ

ಡಿಎಚ್ಒ ಕಚೇರಿ ಸೀಲ್‌ಡೌನ್: ಕ್ವಾರಂಟೈನ್‌ನಲ್ಲಿ 14 ಅಧಿಕಾರಿಗಳು
Last Updated 7 ಜುಲೈ 2020, 13:39 IST
ಅಕ್ಷರ ಗಾತ್ರ

ಬೀದರ್: ಜಿಲ್ಲೆಯಲ್ಲಿ ಕೋವಿಡ್ ವೈರಾಣುವಿನಿಂದಾಗಿ ಇಬ್ಬರು ಮಹಿಳೆಯರು ಸೇರಿ ಐವರು ಮೃತಪಟ್ಟಿದ್ದು, ಮೃತರ ಸಂಖ್ಯೆ 49ಕ್ಕೆ ತಲುಪಿದೆ. ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ 850ಕ್ಕೆ ಏರಿದೆ.

ಬ್ರಿಮ್ಸ್ ಕೋವಿಡ್ ಪ್ರಯೋಗಾಲಯ, ಡಿಎಚ್ಒ ಕಚೇರಿ ಹಾಗೂ ಔರಾದ್‌ನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸೀಲ್‌ಡೌನ್‌ ಮಾಡಲಾಗಿದೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ವಿ.ಜಿ.ರೆಡ್ಡಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಕೃಷ್ಣರೆಡ್ಡಿ ಸೇರಿ ಒಟ್ಟು 14 ಅಧಿಕಾರಿಗಳು ಹೋಮ್ ಕ್ವಾರಂಟೈನ್‌ನಲ್ಲಿ ಇದ್ದಾರೆ. ಅಷ್ಟೇ ಅಲ್ಲ ಒಂದು ವಾರ ಕರ್ತವ್ಯಕ್ಕೆ ಬರದಂತೆ ಎಲ್ಲ ಸಿಬ್ಬಂದಿಗೆ ಮೊಬೈಲ್ ಸಂದೇಶ ಕಳಿಸಲಾಗಿದೆ.


2,721 ಜನರ ಗಂಟಲು ದ್ರವ ಮಾದರಿ ಪರೀಕ್ಷೆ ವರದಿ ಬರಬೇಕಿದೆ. ಮೂರು ಕೋಟಿ ರೂಪಾಯಿ ಖರ್ಚು ಮಾಡಿ ಪ್ರಾರಂಭಿಸಲಾದ ಕೋವಿಡ್ ಪ್ರಯೋಗಾಲಯ ಒಂದು ತಿಂಗಳ ಅವಧಿಯಲ್ಲೇ ಬಾಗಿಲು ಮುಚ್ಚಿದೆ. ಬ್ರಿಮ್ಸ್ ಕೋವಿಡ್ ಪ್ರಯೋಗಾಲಯದ ಸ್ಯಾನಿಟೈಝೆಷನ್ ಕಾರ್ಯ ಪೂರ್ಣ ಪ್ರಮಾಣದಲ್ಲಿ ನಡೆದಿಲ್ಲ. ಹೀಗಾಗಿ ಎಲ್ಲ ಮಾದರಿಗಳನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ಬೆಂಗಳೂರಿನಿಂದ ವರದಿಗಳು ಬರಲು ವಿಳಂಬವಾಗಲಿರುವ ಕಾರಣ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಭೀತಿ ಎದುರಾಗಿದೆ.

ಸೋಮವಾರ ಬೀದರ್ ಜಿಲ್ಲೆಯಲ್ಲಿ ಐವರು ಕೋವಿಡ್ 19 ಸೋಂಕಿನಿಂದ ಮೃತಪಟ್ಟಿದ್ದಾರೆ, ಔರಾದ್‌ನಲ್ಲಿ ಮಂಗಳವಾರ ಮೃತಪಟ್ಟ ವೃದ್ಧರೊಬ್ಬರ ಗಂಟಲು ಮಾದರಿ ಪಡೆದು ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ವರದಿ ಬಂದ ನಂತರ ನಿಖರ ಮಾಹಿತಿ ಗೊತ್ತಾಗಲಿದೆ’ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ಹೇಳಿದರು.

ಒಬ್ಬರೂ ಬಿಡುಗಡೆಯಾಗಿಲ್ಲ

ಬ್ರಿಮ್ಸ್ ಆಸ್ಪತ್ರೆ ವಿಶೇಷ ಚಿಕಿತ್ಸಾ ಘಟಕದಿಂದ ಮಂಗಳವಾರ ಒಬ್ಬರೂ ಬಿಡುಗಡೆಯಾಗಿಲ್ಲ. 240 ಪ್ರಕರಣಗಳು ಸಕ್ರೀಯವಾಗಿವೆ.

ಬೀದರ್‌ ತಾಲ್ಲೂಕಿನಲ್ಲಿ 19, ಭಾಲ್ಕಿಯಲ್ಲಿ 12, ಬಸವಕಲ್ಯಾಣದಲ್ಲಿ 11, ಹುಮನಾಬಾದ್‌ನಲ್ಲಿ ಐವರು ಹಾಗೂ ಔರಾದ್‌ನಲ್ಲಿ ಇಬ್ಬರಿಗೆ ಕೋವಿಡ್‌ 19 ಸೋಂಕು ತಗುಲಿದೆ. ಸೋಂಕಿತರಲ್ಲಿ 23 ಮಹಿಳೆಯರು, 21 ಪುರುಷರು, ಒಬ್ಬ ಬಾಲಕ ಹಾಗೂ ಮೂವರು ಬಾಲಕಿಯರು ಇದ್ದಾರೆ.

ಶನಿವಾರ ಆರು ಮಂದಿ, ಭಾನುವಾರ ಒಂಬತ್ತು, ಸೋಮವಾರ ಎಂಟು ಮಂದಿ ಹಾಗೂ ಮಂಗಳವಾರ ಆರು ಮೃತಪಟ್ಟಿದ್ದಾರೆ. ನಾಲ್ಕು ದಿನಗಳಿಂದ ನಿತ್ಯ ಸಾವಿನ ಪ್ರಕರಣಗಳು ವರದಿಯಾಗುತ್ತಿವೆ.

ಮೃತ ಐವರಲ್ಲಿ ಕೋವಿಡ್‌ ಸೋಂಕು ಪತ್ತೆ

ಬೀದರ್‌: ಜಿಲ್ಲೆಯಲ್ಲಿ ವಿವಿಧ ಕಾಯಿಲೆಗಳಿಂದ ಮೃತಪಟ್ಟಿದ್ದ ಐವರಲ್ಲಿ ಕೋವಿಡ್ 19 ಸೋಂಕು ಪತ್ತೆಯಾಗಿದೆ. ಮಂಗಳವಾರ ಔರಾದ್‌ನಲ್ಲಿ ಶತಾಯುಷಿಯೊಬ್ಬರು ಸಾವಿಗೀಡಾಗಿದ್ದು, ಅವರ ವೈದ್ಯಕೀಯ ವರದಿ ಬರಬೇಕಿದೆ.

ಬೀದರ್‌ ತಾಲ್ಲೂಕಿನ ಅಮಲಾಪುರದ 65 ವರ್ಷದ ಪುರುಷ ತೀವ್ರ ಜ್ವರ, ಉಸಿರಾಟ ತೊಂದರೆ ಜುಲೈ 6ರಂದು ಮೃತಪಟ್ಟಿದ್ದರು.
ಓಲ್ಡ್‌ಸಿಟಿಯ ಗವಾನ್‌ಚೌಕ್‌ ನಿವಾಸಿ 68 ವರ್ಷದ ಮಹಿಳೆ ತೀವ್ರ ಜ್ವರ, ಉಸಿರಾಟ ತೊಂದರೆಯಿಂದ ಜುಲೈ 5ರಂದು ಮೃತಪಟ್ಟಿದ್ದರು. ನೂರಖಾನ್‌ ತಾಲೀಮ್‌ನ 70 ವರ್ಷದ ಪುರುಷ ಬೆನ್ನುನೋವು ಉಸಿರಾಟ ತೊಂದರೆಯಿಂದ ಜುಲೈ 4 ರಂದು ಸಾವಿಗೀಡಾಗಿದ್ದರು.

70 ವರ್ಷದ ಮಹಿಳೆ ಹೃದಯಾಘಾತದಿಂದ ಜೂನ್ 29ರಂದು ಮೃತಪಟ್ಟಿದರು. ಇವರಿಗೆ ಕೋವಿಡ್ 19 ಸೋಂಕಿನ ಲಕ್ಷಣಗಳೇ ಇರಲಿಲ್ಲ. ಜುಲೈ 5ರಂದು ಆಸ್ಪತ್ರೆಗೆ ದಾಖಲಾದ ಎರಡು ತಾಸಿನಲ್ಲಿ 60 ವರ್ಷದ ಪುರುಷ ಮೃತಪಟ್ಟಿದ್ದರು. ಇವರ ಪುತ್ರ ಹೈದರಾಬಾದ್‌ನಿಂದ ಬೀದರ್‌ಗೆ ಬಂದಿದ್ದರು.
ಮೃತ ವ್ಯಕ್ತಿಗಳ ಗಂಟಲು ದ್ರವ ಮಾದರಿ ಪಡೆದು ಪ್ರಯೋಗಾಯಲಕ್ಕೆ ಕಳಿಸಲಾಗಿತ್ತು. ಇವರ ವರದಿ ಪಾಸಿಟಿವ್‌ ಬಂದಿದೆ.

ಅನಾಥ ಮಗುವಿಗೆ ಕೋವಿಡ್ ಸೋಂಕು

ಬಸವಕಲ್ಯಾಣ: ಇಲ್ಲಿಗೆ ಸಮೀಪದ ಖಾನಾಪುರ ಹತ್ತಿರದ ರಸ್ತೆ ಬದಿಯಲ್ಲಿ ಈಚೆಗೆ ಪತ್ತೆಯಾಗಿದ್ದ ಹೆಣ್ಣು ಶಿಶುವಿಗೆ ಕೋವಿಡ್ ಸೋಂಕು ತಗುಲಿದೆ. ಪ್ರಯೋಗಾಲಯದಿಂದ ಅಧಿಕೃತ ಮಾಹಿತಿ ಬರಬೇಕಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.

ಜೂನ್ 30ರಂದು ರಾತ್ರಿ ಮಗುವನ್ನು ಮುಳ್ಳಿನ ಪೊದೆಯಲ್ಲಿ ಶಿಶು ಪತ್ತೆಯಾಗಿತ್ತು.ಪೊಲೀಸರು ಸ್ಥಳೀಯರ ನೆರವಿನೊಂದಿಗೆ ಮಗುವನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ಆರೈಕೆಗಾಗಿ ಬ್ರಿಮ್ಸ್ ಗೆ ಕಳುಹಿಸಲಾಗಿದೆ. ಅಲ್ಲಿ ತಪಾಸಣೆ ನಡೆಸಿದಾಗ ಕೋವಿಡ್ ಸೋಂಕಿರುವುದು ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT